ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧಾನ್ಯತಂತ್ರ ವಿಭಾಗ

ವಿಕಿಸೋರ್ಸ್ದಿಂದ

ಆಹಾರಕ್ಕಾಗಿ ಉಪಯೋಗಿಸುವ ಅಕ್ಕಿ, ಗೋಧಿ, ಜೋಳ, ಕಾಳುಗಳು, ಬೇಳೆಗಳು ಮುಂತಾದುವನ್ನು ಸಂಸ್ಕರಿಸುವಾಗ ಸರಿಯಾದ ಯಂತ್ರ, ಕ್ರಮ ಉಪಯೋಗಿಸದಿದ್ದರೆ ಹೆಚ್ಚುಭಾಗ ನಷ್ಟವಾಗುತ್ತದೆ. ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸುವಾಗ ನುಚ್ಚು ಹೆಚ್ಚಾಗುತ್ತದೆ. ಕುಸುಬಲು ಅಕ್ಕಿ ತಯಾರಿಸುವಾಗ ಬೂಷ್ಟು ಬೆಳೆದು ಪದಾರ್ಥ ಕೆಟ್ಟು ನಾರುತ್ತದೆ. ಬೇಳೆ ಒಡಕಾಗುತ್ತದೆ. ಈ ಬಗೆಯ ತೊಂದರೆಗಳನ್ನು ಪರಿಶೀಲಿಸಿ ಪರಿಹಾರ ಕ್ರಮಗಳನ್ನು ಸೂಚಿಸಲಾಗಿದೆ. ಹೊಸ ರೀತಿಯ ಸಂಸ್ಕರಣಗಳು, ಹೊಸ ಉತ್ಪನ್ನಗಳು ಇದರಿಂದ ಬಂದಿವೆ. ಮುಖ್ಯ ಕೊಡುಗೆಗಳು : 1. ಹೊಸ ಅಕ್ಕಿಯನ್ನು ಹಬೆಯಿಂದ ಸಂಸ್ಕರಿಸಿ ಹಳೆಯದರ ಸತ್ತ್ವವನ್ನು ಪಡೆಯುವುದು. 2. ಕುಸುಬಲು ಅಕ್ಕಿಯನ್ನು ಕೆಟ್ಟ ವಾಸನೆ ರುಚಿಗಳಿಲ್ಲದಂತೆ ತಯಾರಿಸುವುದು. 3. ದಿಢೀರ್ ದೋಸೆ, ಇಡ್ಲಿ ಮತ್ತು ಜಾಮೂನು, ವಡೆ ಹಿಟ್ಟುಗಳ ತಯಾರಿಕೆಯ ಕ್ರಮ. 4. ಅಕ್ಕಿ ತೌಡಿನಿಂದ ತಿನ್ನಲು ಯೋಗ್ಯವಾದ ಎಣ್ಣೆಯ ತಯಾರಿಕೆ. ಈ ವಿಧಾನಗಳನ್ನು ಈಗ ಅನೇಕ ಕೈಗಾರಿಕೆಗಳವರು ಉಪಯೋಗಿಸತೊಡಗಿದ್ದಾರೆ. ಈ ವಿಭಾಗದ ಇನ್ನೊಂದು ಶಾಖೆಯಲ್ಲಿ ಬ್ರೆಡ್ಡು, ಬಿಸ್ಕತ್ತು, ಮೆಕರೋನಿ ಮುಂತಾದ ಸಂಸ್ಕರಿಸಿದ ಆಹಾರಗಳ ತಯಾರಿಕೆಯ ವಿಚಾರದಲ್ಲಿ ಕೆಲಸ ನಡೆಯುತ್ತಿದೆ. ಈ ಪದಾರ್ಥಗಳ ಪೋಷಕಗುಣ ಹೆಚ್ಚಿಸುವುದು, ಅವುಗಳ ತಯಾರಿಕೆಗಾಗಿ ಉಪಯೋಗಿಸಬಹುದಾದ ಹೊಸ ಪದಾರ್ಥಗಳು, ಹೊಸ ವಿಧಾನಗಳು, ಮುಂತಾದ ವಿಷಯಗಳನ್ನು ಕುರಿತಾಗಿ ಅನೇಕ ಪ್ರಯೋಗಗಳನ್ನು ಕೈಗೊಂಡು ಈ ಉದ್ಯಮಗಳಲ್ಲಿರುವವರಿಗೆ ಸಹಾಯ ಮಾಡಲಾಗುತ್ತಿದೆ.