ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿವೇದಿ, ಹಜಾರೀ ಪ್ರಸಾದ್

ವಿಕಿಸೋರ್ಸ್ದಿಂದ

ದ್ವಿವೇದಿ, ಹಜಾರೀ ಪ್ರಸಾದ್ 1907-. ಆಧುನಿಕ ಹಿಂದೀ ಸಾಹಿತ್ಯದ ಶ್ರೇಷ್ಟ ಪ್ರಬಂಧಕಾರರು. ಸಾಹಿತ್ಯ, ಸಂಶೋಧನೆ, ಪ್ರಬಂಧ, ಸಾಹಿತ್ಯದ ಇತಿಹಾಸ, ವಿಮರ್ಶೆ ಮತ್ತು ಕಾದಂಬರಿ --ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಹಿಂದೀ ಸಾಹಿತ್ಯಕ್ಕೆ ಕೊಟ್ಟಿದ್ದಾರೆ. ಇವರು ತಮ್ಮ ಪ್ರಬಂಧಗಳಲ್ಲಿ ಭಾವಾವೇಶ, ವಿಚಾರಪರತೆ, ಸ್ವತಂತ್ರಚಿಂತನೆ, ಭಾರತೀಯ ಸಂಸ್ಕøತಿಯ ಮಹತ್ತ್ವ ಮತ್ತು ಈಗಿನ ಕಾಲದ ವೈe್ಞÁನಿಕ ದೃಷ್ಟಿ. ಹಾಸ್ಯಪರತೆ, ಲಾಲಿತ್ಯ, ಸರಲತೆ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ತಮ್ಮ ವೈಯಕ್ತಿಕತೆ--- ಇಷ್ಟನ್ನೂ ಮೈಗೂಡಿಸಿದ್ದಾರೆ. ಕೆಲವು ಪ್ರಬಂಧಗಳಂತೂ ತಮ್ಮ ವೈಯಕ್ತಿಕ ಗುಣಗಳಿಂದಾಗಿ ಆದರ್ಶ ಲಲಿತ ಪ್ರಬಂಧಗಳಾಗಿವೆ. ಅಶೋಕ್ ಕೇ ಪೂಲ್ (1948), ಕಲ್ಪಲತಾ (1951), ವಿಚಾರ್ ಔರ್ ವಿತರ್ಕ್ (1954), ವಿಚಾರ್ ಪ್ರವಾಹ್ (1959) ಮತ್ತು ಕುಟಜ್ (1964) - ಈ ಪುಸ್ತಕಗಳಲ್ಲಿ ಇವರ ಪ್ರಬಂಧಗಳು ಸಂಗ್ರಹಿಸಲ್ಪಟ್ಟಿವೆ.

ಹಿಂದೀ ಭಕ್ತಿ ಸಾಹಿತ್ಯವನ್ನು ಜನಾಂತರ ದೃಷ್ಟಿಯಿಂದ ನೋಡಿ ಮಾನವನಲ್ಲಿಯೇ ದೇವರನ್ನು ಕಾಣುವ ಹೊಸ ಪ್ರವೃತ್ತಿಯನ್ನು ಇವರು ತೋರಿದ್ದಾರೆ. ಕಬೀರ್ ಮತ್ತು ಸೂರದಾಸರ ಸಾಹಿತ್ಯವನ್ನು ಕುರಿತ ಇವರ ವಿಮರ್ಶಾ ಗ್ರಂಥಗಳು ಗಮನಾರ್ಹವಾದವು.

ಬಾಣ ಭಟ್ಟ ಕೀ ಆತ್ಮಕಥಾ (1947); ಚಾರುಚಂದ್ರಲೇಖ (1963) ; ಪುನರ್ನವಾ ಇವು ಇವರ ಕಾದಂಬರಿಗಳು. ಇವರ ಕಾದಂಬರಿಗಳಲ್ಲಿ ಪ್ರಾಚೀನತೆ ಮತ್ತು ಮಧ್ಯಕಾಲೀನ ಭಾರತದ ಸಮಸ್ತ ಸಾಂಸ್ಕøತಿಕ ವೈಭವ ಸಾಕಾರಗೊಂಡಿದೆ. ಬಾಣಭಟ್ಟನ ಆತ್ಮಕಥೆಯಲ್ಲಿ ಬಾಣನ ಶೈಲಿಯ ದೃಷ್ಟಿಯಿಂದ ಇದೊಂದು ಅಭೂತಪೂರ್ವಕೃತಿ, ಬಾಣಭಟ್ಟನ ಪಾತ್ರದಲ್ಲಿ ಭಾರತದ ಉದ್ದಾಮ ಪಂಡಿತರ ಘನತೆ, ಪಾಂಡಿತ್ಯ, ಸಂಸ್ಕøತಿಯನ್ನೂ ನಿಪುಣಿಕೆಯ ಪಾತ್ರದಲ್ಲಿ ಭಾರತೀಯ ನಾರೀಶಕ್ತಿಯನ್ನೂ ಕಾಣಬಹದು. ಈ ಐತಿಹಾಸಿಕ ಸಾಂಸ್ಕøತಿಕ ಕಾದಂಬರಿಯಲ್ಲಿ ಇವರು ಆಗಿನ ಇತಿಹಾಸವನ್ನೇ ಪುನರ್ರಚಿಸಿದ್ದಾರೆ. ಚಾರುಚಂದ್ರಲೇಖ ಎಂಬ ಐತಿಹಾಸಿಕ ಕಾದಂಬರಿಯಲ್ಲಿ ಶಾತವಾಹನ ಕಾಲದ ಭಾರತವನ್ನು ಚಿತ್ರಿಸಲಾಗಿದೆ. ಬಾಣ ಭಟ್ಟ ಕೀ ಆತ್ಮಕಥಾ ಕಾದಂಬರಿಯನ್ನು ಎಂ. ಎಸ್. ಕೃಷ್ಣಮೂರ್ತಿ ಅವರೂ ಚಾರುಚಂದ್ರಲೇಖ ಕಾದಂಬರಿಯನ್ನು ಎನ್. ಎಸ್. ದಕ್ಷಿಣಾಮೂರ್ತಿ ಅವರೂ ಕನ್ನಡಕ್ಕೆ ತಂದಿದ್ದಾರೆ.

ಹಿಂದೀ ಸಾಹಿತ್ಯ ಕೀ ಭೂಮಿಕಾ (1940) ಸಾಹಿತ್ಯಕಾ ಆದಿಕಾಲ್ (1952) ಮತ್ತು ಹಿಂದೀ ಸಾಹಿತ್ಯ (1953) - ಈ ಗ್ರಂಥಗಳಲ್ಲಿ ಇವರು ಸಾಹಿತ್ಯದ ಇತಿಹಾಸವನ್ನು ಜನಜೀವನದ ಇತಿಹಾಸದಂತೆ ಚಿತ್ರಿಸಿದ್ದಾರೆ. ಅಲ್ಲದೆ ಈ ಗ್ರಂಥಗಳಲ್ಲಿ ಇವರು ಭಾರತೀಯ ಮತ್ತು ಪಾಶ್ವಾತ್ಯ ದೇಶಗಳ ಐತಿಹ್ಯ, ಪುರಾಣ ಮತ್ತು ಜನಪದ ಸಾಹಿತ್ಯದ ಹಿನ್ನಲೆಯಲ್ಲಿ ಹಿಂದೀ ಕಾವ್ಯವಸ್ತುವಿನ ನೆಲೆಯನ್ನು ಗುರುತಿಸಿದ್ದಾರೆ.

ಇವರಿಗೆ ಶಾಂತಿನಿಕೇತನದಲ್ಲಿ ಹಿಂದೀ ವಿಭಾಗವನ್ನು ಸ್ಥಾಪಿಸಿ ಅದರ ನೇತೃತ್ವವನ್ನು ವಹಿಸಿ ಬಹುಕಾಲ ರವೀಂದ್ರನಾಥ ಠಾಕೂರರ ಜೊತೆಯಲ್ಲಿ ಕೆಲಸ ಮಾಡುವ ಸೌಭಾಗ್ಯ ದೊರಕಿತ್ತು. ರವೀಂದ್ರರ ಮಾನವತಾವಾದಿ ವಿಚಾರಧಾರೆಯಿಂದ ಪ್ರಭಾವಿತರಾಗಿ ಇವರು ಕಬೀರ್ ಎಂಬ ಗ್ರಂಥವನ್ನು ರಚಿಸಿದ್ದಾರೆ. ಹಂಡ್ರಡ್ ಪೊಯೆಮ್ಸ್ ಆಫ್ ಕಬೀರ್ ಎಂಬ ರವೀಂದ್ರರ ಗ್ರಂಥ ಈ ಪುಸ್ತಕಕ್ಕೆ ಪ್ರೇರಣೆ ನೀಡಿದೆ. ಈ ಪುಸ್ತಕದಲ್ಲಿ ಕಬೀರರ ಬಗ್ಗೆ ಭಾವಕದೃಷ್ಟಿಯ ವಿಮರ್ಶೆಯಿದೆ. ಈ ಗ್ರಂಥದಲ್ಲಿ ಇವರು ಕಬೀರದಾಸರು ಅವಧೂತರನ್ನು ಸಂಬೋಧಿಸಿ ಹೇಳಿರುವ ಪದಗಳಿಗೂ ಮತ್ತು ಸಂತರನ್ನು (ಸುನೋ ಭಾಈ ಸಂತೋ) ಕುರಿತು ಹಾಡಿರುವ ಪದಗಳಿಗೂ ಇರುವ ವಿಚಾರ ಭಿನ್ನತೆಯನ್ನು ಎತ್ತಿ ತೋರಿಸಿದ್ದಾರೆ.

ಇವರು ತಮ್ಮ ನಾಥ್ ಸಂಪ್ರದಾಯ (1950) ಎಂಬ ವಿಚಾರಪೂರಿತ ಗ್ರಂಥದಲ್ಲಿ ಪರಂಪರಾಗತವಾದ ವಿಷಯಗಳನ್ನು ಬಿಟ್ಟು ಹೊಸ ಜಾಡನ್ನು ಹಿಡಿದಿದ್ದಾರೆ. ಇದರಲ್ಲಿ ಬೌದ್ಧಸಿದ್ಧರ ಮತ್ತು ನಾಥಸಿದ್ಧರ ಪರಸ್ಪರ ಕೊಳ್ಕಡೆ ಹಾಗೂ ಸಂಬಂಧವನ್ನು ವಿವೇಚಿಸಿದ್ದಾರೆ. ಇವರು ಹಿಂದೀ ಭಕ್ತಿ ಸಾಹಿತ್ಯವನ್ನು ಅಖಿಲ ಭಾರತೀಯ ಭಕ್ತಿಸಾಹಿತ್ಯದ ಹಿನ್ನಲೆಯಲ್ಲಿ ಚರ್ಚಿಸಿ ಅದರ ಸಂದಿಗೊಂದುಗಳನ್ನು ತಡಕಾಡಿದ್ದಾರೆ. ಹಿಂದೀ ಭಕ್ತಿ ಸಾಹಿತ್ಯಕ್ಕೆ ದಕ್ಷಿಣದ ಕೊಡುಗೆ ಏನು ಎಂಬುದನ್ನೂ ಸೂಚಿಸಿದ್ದಾರೆ.

ಹಿಂದಿಯ ಪ್ರಾಯೋಗಿಕ ವಿಮರ್ಶೆಯ ಜೊತೆಗೆ ಸೈದ್ಧಾಂತಿಕ ವಿಮರ್ಶೆಯ ಕ್ಷೇತ್ರದಲ್ಲೂ ದ್ವಿವೇದಿಯವರು ಕೈಯಾಡಿಸಿದ್ದಾರೆ. ಸಾಹಿತ್ಯದ ವಿಮರ್ಶೆಯನ್ನು ಕುರಿತ ಇವರ ಗ್ರಂಥಗಳಲ್ಲಿ ಮುಖ್ಯವಾದವು ಸಾಹಿತ್ಯಕಾ ಮರ್ಮ (1949), ಲಾಲಿತ್ಯಾಮೀಮಾಂಸಾ (1962) ಮತ್ತು ಸಾಹಿತ್ಯ ಸಹಚರ್ (1985).

ನಾಥ್ ಸಿದ್ಧೊಂ ಕೀ ಬಾನಿಯಾ (1957), ಸಂದೇಶ್ ರಾಸಕ್ (1960). ಸಂಕ್ಷಿಪ್ತ್ ಪೃಥ್ವೀರಾಜರಾಸೋ (1957) ಎಂಬ ಗ್ರಂಥಗಳನ್ನು ಇವರು ಹೊಸ ದೃಷ್ಟಿಯಿಂದ ಪರಿಶೋಧಿಸಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇಲ್ಲಿ ಇವರ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳ ಪಾಂಡಿತ್ಯವನ್ನು ಕಾಣಬಹುದಾಗಿದೆ.

ಮೇಘದೂತ್ - ಏಕ್‍ಪುರಾನೀ ಕಹಾನಿ ಎಂಬ ಗ್ರಂಥದಲ್ಲಿ ಕಾಳಿದಾಸನ ಮೇಘದೂತ ಕಾವ್ಯದಲ್ಲಿ ಅಡಗಿರುವ ತತ್ತ್ವವನ್ನು ಮಾರ್ಮಿಕವಾಗಿ ಗ್ರಹಿಸಿ ಅದನ್ನು ವಿಶ್ಲೇಷಣಾತ್ಮಕವಾಗಿ ವಿಮರ್ಶೆ ಮಾಡಿದ್ದಾರೆ. ಹೊಸ ಶೈಲಿಯಲ್ಲಿ ಈ ಗ್ರಂಥಕ್ಕೆ ವ್ಯಾಖ್ಯಾನ ಬರೆದಿದ್ದಾರೆ. ಈ ಗ್ರಂಥ ಒಂದು ಕಾದಂಬರಿಯಂತೆ ರೋಚಕವಾಗಿದೆ. ಇದನ್ನೂ ಎಂ. ಎಸ್. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ತಂದಿದ್ದಾರೆ.

ಇವರ ಪ್ರಾಚೀನ ಭಾರತ್ ಕೇ ಕಲಾತ್ಮಕ್ ವಿನೋದ್ (ಇದೂ ಎಂ. ಹನುಮಯ್ಯನವರಿಂದ ಕನ್ನಡಕ್ಕೆ ಬಂದಿದೆ) ಮತ್ತು ಮಧ್ಯಯೂಗೀನ್ ಧರ್ಮಸಾಧಾನಾ ಆಯಾ ಕ್ಷೇತ್ರಗಳಲ್ಲಿ ಮೈಲಿಗಲ್ಲುಗಳಾಗಿವೆ. ರವೀಂದ್ರನಾಥ ಠಾಕೂರರನ್ನು ಕುರಿತು ಬರೆದ ಮೃತ್ಯುಂಜಯ ರವೀಂದ್ರ ಎಂಬ ಗ್ರಂಥ ರವೀಂದ್ರರ ವ್ಯಕ್ತಿತ್ವ ಹಾಗೂ ಕರ್ತೃತ್ವವನ್ನು ಸಮಗ್ರವಾಗಿ ಚಿತ್ರಿಸುವ ಒಂದು ಅನುಪಮ ಕೃತಿಯಾಗಿದೆ. (ಎನ್.ಎ.ಜಿ.)