ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿವಿವಾಹ

ವಿಕಿಸೋರ್ಸ್ದಿಂದ

ದ್ವಿವಿವಾಹ

ಒಂದು ವ್ಯಕ್ತಿಗೆ ಇಬ್ಬರು ಹೆಂಡಿರು, ಅಥವಾ ಇಬ್ಬರು ಗಂಡಂದಿರು, ಏಕಕಾಲದಲ್ಲಿ ಇರುವುದು (ಬಿಗಮಿ). ಒಬ್ಬ ತನ್ನ ಮೊದಲನೆ ಪತ್ನಿಯೊಡನೆ ವಿವಾಹವಿಚ್ಛೇದ ಮಾಡಿಕೊಳ್ಳದೆ, ಅವಳು ಜೀವಂತ ಇರುವಾಗ, ಅವಳು ಜೀವಂತ ಇರುವುದನ್ನು ಅರಿತಿದ್ದು, ಇಲ್ಲವೇ ಸಕಾರಣ ನಂಬಿ ಇನ್ನೊಬ್ಬಳನ್ನು ವಿವಾಹವಾಗುವುದನ್ನು ದ್ವಿಪತ್ನಿತ್ವ. ಅದೇ ರೀತಿ ಒಬ್ಬಳು ತನ್ನ ಪತಿಯೊಡನೆ ವಿವಾಹ ವಿಚ್ಛೇದ ಮಾಡಿಕೊಳ್ಳದೆ ಇನ್ನೊಬ್ಬನನ್ನು ವಿವಾಹವಾಗುವುದು ದ್ವಿಪತಿತ್ವ. ದ್ವಿವಿವಾಹ, ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆ. ಅಪರಾಧ ಎಸಗಿದ ವ್ಯಕ್ತಿ ಭಾರತೀಯ ದಂಡಸಂಹಿತೆಯ ಪ್ರಕಾರ ದಂಡಾರ್ಹ; ದ್ವಿವಿವಾಹ ಶೂನ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಎರಡನೆಯ ಪತ್ನಿ (ಇಲ್ಲವೇ ಎರಡನೆಯ ಪತಿ) ಆ ವಿವಾಹವನ್ನು ಅಲಕ್ಷಿಸಿ ಇನ್ನೊಬ್ಬನನ್ನು (ಇಲ್ಲವೇ ಇನ್ನೊಬ್ಬಳನ್ನು) ವಿವಾಹವಾಗಬಹುದು, ದ್ವಿವಿವಾಹ ರದ್ದಾದಮೇಲೆ ಮೊದಲನೆಯ ಪತ್ನಿ (ಇಲ್ಲವೇ ಪತಿ) ತೀರಿಕೊಂಡಲ್ಲಿ, ಇಲ್ಲವೇ ಅವಳೊಡನೆ (ಇಲ್ಲವೇ ಅವನೊಡನೆ) ವಿವಾಹವಿಚ್ಛೇದ ಮಾಡಿಕೊಂಡಲ್ಲಿ ಅಂಥ ಗಂಡಸು (ಇಲ್ಲವೇ ಹೆಂಗಸು) ಮತ್ತೆ ವಿವಾಹ ಮಾಡಿಕೊಳ್ಳಬಹದು. ಒಬ್ಬನ ಮೊದಲನೆಯ ಪತ್ನಿ (ಇಲ್ಲವೇ ಮೊದಲನೆಯ ಪತಿ) ನಾಪತ್ತೆಯಾಗಿದ್ದು 7 ವರ್ಷಗಳ ವರಗೆ ಅವಳ (ಇಲ್ಲವೇ ಅವನ) ಸುದ್ದಿಯೇ ಇರದೆ ಹೋಗಿ, ಆ ಪತ್ನಿ (ಇಲ್ಲವೇ ಪತಿ) ಸತ್ತಿರಬಹುದೆಂದು ನಂಬಿ ಆ ವ್ಯಕ್ತಿ ವಿವಾಹ ಮಾಡಿಕೊಂಡರೆ ಅದು ದ್ವಿವಿವಾಹವೆನಿಸುವುದಿಲ್ಲ. ಆದರೆ ಆ ಮದುವೆ ಆಗುವ ಮುನ್ನ ಆ ವ್ಯಕ್ತಿ ತನ್ನ ಭಾವಿ ಪತ್ನಿಗೆ (ಇಲ್ಲವೇ ಪತಿಗೆ) ತನ್ನ ಮೊದಲನೆಯ ವಿವಾಹವನ್ನು ಕುರಿತು ಯಥಾರ್ಥ ಸಂಗತಿಗಳನ್ನು, ತನ್ನ ಅರಿವಿಗೆ ಬಂದಿರುವ ಮಟ್ಟಿಗೆ ತಿಳಿಸಬೇಕು. ಸತ್ತಿರಬಹುದೆಂದು ನಂಬಿದ ಪತ್ನಿ (ಇಲ್ಲವೇ ಪತಿ) ಜೀವಂತ ಇದ್ದು ಮತ್ತೆ ಪ್ರತ್ಯಕ್ಷವಾದರೆ ಮತ್ತು ಮೊದಲನೆಯ ವಿವಾಹವೂ ಸಕ್ಷಮ ನ್ಯಾಯಾಲಯದ ತೀರ್ಪಿನ ಮೂಲಕ ಆ ವೇಳೆಗೆ ಅಂತ್ಯಗೊಂಡಿರದೆ ಇದ್ದರೆ ಎರಡನೆಯ ವಿವಾಹ ಪ್ರಾರಂಭದಿಂದ (ಅಬ್ ಇನಿಷಿಯೊ) ಶೂನ್ಯವಾಗುತ್ತದೆ (ವಾಯ್ಡ್). ಎರಡನೆಯ ವಿವಾಹ ಅಕೃತ ಮತ್ತು ಶೂನ್ಯವಾಗಬೇಕಾದರೆ (ನಲ್ ಆಂಡ್ ವಾಯ್ಡ್) ಆ ವಿವಾಹದ ಸಮಯದಲ್ಲಿ ಮೊದಲನೆಯ ವಿವಾಹ ಜಾರಿಯಲ್ಲಿದ್ದು ವಿಧಿಸಮ್ಮತವೂ (ಲೀಗಲ್) ಬದ್ದವೂ (ಬೈಂಡಿಂಗ್) ಆಗಿತ್ತೆಂದು ಸಾಬೀತು ಮಾಡಬೇಕಾಗುತ್ತದೆ ಉದಾಹರಣೆಗೆ, ನಿಷಿದ್ದ ಬಾಂಧವ್ಯ ಶ್ರೇಣಿಗಳೊಳಗಿನ ವ್ಯಕ್ತಿಗಳ ನಡುವೆ ಇಲ್ಲವೆ ಸಪಿಂಡಿಗಳ ನಡುವೆ ಮೊದಲನೆಯ ವಿವಾಹ ಆಗಿದ್ದರೆ ಅಂಥ ವಿವಾಹಕ್ಕೆ ಅವರಿಬ್ಬರಿಗೂ ಅನ್ವಯಿಸುವ ರೂಢಿ ಮತ್ತು ಆಚರಣೆಗಳ ಸಮ್ಮತಿ ಇಲ್ಲದಿದ್ದರೆ, ಆ ವಿವಾಹ ಶೂನ್ಯಗೊಂಡು ಎರಡನೆಯ ವಿವಾಹವೇ ವಿಧಿಸಮ್ಮತವೆನಿಸುತ್ತದೆ. ಒಬ್ಬ ವ್ಯಕ್ತಿಯ ಮೇಲೆ ದ್ವಿವಿವಾಹ ಆರೋಪ ಹೊರಿಸಬೇಕಾದರೆ ಆ ವ್ಯಕ್ತಿಯ ಮೊದಲಿನ ವಿವಾಹ ಯಾವ ಧರ್ಮಶಾಸ್ತ್ರದ ಪ್ರಕಾರ ನಡೆಯಿತೋ ಆ ಧರ್ಮದಲ್ಲಿ ಹೇಳಿರುವ ಎಲ್ಲ ವಿಧಿಗಳನ್ನೂ ಶಾಸ್ತ್ರೋಕ್ತವಾಗಿ ಆ ವಿವಾಹ ಕಾಲದಲ್ಲಿ ಆಚರಿಸಲಾಗಿತ್ತೆಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಎರಡನೆಯ ವಿವಾಹ ರದ್ದಾಗುವುದಾದರೂ ಆ ವಿವಾಹ ಸಂಬಂಧದಲ್ಲಿ ಪತ್ನಿಯಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಆ ಕಾರಣದಿಂದಾಗಿ ಜಾರಜರೆನಿಸುವುದಿಲ್ಲ. ಆದರೆ ಅಂಥ ಮಕ್ಕಳು ತಮ್ಮ ತಂದೆತಾಯಿಗಳ ಸ್ವತ್ತಿಗೆ ಮಾತ್ರ ಹಕ್ಕುದಾರರಾಗುತ್ತಾರೆ. ಭಾರತದಲ್ಲಿ ಮುಸಲ್ಮಾನರನ್ನು ಬಿಟ್ಟು ಉಳಿದೆಲ್ಲರಿಗೂ ಭಾರತೀಯ ದಂಡಸಂಹಿತೆಯಲ್ಲಿ ದ್ವಿವಿವಾಹಕ್ಕೆ ಸಂಬಂಧಿಸಿದ ನಿರ್ಬಂಧಗಳು ಅನ್ವಯವಾಗುತ್ತವೆ. ದ್ವಿವಿವಾಹ ಶಿಕ್ಷಾರ್ಹ ಅಪರಾಧ. ಮುಸಲ್ಮಾನರಿಗೆ ಕುರಾನಿನಿಂದ ಮತ್ತು ನ್ಯಾಯಾಲಯಗಳ ತೀರ್ಪುಗಳಿಂದ ವ್ಯುತ್ಪನ್ನವಾದ ಆಕ್ರೋಡೀಕೃತ ವಿವಾಹ ಮತ್ತು ವಿವಾಹವಿಚ್ಛೇದನ ಕಾನೂನು ಅನ್ವಯಿಸುತ್ತದೆ. ಮುಸ್ಲಿಮರು ನಾಲ್ವರು ಪತ್ನಿಯರನ್ನು ವಿವಾಹವಾಗಬಹುದು. ಆದರೆ ಒಬ್ಬಳಿಗಿಂತ ಹೆಚ್ಚು ಪತ್ನಿಯರನ್ನು ವಿವಾಹವಾದವನು ತನ್ನೆಲ್ಲ ಪತ್ನಿಯರನ್ನೂ ನ್ಯಾಯವಾಗಿ ಪೂರ್ಣ ಸರಿಸಮಾನತೆಯಿಂದ ನೋಡಿಕೊಳ್ಳಲು ಶಕ್ತನಾಗಲಾರನೆಂಬ ಶಂಕೆಯಿದ್ದರೆ ಅವನು ಒಂದೇ ವಿವಾಹ ಮಾಡಿಕೊಳ್ಳಬೇಕಾಗುತ್ತದೆಯೆಂದು ನ್ಯಾಯಾಲಯ ತೀರ್ಪಿತ್ತಿದೆ (1943). ಒಬ್ಬ ಮುಸಲ್ಮಾನ ನಾಲ್ವರಿಗಿಂತ ಹೆಚ್ಚು ಪತ್ನಿಯರನ್ನು ಕಾಯಿದೆಬದ್ಧವಾಗಿ ವಿವಾಹ ಮಾಡಿಕೊಳ್ಳಲಾರ.

ಇಂಗ್ಲಿಷ್ ಕಾನೂನು ದ್ವಿವಿವಾಹವನ್ನು ನಿಷೇಧಿಸುತ್ತದೆ. ಇಂಗ್ಲೆಂಡ್, ಐರ್ಲೆಂಡ್ ಇಲ್ಲವೇ ಬೇರೆ ಕಡೆಯಲ್ಲಿ ಪತ್ನಿ ಜೀವಂತ ಇರುವಾಗ ಇನ್ನೊಬ್ಬಳನ್ನು ವಿವಾಹವಾಗುವುದು ದ್ವಿಪತ್ನಿತ್ವದ ಅಪರಾಧವೆನಿಸುತ್ತದೆ. (1) ಎರಡನೆಯ ವಿವಾಹ ಮಾಡಿಕೊಂಡ ವ್ಯಕ್ತಿ ಬ್ರಿಟಿಷ್ ಪ್ರಜೆಯಾಗಿರದಿದ್ದು ಇಂಗ್ಲೆಂಡ್ ಮತ್ತು ಐರ್ಲೆಂಡ್‍ಗಳ ಹೊರಗೆ ವಿವಾಹ ಮಾಡಿಕೊಂಡಿದ್ದರೆ, (2) ಮೊದಲನೆಯ ಪತ್ನಿ/ಪತಿ 7 ವರ್ಷಗಳ ವರಗೆ ನಾಪತ್ತೆಯಾಗಿದ್ದು, ಆ ವ್ಯಕ್ತಿ ಬದುಕಿರುವದನ್ನು ಮತ್ತೆ ವಿವಾಹವಾಗುವ ವ್ಯಕ್ತಿ ಅರಿತಿರದಿದ್ದರೆ, (3) ಒಬ್ಬ ವ್ಯಕ್ತಿಯ ಮೊದಲನೆಯ ವಿವಾಹದ ವಿಚ್ಛೇದವಾಗಿದ್ದರೆ, ಇಲ್ಲವೇ ವಿವಾಹ ಅಕೃತವೆಂಬ ತೀರ್ಪಿನ ಮೂಲಕ ಅಂತ್ಯಗೊಂಡಿದ್ದರೆ, (4) ಮೊದಲನೆಯ ಪತಿ/ಪತ್ನಿ ಸತ್ತಿರುವುದಾಗಿ ಯುಕ್ತ ಕಾರಣದ ಆಧಾರದ ಮೇಲೆ ಆ ವ್ಯಕ್ತಿಗೆ ನಂಬಿಕೆಯಿದ್ದರೆ, ಅಂಥ ಸಂದರ್ಭಗಳಲ್ಲಿ ದ್ವಿವಿವಾಹ ಅಪರಾಧವಾಗುವುದಿಲ್ಲ.

ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲ ರಾಜ್ಯಗಳಲ್ಲೂ ದ್ವಿವಿವಾಹವನ್ನು ಶಿಕ್ಷಾರ್ಹ ಅಪರಾಧವೆಂದು ಸಾರುವ ಕಾನೂನುಗಳಿವೆ. ಮೊದಲನೆಯ ಪತ್ನಿ/ಪತಿ ನಾಪತ್ತೆಯಾಗಿ, ಐದು ವರ್ಷಗಳವರಗೆ ಆ ವ್ಯಕ್ತಿಯ ಇರವಿನ ಬಗ್ಗೆ ಸುದ್ದಿಯೇ ಇರದಿದ್ದಲ್ಲಿ, ಇಲ್ಲವೇ ಮೊದಲನೆಯ ವಿವಾಹ ಸಕ್ಷಮ ನ್ಯಾಯಾಲಯದ ತೀರ್ಪಿನಿಂದ ಅಂತ್ಯಗೊಂಡಿದ್ದಲ್ಲಿ ದ್ವಿವಿವಾಹದ ಅಪರಾಧ ಉದ್ಭವಿಸುವುದಿಲ್ಲ. ಅಮೆರಿಕದ ಬೇರೆ ಬೇರೆ ರಾಜ್ಯಗಳ ವಿವಾಹವಿಚ್ಛೇದ ಕಾನೂನುಗಳಲ್ಲಿ ವ್ಯತ್ಯಾಸಗಳಿರುವುದರಿಂದ ದಂಪತಿಗಳು ವಿವಾಹವಿಚ್ಚೇದ ಕಾನೂನು ಸಡಿಲವಾಗಿರುವ ರಾಜ್ಯಕ್ಕೆ ಹೋಗಿ ತಾತ್ಪೂರ್ತಿಕವಾಗಿ ವಾಸವಾಗಿದ್ದುಕೊಂಡು ಅಲ್ಲಿಯ ಕಾನೂನಿನ ಲಾಭ ಪಡೆದು ವಿವಾಹವಿಚ್ಛೇದ ಮಾಡಿಕೊಂಡು ಬೇರೆ ರಾಜ್ಯಕ್ಕೆ ಹೋಗಿ ಮತ್ತೆ ವಿವಾಹ ಮಾಡಿಕೊಳ್ಳಬಹುದು. ಆದರೆ ಅಂಥ ಸಂದರ್ಭಗಳಲ್ಲಿ ಕಾನೂನಿನ ವಿಧಿಗಳ ಉಲ್ಲಂಘನೆಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಸಂದೇಹ ಉಂಟಾಗಬಹುದು. ಹೊಸ ರಾಜ್ಯದಲ್ಲಿ ವಿವಾಹವಿಚ್ಛೇದ ಮಂಜೂರಾಗದೆ ಹೋದರೆ ತೊಡಕುಂಟಾಗುತ್ತದೆ. ವಿಚ್ಛೇದದ ಮೂಲಕ ಮೂಲವಿವಾಹ ಕೊನೆಗೊಂಡಿದೆಯೆಂದು ಮನಃಪೂರ್ವಕವಾಗಿ ನಂಬಿ ಎರಡನೆಯ ವಿವಾಹ ಮಾಡಿಕೊಂಡಾಗ್ಯೂ ದ್ವಿವಿವಾಹದ ಅಪರಾಧಕ್ಕೆ ಗುರಿಯಾಗಬೇಕಾಗುವ ಪ್ರಸಂಗ ಬರಬಹುದು.

ಭಾರತದ ಕಾನೂನು ಸಾಮಾನ್ಯವಾಗಿ ಬ್ರಿಟನ್ ದೇಶ ಹಾಗೂ ಅಮೆರಿಕಾ ದೇಶಗಳ ಕಾನೂನುಗಳನ್ನು ನಮ್ಮ ದೇಶದ ಸಾಮಾಜಿಕ, ಆಡಳಿತ ಅನುಗುಣವಾಗಿ ಮಾರ್ಪಾಟುಗಳೊಂದಿಗೆ ಸೇರಿಸಿಕೊಳ್ಳಲಾಗಿದೆ. ಅದರಂತೆ ಭಾರತದಲ್ಲಿಯೂ ಕೂಡ ದ್ವಿವಿವಾಹ ಕಾನೂನು ಬಾಹಿರವಾಗಿರುತ್ತವೆ. ಭಾ.ದಂ.ಪ್ರ. ಸಂಹಿತೆಯ ಕಲಂ 499 ರೀತ್ಯ ದ್ವಿವಿವಾಹವು ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. (ಬಿ.ಕೆ.ಯು.) (ಪರಿಷ್ಕರಣೆ : ಮೈಸೂರು ವಿಶ್ವವಿದ್ಯಾನಿಲಯ)