ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿಸಂಧಾನ ಕಾವ್ಯ

ವಿಕಿಸೋರ್ಸ್ದಿಂದ

ದ್ವಿಸಂಧಾನ ಕಾವ್ಯ - ಒಂದೇ ಕಾವ್ಯ ಎರಡು ವಸ್ತುಗಳಿಗೆ ಅನ್ವಯವಾಗುವಂತೆ ರಚನೆಗೊಂಡಿರುವ ಕಾವ್ಯ. ಇದನ್ನು ದ್ವ್ಯಾಶ್ರಯ ಕಾವ್ಯ ಎಂದೂ ಕರೆಯುವುದಿದೆ. ಇದೇ ರೀತಿ ಮೂರು ಅರ್ಥ ಕೊಡುವ ತ್ರಿಸಂಧಾನ ಕಾವ್ಯಗಳೂ ಉಂಟು. ಇಂಥ ಸಾಹಿತ್ಯ ಸಂಸ್ಕøತದಲ್ಲಿ ಅಪಾರ ಉಂಟು. ಅದರಂತೆ ತೆಲುಗು ಮುಂತಾದ ಇತರ ಭಾಷೆಗಳಲ್ಲೂ ಇಂಥ ರಚನೆಗಳ ಪ್ರಯತ್ನ ನಡೆದಿದೆ. ಮೊಟ್ಟಮೊದಲಿನ ದ್ವಿಸಂಧಾನ ಕಾವ್ಯವನ್ನು ರಚಿಸಿದ ಯಶಸ್ಸು ಪ್ರಾಯಃ ದಂಡಿಗೇ (ಸು. 6-7ನೇ ಶತಮಾನ) ಸಲ್ಲಬೇಕೆಂದು ಊಹಿಸಲು ಸಾಧ್ಯವಿದೆ. ಭೋಜನ ಶೃಂಗಾರ ಪ್ರಕಾಶದ ದಂಡಿನೋ ಧನಂಜಯಸ್ಯ ವಾ ದ್ವಿಸಂಧಾನೇ ಮತ್ತು ರಾಮಾಯಣಮಹಾಭಾರತಯೋರ್ದಂಡಿಃ ದ್ವಿಸಂಧಾನಮಿವ ಎಂಬ ವಾಕ್ಯಗಳಿಂದ ದಂಡಿ ಒಂದೇ ಆನುಪೂರ್ವಿಯಲ್ಲಿ ಮಹಾಭಾರತ ಮತ್ತು ರಾಮಾಯಣಗಳ ಎರಡೂ ಕಥೆಗಳನ್ನು ನಿರೂಪಿಸುವ ದ್ವಿಸಂಧಾನ ಕಾವ್ಯವನ್ನು ಬರೆದಿದ್ದಿರಬೇಕೆಂದು ಊಹಿಸಬಹುದು. ಆದರೆ ಈ ಕೃತಿ ಈಗ ಸಿಕ್ಕುವಂತಿಲ್ಲ.

ಕ್ರಿ.ಶ. 9-10ನೆಯ ಶತಮಾನಗಳ ಅಂತರದಲ್ಲಿದ್ದ ಧನಂಜಯನೂ ದಂಡಿಯ ಮಾರ್ಗವನ್ನು ಅನುಸರಿಸಿ ರಾಮಾಯಣ ಮಹಾಭಾರತಗಳಿಗೆ ಸಂಬಂಧಿಸಿದ ದ್ವಿಸಂಧಾನಕಾವ್ಯವನ್ನು ರಚಿಸಿದ್ದಾನೆ. (ಕಾವ್ಯಮಾಲಾ ಗ್ರಂಥಾವಲಿಯಲ್ಲಿ ಪಂಡಿತ ಶಿವದತ್ತರಿಂದ ಇದು ಪ್ರಕಟಿಸಲ್ಪಟ್ಟಿದೆ) ಪ್ರತ್ಯಕ್ಷರ ಶ್ಲೇಷದಿಂದ ಕೂಡಿರುವ ಸಂಬಂಧುವಿನ ವಾಸವದತ್ತಾ ಎಂಬ ಗದ್ಯಗ್ರಂಥವೂ ಒಂದು ದೃಷ್ಟಿಯಿಂದ ದ್ವಿಸಂಧಾನಕಾವ್ಯವಾಗುತ್ತದೆ.

ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿದ್ದ ನೀತಿವರ್ಮ ಕೀಚಕವಧವೆಂಬ ಕಾವ್ಯದ ಮೂರನೆಯ ಸ್ವರ್ಗದಲ್ಲಿ ದ್ರೌಪದಿ ವಿರಾಟನನ್ನು ಕುರಿತು ಹೇಳುವ ಮಾತುಗಳು ಶ್ಲೇಷ ಚಮತ್ಕಾರದಿಂದ, ಅಲ್ಲಿಯೇ ಅe್ಞÁತವಾಸದಲ್ಲಿದ್ದ ಪಾಂಡವರಿಗೆ ಬೇರೆ ಅರ್ಥವನ್ನು ಕೊಡುವಂತಾಗಿ ದ್ವಿಸಂಧಾನವಾಗಿ ಪರಿಣಮಿಸಿದೆ. ಇದೇ ಶತಮಾನದ ಕೊನೆಯಲ್ಲಿದ್ದ ಕಲಿಕಾಲ ವಾಲ್ಮೀಕಿಯೆಂಬ ಬಿರುದನ್ನು ಹೊತ್ತಿದ್ದ ಸಂಧ್ಯಾಕರನಂದಿ ತನ್ನ ರಾಮಚರಿತವೆಂಬ ಕಾವ್ಯದ ನಾಲ್ಕು ಅಧ್ಯಾಯಗಳಲ್ಲಿ ಶ್ರೀರಾಮನ ಕಥೆಯನ್ನೂ ತನ್ನ ಪೋಷಕನಾದ ಬಂಗಾಳದ ರಾಮಪಾಲನೆಂಬ ದೊರೆಯು ಚರಿತ್ರೆಯನ್ನೂ ಒಟ್ಟಿಗೇ ಹೇಳಿದ್ದಾನೆ.

ದ್ವಿಸಂಧಾನಮಾರ್ಗ ಶ್ರೀ ಹರ್ಷನ ನೈಷಧೀಯಚರಿತ ಮಹಾಕಾವ್ಯದ ಹದಿಮೂರನೆಯ ಸರ್ಗದಲ್ಲಿ ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಔಚಿತ್ಯಪೂರ್ಣವೂ ವಿಶೇಷ ಚಮತ್ಕಾರಕ್ಕೆ ಕಾರಣವೂ ಆಗಿದೆ. ದಮಯಂತಿಯ ಸ್ವಯಂವರದ ಸಂದರ್ಭದಲ್ಲಿ ನಿಜವಾದ ನಳನೊಡನೆ ಇಂದ್ರ, ಅಗ್ನಿ ಯಮ, ವರುಣ, ಇವರೂ ನಳನ ರೂಪವನ್ನು ಧರಿಸಿ ಕುಳಿತಾಗ ಸರಸ್ವತಿ ಅತ್ತ ದೇವತೆಗಳಿಗಾಗಲೀ ಇತ್ತ ದಮಯಂತಿಗಾಗಲೀ ಅನ್ಯಾಯವನ್ನೆಸಗಲು ಇಷ್ಟಪಡದೆ ನಳರೂಪಿಯಾದ ಪ್ರತಿಯೊಬ್ಬ ದೇವತೆಯನ್ನು ವರ್ಣಿಸುವಾಗಲೂ ಆ ವರ್ಣನೆ ನಿಜವಾದ ನಳನಿಗೂ ಅನ್ವಯಿಸುವಂತೆ ದ್ವಿಸಂಧಾನ ಚಮತ್ಕಾರವನ್ನು ತೋರುತ್ತಾಳೆ. ಇದೇ ಶತಮಾನದ ಕೊನೆಯಲ್ಲಿದ್ದ ಕದಂಬ ವಂಶದ ಮಹಾಮಂಡಲೇಶ್ವರ ಕಾಮದೇವನ ಆಸ್ಥಾನದಲ್ಲಿದ್ದ ಕವಿರಾಜ (ಮಾಧವಭಟ್ಟ) (1182-1187) ಶ್ಲೇಷ ಮತ್ತು ಸಮಾಸ ಪದಗಳ ವಿಭಜನೆಯ ಆಧಾರದ ಮೇಲೆ ಹದಿಮೂರು ಸರ್ಗದ ರಾಘವಪಾಂಡವೀಯವೆಂಬ ದ್ವಿಸಂಧಾನಕಾವ್ಯವನ್ನು ರಚಿಸಿದ್ದಾನೆ. ಇದೇ ಹೆಸರಿನ ಹದಿನೆಂಟು ಸರ್ಗದ ಮತ್ತೊಂದು ದ್ವಿಸಂಧಾನಕಾವ್ಯವನ್ನು 1123-1140ರಲ್ಲಿದ್ದ ವಾಸುದೇವ ಜೈನನ ಮಗ ಶ್ರುತಕೀರ್ತಿ ತ್ರೈವಿದ್ಯನೂ ಬರೆದಿದ್ದಾನೆ. ಕ್ರಿ.ಶ. 1126-38ರ ವೇಳೆಯಲ್ಲಿ ಚಾಳುಕ್ಯ ಸೋಮದೇವನ ಆಸ್ಥಾನದಲ್ಲಿದ್ದ ವಿಧ್ಯಾಮಾಧವ ಪಾರ್ವತೀ ರುಕ್ಮೀಣೀಯವೆಂಬ ಒಂಬತ್ತು ಸರ್ಗಗಳ ದ್ವಿಸಂಧಾನಕಾವ್ಯದಲ್ಲಿ ಶಿವ-ಪಾರ್ವತಿ ಮತ್ತು ಕೃಷ್ಣ- ರುಕ್ಮಿಣಿಯರ ವಿವಾಹಗಳೆರಡನ್ನೂ ವರ್ಣಿಸಿದ್ದಾನೆ.

ಕ್ರಿ.ಶ. ಹದಿನಾರನೆಯ ಶತಮಾನದಲ್ಲಿದ್ದ ಲಕ್ಷ್ಮಣಭಟ್ಟನ ಮಗ ರಾಮಚಂದ್ರ ರಸಿಕರಂಜನವೆಂಬ 130 ಶ್ಲೋಕಗಳ ದ್ವಿಸಂಧಾನಕಾವ್ಯವನ್ನು ರಚಿಸಿದ್ದಾನೆ. ಜೈನಕವಿ ಸೋಮನಪ್ರಭಾಚಾರ್ಯ ಶೃಂಗಾರವೈರಾಗ್ಯತರಂಗಿಣೀ ಎಂಬ ತನ್ನ ನಲವತ್ತಾರು ಶ್ಲೋಕಗಳ ಖಂಡಾಕಾವ್ಯವನ್ನು ಶೃಂಗಾರ ಮತ್ತು ವೈರಾಗ್ಯಗಳಿಗೆರಡಕ್ಕೂ ಅನ್ವಯಿಸುವಂತೆ ರಚಿಸಿದ್ದಾನೆ. ಇದರ ಒಂದು ಶ್ಲೋಕಕ್ಕೆ ನೂರು ರೀತಿ ಅರ್ಥ ಮಾಡಲಾಗಿದೆ. ವಿಜಯ ನಗರ ಸಾಮ್ರಾಜ್ಯದ ಒಂದನೆಯ ವೇಂಕಟನ ಆಶ್ರಿತ ಅನಂತನಾರಾಯಣ ಮಗ ಚಿದಂಬರ (1586-1614) ಮೂರು ಸರ್ಗಗಳ ರಾಘವಪಾಂಡವಯಾದವೀಯವೆಂಬ ತ್ರಿಸಂಧಾನ ಕಾವ್ಯದಲ್ಲಿ ರಾಮಾಯಣ, ಭಾರತ, ಭಾಗವತ ಈ ಮೂರರ ಕಥೆಯನ್ನೂ ನಿರೂಪಿಸುವ ಸಾಹಸಮಾಡಿರುತ್ತಾನೆ. ಹದಿನೇಳನೆಯ ಶತಮಾನದ ಪೂವಾರ್ಧದಲ್ಲಿದ್ದ ವೇಂಕಟಾಧ್ವರಿ ಯಾದವರಾಘವೀಯವೆಂಬ ಮುನ್ನೂರು ಶ್ಲೋಕಗಳ ದ್ವಿಸಂಧಾನ ಕಾವ್ಯವನ್ನು ರಚಿಸಿದ್ದಾನೆ. ಇದೇ ರೀತಿ ರಾಮ, ನಳ ಇಬ್ಬರ ಕಥೆಗಳನ್ನೂ ಹರದತ್ತಸೂರಿ ತನ್ನ ರಾಘವನೈಷಧೀಯ ಕಾವ್ಯದಲ್ಲಿ ನಿರೂಪಿಸಿದ್ದಾನೆ. ಶ್ಲೇಷಾಲಂಕಾರವನ್ನು ಉಪಯೋಗಿಸದೆ ದ್ವಿಸಂಧಾನಕಾವ್ಯವನ್ನು ರಚಿಸುವುದು ಇನ್ನೂ ಕಷ್ಟಸಾಧ್ಯವಾದರೂ ಈ ಪ್ರಯತ್ನದಲ್ಲೂ ಯಶಸ್ಸನ್ನು ಪಡೆದಿರುವ ಕವಿಗಳಿದ್ದಾರೆ. ರಾಮಕೃಷ್ಣ ವಿಲೋಮಕಾವ್ಯವೆಂಬ ಮೂವತ್ತಾರು ಶ್ಲೋಕಗಳ ಕಾವ್ಯದಲ್ಲಿ ಉತ್ತರಾರ್ಧದ ಎರಡು ಪಾದಗಳನ್ನು ಬಲದಿಂದ ಎಡಕ್ಕೆ ಓದಿದರೆ ಪೂರ್ವಾರ್ಧವಾಗುವಂತೆ ರಚಿಸಿ ರಾಮ, ಕೃಷ್ಣರಿಬ್ಬರ ಕಥೆಯನ್ನೂ ಹೇಳಲಾಗಿದೆ.

ಕುವಲಯಾನಂದದಲ್ಲಿ ವಿಕೃತಶ್ಲೇಷ ವಕ್ರೋಕ್ತಿಗೆ ಉದಾಹರಣೆಯಾಗಿ ಕೊಡಲಾಗಿರುವ ಭವಿತ್ರೀರಂಭೋರು ತ್ರಿದಶವದನಗ್ಲಾನಿರಧುನಾ ಎಂಬಂತೆ ಶ್ಲೋಕಗಳನ್ನು ರಚಿಸುವುದು ಬಹಳ ಕಷ್ಟವೆಂಬ ಅಭಿಪ್ರಾಯವೊಂದನ್ನು ಕೇಳಿ ಮೈಸೂರಿನ ಸಂಸ್ಕøತ ಮಹಾಪಾಠಶಾಲೆಯಲ್ಲಿ ಸಾಹಿತ್ಯ ಪ್ರಧಾನೋಪಾಧ್ಯಾಯರಾಗಿದ್ದ ಚಾಮರಾಜನಗರದ ರಾಮಾಶಾಸ್ತ್ರಿಗಳು ಇದನ್ನೂ ಸಾಧಿಸಿ ಸೀತಾರಾವಣ ಸಂವಾದಝರೀ ಎಂಬ ನೂರೆಂಟು ಶ್ಲೋಕಗಳ ಕಾವ್ಯವನ್ನು ರಚಿಸಿದ್ದಾರೆ. ಇದರಲ್ಲಿ ಚ್ಯಾವಿತಾಕರ (ಒಂದಕ್ಷರವನ್ನು ಬಿಟ್ಟು ಓದುವುದು), ಅಧಿಕಾಕ್ಷರ (ಒಂದಕ್ಷರವನ್ನು ಸೇರಿಸಿ ಪುನಃ ಓದುವುದು), ಮತ್ತು ಪ್ರತಿ ದತ್ತಾಕ್ಷರ (ಒಂದಕ್ಷರಕ್ಕೆ ಬದಲಾಗಿ ಮತ್ತೊಂದಕ್ಷರವನ್ನು ಹಾಕುವುದು) ಈ ಮೂರು ಉಪಾಯಗಳಿಂದ ರಾವಣ, ಸೀತೆ ಇವರ ಸಂಭಾಷಣೆಯ ರೂಪವಾದ ಐವತ್ತೊಂಭತ್ತು ಶ್ಲೋಕಗಳನ್ನು ದ್ವಿಸಂಧಾನ ಮಾರ್ಗದಲ್ಲಿ ರಚಿಸಲಾಗಿದೆ. ಇಂಥ ವಿದ್ವತ್ಪ್ರದರ್ಶಕವಾದ ನೂರು ಶ್ಲೋಕಗಳನ್ನು ರಚಿಸಬೇಕೆಂಬ ಇವರ ಪ್ರಯತ್ನ ಪೂರ್ಣವಾಗಲಿಲ್ಲ. ಇವರ ಆಶಯವನ್ನು ಮುಂದೆ ಮೈಸೂರಿನ ಸೀತಾರಾಮ ಶಾಸ್ತ್ರಿಗಳು ಪೂರೈಸಿದರು.

ಇದೇ ರೀತಿಯ ನಲಹರಿಶ್ಚಂದ್ರೀಯ ವಿಲೋಮ ಕಾವ್ಯವೆಂಬ ಐವತ್ತು ಶ್ಲೋಕಗಳ ಹಸ್ತಪ್ರತಿಯೊಂದು ಮೈಸೂರಿನ ಪ್ರಾಚ್ಯ ಸಂಶೋಧನಾಲಯದಲ್ಲಿದೆ.

ಇಂಥ ಕಾವ್ಯಗಳ ಅಲಂಕಾರಿಕ ದೃಷ್ಟಿಯಲ್ಲಿ ಚಿತ್ರಕಾವ್ಯಗಳ ವರ್ಗಕ್ಕೆ ಸೇರಿಸಲ್ಪಟ್ಟು ಕೆಳದರ್ಜೆಯ ಕಾವ್ಯಗಳೆಂದು ಪರಿಗಣಿಸಲ್ಪಟ್ಟಿದ್ದರೂ ಬಹಳ ಪ್ರೌಢಮಟ್ಟದ ಭಾಷಾಪಾಂಡಿತ್ಯವನ್ನೂ ಕವನಕೌಶಲವನ್ನೂ ಅಪೇಕ್ಷಿಸುವ ಕಾರಣ ಬುದ್ಧಿ ಕೌಶಲದ ಉದಾಹರಣೆಗಳಾಗಿವೆ. (ಎಸ್.ವಿ.ಎಸ್.ಆರ್. ; ಎಚ್.ಪಿ.ಡಿ.ಇ.)