ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿವೇದಿ, ಮಹಾವೀರ್ ಪ್ರಸಾದ್

ವಿಕಿಸೋರ್ಸ್ದಿಂದ

ದ್ವಿವೇದಿ, ಮಹಾವೀರ್ ಪ್ರಸಾದ್

	1864-1938. ಪ್ರಸಿದ್ಧ ಹಿಂದೀ ಸಾಹಿತಿ. ಹುಟ್ಟಿದ್ದು ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ದೌಲತ್‍ಪುರ ಎಂಬ ಹಳ್ಳಿಯಲ್ಲಿ. 1864ರ ಮೇ 15ರಂದು. ಮನೆಯಲ್ಲಿ ಸಂಸ್ಕøತವನ್ನೂ ಹಳ್ಳಿಯ ಶಾಲೆಯಲ್ಲಿ ಉರ್ದೂ-ಫಾರಸೀ ಭಾಷೆಗಳನ್ನೂ ಅಭ್ಯಾಸ ಮಾಡಿದರು. ಮುಂದೆ ಇಂಗ್ಲಿಷ್ ಭಾಷೆಯನ್ನು ಕಲಿಯುವ ಸಲುವಾಗಿ ರಾಯ್‍ಬರೇಲಿಗೆ ಬಂದರು. ತುಂಬ ಬಡ ಕುಟುಂಬಕ್ಕೆ ಸೇರಿದವರಾಗಿದ್ದುದರಿಂದ ಕಷ್ಟದಿಂದಲೇ ಶಿಕ್ಷಣವನ್ನು ಮುಗಿಸಿ ಬೊಂಬಾಯಿಯಲ್ಲಿ ಕೆಲಸದಲ್ಲಿದ್ದ ತಮ್ಮ ತಂದೆಯ ಬಳಿಗೆ ಹಿಂದಿರುಗಿ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ  ಸೇರಿದರು.  ನಾಗಪುರ, ಮುಂಬಯಿ, ಮತ್ತು ಅರಿಜ್ಮೇರ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ತಂತಿ ಸುದ್ದಿ ಕಳಿಸುವ ಶಿಕ್ಷಣವನ್ನು ಪೂರೈಸಿಕೊಂಡುದುದರ ಫಲವಾಗಿ, ತಂತಿ ಗುಮಾಸ್ತರಾಗಿ ನೇಮಕಗೊಂಡರು.  ಇವರ ಅರ್ಹತೆಯನ್ನು ಗುರುತಿಸಿ ಇನ್‍ಸ್ಪೆಕ್ಟರ್ ಆಗಿ ಬಡ್ತಿ ನೀಡಿ ಝಾನ್ಸಿಗೆ ಕಳುಹಿಸಲಾಯಿತು. ಆದರೆ ಅಲ್ಲಿದ್ದ ಹೊಸ ಅಧಿಕಾರಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗದೆ ಇದ್ದುದರಿಂದ ಮಾರನೆಯ ದಿನವೇ ತಮ್ಮ ಹುದ್ದೆಗೆ ಇವರು ರಾಜೀನಾಮೆ ನೀಡಿದರು.

ಭಾಷೆ ಮತ್ತು ಸಾಹಿತ್ಯ ಕ್ಷೇತ್ರ ದ್ವಿವೇದಿಯವರನ್ನು ತನ್ನತ್ತ ಸೆಳೆದುಕೊಂಡಿತು. ತಂತಿ ಇಲಾಖೆಗೆ ಆದ ನಷ್ಟ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರಕ್ಕೆ ಮಹಾವರವಾಗಿ ಪರಿಣಮಿಸಿತು. ಕಾಶಿಯ ನಾಗರೀ ಪ್ರಚಾರಣೀ ಸಭೆ ಆರಂಬಿಸಿದ್ದ ಸರಸ್ವತೀ ಪತ್ರಿಕೆಗೆ 1904ರಿಂದ ಅಂದರೆ, ಆ ಪತ್ರಿಕೆಯ ಆರಂಭದ ಎರಡು ಮೂರು ವರ್ಷಗಳ ತರುವಾಯ, ದ್ವಿವೇದಿಯವರ ಸಂಪಾದಕತ್ವ ಲಭ್ಯವಾಯಿತು. ಭಾರತೇಂದು ಹರಿಶ್ಚಂದ್ರರಂಥ ವ್ಯಕ್ತಿಗಳ ಪ್ರಯತ್ನಗಳಿಂದಾಗಿ ಖಡೀಬೋಲಿ ಗದ್ಯ ಪದ್ಯಗಳ ಮಾಧ್ಯಮವಾಗಿ ಅಂಗೀಕಾರವನ್ನು ಪಡೆದಿತ್ತಾದರೂ ಹಿಂದೀ ಕವಿತೆ ವ್ರಜಭಾಷೆಯ ಮೋಹದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಿರಲಿಲ್ಲ. ಈ ಶೃಂಖಲೆಯನ್ನು ಸಂಪೂರ್ಣವಾಗಿ ತೊಡೆದುಹಾಕಿ, ಯುವಕ ಲೇಖಕರನ್ನು ಕಲೆಹಾಕಿ, ಅವರ ಬರಹಗಳನ್ನು ತಿದ್ದಿ ಪ್ರಕಟಿಸಿ ಹಿಂದಿಗೆ ಹೊಸ ಶಕ್ತಿಯನ್ನು ಓಜಸ್ಸುಗಳನ್ನು ತಂದುಕೊಡುವಲ್ಲಿ ದ್ವಿವೇದಿಯವರು ವಹಿಸಿದ ಪಾತ್ರ ಅವಿಸ್ಮರಣೀಯವಾಗಿದೆ. ಮೈಥಲೀಶರಣ ಗುಪ್ತರಂಥ ಅನೇಕ ಪ್ರತಿಭಾವಂತರನ್ನು ಬೆಳಕಿಗೆ ತಂದ ಶ್ರೇಯಸ್ಸು ಇವರದಾಗಿದೆ.

ಲೇಖಕರನ್ನು ಬೆಳಕಿಗೆ ತಂದದ್ದು ಮಾತ್ರವಲ್ಲದೆ ತಮ್ಮ ಸ್ವಂತ ಕೃತಿಗಳಿಂದ ಹಾಗೂ ಅನುವಾದಗಳಿಂದ ಹಿಂದೀ ಸಾಹಿತ್ಯವನ್ನು ಇವರು ಸಮೃದ್ದಗೊಳಿಸಿದರು. ಹಿಂದೀ ಸಾಹಿತ್ಯದ ಪ್ರತಿಯೊಂದು ಪ್ರಕಾರಕ್ಕೂ ಇವರಿಂದ ಕಾಣಿಕೆ ಸಂದಿದೆ ಎಂಬುದು ಇವರ ವೈವಿಧ್ಯಮಯ ಸಾಹಿತ್ಯ ಸೇವೆಯ ಪ್ರತೀಕವಾಗಿರುವುದು ಮಾತ್ರವಲ್ಲದೆ, ಹಿಂದಿಯ ಸರ್ವತೋಮುಖ ಪ್ರಗತಿಯ ಬಗೆಗೆ ಇವರಿಗಿದ್ದ ಕಾಳಜಿಯ ಪ್ರತೀಕವೂ ಆಗಿದೆ. ಅನೇಕ ವಿಷಯಗಳ ಬಗ್ಗೆ ಇವರು ಬರೆದಿರುವ ಮೌಲಿಕ ಪ್ರಬಂಧಗಳು ಹಿಂದೀ ಸಾಹಿತ್ಯದ ಶಾಶ್ವತ ಆಸ್ತಿಯಾಗಿದೆ. ಇವರ ಸೂಚನೆಯ ಮೇರೆಗೆ ಕಾಮತಾಪ್ರಸಾದ್ ಗುರು ಅವರಿಂದ ರಚಿತವಾದ ಹಾಗೂ ಅವರಿಂದಲೇ ಪರಿಷ್ಕøತವಾಗಿ ಪ್ರಕಟವಾದ ಹಿಂದೀ ವ್ಯಾಕರಣ ಈ ಕ್ಷೇತ್ರದಲ್ಲಿನ ಆಚಾರ್ಯ ಕೃತಿ ಎನ್ನಿಸಿಕೊಂಡಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ವಿವಿಧ ವಿಷಯಗಳ ಬಗ್ಗೆ ಇವರು ಸರಸ್ವತಿಯಲ್ಲಿ ಬರೆದ ಲೇಖನಗಳು, ಜೀವನ ಚರಿತ್ರೆಗಳು, ಪುಸ್ತಕ ರೂಪದಲ್ಲಿ ಹೊರಬಂದಿವೆ. ಇಂಥ ಸಂಕಲನಗಳು ಮತ್ತು ಜೀವನ ಚರಿತ್ರೆಗಳು ಮೊದಲಾದವುಗಳ ಸಂಖ್ಯೆ 20ಕ್ಕೂ ಮೀರಿದೆ. ದ್ವಿವೇದಿ ಕಾವ್ಯ ಮಾಲಾ ಎಂಬ ಹೆಸರಿನಲ್ಲಿ ಇವರ ಎಲ್ಲ ಕವತೆಗಳನ್ನೂ ಸಂಗ್ರಹಿಸಿ ಪ್ರಕಟಿಸಲಾಗಿದೆ. ಈ ಕ್ಷೇತ್ರದಲ್ಲಿನ ಇವರ ಗಮನಾರ್ಹ ಕೊಡುಗೆಗಳೆಂದರೆ, ನೈಷಧ ಚರಿತ ಚರ್ಚಾ, ವಿಕ್ರಮಾಂಕದೇವ ಚರಿತ ಚರ್ಚಾ, ಹಿಂದೀ ಕಾಲಿದಾಸ್ ಕೀ ಸಮಾಲೋಚನಾ, ಹಿಂದೀ ವೈe್ಞÁನಿಕ ಕೋಶ್ ಕೀ ದಾರ್ಶನಿಕ್ ಪರಿಭಾಷಾ, ಹಿಂದೀ ಭಾಷಾ ಕಿ ಉತ್ಪತ್ತಿ, ಕಾಲಿದಾಸ್ ಕೀ ನಿರಂಕುಶತಾ, ನಾಟ್ಯಶಾಸ್ತ್ರ, ಪ್ರಾಚೀನ ಪಂಡಿತ್ ಔರ್‍ಕವಿ, ಕೋವಿದ ಕೀರ್ತನ್ ಮುಂತಾದವು. ಇತ್ತ ಸಂಸ್ಕøತದಿಂದ ಕುಮಾರಸಂಭವ, ರಘುವಂಶ, ಮಹಾಭಾರತಗಳಂಥ ಗ್ರಂಥಗಳನ್ನೂ ಇಂಗ್ಲಿಷಿನಿಂದ ಬೇಕನ್ ಮತ್ತು ಸ್ಪನ್ಸರ್‍ರಂಥ ಚಿಂಥಕರ ವೈಚಾರಿಕ ಹಾಗೂ ದಾರ್ಶನಿಕ ಪ್ರಬಂಧಗಳನ್ನೂ ಹಿಂದಿಗೆ ತಂದುಕೊಟ್ಟರು.

ಇವರ ಬಹುಮುಖ ಸೇವೆಯ ಬಗೆಗಿನ ಕೃತಜ್ಞತೆಯ ಕುರುಹಾಗಿ 1933ರಲ್ಲಿ ಇವರಿಗೆ ಅಭಿನಂದನ ಗ್ರಂಥವೊಂದನ್ನು ಅರ್ಪಿಸಲಾಯಿತು. ಸಾಹಿತ್ಯ ಸೇವೆಯಲ್ಲಿ ತಾವು ಗಳಿಸಿದ ಹಣದ ಬಹುಭಾಗವನ್ನು ಇವರು ಹಿಂದಿಯ ಉದ್ದಾರ ವಿಕಾಸಗಳಿಗೇ ವಿನಿಯೋಗಿಸಿದರು. ಕಾಶೀ ಹಿಂದೂ ವಿಶ್ವವಿದ್ಯಾಲಯದಲ್ಲಿ ಇವರು ಸ್ಥಾಪಿಸಿರುವ ನಿಧಿಯಿಂದ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದೆ. ನಾಗರೀ ಪ್ರಚಾರಣೀ ಸಭೆಗೆ ನೀಡಿದ ದತ್ತಿಯಿಂದ ಪ್ರತಿವರ್ಷ ಪ್ರಕಟವಾಗುವ ಅತ್ಯುತ್ತಮ ಹಿಂದೀ ಗ್ರಂಥಕ್ಕೆ ದ್ವಿವೇದಿ ಸ್ವರ್ಣಪದಕವನ್ನು ಕೊಡಲಾಗುತ್ತಿದೆ. ಹಿಂದೀ ಕ್ಷೇತ್ರದ ಅತ್ಯಂತ ಗೌರವಪೂರ್ವಕ ಸನ್ಮಾನಗಳಲ್ಲಿ ಇದೂ ಒಂದೆಂದು ಪರಿಗಣಿತವಾಗಿದೆ.

ಹಿಂದಿಯನ್ನು ವಿಕಾಸ ಉದ್ದಾರಗಳಿಗಾಗಿ ಅಹರ್ನಿಶಿ ದುಡಿದ, ಅದಕ್ಕೆ ಇಂದಿನ ಸ್ವರೂಪವನ್ನು ತಂದುಕೊಟ್ಟು ಅದನ್ನು ಸಮೃದ್ದವಾಗಿಸಿದ ಈ ಆಚಾರ್ಯ ಪುರುಷರು 1938ರ ಡಿಸೆಂಬರ್ 21ರಂದು ಕೊನೆಯುಸಿರೆಳೆದರು. (ಪಿ.ಜೆ.ಡಿ.)