ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವೈತಾದ್ವೈತ ದರ್ಶನ

ವಿಕಿಸೋರ್ಸ್ದಿಂದ

ದ್ವೈತಾದ್ವೈತ ದರ್ಶನ -

ಉಪನಿಷತ್ತುಗಳು, ಭಗವದ್‍ಗೀತೆ ಮತ್ತು ಬ್ರಹ್ಮಸೂತ್ರಗಳು ಇವುಗಳ ಆಧಾರದ ಮೇಲೆ ಭಾರತೀಯ ದರ್ಶನಗಳಲ್ಲಿ ನಿಷ್ಪನ್ನವಾದ ವೇದಾಂತದರ್ಶನದಲ್ಲಿ ಪ್ರಧಾನವಾಗಿ ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಮತ್ತು ದ್ವೈತಾದ್ವೈತ ಎಂಬ ನಾಲ್ಕು ವಿಭಕ್ತಪಂಥಗಳು ಹುಟ್ಟಿಕೊಂಡಿವೆ.  ಈ ಭೇದಗಳ ಮೂಲವಿರುವುದು ಪರಮಾತ್ಮ ಮತ್ತು ಜೀವಾತ್ಮರಿಗಿರುವ ಸಂಬಂಧವನ್ನು ಕುರಿತ ಮೂಲಭೂತವಾದ ಪ್ರಶ್ನೆಗೆ ಉತ್ತರರೂಪವಾದ ತತ್ತ್ವ ಕಲ್ಪನೆಯಲ್ಲಿ.  ಶಂಕರಾಚಾರ್ಯರ ಅದ್ವೈತದಲ್ಲಿ ಪರತತ್ತ್ವಕ್ಕೂ ಜೀವನಿಗೂ ಐಕ್ಯವನ್ನು ಅಭೇದವನ್ನು ಸಾಧಿಸಲಾಗಿದೆ.  ಮಧ್ವಾಚಾರ್ಯರ ದ್ವೈತದಲ್ಲಿ ಈ ಎರಡೂ ತತ್ತ್ವಗಳೂ ಅತ್ಯಂತ ಭಿನ್ನ ಮತ್ತು ಜೀವ ಸರ್ವವಿಧದಲ್ಲೂ ಪರಮಾತ್ಮನ ಅಧೀನ ಎಂದು ಹೇಳಿದೆ.  ರಾಮನುಜಾಚಾರ್ಯರ ವಿಶಿಷ್ಟಾದ್ವೈತದಲ್ಲಿ ಜೀವ ಪರಮಾತ್ಮನಿಗಿಂತ ಭಿನ್ನವಾದರೂ ಅವನ ಅಂಶ, ವಿಭೂತಿ, ಶಕ್ತಿ, ಶರೀರ ಮೊದಲಾದ ರೂಪಗಳಿಂದ ಅವನ ವಿಶೇಷಣವಾಗಿದ್ದಾನೆ.  ಪರಮಾತ್ಮ ವಿಶೇಷ್ಯತತ್ತ್ವ.  ಈ ವಿಶೇಷ್ಯ - ವಿಶೇಷಣಗಳ ಅವಿನಾಭಾವ ಪರಿಸ್ಥಿತಿಯೇ ವಿಶಿಷ್ಟಾದ್ವೈತವೆಂದು ಹೇಳಿದೆ.  ಈ ಮೂರು ವಾದಗಳಿಗಿಂತ ಭಿನ್ನವಾದದ್ದು ದ್ವೈತಾದ್ವೈತ ಅಥವಾ ಭೇದಾಭೇದ ದರ್ಶನ.  ಇದನ್ನು ಶಂಕರರಿಗಿಂತ ಪ್ರಾಚೀನರಾದ ಭರ್ತೃ ಪ್ರಪಂಚರು, ಶಂಕರರಾಮಾನುಜರ ಮಧ್ಯೆ ಬಂದ ಭಾಸ್ಕರ ಮತ್ತು ಯಾದವ ಪ್ರಕಾಶರು, ದ್ವೈತಾನಂತರ ಬಂದ ನಿಂಬಾರ್ಕಾಚಾರ್ಯ ಮತ್ತು ವಲ್ಲಭಾಚಾರ್ಯರು ಸ್ಥಾಪಿಸಿ ಘೋಷಿಸಿದ್ದಾರೆ.  ಇವರ ದೃಷ್ಟಿಯಲ್ಲಿ ಬ್ರಹ್ಮ - ಜೀವರು ಅತ್ಯಂತ ಭಿನ್ನರೂ ಅಲ್ಲ.  ಅತ್ಯಂತ ಅಭಿನ್ನರೂ ಅಲ್ಲ.  ಮೂಲ ಸಂಬಂಧ ಭೇದಾಭೇದ, ಕಾರ್ಯಕಾರಣಗಳಿಗಿರುವಂತೆ, ಜಾತಿ - ವ್ಯಕ್ತಿಗಳಿಗಿರುವಂತೆ ಅಹಿ - ಕುಂಡಲಗಳಿಗಿರುವಂತೆ, ಇಲ್ಲಿ ಐಕ್ಯ ಮತ್ತು ಭಿನ್ನತೆ ಎರಡೂ ಇವೆ.  ದೃಷ್ಟಿಭೇದದಿಂದ ಈ ಎರಡು ಸಂಬಂಧಗಳನ್ನು ಸಮನ್ವಯಗೊಳಿಸಬಹುದು ; ಹಾಗೆ ಮಾಡುವುದು ಆವಶ್ಯಕವೂ ಹೌದು.  ಈ ಮಾರ್ಗವನ್ನೇ ಬೇರೆ ಬೇರೆ ಪ್ರಕರಣಗಳಿಂದ ಕಾಶ್ಮೀದ ಶೈವದರ್ಶನ, ವೀರಶೈವದರ್ಶನ, ಹಾಗೆಯೇ ಅತ್ಯಂತ ಆಧುನಿಕವಾದ ಶ್ರೀ ಅರವಿಂದರ ದರ್ಶನ ಇವು ಅವಲಂಬಿಸಿವೆ.  ಈ ಸಮನ್ವಯಕ್ಕೆ ಮೂಲ ಸ್ಫೂರ್ತಿ.  ಅರ್ಹತ್‍ಮತದ ಅನೇಕಾಂತವಾದವಿದೆಂದು ಆಸ್ತಿಕ ಖಂಡನಕಾರರು ಆರೋಪಿಸುತ್ತಾರೆ,  ಪಕ್ಷ - ಪ್ರತಿಪಕ್ಷಗಳ ಅತಿರೇಕವನ್ನು ನಿರಾಕರಿಸಿ ಏಕತ್ವ - ಅನೇಕತ್ವಗಳ ಸಮನ್ವಯವನ್ನು ಸಾಧಿಸುವುದು ಈ ದರ್ಶನ ಮಾರ್ಗದ ವೈಶಿಷ್ಟ್ಯ.

(ಎಸ್.ಎಸ್.ಆರ್.)