ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧ್ರುವ ಪಕ್ಷಿ

ವಿಕಿಸೋರ್ಸ್ದಿಂದ

ಧ್ರುವ ಪಕ್ಷಿ - ಪ್ರೋಸಿಲ್ಲಾರಿಫಾರ್ಮೀಸ್û ಉಪಗಣದ, ಪ್ರೋಸಿಲ್ಲಾರಿಡೀ ಕುಟುಂಬಕ್ಕೆ ಸೇರಿದ ಒಂದು ಸಾಗರವಾಸಿ ಪಕ್ಷಿ (ಫುಲ್ಮರ್). ಫುಲ್ಮರಸ್ ಗ್ಲೇಸಿಯಾಲಿಸ್ ಇದರ ಶಾಸ್ತ್ರೀಯನಾಮ. ಇದರಲ್ಲಿ ಎರಡು ಬಗೆಗಳುಂಟು: 1 ಉತ್ತರ ಧ್ರುವ ಸಮುದ್ರ. ಉತ್ತರ ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ಸಾಗರದ ಉತ್ತರ ಭಾಗಗಳಲ್ಲಿ ಕಾಣದೊರೆಯುವ ಉತ್ತರ ಧ್ರುವಪಕ್ಷಿ (ನಾರ್ತರ್ನ್ ಫುಲ್ಮರ್). 2 ಅಂಟಾರ್ಕ್‍ಟಿಕ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ವಾಸಿಸುವ ಬೂದುಬೆಳ್ಳಿ ಧ್ರುವಪಕ್ಷಿ (ಸಿಲ್ವರ್‍ಗ್ರೇ ಫುಲ್ಮರ್). ಎರಡು ಬಗೆಗಳೂ ಸುಮಾರು 18" ಉದ್ದ ಇವೆ. ಮೈಬಣ್ಣ ಉತ್ತರ ಅಟ್ಲಾಂಟಿಕ್ ಧ್ರುವಪಕ್ಷಿಯಲ್ಲಿ ಬೂದುಮಿಶ್ರಿತ ಬೆಳ್ಳಿಯಾದರೆ ಪೆಸಿಫಿಕ್ ಸಾಗರದ ಧ್ರುವಪಕ್ಷಿಯಲ್ಲಿ ಕಂದು. ಮೇಲಿನ ಹಾಗೂ ಕೆಳಗಿನ ಕೊಕ್ಕುಗಳ ಗಡುಸಾದ ಚರ್ಮ ಅನೇಕ ಫಲಕಗಳಿಂದ ರಚಿತವಾಗಿದೆ. ಕೊಕ್ಕು ಕೊಕ್ಕೆಯಾಕಾರದ್ದು. ಮೂಗಿನ ಹೊಳ್ಳೆಗಳು ಉದ್ದುದ್ದವಾಗಿವೆ. ಎರಡು ಬಗೆಯ ಧ್ರುವ ಪಕ್ಷಿಗಳಲ್ಲೂ ನೀಲಿಬಣ್ಣದ ಜಾಲ ಪಾದಗಳಿವೆ. ಹಾರುವ ಸಾಮಥ್ರ್ಯದಲ್ಲಿ ಶಿಯರ್‍ವಾಟರ್ ಪಕ್ಷಿಯಂತಿವೆಯಾದರೂ ನೋಡಲು ಗಲ್‍ಪಕ್ಷಿಯ ಹಾಗೆ ಕಾಣುವುವು. ಸಾಮಾನ್ಯವಾಗಿ ಸಾಗರದ ತೇಲುಜೀವಿಗಳನ್ನು ತಿಂದು ಇವು ಬದುಕುವುವು.

ಸಂತಾನಾಭಿವೃದ್ಧಿಗೋಸ್ಕರ ಕಲ್ಲುಬಂಡೆ ಮತ್ತು ಕಡಿದಾದ ತೀರಪ್ರದೇಶವನ್ನು ಇವು ಆರಿಸಿಕೊಳ್ಳುತ್ತವೆ. ಆಗ ಇವುಗಳ ಇಂಪಾದ ಸ್ವರ ತುದಿಯಿಂದ ಆಗಾಗ ಕೇಳಿಬರುತ್ತದೆ. ಮೊಟ್ಟೆಯಿಡುವ ಕಾಲದಲ್ಲಿ ಗೂಡುಗಳ ಸನಿಯಕ್ಕೆ ವೈರಿಗಳೇನಾದರೂ ಬಂದರೆ ತಮ್ಮ ಜಠರದಲ್ಲಿ ಉತ್ಪತ್ತಿಯಾಗುವ ಒಂದು ತೆರನ ಕೆಟ್ಟವಾಸನೆಯ ತೈಲವನ್ನು ಉಗುಳುತ್ತವೆ. ಇದರಿಂದಾಗಿ ಇವುಗಳ ನೆಲೆ ಅತ್ಯಂತ ದುರ್ವಾಸನೆಯಿಂದ ಕೂಡಿರುವುದುಂಟು. ಈ ಗುಣದಿಂದಾಗಿಯೇ ಇವಕ್ಕೆ ಫುಲ್ಮರ್ ಎಂಬ ಹೆಸರು ಬಂದಿರುವುದು (ಪ್ರಾಚೀನ ನಾರ್ಸ್ ಭಾಷೆಯಲ್ಲಿ ಫುಲ್ಮರ್ ಎಂದರೆ ದುರ್ವಾಸನೆಯ ಗಲ್‍ಹಕ್ಕಿ ಎಂದು ಅರ್ಥ). ಹೆಣ್ಣುಪಕ್ಷಿ ಸಾಮಾನ್ಯವಾಗಿ ಒಂದು ಸಲಕ್ಕೆ ಒಂದು ಮೊಟ್ಟೆಯನ್ನು ಇಡುತ್ತದೆ. ಮೊಟ್ಟೆಗೆ ಕಾವು ಕೊಡುವ ಕೆಲಸ ಗಂಡುಪಕ್ಷಿಯದು. ಸುಮಾರು 40-60 ದಿನಗಳ ಅನಂತರ ಮೊಟ್ಟೆಯೊಡೆದು ಮರಿಹೊರಬರುತ್ತದೆ. ಈ ಮರಿ ನಿಧಾನವಾಗಿ ಬೆಳೆದು 6-8 ವಾರಗಳ ಅನಂತರ ಗೂಡನ್ನು ಬಿಟ್ಟು ಹೊರಗೆ ಬರುತ್ತದೆ. ಧ್ರುವಪಕ್ಷಿಯನ್ನು ಬಿಟ್ಟರೆ ಬೇರೆ ಯಾವ ಪಕ್ಷಿಯೂ ತನ್ನ ಇಡೀ ಜೀವನ್ನು ಸಮುದ್ರತೀರದಲ್ಲಿ ಕಳೆಯುವುದಿಲ್ಲ. (ಎಂ.ಎನ್.ವಿ.ಐ.)