ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿಪ್ರಭುತ್ವ

ವಿಕಿಸೋರ್ಸ್ದಿಂದ

ದ್ವಿಪ್ರಭುತ್ವ - ಎರಡು ವರಿಷ್ಠ ಪ್ರಭುಗಳಲ್ಲಿ ನಿಹಿತವಾದ ಆಳ್ವಿಕೆ (ಡೈಯಾರ್ಕಿ). ಎರಡು ಪ್ರಾಧಿಕಾರಗಳ ಆಳ್ವಿಕೆಗಳಿಂದ ಕೂಡಿದ ನಾನಾ ಬಗೆಯ ಸರ್ಕಾರಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. ರೋಮನ್ ಪ್ರಾಂತ್ಯಗಳ ಮೇಲೆ ಚಕ್ರವರ್ತಿ ಮತ್ತು ಸೆನೆಟ್‍ಗಳ ಆಳ್ವಿಕೆ ನಡೆಯುತ್ತಿದ್ದ ಪದ್ಧತಿ, ಪ್ರಾಚೀನ ಸ್ಪಾರ್ಟ್‍ದಲ್ಲಿದ್ದ ಇದ್ದ ದ್ವಿರಾಜತ್ವ, ಜೆರುಸಲೆಮ್ ಮೇಲೆ ರೋಮನ್ ಅಧಿಕಾರಿಗಳೂ ಹೀಬ್ರೂ ಸ್ಯಾನ್ಹಿಡ್ರಮ್ ಎಂಬ ಧಾರ್ಮಿಕ ಸಭೆಗಳೂ ನಡೆಸುತ್ತಿದ್ದ ಅಧಿಕಾರ - ಇವು ಡೈಯಾರ್ಕಿಯ ಕೆಲವು ಪ್ರಾಚೀನ ನಿದರ್ಶನಗಳು. ಭಾರತದ ಬಂಗಾಲದಲ್ಲಿ 1765 ರಿಂದ 1784 ರ ವರೆಗೆ ಸ್ಥಳೀಯ ದೊರೆಗಳ ಅಧಿಕಾರಿಗಳು ಆಡಳಿತಕಾರ್ಯ ನಡೆಸುತ್ತಿದರೂ ನಿಜವಾದ ಅಧಿಕಾರವಿದ್ದದ್ದು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯಲ್ಲಿ. ಇದು ದ್ವಿಪ್ರಭುತ್ವಕ್ಕೆ ಇನ್ನೊಂದು ಉದಾಹರಣೆ. 1784 ರ ಪಿಟ್ಟನ ಇಂಡಿಯ ಅಧಿನಿಯಮದ ಪ್ರಕಾರ ಈಸ್ಟ್ ಇಂಡಿಯ ಕಂಪನಿಯ ಆಡಳಿತದ ಅಧಿಕಾರ ಆ ಕಂಪನಿಯ ನಿರ್ದೇಶಕರ ಮಂಡಲಿಯ (ಕೋರ್ಟ್ ಆಫ್ ಡೈರೆಕ್ಟರ್ಸ್) ಹಾಗೂ ನಿಯಂತ್ರಣ ಮಂಡಲಿಯ (ಬೋರ್ಡ್ ಆಫ್ ಕಂಟ್ರೋಲ್) ನಡುವೆ ಹಂಚಿಕೆಯಾಗಿತ್ತು. ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂಘೀಯ (ಫೆಡರಲ್) ಸರ್ಕಾರ ಪದ್ಧತಿಯಲ್ಲಿ ಸರ್ಕಾರದ ಅಧಿಕಾರಗಳು ಕೇಂದ್ರ ಹಾಗೂ ರಾಜ್ಯ ಅಥವಾ ಪ್ರಾಂತ್ಯ ಸರ್ಕಾರಗಳಲ್ಲಿ ಹಂಚಿಕೆಯಾಗಿವೆ. ಇವೆಲ್ಲವನ್ನೂ ನಾನಾ ಲೇಖಕರು ದ್ವಿಪ್ರಭುತ್ವಗಳೆಂದೇ ಕರೆದಿದ್ದಾರೆ.

ಇಂಗ್ಲಿಷಿನ ಡೈಯಾರ್ಕಿ ಎಂಬ ಶಬ್ದವನ್ನು ಮೊಟ್ಟಮೊದಲು ಅಚ್ಚಿನಲ್ಲಿ ಬಳಸಿದ ಲೈಯೊನೆಲ್ ಕರ್ಟಿಸ್ ಇದಕ್ಕೆ ನೀಡಿದ ಅರ್ಥ ತುಂಬ ವ್ಯಾಪಕವಾದ್ದು. ಮೇಲೆ ಹೇಳಿದ ಹಲವು ಬಗೆಯ ಸರ್ಕಾರಗಳಿಗೆ ದ್ವಿಪ್ರಭುತ್ವ ಎಂದು ಹೇಳುವುದು ಈ ಅರ್ಥದ ದೃಷ್ಟಿಯಿಂದ ತಪ್ಪೆನಿಸದು. ನಾನಾ ಆಡಳಿತ ವ್ಯವಸ್ಥೆಗಳಲ್ಲಿ ಅಳವಡಿಸಬಹುದಾದ ದ್ವಿತ್ವ ತತ್ವವನ್ನು ದ್ವಿಪ್ರಭುತ್ವವೆಂದು ಕರೆಯಬಹದು ಎಂಬುದು ಆತನ ಅಭಿಪ್ರಾಯವಾಗಿತ್ತು. ಪ್ರಾಂತೀಯ ಹಾಗೂ ರಾಷ್ಟ್ರೀಯ ವಿಧಾನಸಭೆಗಳೆರಡನ್ನೂ ಹೊಂದಿರುವುದು ಅವಶ್ಯವೆನಿಸುವಷ್ಟು ದೊಡ್ಡದಾದ ಯಾವುದೇ ದೇಶದ ಯಾವುದೇ ಬಗೆಯ ಸ್ವಯಮಾಡಳಿತ ಪದ್ಧತಿಯಲ್ಲಿ ದ್ವಿಪ್ರಭುತ್ವ ಒಂದು ಪ್ರಸಾಮಾನ್ಯ ಲಕ್ಷಣವಾಗುತ್ತದೆ - ಎಂದು ಕರ್ಟಿಸ್ ಹೇಳಿದ್ದಾನೆ.

ಮೇಲೆ ನಿರ್ದೇಶಿಸಲಾದ ರೀತಿಯಲ್ಲಿ ಒಂದು ಬಗೆಯ ದ್ವಿತ್ವ ಇರುವ ಯಾವುದೇ ಸರ್ಕಾರ ಪದ್ಧತಿಯನ್ನು ರಾಜ್ಯಶಾಸ್ತ್ರದಲ್ಲಿ ಸ್ಥೂಲವಾಗಿ ದ್ವಿಪ್ರಭುತ್ವವೆಂದು ಕರೆಯಬಹುದಾದರೂ, ಎರಡು ವಿಭಿನ್ನ ಮೂಲಗಳಿಂದ ಅಧಿಕಾರವನ್ನು ಪಡೆಯುವ ಎರಡು ಸಮಾನಾಧಿಕರಣ (ಕೋಆರ್ಡಿನೇಟ್) ಪ್ರಾಧಿಕಾರಗಳಿಂದ ನಡೆಯುವ ಸರ್ಕಾರವೆಂಬ ವಿಶಿಷ್ಟ ಹಾಗೂ ಸೀಮಿತ ಅರ್ಥದಲ್ಲಿ ಈ ಶಬ್ದವನ್ನು 1916 ರಿಂದ ಈಚೆಗೆ ಬಳಸಲಾಗುತ್ತದೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಅಧೀನದಲ್ಲಿದ್ದ ಫಿಲಿಪೀನ್ಸ್‍ಗೆ 1916 ರ ಆಗಸ್ಟ್ 29 ರ ಜೋನ್ಸ್ ಕಾನೂನಿನ ಪ್ರಕಾರ ವ್ಯಾಪಕವಾದ ಸ್ವಾಯತ್ತತೆಯನ್ನು ನೀಡಲಾಗಿತ್ತು. ಆ ಸುಧಾರಣೆಯ ಪ್ರಕಾರ ಸರ್ಕಾರದಲ್ಲಿ ಫಿಲಿಪೀನ್ಸ್ ಮಂತ್ರಿಗಳೂ ಒಬ್ಬ ಅಮೆರಿಕನ್ ಮಂತ್ರಿಯೂ ಇದ್ದರು. ಫಿಲಿಪೀನ್ ಮಂತ್ರಿಗಳನ್ನು ಅಲ್ಲಿಯ ಸೆನೆಟಿನ ಅನುಮೋದನೆಯೊಂದಿಗೆ ಗವರ್ನರ್ - ಜನರಲ್ ನೇಮಕ ಮಾಡುತ್ತಿದ್ದ. ಏಳು ಇಲಾಖೆಗಳ ಪೈಕಿ ಆರು ಇಲಾಖೆಗಳು ಅವರ ಕೈಯಲ್ಲಿರುತ್ತಿದ್ದವು. ಅಮೆರಿಕನ್ ಮಂತ್ರಿಯನ್ನು ವೈಸ್ ಗವರ್ನರ್ ಎಂದು ಕರೆಯಲಾಗುತ್ತಿತ್ತು. ಅವನನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ನೇಮಕ ಮಾಡುತ್ತಿದ್ದ. ಅವನು ಪದನಿಮಿತ್ತ (ಎಕ್ಸ್‍ಅಫಿಷಿಯೊ) ಮಂತ್ರಿಯಾಗಿ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಗಳನ್ನು ನಿರ್ವಹಿಸುತ್ತಿದ್ದ. ಅಮೆರಿಕನ್ ಅಧಿಕಾರಿಗಳು ಕೆಲವು ಖಾತೆಗಳನ್ನು ಇಟ್ಟುಕೊಂಡು ಉಳಿದವನ್ನು ಫಿಲಿಪೀನ್ ಮಂತ್ರಿಗಳ ಆಡಳಿತಕ್ಕೆ ಬಿಟ್ಟುಕೊಡುತ್ತಿದ್ದದ್ದು. ಈ ವ್ಯವಸ್ಥೆಯ ಮುಖ್ಯ ತತ್ತ್ವ.

ಮೇಲೆ ಹೇಳಿದ ನಿರ್ದಿಷ್ಟವಾದ ಅರ್ಥದ ದ್ವಿಪ್ರಭುತ್ವಕ್ಕೆ ಅತ್ಯುತ್ತಮ ನಿದರ್ಶನವೆಂದರೆ, 1919 ರ ಭಾರತ ಸರ್ಕಾರದ ಅಧಿನಿಯಮದ ಪ್ರಕಾರ ಭಾರತದ ಪ್ರಾಂತ್ಯಗಳಲ್ಲಿ ಜಾರಿಗೆ ತರಲಾದ ಆಡಳಿತ ವ್ಯವಸ್ಥೆ. ಆಡಳಿತವನ್ನು ಕಾದಿಟ್ಟ (ರಿಸವ್ರ್ಡ್) ಅರ್ಧ ಮತ್ತು ವರ್ಗಾಯಿಸಲಾದ (ಟ್ರಾನ್ಸ್‍ಫರ್ಡ್) ಅರ್ಧ ಎಂದು ಎರಡು ಭಾಗಗಳಾಗಿ ವಿಭಾಗ ಮಾಡಿದ್ದು ಅದರ ಮುಖ್ಯ ಲಕ್ಷಣ. ಸರ್ಕಾರದಲ್ಲಿ ಕಾದಿಟ್ಟ ಅರ್ಧಭಾಗಕ್ಕೆ ಮೀಸಲಾದ ಕೆಲವು ನಿರ್ದಿಷ್ಟ ವಿಷಯಗಳನ್ನು ಕುರಿತಂತೆ ಆ ಭಾಗ ಹೊಣೆಯಾಗಿದ್ದುದು ಭಾರತದ ರಾಜ್ಯ ಕಾರ್ಯದರ್ಶಿಯ (ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯ) ಮೂಲಕ ಬ್ರಿಟಿಷ್ ಪಾರ್ಲಿಮೆಂಟಿಗೆ ಮತ್ತು ಅಲ್ಲಿಯ ಮತದಾರರಿಗೆ. ಇನ್ನರ್ಧ ಭಾಗಕ್ಕೆ ವರ್ಗಾಯಿಸಲಾದ ಇತರ ಕೆಲವು ನಿರ್ದಿಷ್ಟ ವಿಷಯಗಳ ಆಡಳಿತವನ್ನು ಕುರಿತಂತೆ ಆ ಭಾಗ ಹೊಣೆಯಾಗಿದ್ದುದು ವಿಧಾನ ಪರಿಷತ್ತಿನ (ಲೆಜಿಸ್ಲೆಟಿವ್ ಕೌನ್ಸಿಲ್) ಮೂಲಕ ಭಾರತದ ಪ್ರಾಂತೀಯ ಮತದಾರರಿಗೆ. ಸ್ಥಳೀಯ ಆಡಳಿತ, ಸಾರ್ವಜನಿಕ ಆರೋಗ್ಯ, ಶಿಕ್ಷಣ (ನಿರ್ದಿಷ್ಟ ಪರಿಮಿತಿಗಳೊಂದಿಗೆ), ಮರಾಮತ್, ಕೃಷಿ, ಸಹಕಾರ ಸಂಘಗಳು, ಅರಣ್ಯ ಮತ್ತು ಧಾರ್ಮಿಕ ಹಾಗೂ ದಾನ ದತ್ತಿಗಳು - ಇವು ವರ್ಗಾಯಿಸಲಾದ ವಿಷಯಗಳಲ್ಲಿ ಸೇರಿದ್ದುವು. ಕಾನೂನು ಮತ್ತು ಸುವ್ಯವಸ್ಥೆ, ಭೂಕಂದಾಯ - ಇವು ಕಾದಿಟ್ಟ ವಿಷಯಗಳಲ್ಲಿ ಸೇರಿದ್ದುವು. ದ್ವಿಪ್ರಭುತ್ವವನ್ನು ನಿರಂಕುಶ ಪ್ರಭುತ್ವಕ್ಕೂ ಹೊಣೆಗಾರಿಕೆಯ ಸರ್ಕಾರಕ್ಕೂ ನಡುವಣ ಒಂದು ವ್ಯವಸ್ಥೆಯೆನ್ನಬಹುದು. ಮಂತ್ರಿಗಳು ವಿಧಾನ ಮಂಡಲ ಮತ್ತು ಮತದಾರರು ತಮ್ಮ ಸದ್ಯದ ಅನುಮಾನಿತ (ಎಸ್ಟಿಮೇಟೆಡ್) ಸಾಮಥ್ರ್ಯಕ್ಕೆ ಅನುಗುಣವಾಗಿ ಹೊಣೆಗಾರಿಕೆ ನಿರ್ವಹಿಸಲು ಅವಕಾಶ ಮಾಡಿಕೊಡುವುದರ ಮೂಲಕ ಕ್ರಮಕ್ರಮವಾಗಿ ಅವರನ್ನು ತರಬೇತು ಮಾಡುವ ತತ್ತ್ವ ಇದಕ್ಕೆ ಆಧಾರ. ಇದರ ಮುಖ್ಯ ಅಂಶಗಳು ಇವು:

1. ವಿಷಯಗಳ ವರ್ಗಾವಣೆ: ಇದನ್ನು ಮೇಲೆ ವಿವರಿಸಲಾಗಿದೆ. ಒಂದು ವೇಳೆ ಗುರುತರವಾದ ಪ್ರಮಾದಗಳಾದರೂ ಅದರಿಂದ ತೀವ್ರ ಪರಿಣಾಮಗಳಾಗಲು ಎಡೆಯಿರದಂಥ ವಿಷಯಗಳನ್ನು ಜನಪ್ರತಿನಿಧಿಗಳಿಗೆ ವರ್ಗಾಯಿಸಬೇಕೆಂಬುದು ಇದರ ಹಿಂದಿನ ತತ್ತ್ವ. ಆಡಳಿತದಲ್ಲಿ ಅನುಭವ ಗಳಿಸಬೇಕಾದರೆ ತಪ್ಪುಗಳನ್ನು ಮಾಡುವುದಕ್ಕೂ ಅವಕಾಶ ಇರಬೇಕು ಎಂಬುದನ್ನು ಒಪ್ಪಿಕೊಂಡು, ತಪ್ಪುಮಾಡಿದರೂ ಹೆಚ್ಚು ತೊಂದರೆಯಾಗದ ರೀತಿ ಅಧಿಕಾರ ವರ್ಗಾಯಿಸಲಾಗಿತ್ತು.

2. ಕಾರ್ಯಾಂಗದಲ್ಲಿ ದ್ವಿಪ್ರಭುತ್ವ : ಪ್ರಾಂತೀಯ ಕಾರ್ಯಾಂಗದಲ್ಲಿ ಎರಡು ವಿಭಾಗಗಳಿದ್ದುವು. ಒಂದು, ಕಾರ್ಯನಿರ್ವಾಹಕ ಮಂಡಲಿ (ಎಕ್ಸಿಕ್ಯೂಟಿವ್ ಕೌನ್ಸಿಲ್) ; ಇನ್ನೊಂದು, ಚುನಾಯಿತ ಮಂತ್ರಿಗಳ ವಿಭಾಗ. ಎರಡು ವಿಭಾಗಗಳಿಗೂ ಗವರ್ನರನೇ ಅಧಿಪತಿ. ಕಾರ್ಯನಿರ್ವಾಹಕ ಮಂಡಲಿಯ ಅಂಗವಾಗಿ ಅವನು ಮಂಡಲಿಯಲ್ಲಿಯ ಗವರ್ನರ್ (ಗವರ್ನರ್ ಇನ್ ಕೌನ್ಸಿಲ್) ಎಂದು ಕರೆಯಲ್ಪಡುತ್ತಿದ್ದ. ಇನ್ನೊಂದು ವಿಭಾಗಕ್ಕೆ ಸಂಬಂಧಿಸಿದಂತೆ ಅವನನ್ನು ಮಂತ್ರಿಗಳೊಂದಿಗೆ ಕಾರ್ಯಪ್ರವೃತ್ತನಾದ ಗವರ್ನರ್ ಎಂದು ಕರೆಯಲಾಗುತ್ತಿತ್ತು. ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರನ್ನು ದೊರೆ ನೇಮಿಸುತ್ತಿದ್ದ. ಅವರು ದೊರೆಯ ಪ್ರಸಾದ ಕಾಲದಲ್ಲಿ (ಡ್ಯೂರಿಂಗದ ದಿ ಪ್ಲೆಷರ್) ಅಧಿಕಾರದಲ್ಲಿರುತ್ತಿದ್ದರು. ಮಂತ್ರಿಗಳನ್ನು ಗವರ್ನರ್ ನೇಮಕಮಾಡುತ್ತಿದ್ದ. ಅವರು ಅವನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಲಿ ಇತರ ಅಧಿಕಾರಿಗಳಾಗಲಿ ಆಗಿರಕೂಡದು. ಯಾವನೇ ಮಂತ್ರಿ, ಸ್ಥಳೀಯ ವಿಧಾನಮಂಡಲದ ಚುನಾಯಿತ ಸದಸ್ಯನಾಗಿರದೆ ಇಲ್ಲವೆ ಹೊಸದಾಗಿ ಚುನಾಯಿತನಾಗದ 6ತಿಂಗಳುಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರತಕ್ಕದ್ದಲ್ಲ. ಮಂತ್ರಿಗಳು ತಾತ್ತ್ವಿಕವಾಗಿ ಗವರ್ನರನ ಪ್ರಸಾದ ಕಾಲದಲ್ಲಿ ಅಧಿಕಾರದಲ್ಲಿರುವರೆಂದೆನ್ನಲಾಗಿತ್ತಾದರೂ, ಅವರ ಸಂಬಳಗಳು ಮತ ನೀಡಿಕೆಗೆ ಒಳಪಟ್ಟಿದ್ದುದರಿಂದ ವಾಸ್ತವವಾಗಿ ಅವರು ವಿಧಾನಮಂಡಲದ ವಿಶ್ವಾಸವನ್ನು ಹೊಂದಿರುವ ವರೆಗೆ ಅಧಿಕಾರದಲ್ಲಿರಬಹುದಾಗಿತ್ತು.

3. ಪರಸ್ಪರ ಸಹಕಾರ: ಜವಾಬ್ದಾರಿ ಸರ್ಕಾರದಲ್ಲಿ ಮಂತ್ರಿಗಳಿಗೂ ವಿಧಾನ ಮಂಡಲಕ್ಕೂ ತರಬೇತಿ ನೀಡುವುದಕ್ಕೆ ದ್ವಿಪ್ರಭುತ್ವ ಅಗತ್ಯವಾದರೆ, ಸಂವಿಧಾನದ ಸುಗಮ ಮತ್ತು ಸಮರಸ ನಿರ್ವಹಣೆಗೆ ಪರಸ್ಪರ ಸಹಕಾರ ಅಗತ್ಯವಾಗಿತ್ತು. ಆಡಳಿತ ವಿಷಯಗಳು ಪರಸ್ಪರ ವ್ಯಾಪಕವಾದಂಥವು. ಆದ್ದರಿಂದ, ಪರಸ್ಪರ ಅಭಿಪ್ರಾಯಭೇದಗಳನ್ನು ನಿವಾರಿಸಿ ಹೊಂದಾವಣೆ ತರುವುದಕ್ಕೂ ಅಡಳಿತದಲ್ಲಿ ಸಾಮರಸ್ಯವನ್ನು ಸಾಧಿಸುವುದಕ್ಕೂ ಸರ್ಕಾರದ ಉಭಯಾರ್ಧಗಳ ಸಂಯುಕ್ತ ಸಮಾಲೋಚನೆಯನ್ನು ಪ್ರೋತ್ಸಾಹಿಸಲಾಗುತ್ತಿತ್ತು.

4. ಹಂತಹಂತದ ಪ್ರಗತಿ : ಹಂತಹಂತವಾಗಿ ಪ್ರಗತಿ ಸಾಧಿಸಬೇಕೆಂಬುದು ದ್ವಿಪ್ರಭುತ್ವ ಪದ್ಧತಿಯಲ್ಲಿ ಅಂತರ್ಗತವಾಗಿದ್ದ ಕೊನೆಯ ಮತ್ತು ಮುಖ್ಯವಾದ ಅಂಶ. 1919 ರ ಭಾರತ ಸರ್ಕಾರದ ಅಧಿನಿಯಮ ಜಾರಿಗೆ ಬಂದ ಮೇಲೆ, ಹತ್ತು ವರ್ಷಗಳೊಳಗೆ, ಈ ವ್ಯವವ್ಥೆ ಯಾವ ರೀತಿ ಕೆಲಸ ಮಾಡುತ್ತಿದೆಯೆಂಬುದನ್ನು ಪರಿಶೀಲಿಸಲು ಆಯೋಗವೊಂದನ್ನು ನೇಮಿಸಬೇಕೆಂದೂ ಅಧಿನಿಯಮದಲ್ಲಿ ಹೇಳಲಾಗಿತ್ತು. ಜವಾಬ್ದಾರಿ ಸರ್ಕಾರದ ತತ್ತ್ವಗಳನ್ನು ಸ್ಥಾಪಿಸುವುದು ಸೂಕ್ತವೆ, ಸೂಕ್ತವಾದರೆ ಎಷ್ಟರ ಮಟ್ಟಿಗೆ, ಜಾರಿಯಲ್ಲಿರುವ ಜವಾಬ್ದಾರಿ ಸರ್ಕಾರದ ಅಂಶವನ್ನು ವಿಸ್ತರಿಸುವುದಾಗಲಿ ಸುಧಾರಿಸುವುದಾಗಲಿ ಸೀಮಿತಗೊಳಿಸುವುದಾಗಲಿ, ಅಗತ್ಯವೆ ಎಂಬುದನ್ನು ಕುರಿತು ಆ ಅಯೋಗ ಸಲಹೆ ನೀಡಬೇಕಾಗಿತ್ತು. ಅಧಿಕಾರವನ್ನು ಪಡೆದವರು ಕ್ರಮಕ್ರಮವಾಗಿ ಹೆಚ್ಚು ಹೆಚ್ಚು ಅಧಿಕಾರ ವಹಿಸಿಕೊಳ್ಳುವ ಯೋಗ್ಯತೆ ಸಂಪಾದಿಸಿಕೊಳ್ಳುವಂತೆ ಮಾಡಬೇಕೆಂಬುದು ಇದರ ಹಿಂದಿನ ಧೋರಣೆಯಾಗಿತ್ತು. ಚುನಾಯಿತ ಪ್ರತಿನಿಧಿಗಳು ತಮಗೆ ವರ್ಗ ಮಾಡಲಾದ ಅಧಿಕಾರವನ್ನು ಎಷ್ಟು ವಿವೇಕದಿಂದ ಬಳಸಿ ಎಷ್ಟರ ಮಟ್ಟಿಗೆ ಸಾಫಲ್ಯ ಗಳಿಸುತ್ತಾರೋ ಅಷ್ಟು ಬೇಗ ಅವರು ಪೂರ್ಣ ಜವಾಬ್ದಾರಿ ಸರ್ಕಾರಕ್ಕೆ ಅರ್ಹರಾಗಬಲ್ಲರು - ಎಂಬುದು ಇದರ ತತ್ತ್ವವಾಗಿತ್ತು. (ಎ.ಎ.)

1919 ರ ಭಾರತ ಸರ್ಕಾರದ ಅಧಿನಿಯಮದ ಪ್ರಕಾರ ಜಾರಿಗೆ ಬಂದ ವ್ಯವಸ್ಥೆ ಯಶಸ್ವಿಯಾಗಲಿಲ್ಲ. ಮಂತ್ರಿಮಂಡಲದಲ್ಲಿ ಸರ್ಕಾರದ ಅಧಿಕಾರಿ ಪ್ರತಿನಿಧಿಗಳಿಗೂ ಜನತಾ ಪ್ರತಿನಿಧಿಗಳಿಗೂ ಸಾಕಷ್ಟು ಸಹಕಾರ ಬೆಳೆಯುವುದು ಸಾಧ್ಯವಿರಲಿಲ್ಲ. ಗವರ್ನರ್ ಕಾರ್ಯನಿರ್ವಾಹಕಮಂಡಲಿಯ ಸದಸ್ಯರಲ್ಲಿ ಪಕ್ಷಪಾತ ಹೊಂದಿದ್ದ. ಅವರ ಅಭಿಪ್ರಾಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದ. ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರು ತಾವು ಗೌರವಾನ್ವಿತರೆಂಬ ಧೋರಣೆಯಿಂದ ವರ್ತಿಸುತ್ತಿದ್ದರು. ಜನತಾ ಪ್ರತಿನಿಧಿಗಳಿಗೆ ಅವರು ಸಾಕಷ್ಟು ಗೌರವ, ಮನ್ನಣೆ ನೀಡುತ್ತಿರಲಿಲ್ಲ. ಜನತಾ ಮಂತ್ರಿಗಳ ಸ್ಥಾನ ಕೇವಲ ಅಲಂಕಾರವಾಗಿ ಪರಿಣಮಿಸಿತ್ತು. ಅವರಿಗೆ ನಿಜವಾದ ಅಧಿಕಾರವೇನೂ ಇರಲಿಲ್ಲ. 1935 ರ ಭಾರತ ಸರ್ಕಾರ ಅಧಿನಿಯಮದ ಪ್ರಕಾರ ಪ್ರಾಂತ್ಯಗಳಲ್ಲಿ ಹೆಚ್ಚು ಕಡಿಮೆ ಪೂರ್ಣ ಜವಾಬ್ದಾರಿ ಸರ್ಕಾರ ಸ್ಥಾಪಿತವಾದಾಗ 1916 ರ ಅಧಿನಿಯಮದ ದ್ವಿಪ್ರಭುತ್ವ ಪದ್ಧತಿ ಕೇವಲ ಇತಿಹಾಸದ ಸಂಗತಿಯಾಗಿ ಉಳಿದುಕೊಂಡಿತು. (ಎ.ಎಂ.ಆರ್.)