ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಜನಾಥಾಚಾರ್ಯ

ವಿಕಿಸೋರ್ಸ್ದಿಂದ

ನಂಜನಾಥಾಚಾರ್ಯ ಸು.1500. ವೈಷ್ಣವವಾದ ಖಂಡನವೆಂಬ ಗ್ರಂಥದ ಕರ್ತೃ. ವೀರಶೈವ. ತಂದೆ ತ್ರಿಲೋಚನಾಚಾರ್ಯ. ಕೃತಿ ಗದ್ಯರೂಪದಲ್ಲಿದೆ. ಕೃತಿಯಲ್ಲಿ ಪದ್ಮಣಾಂಕನ (ಸು.1385) ಪದ್ಮರಾಜಪುರಾಣವನ್ನು ನಿರ್ದೇಶಿಸುವುದರಿಂದ ಅವನ ಕಾಲಕ್ಕೆ ಈತ ಈಚೆಯವನು. ಸುಮಾರು 1500ರಲ್ಲಿ ಇದ್ದಿರಬಹುದೆಂದು ತೋರುತ್ತದೆ-ಎಂಬುದು ಕವಿಚರಿತೆಕಾರರ ಅಭಿಮತ. ಶಿವಾಧಿಕ್ಯ ಪ್ರತಿಪಾದನೆ ಈ ಕೃತಿಯ ಮೂಲಭೂತ ವೈಶಿಷ್ಟ್ಯ. ತ್ರಿಭುವನತಾತನೆಂಬಾತ ಸ್ಥಾಪಿಸ ಹೊರಟ ವಿಷ್ಣು ಮಹತ್ತ್ವವನ್ನು ತಾನು ವಚನರೂಪಿನಿಂದ ಖಂಡಿಸಿ ಆ ವಚನದೆಡೆಗೆ ವೇದಪುರಾಣಾಗಮಾದಿಗಳಿಂದ ಆಧಾರಗಳನ್ನೊದಗಿಸಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. (ಎಸ್.ಎಸ್‍ಎಚ್‍ಐ.)