ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಜಿನ ಕೊರಡು

ವಿಕಿಸೋರ್ಸ್ದಿಂದ

ನಂಜಿನ ಕೊರಡು

ಲೋಗಾನಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮರ. ಕಾಸರ್ಕನ ಮರ, ಇಟ್ಟಿ, ವಿಷಮುಷ್ಟಿ ಪರ್ಯಾಯ ನಾಮಗಳು. ಸ್ಟ್ರಿಕ್ನಾಸ್ ನಕ್ಸ್‍ವಾಮಿಕ ಎನ್ನುವುದು ಇದರ ಶಾಸ್ತ್ರೀಯ ಹೆಸರು. ಇದು ಉಷ್ಣವಲಯದ ಸಸ್ಯ. ಭಾರತದಲ್ಲಿ ಗೋರಕ್‍ಪುರ, ಒರಿಸ್ಸ, ಪಶ್ಚಿಮ ಕರಾವಳಿಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಬರ್ಮ, ಶ್ರೀಲಂಕಾ ಮೊದಲಾದೆಡೆಗಳಲ್ಲಿಯೂ ಬೆಳೆಯುತ್ತದೆ. ಮಧ್ಯಮಗಾತ್ರದ ವೃಕ್ಷ, ಕಾಂಡ ಅಂಕುಡೊಂಕು, ತೊಗಟೆ ಒರಟು ಹಾಗೂ ದೊರಗು. ಬಣ್ಣ ಹಳದಿ ಮಿಶ್ರಿತ ಬೂದಿ. ಬೇಸಗೆ ಕಾಲದಲ್ಲಿ ಎಲೆಯುದುರಿ ಹೊಸ ಚಿಗುರು ಮೂಡುವುದು. ಇದಕ್ಕೆ ಹೊಳೆಯುವ ಹಾಗೂ ವೃತ್ತಾಕಾರದ ಎಲೆಗಳುಂಟು. ಹೂಗಳು ಚಿಕ್ಕ ಗಾತ್ರದವು; ಇವುಗಳ ಬಣ್ಣ ಹಳದಿಮಿಶ್ರಿತ ಬಿಳಿ. ಹಣ್ಣುಗಳು ಬೆರ್ರಿ ಮಾದರಿಯವು. ಕಿತ್ತಳೆಹಣ್ಣಿನ ಗಾತ್ರಕ್ಕಿವೆ. ಬಣ್ಣವೂ ಕಿತ್ತಳೆ ಹಣ್ಣಿನಂತೆಯೇ. ಬೀಜಗಳು ಚಪ್ಪಟೆ. ಇವುಗಳ ಬಣ್ಣ ಹೊಳೆಯುವ ಬೂದಿ. ಬೀಜಗಳಲ್ಲಿ ಅತ್ಯಂತ ಕಹಿಯಾದ ಹಾಗೂ ಮಾರಕ ವಿಷಕಾರಿಯಾದ ಆಲ್ಕಲಾಯಿಡ್ ವಸ್ತುವಿದೆ. ಇದನ್ನು ಸ್ಪಟಿಕೀಕರಿಸಿ ಪಡೆಯಲಾಗುವ ಬಣ್ಣರಹಿತ ವಿಷವಸ್ತು ಸ್ಟ್ರಿಕ್ನಿನ್. ಇದರಿಂದಾಗಿಯೇ ಈ ಸಸ್ಯ ಒಂದು ವಾಣಿಜ್ಯ ಬೆಳೆಯಾಗಿದೆ. ದೇಶೀಯ ಮಾದಕ ಪಾನೀಯಗಳನ್ನು ಮತ್ತಷ್ಟು ಅಮಲುಕಾರಿಯನ್ನಾಗಿ ಮಾಡುವ ಸಲುವಾಗಿ ಬೀಜಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸುವುದುಂಟು. ಪಕ್ವ ಬೀಜಗಳನ್ನು ಒಣಗಿಸಿ ಪುಡಿಮಾಡಿ ಕುದುರೆಗಳಿಗೆ ಟಾನಿಕ್ ಆಗಿ ಅವುಗಳ ಆಹಾರದೊಂದಿಗೆ ಮಿಶ್ರಮಾಡಿಕೊಡುವುದಿದೆ. ಸ್ಟ್ರಿಕ್ನಿನನ್ನು ಇಲಿ ಪಾಷಾಣಗಳಲ್ಲಿಯೂ ಬಳಸಲಾಗುತ್ತದೆ. ಇದು ಚತುಷ್ಪಾದಿ ಪ್ರಾಣಿಗಳ ಮೇಲೆ ಅತೀವ ಪರಿಣಾಮಕಾರಿ ಎನ್ನಲಾಗಿದೆ. ಇದನ್ನು ಸೇವಿಸಿದ ನಾಯಿಗಳು ಶೀಘ್ರ ಮರಣಕ್ಕೀಡಾಗುವುವು. ನರಿಗಳನ್ನು ಸಾಯಿಸಲು ಈ ವಸ್ತುವನ್ನು ಬಳಸುತ್ತಾರೆ. ಕಾಗೆ ಹಾಗೂ ಬಾತುಗಳಂಥ ಹಕ್ಕಿಗಳ ಮೇಲೆ ಇದು ಪರಿಣಾಮ ಬೀರಿದರೂ ಸ್ತನಿಗಳ ಮೇಲೆ ಬೀರುವ ಪರಿಣಾಮ ಅಧಿಕವಾದುದು, ದೇಹವನ್ನು ಪ್ರವೇಶಿಸಿದ ವಿಷ ಜಠರ ಹಾಗೂ ಕರುಳಿನ ಮೇಲೆ ಏನೂ ಬಾಧೆಯನ್ನುಂಟುಮಾಡದೆ ಜೀವಿಯ ಕೇಂದ್ರ ನರ ವ್ಯವಸ್ಥೆಯ ಮೇಲೆ ತನ್ನ ವಿಷಪರಿಣಾಮವನ್ನು ಬೀರುತ್ತದೆ. ಆದರೆ ಸ್ಟ್ರಿಕ್ನಿನ್ ಔಷಧಿಯಾಗಿ ಪ್ರಯೋಜನಕಾರಿ ಎನಿಸಿದೆ. ವಿಷಸೇವನೆಯ ಪ್ರಕರಣಗಳಲ್ಲಿ ಕೊಡುವ ಮಾಂದ್ಯಜನಕ ಔಷಧಿಗಳಲ್ಲಿ ಪ್ರತಿವಿಷವಾಗಿ ಇದನ್ನು ಬಳಸುತ್ತಾರೆ. ಹಸಿವೆಯನ್ನು ಹೆಚ್ಚಿಸಲೂ ಇದು ಸಹಕಾರಿ. ಬಲು ಕಹಿಯಾದ್ದರಿಂದ ಬೆಲ್ಲವನ್ನು ಸೇರಿಸಿ, ಆಹಾರಪದಾರ್ಥಗಳೊಂದಿಗೆ 0.0215%ರಷ್ಟು ಭಾಗ ಸ್ಟ್ರಿಕ್ನಿನ್ನನ್ನು ಉಪಯೋಗಿಸಬಹುದು. (ಎಸ್.ಎಸ್.ಎಂಯು.)