ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಜುಂಡರಾವ್, ಎಂ ಎಸ್

ವಿಕಿಸೋರ್ಸ್ದಿಂದ

ನಂಜುಂಡರಾವ್, ಎಂ ಎಸ್ 1932-2003. ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಮೈದನಹಳ್ಳಿ ಶ್ಯಾನುಭೋಗ ನಂಜುಂಡರಾಯರು ಜುಲೈ 5, 1932ರಲ್ಲಿ ಜನಿಸಿದರು. ತಂದೆ ಎಂ.ಎಸ್.ದಾಸಪ್ಪನವರು ಸಾಹಿತ್ಯ, ಸಂಸ್ಕøತಿ, ಕಲೆ, ನಾಟಕ, ಜನಪದ ಇತ್ಯಾದಿಗಳಲ್ಲಿ ಆಸಕ್ತರಾಗಿದ್ದು ನಾಟಕ ಪರದೆಗಳನ್ನು ಬರೆಯುತ್ತಿದ್ದರು. ದಾಸಪ್ಪನವರ ತೊಗಲು ಗೊಂಬೆ ಹಾಗೂ ಹಸ್ತಪ್ರತಿಗಳನ್ನು ಸಂಗ್ರಹಿಸುತ್ತಿದ್ದರು. ಇನ್ನೊಬ್ಬ ಕಲಾವಿದ ಎಂ.ಎಚ್.ರಾಮು ಅವರೂ ದಾಸಪ್ಪರೊಂದಿಗೆ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು. ಹೀಗಾಗಿ ಎಳವೆಯಲ್ಲಿಯೇ ನಂಜುಂಡರಾಯರಿಗೆ ಕಲೆ, ಸಾಹಿತ್ಯ ಹಾಗೂ ಕಲಾವಸ್ತುಗಳ ಸಂಗ್ರಹದ ಬಗ್ಗೆ ಆಸಕ್ತಿ ಮೂಡಿತು. ಜೊತೆಗೆ ಸ್ವಾತಂತ್ರ್ಯ ಚಳವಳಿ ಖಾದಿ ವಸ್ತ್ರಧಾರಣೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡರು. ಭೂಗತ ಚಳವಳಿಯಲ್ಲೂ ಪಾಲುಗೊಂಡಿದ್ದರು. ಹೀಗಾಗಿ ಆ ಕಾಲದ ಅನೇಕ ರಾಜಕಾರಣಿಗಳ ಪರಿಚಯವಾಗಿದ್ದು, ಇನ್ನೊಬ್ಬ ಸ್ವಾತಂತ್ರ್ಯಹೋರಾಟಗಾರ ರುಮಾಲೆ ಚನ್ನಬಸಪ್ಪರ ಪರಿಚಯವಾಯಿತು. ಮುಂದೆ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಾಲೆಯಲ್ಲಿ ಎಸ್.ಎನ್.ಸ್ವಾಮಿ, ವೀರಪ್ಪ, ಸುಬ್ರಹ್ಮಣ್ಯರಾಜುರವರಲ್ಲಿ ಅಭ್ಯಸಿಸಿದರು. ಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಸಹಪಾಠಿಯಾಗಿದ್ದರು. ಮೈಸೂರಿನಲ್ಲಿದ್ದಾಗಲೇ ಅನೇಕ ಸಂಘಟನೆಗಳೊಂದಿಗೆ ಸಂಪರ್ಕವಿರಿಸಿಕೊಂಡು ಸ್ಥಳೀಯ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗಳಲ್ಲಿ ವಿವಿಧ ಕಾರ್ಯ ನಿರ್ವಹಿಸಿದರು ಸಹ ಕಲಾವಿದರೊಂದಿಗೆ ಸೇರಿ ಮೈಸೂರು ದಸರಾ ಪ್ರದರ್ಶನಾಲಯದ ಪ್ರವೇಶದ್ವಾರಗಳ ಅಲಂಕರಣ ರಚಿಸಿ ಕಲಾತ್ಮಕ ಅನುಭವ ಪಡೆದರು.

ಮುಂದೆ 1954ರಲ್ಲಿ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡರು. ಬೆಂಗಳೂರಿನ ಸದಾಶಿವನಗರದಲ್ಲಿ 1960ರಲ್ಲಿ ಅಖಿಲಭಾರತ ಕಾಂಗ್ರೆಸ್ ಮಹಾ ಅಧಿವೇಶನವೊಂದು ನಡೆಯಿತು. ಅದರ ಪ್ರವೇಶ ದ್ವಾರ ಹಾಗೂ ವೇದಿಕೆಗಳನ್ನು ಕಲಾತ್ಮಕವಾಗಿ ರಚಿಸಲು ಕೆಂಗಲ್ ಹನುಮಂತಯ್ಯರ ಅಧ್ಯಕ್ಷತೆಯಲ್ಲಿ ಅಲಂಕರಣ ಸಮಿತಿಯೊಂದು ರಚನೆಯಾಗಿ ನಂಜುಂಡರಾಯರೂ ಸೇರಿದಂತೆ ಹಲವಾರು ಪ್ರಸಿದ್ಧ ಕಲಾವಿದರು ಈ ಸಮಿತಿ ಯಲ್ಲಿದ್ದರು. ಈ ಸಮಿತಿ ಅಲಂಕರಣಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ, ಜನರ ಮೆಚ್ಚುಗೆ ಗಳಿಸಿತು. ಇದಕ್ಕೂ ಮೊದಲೇ 1952ರಲ್ಲಿಯೇ ಎನ್.ಜಿ.ಪಾವಂಜೆ ಅವರು ಹಲವಾರು ಪ್ರಸಿದ್ಧ ಕಲಾವಿದರೊಂದಿಗೆ ಒಡಗೂಡಿ `ಬೆಂಗಳೂರು ಆರ್ಟ್ ಸೊಸೈಟಿ'ಯೊಂದನ್ನು ಸ್ಥಾಪಿಸಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರು. ನಂಜುಂಡ ರಾಯರು 1955ರಲ್ಲಿ ಅದರ ಖಜಾಂಚಿಯಾಗಿ ಸೇರ್ಪಡೆಯಾಗಿದ್ದರು. ಈ ಸಂಘಟನೆಯನ್ನು 15.5.1960ರಲ್ಲಿ `ಮೈಸೂರು ಪ್ರದೇಶ ಚಿತ್ರಕಲಾ ಪರಿಷತ್ ಎಂದು ಮರುನಾಮಕರಣಮಾಡಿ ಪಾವಂಜೆಯವರು ಸಲಹೆಗಾರ ರಾಗಿಯೂ, ನಂಜುಂಡರಾಯರು ಕಾರ್ಯದರ್ಶಿಯಾಗಿಯೂ ಆರ್ಯಮೂರ್ತಿ ಅವರು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸ ತೊಡಗಿದರು. 18.9.1960ರಲ್ಲಿ ಅಖಿಲಕರ್ನಾಟಕ ಕಲಾವಿದರ ಪ್ರಥಮ ಸಮ್ಮೇಳನ ನಡೆದು ಪಾವಂಜೆ ಯವರು ರಾಜ್ಯದ ಕಲಾ ಪರಿಸ್ಥಿತಿ, ಕಲಾಶಾಲೆಯ ಅವಶ್ಯಕತೆ ಕುರಿತು ಒಂದು ಸುದೀರ್ಘ ವರದಿಯನ್ನು ಸರ್ಕಾರಕ್ಕೆ ನೀಡಿದರು. ಈ ಹಿನ್ನೆಲೆಯಲ್ಲಿ ನಂಜುಂಡರಾಯರು 1964ರಲ್ಲಿ ಚಿತ್ರಕಲೆ ಕುರಿತ ವಿದ್ಯಾಲಯವೊಂದನ್ನು ಆರಂಭಿಸಿದರು. 1976ರಲ್ಲಿ ಚಿತ್ರಕಲಾ ಪರಿಷತ್ ಇಂದಿನ ಕುಮಾರಕೃಪ ಬಳಿಯ ನಿವೇಶನಕ್ಕೆ ಬದಲಾಯಿತು. 1983ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಚಿತ್ರಕಲಾವಿದ್ಯಾಲಯ (ಫೈನ್ ಆರ್ಟ್ ಕಾಲೇಜು) ಹಾಗೂ ಈಚೆಗೆ ಅರಂಭವಾದ ರೋರಿಕ್ ಇನ್ಸ್‍ಟಿಟ್ಯೂಟ್ ಆಫ್ ಎಡ್ವಾನ್ಸ್ ಸ್ಟಡೀಸ್ ಸಂಸ್ಥೆಗಳಿಂದ ಕಲೆ ಕುರಿತ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯನ್ನು ನೀಡಲಾಗುತ್ತಿದೆ. ಕಲಾ ಕಾಲೇಜು ಸ್ವಾಯತ್ತ ವಿಶ್ವವಿದ್ಯಾಲಯವಾಗಿ (ಡೀಮ್‍ಡ್ ಯೂನಿವರ್ಸಿಟಿ)ಮಾನ್ಯತೆ ಪಡೆಯಲು ಪೂರ್ವಭಾವಿ ಸಿದ್ಧತೆಗಳಾಗಿವೆ. ಇಡೀ ಚಿತ್ರ ಪರಿಷತ್ ಕಲಾ ಸಂಕೀರ್ಣದ ರೂಪ ರಚನೆ, ಕಟ್ಟಡಗಳ ವಿನ್ಯಾಸ, ಉಪನ್ಯಾಸಕರ ಆಯ್ಕೆಯಿಂದ ಹಿಡಿದು ನಿರಂತರವಾಗಿ ನಡೆಯುತ್ತಿರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರದರ್ಶನಗಳು, ವಿಚಾರ ಸಂಕಿರಣ, ಕಲಾಶಿಬಿರ, ಕಲಾ ಪುಸ್ತಕ ಪ್ರಕಟಣೆಗಳೆಲ್ಲ ದರಲ್ಲಿ ನಂಜುಂಡರಾಯರ ದೂರದೃಷ್ಟಿ, ಪರಿಶ್ರಮ, ಬುದ್ಧಿವಂತಿಕೆ ಚಿಂತನೆಗಳನ್ನು ಕಾಣಬಹುದು. ಜೊತೆಗೆ ಸಂಕೀರ್ಣದಲ್ಲಿರುವ ಖ್ಯಾತ ರೋರಿಚ್ ತಂದೆ-ಮಕ್ಕಳ ಕೃತಿಗಳು, ಕೇಜರೀವಾಲರ ಸಂಗ್ರಹಿತ ಕೃತಿಗಳು, ಎಸ್.ಎಸ್. ಕುಕ್ಕೆರವರ ಸಂಯೋಜನಾ ಚಿತ್ರ, ಲಕ್ಷ್ಮಾಗೌಡರ ಗ್ರಾಫಿಕ್ ಕೃತಿಗಳು, ಜನಪದ ಬುಡಕಟ್ಟುಗಳ ಕಲಾ ವಸ್ತುಗಳು ತೊಗಲು ಗೊಂಬೆ ಹಾಗೂ ಮೈಸೂರು ಸಾಂಪ್ರದಾಯಿಕ ಚಿತ್ರಗಳ ಸಂಗ್ರಹಾಲಯಗಳು ರಾಜ್ಯದ, ರಾಷ್ಟ್ರದ ಅಪೂರ್ವ ನಿಧಿಗಳು. ಒಟ್ಟಾರೆಯಾಗಿ ಚಿತ್ರಕಲಾ ಪರಿಷತ್ ಹಾಗೂ ನಂಜುಂಡರಾಯರು ಅಭಿನ್ನವೆಂದೇ ಹೇಳಬಹುದು.

ವೈಯುಕ್ತಿಕವಾಗಿ ನಂಜುಂಡರಾಯರು ವಿದ್ಯಾರ್ಥಿದೆಸೆಯಲ್ಲಿಯೇ ಕಲಾಕೃತಿ ರಚಿಸಿ ಮಾರಾಟಮಾಡಿ ಶಾಲಾ ಭ್ಯಾಸ ಮಾಡಿದುದಾಗಿ ತಿಳಿದು ಬರುತ್ತದೆ. ಮಹಾತ್ಮಗಾಂಧಿ, ಎನ್.ಎಸ್.ಹರ್ಡಿಕರ್, ವಲ್ಲಭಾಯಿ ಪಟೇಲರ ಭಾವ ಚಿತ್ರಗಳು, ಮಡಿಕೇರಿ, ತಲಕಾವೇರಿ, ತಲಕಾಡು, ಶೃಂಗೇರಿ, ನಂದಿ ಐಹೊಳೆ, ಬೇಲೂರು, ಹಳೇಬೀಡು, ಗವಿಪುರದ ದೇವಾಲಯ ಇತ್ಯಾದಿ ಕಡೆಗಳ ಪ್ರಕೃತಿ ದೃಶ್ಯಗಳು ಹಾಗೂ ಕೆಲವು ರೇಖಾ ಚಿತ್ರಗಳು ನೋಡಸಿಗುತ್ತವೆ. ನಂಜುಂಡ ರಾಯರು 1967ರಿಂದ 90ರ ವರೆಗೆ ನಿರಂತರವಾಗಿ ರಾಜ್ಯ ಲಲಿತ ಅಕಾಡೆಮಿಯ ಸದಸ್ಯರಾಗಿದ್ದಲ್ಲದೆ ಹಲವಾರು ಅವಧಿಗಳಲ್ಲಿ ಕೇಂದ್ರ ಲಲಿತ ಕಲಾ ಅಕಾಡೆಮಿಯ ಸದಸ್ಯರೂ ಹಾಗೂ ವಿಶ್ವವಿದ್ಯಾಲಯಗಳ ಲಲಿತಕಲಾ ಅಧ್ಯಯನ ಮಂಡಳಿಯ ಸದಸ್ಯರೂ ಆಗಿದ್ದರು. 1980ರಲ್ಲಿ ಫಿಲಡೆಲ್ಫಿಯ, ವಾಶಿಂಗ್‍ಟನ್, ನ್ಯೂಯಾರ್ಕ್‍ಗಳಲ್ಲಿ ಪ್ರವಾಸ ಮಾಡಿ ದ್ದಲ್ಲದೆ ರಾಜ್ಯದ ತೊಗಲುಗೊಂಬೆ ಕಲಾವಿದರನ್ನು ಅಮೆರಿಕೆಗೆ ಕರೆದುಕೊಂಡು ಹೋಗಿ ಪ್ರದರ್ಶನ ವಿಚಾರ ಸಂಕಿರಣ ಗಳನ್ನು ನೀಡಿದ್ದರು. 1995ರಲ್ಲಿ ಒಮ್ಮೆ ಮಾಸ್ಕೊ, ಪೀಟರ್ಸ್ ಬರ್ಗ್‍ಗೆ ಹೋಗಿದ್ದು 1999ರಲ್ಲಿ ಮಾಸ್ಕೋದಲ್ಲಿ ರೋರಿಕ್ ಅಂತರರಾಷ್ಟ್ರೀಯ ಪುರಸ್ಕಾರ ಪಡೆದು ಲಂಡನ್, ದುಬೈ, ಮುಂತಾದ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿ ಬಂದರು. 1993ರಲ್ಲಿ ಜರ್ಮನಿಯ ಮ್ಯಾನಿಚ್, ಬಾನ್, ಹ್ಯಾಂಬರ್ಗ್, ಬಲೀನ್ ಇತ್ಯಾದಿ ಸ್ಥಳಗಳಲ್ಲಿ ಕಲಾ ಗ್ಯಾಲರಿ ಗಳನ್ನು ಸಂದರ್ಶಿಸಿ ಬಂದಿದ್ದರು.

ಚಿತ್ರಕಲಾ ಪರಿಷತ್ತಿನಿಂದ ಕಲೆ/ಕಲಾವಿದರ ಕುರಿತು ಕೆಲವು ಪುಸ್ತಕಗಳು ಪ್ರಕಟವಾಗಿದ್ದು ನಂಜುಂಡರಾಯರು ತೊಗಲುಗೊಂಬೆ ಕುರಿತು ಬೃಹದ್‍ಗಾತ್ರದ, ವರ್ಣಚಿತ್ರಮಯವಾದ ಅಭ್ಯಾಸ ಪೂರ್ಣ ಗ್ರಂಥವೊಂದನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ರಚಿಸಿದರು. ರಾಯರಿಗೆ 1980ರಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, 1984ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು 2000ದಲ್ಲಿ ಅವರ ಶಿಷ್ಯರು, ಅಭಿಮಾನಿಗಳು ಸೇರಿ ಅಭಿನಂದನಾ ಸಮಾರಂಭ ಏರ್ಪಡಿಸಿ `ನಂಜುಂಡ ಸಿರಿ' ಎಂಬ ಅಭಿನಂದನಾ ಗ್ರಂಥ ನೀಡಿದ್ದರು. ನಂಜುಂಡರಾಯರು .2.5.2003ರಲ್ಲಿ ನಿಧನರಾಗಿದ್ದು, ಅನಂತರವೂ ಜುಲೈ ತಿಂಗಳಲ್ಲಿ ಅವರ ನೆನಪಿಗಾಗಿ `ನಂಜುಂಡ ಸಿರಿ' ಎಂಬ ಹೆಸರಿನಲ್ಲಿ ಕಲಾಪರ ಕಾರ್ಯಕ್ರಮಗಳು ನಡೆಯುತ್ತಿದೆ. (ಎ.ಎಲ್.ನರಸಿಂಹನ್)