ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧರ್ಮಪಕ್ಷಿಗಳು
ಗೋಚರ
ಧರ್ಮಪಕ್ಷಿಗಳು
ಶಾಪದಿಂದ ಪಕ್ಷಿಗಳಾಗಿ ಹುಟ್ಟಿದ ಋಷಿಪುತ್ರರು. ಒಮ್ಮೆ ಇಂದ್ರ ಸುಕೃಶನೆಂಬ ಬ್ರಾಹ್ಮಣನಲ್ಲಿಗೆ ಪಕ್ಷಿರೂಪದಿಂದ ಬಂದು ನರಮಾಂಸವನ್ನು ಬೇಡಿದ. ಆಗ ಸುಕೃಶ ತನ್ನ ಮಕ್ಕಳನ್ನು ಕರೆದು ಆ ಪಕ್ಷಿಗೆ ಆಹಾರವಾಗುವಂತೆ ಹೇಳಿದ. ಈ ಮಾತಿಗೆ ಮಕ್ಕಳು ಸಮ್ಮತಿಸದಿರಲು ನೀವು ಹಕ್ಕಿಗಳಾಗಿ ಜನಿಸಿ ಎಂದು ಶಾಪವಿತ್ತ. ಕೊನೆಗೆ ಆ ಮಕ್ಕಳು ತಮ್ಮ ಅಪರಾಧವನ್ನು ಕ್ಷಮಿಸುವಂತೆ ತಂದೆಯನ್ನು ಕೇಳಲಾಗಿ ಆತ ಪಕ್ಷಿಜನ್ಮದಲ್ಲೂ ನಿಮಗೆ ಮನುಷ್ಯರಂತೆ ಮಾತನಾಡುವ ಶಕ್ತಿ ಇರಲಿ ಹಾಗೂ ಶಾಸ್ತ್ರಜ್ಞಾನ ಮರೆಯದಿರಲಿ ಎಂದು ಅನುಗ್ರಹಿಸಿದ. ಅದರಂತೆ ಆ ಮಕ್ಕಳು ಪಕ್ಷಿಗಳಾಗಿ ಹುಟ್ಟಿ ಶಮೀಕಮುನಿಯಿಂದ ಪೋಷಿಸಲ್ಪಟ್ಟು ದೊಡ್ಡವಾದ ಮೇಲೆ ವಿಂಧ್ಯಪರ್ವತದಲ್ಲಿ ತಪಸ್ಸು ಮಾಡಿ ಶಾಪವಿಮೋಚನೆ ಪಡೆದವು. ಜೈಮಿನಿಮುನಿ ಇವುಗಳಿಂದ ಅನೇಕ ಧರ್ಮ ರಹಸ್ಯಗಳನ್ನು ತಿಳಿದುಕೊಂಡನೆಂದು ಮಾರ್ಕಂಡೇಯ ಪುರಾಣದಿಂದ ತಿಳಿದುಬರುತ್ತದೆ.