ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಜುಂಡ ಶಿವಯೋಗಿ

ವಿಕಿಸೋರ್ಸ್ದಿಂದ

ನಂಜುಂಡ ಶಿವಯೋಗಿ - ಒಬ್ಬ ಶಿವಯೋಗಿ. ತುಮಕೂರು ನಗರದ ಪೂರ್ವಕ್ಕೆ ಎರಡು ಹರಿದಾರಿ ಇರುವ ಮೈದಾಳ ಈತ ಹುಟ್ಟಿದ ಸ್ಥಳ.

   ಈತನ ಬಾಲ್ಯಜೀವನದ ವಿವರಗಳು ತಿಳಿದಿಲ್ಲ. ಈತನಿಗೆ ಕನ್ನಡ, ಸಂಸ್ಕøತ ಮತ್ತು ತೆಲುಗು ಭಾಷೆಗಳ ಪರಿಚಯವಿತ್ತು. ಮಡದಿ, ಮೂವರು ನಾಲ್ವರು ಮಕ್ಕಳಿಂದ ತುಂಬಿದ ಈತನ ಗೃಹಸ್ಥ ಜೀವನ ಆ ಊರಿನ ಕೂಲಿ ಮಠವೊಂದನ್ನು ಆಶ್ರಯಿಸಿತ್ತು. ಹಳ್ಳಿಯ ಮಕ್ಕಳಿಗೆ ತಕ್ಕಷ್ಟು ಓದುಬರೆಹ ಕಲಿಸಿದ ತರುವಾಯ ಅವರಿಗೆ ಶರಣಲೀಲಾಮೃತ, ಸೋಮೇಶ್ವರ ಶತಕ, ಸರ್ವಜ್ಞನ ವಚನಗಳು, ಚನ್ನಬಸವಪುರಾಣ, ಜೈಮಿನಿ ಭಾರತ ಮತ್ತು ರಾಜಶೇಖರವಿಳಾಸದಂಥ ಕನ್ನಡ ಪ್ರೌಢ ಗ್ರಂಥಗಳನ್ನು ಗಮಕ ಗತಿಯಿಂದ ಓದಿ ಅರ್ಥೈಸುವ ಸಾಮಥ್ರ್ಯವನ್ನು ಉಂಟುಮಾಡಿಕೊಡುವುದು ಈತನ ಕೂಲಿಮಠದ ಹೆಗ್ಗುರಿಯಾಗಿತ್ತು.
   ಶಿವಪೂಜಾನಿಷ್ಠನಾದ ಈತ ಮೊದಲಿನಿಂದಲೂ ವೈರಾಗ್ಯದ ಕಡೆಗೆ ಗಮನ ಹರಿಸಿದ್ದ. ಮಧ್ಯವಯಸ್ಸಿನಲ್ಲಿ ಒದಗಿದ ಪತ್ನೀವಿಯೋಗ ಈತನ ವಿರಕ್ತಿಗೆ ಪುಟಕೊಟ್ಟಿತು. ತರುವಾಯ ಈತ ಸತ್ಸಂಗವನ್ನು ಬಯಸಿ ಸಿದ್ಧಗಂಗಾ ಕ್ಷೇತ್ರಕ್ಕೆ ಆಗಮಿಸಿದ. ಅಲ್ಲಿ ಶ್ರೀ ಅಟವೀಂದ್ರ ಶಿವಯೋಗಿಗಳ ಸನ್ನಿಧಿ ಸೇರಿ ಅವರ ಅನುಗ್ರಹಕ್ಕೆ ಪಾತ್ರನಾದ. ಶಿವಯೋಗಿ ಅಟವೀಂದ್ರರ ಲಿಂಗೈಕ್ಯದ ಅನಂತರ ಈತ ಮತ್ತೆ ತುಮಕೂರಿಗೆ ಹಿಂದಿರುಗಿ ಶಿವಾಲಯವೊಂದರಲ್ಲಿ ಸೇರಿದ. ಈತನ ಸಮಾಧಿ ತುಮಕೂರು ಹತ್ತಿರದ ಉಸ್ಕೂರಿನಲ್ಲಿದೆ.
   ಈತನ ಪಾಂಡಿತ್ಯ, ಮಧುರಕಂಠಶ್ರೀ, ಚಿತ್ರಕಲಾಪ್ರಿಯತೆಗಳು ಈತ ರಚಿಸಿರುವ ಕೃತಿಗಳಿಂದ ವೇದ್ಯವಾಗುತ್ತದೆ. ಈತನ ಗ್ರಂಥಗಳಲ್ಲಿ ಮಾರ್ಕಂಡೇಯ ವಿಳಾಸ, ಶ್ರೀ ಮದಟವೀಶ್ವರ ಗುರುಭಕ್ತಿಸಾರ, ಅಟವೀಶ್ವರ ಗೀತಾಮಂಜರಿ, ಸುರಾಭಾಂಡೇಶ್ವರಾಖ್ಯಾನ, ಹಾಲಾಹಲಭಕ್ಷಣೆಯ ಕಥೆಗಳು ಮಾತ್ರ ದೊರೆಯುತ್ತವೆ. ಇವರ ಚಿತ್ರಗಳಲ್ಲಿ ಸರ್ವಸಿದ್ಧಿಗಣಪತಿ, ಚಂದ್ರಶೇಖರಮೂರ್ತಿ, ಗಿರಿಜಾಕಲ್ಯಾಣ ಮಹೋತ್ಸವ, ಉಮಾಮಹೇಶ್ವರಮೂರ್ತಿ, ನಂದಿವಾಹನಮೂರ್ತಿ, ಅಂಧಕಾಸುರ ಸಂಹಾರ ಮತ್ತು ಜೀವನ್ಮುಕ್ತಿವಿವೇಕಗಳು ಮುಖ್ಯವಾದವು.

(ಎಂ.ಜಿ.ಎನ್.)