ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಜ

ವಿಕಿಸೋರ್ಸ್ದಿಂದ

ನಂಜ ಸು. 1725. ಕಪೋತವಾಕ್ಯ ಎಂಬ ಸಾಂಗತ್ಯ ಗ್ರಂಥದ ಕರ್ತೃ ಎಂದು ಹೇಳಲಾಗಿರುವ ಒಬ್ಬ ಕವಿ. ಈ ಕೃತಿಗೆ ಕಪೋತಚರಿತೆ ಎಂಬ ಹೆಸರೂ ಉಂಟು. ಕರ್ತೃವಿನ ಹೆಸರು ಕೃತಿಯ ಆದ್ಯಂತ್ಯಗಳಲ್ಲೆಲ್ಲೂ ಉಲ್ಲೇಖವಾಗಿಲ್ಲ. ಆದರೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಗ್ರಹದಲ್ಲಿ ದೊರೆಯುವ ಕೈಬರಹದ ಪ್ರತಿಯ (ಕೆ.ಬಿ.235) ರಕ್ಷಾಪತ್ರದಲ್ಲಿ ನಂಜಕವಿ ಎಂದಿದೆ. ಇದರ ಆಧಾರದಿಂದ ಆರ್. ನರಸಿಂಹಾಚಾರ್ಯರು ಕರ್ನಾಟಕ ಕವಿಚರಿತೆಯಲ್ಲಿ ಕಪೋತವಾಕ್ಯದ ಕರ್ತೃ ನಂಜಕವಿ ಎಂದು ಹೆಸರಿಸಿದಂತೆ ಕಾಣುತ್ತದೆ. ಇತ್ತೀಚೆಗೆ ಭೋಜರಾಜ ಪಾಟೀಲರು ಕೃತಿಕಾರನ ಬಗೆಗೆ ವಿವೇಚಿಸಿ ಕೆಂಪುನಂಜಯ್ಯ ಇದರ ಕರ್ತೃವಾಗಿರಬಹುದೆಂಬ ನಿಲುವಿಗೆ ಬಂದರೂ ಈ ವಿಷಯ ಇನ್ನೂ ಖಚಿತವಲ್ಲ ಎಂದಿದ್ದಾರೆ.

ಕನ್ನಡದಲ್ಲಿ ಹನ್ನೆರಡನೆಯ ಶತಮಾನದ ಶಿವಶರಣ ಅಂಬಿಗರ ಚೌಡಯ್ಯನ ವಚನವೊಂದರಲ್ಲಿ ಕಪೋತವಾಕ್ಯದ ಕಥೆಗೆ ಸಂಬಂಧಿಸಿದ ವಾಕ್ಯವೊಂದು ಹೀಗಿದೆ: `...ಪರಪುರುಷಾರ್ಥಿಯಾದರೆ ಬಸವಕುಮಾರನಂತಾಗಬೇಕು. ಪರಪುರುಷಾರ್ಥಿಯಾದರೆ ಕಪೋತಪಕ್ಷಿಯಂತಾಗಬೇಕು. ಇಂತೀ ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು ನಿತ್ಯಾತ್ಮಾಂಕಿತ ಭಾಮಿನಿ ಷಟ್ಪದಿಯಲ್ಲಿ ವಿರಚಿತವಾದ ಶಾಂತಿ ಪರ್ವದ 22ನೆಯ ಸಂಧಿಯಲ್ಲಿ ಕಪೋತಾಖ್ಯಾನ 73 ಷಟ್ಪದಿಗಳಲ್ಲಿದೆ.

ಪ್ರಕಟಿತ ಕಪೋತವಾಕ್ಯದ ಆದಿಯಲ್ಲಿ ಕವಿ ಶಿವ, ಗುರುಸಿದ್ಧವೀರ, ಕೋರಣ್ಯದೈಯ್ಯ (ಕೋರಾನ್ನದೈಯ್ಯ) ಬಸವರಾಜ, ಮಡಿವಾಳ, ಸಪ್ಪಣ್ಣ, ಪ್ರಭುರಾಯ, ಕೊಟ್ಟೂರ ವಿರೂಪಾಕ್ಷ, ಕಲ್ಯಾಣದೈಯ್ಯ, ಎರೆಮಲೆ ಸಿದ್ಧಮುನಿಗಳನ್ನು ಸ್ತುತಿಸಿ, ಅಂತ್ಯದಲ್ಲಿ ಚಿನ್ಮೂಲಗಿರಿವಾಸ, ಕಾಶಿ ವಿಶ್ವೇಶ್ವರ, ಚಂಪಕ ಸಿದ್ಧಲಿಂಗೇಶರಿಗೆ ಎರಗಿದ್ದಾನೆ.

ಕಪೋತವಾಕ್ಯದಲ್ಲಿ ಕೃತಿರಚನೆಯ ಕಾಲನಿರ್ದೇಶನವಿಲ್ಲ. ಕವಿಚರಿತೆಕಾರರು ಈತನ ಕಾಲ ಸು.1700 ಆಗಿರಬಹುದು ಎಂದಿದ್ದಾರೆ. ಹುಲ್ಲೂರು ಶ್ರೀನಿವಾಸ ಜೋಯಿಸರು ಕೃತಿಯಲ್ಲಿನ ಚಿನ್ಮೂಲಗಿರಿ ಮತ್ತು ಗುರುಸಿದ್ಧವೀರರ ಉಲ್ಲೇಖಗಳನ್ನು ಆಧರಿಸಿ ಕೃತಿಯ ರಚನಾಕಾಲ ಕ್ರಿ.ಶ. 18ನೆಯ ಶತಮಾನದ ಪ್ರಥಮ ಪಾದ ಎಂದು ನಿರ್ಧರಿಸಬಹುದು ಎಂದಿದ್ದಾರೆ. ಭೋಜರಾಜ ಪಾಟೀಲರು ಕಪೋತಚಾರಿತ್ರದ ಕರ್ತೃವಾಗಿರಬಹುದಾದ ಕೆಂಪು ನಂಜಯ್ಯ ಮುರಿಗೆಯ ಶಾಂತವೀರಸ್ವಾಮಿಗಳ ಸಮಕಾಲೀನ ಹಾಗೂ ಶಿಷ್ಯನಾದುದರಿಂದ ಆತನ ಕಾಲವನ್ನು 1530 ಎಂದು ನಿಶ್ಚಯಿಸಬೇಕಾಗುತ್ತದೆ ಎಂದಿದ್ದಾರೆ.

ಭೋಜರಾಜ ಪಾಟೀಲರ ವಾದವೆಲ್ಲ ಮುರಿಗೆಯ ಶಾಂತವೀರನ ಕಾಲದ ಮೇಲೆ ನಿಂತಿದೆ. ಇತ್ತೀಚಿನ ಸಂಶೋಧನೆಗಳಿಂದ ಮುರಿಗೆಯ ಶಾಂತವೀರನ ಕಾಲ ಸು. 1700 ಎಂಬುದು ಖಚಿತವಾಗಿದೆ. ಹೀಗಾಗಿ ಅವನ ಶಿಷ್ಯನ ಕಾಲ ಸು. 1700 ಆಗಬೇಕಾಗುತ್ತದೆ. ಈ ಅಂಶಗಳನ್ನು ಗಮನಿಸಿದಾಗ ಹುಲ್ಲೂರು ಶ್ರೀನಿವಾಸ ಜೋಯಿಸರು ಹೇಳುವ ಹದಿನೆಂಟನೆಯ ಶತಮಾನದ ಪ್ರಥಮಪಾದವನ್ನೆ ಕಪೋತವಾಕ್ಯದ ರಚನಾಕಾರನ ಕಾಲವನ್ನಾಗಿ ಸ್ವೀಕರಿಸಬಹುದು.

ಕಪೋತವಾಕ್ಯದ ಉಪಲಬ್ಧ ಪ್ರತಿಗಳಲ್ಲಿ ಸಂಧಿಸಂಖ್ಯೆ ಹಾಗೂ ಪದ್ಯಸಂಖ್ಯೆಗಳಲ್ಲಿ ಏಕರೂಪತೆ ಇಲ್ಲ. ಇದುವರೆಗೆ ಪರಿಶೀಲಿಸಲಾದ ಪ್ರತಿಗಳಲ್ಲಿ ಸಂಧಿಸಂಖ್ಯೆ 105 ಪದ್ಯಗಳಿಂದ 398 ಪದ್ಯಗಳವರೆಗೂ ಹಿಗ್ಗಿದೆ. ಹೀಗಾಗಿ ಕಪೋತವಾಕ್ಯದ ಪ್ರತಿಗಳು ಹಲವಾರು ಪ್ರಕ್ಷೇಪಕಾರರ ಪ್ರಕ್ಷಿಪ್ತಗಳಿಗೆ ಆಡುಂಬೊಲವಾಗಿ ಪರಿಣಮಿಸಿದೆ.

ಈ ಗ್ರಂಥದ ಮೂಲವಸ್ತು ವಾಲ್ಮೀಕಿ ರಾಮಾಯಣ ಮತ್ತು ವ್ಯಾಸ ಮಹಾಭಾರತಗಳಲ್ಲಿ ಕಂಡುಬರುತ್ತದೆ. ಕಪೋತದಂಪತಿಗಳು ತಮ್ಮನ್ನು ಮಕ್ಕಳುಮರಿಗಳಿಂದ ಬೇರ್ಪಡಿಸಿ ಸೆರೆಹಿಡಿದ ಬೇಡನಿಗೆ ಆತ ಚಳಿಯೆಂದಾಗ ಬೆಂಕಿಯನ್ನೂ ಹಸಿವೆ ಎಂದಾಗ ಆಹಾರವನ್ನು ಒದಗಿಸಲೋಸುಗ ಅದೇ ಬೆಂಕಿಗೆ ಬಿದ್ದ ಪಕ್ಷಿಗಳ ಕಥೆ ಇದರ ವಸ್ತು. ಇಲ್ಲಿ ಪತಿಪತ್ನಿಯರ ಅನುರಾಗ ಕರ್ತವ್ಯಗಳು ಸುಂದರವಾಗಿ ನಿರೂಪಿತವಾಗಿವೆ. ಹೀಗೆ ಪರಹಿತದಿಂದಲಿ ನಡೆವ ಸತ್ಪುರುಷರ ಕರೆದುಯ್ವನು ಕೈಲಾಸಕೆ ಎಂಬ ಸಂದೇಶವನ್ನೂ ಕವಿ ಇಲ್ಲಿ ಸಾರಿದ್ದಾನೆ.

ಕಪೋತವಾಕ್ಯದ ಕಥೆ ತನ್ನ ಜನಪ್ರಿಯ ವಸ್ತುವಿನ ಕಾರಣವಾಗಿ ಕನ್ನಡದಲ್ಲಿ ಷಟ್ಪದಿ, ಯಕ್ಷಗಾನ ಮೊದಲಾದ ಇತರ ಪ್ರಕಾರಗಳಲ್ಲೂ ರೂಪುತಾಳಿದೆ. (ಎಸ್.ಎಸ್.ಎಚ್.ಐ.)