ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂದಕುಮಾರ
ನಂದಕುಮಾರ ವಾರನ್ ಹೇಸ್ಟಿಂಗ್ಸ್ ಭಾರತದ ಗವರ್ನರ್-ಜನರಲ್ ಆಗಿದ್ದ ಕಾಲದಲ್ಲಿ ಅವನ ಕ್ರೋಧಕ್ಕೆ ಬಲಿಯಾಗಿ ಪ್ರಸಿದ್ಧಿಗೆ ಬಂದವ. ಈತ ಬಂಗಾಲಿ ಬ್ರಾಹ್ಮಣ. ಹೂಗ್ಲಿಯ ಫೌಜದಾರನಾಗಿದ್ದ. ಮೀರ್ ಜಾಫರನ ವಿಧವೆ ಮೋನಿ ಬೇಗಮ್ ಎಂಬಾಕೆಯನ್ನು ನವಾಬನ ಸಂರಕ್ಷಕಳಾಗಿ ನಿಯಮಿಸುವುದಕ್ಕಾಗಿ ಹೇಸ್ಟಿಂಗ್ಸ್ ಅಪಾರ ಲಂಚ ಪಡೆದಿದ್ದನೆಂದು ಈತ ಬಹಿರಂಗವಾಗಿ ಆಪಾದನೆ ಹೊರಿಸಿದ. ಈ ಆಪಾದನೆ ನಿರಾಧಾರವಾಗಿರಲಿಲ್ಲ. ಆಪಾದನೆಯ ವಿಚಾರಣೆ ನಡೆಯುತ್ತಿದ್ದ ಕಾಲದಲ್ಲಿ ನಂದಕುಮಾರನ ಮೇಲೆ ಸುಳ್ಳು ಪತ್ರದ ಸ್ಪಷ್ಟನೆಯ ಆರೋಪ ಬಂತು. ನಂದಕುಮಾರ ಬಂಧನಕ್ಕೊಳಗಾದ. ವರಿಷ್ಠ ನ್ಯಾಯಾಲಯ ಅವನನ್ನು ತಪ್ಪಿತಸ್ಥನೆಂದು ನಿರ್ಣಯಿಸಿ ಅವನಿಗೆ ಮರಣಶಿಕ್ಷೆ ವಿಧಿಸಿತು. ಈ ಶಿಕ್ಷೆಗೆ ಖೊಟ್ಟಿ ಪತ್ರ ಬಹಿರಂಗ ಕಾರಣವಾಗಿದ್ದರೂ ಗವರ್ನರ್-ಜನರಲನ ಮೇಲೆ ಆತ ಆಪಾದನೆ ಹೊರಿಸಿದ್ದೇ ವಾಸ್ತವ ಕಾರಣ. ಅದೂ ಅಲ್ಲದೆ, ವಾರನ್ ಹೇಸ್ಟಿಂಗ್ಸ್ ಮುಖ್ಯನ್ಯಾಯಾಧೀಶನ ಬಾಲ್ಯದ ಗೆಳೆಯನಾಗಿದ್ದ. ಹೇಸ್ಟಿಂಗ್ಸನ ಕೃತ್ಯಗಳಿಗೆ ಶಾಸನದ ಸಮರ್ಥನೆ ಕೊಡುವುದೇ ಅವನ ರೂಢಿಯಾಗಿತ್ತು. ನಂದಕುಮಾರನನ್ನು ಶಿಕ್ಷೆಗೆ ಒಳಪಡಿಸಿದ ಕಾನೂನು ಭಾರತಕ್ಕೆ ಅನ್ವಯಿಸುವಂತಿರಲಿಲ್ಲ. ಸ್ಪಷ್ಟನೆಗೆ ಮರಣದಂಡನೆ ವಿಧಿಸುವ ಕ್ರಮ ಭಾರತದ ಕಾನೂನಿನ ಪದ್ಧತಿಗೆ ವಿರುದ್ಧವಾಗಿತ್ತು. ಆರೋಪಿಗೆ ಕ್ಷಮಾದಾನ ಮಾಡಲು ಸಾಧ್ಯವಿತ್ತು. ಮುಖ್ಯ ನ್ಯಾಯಾಧೀಶನಿಗೆ ಆ ಅಧಿಕಾರ ಇತ್ತು. ಆದರೆ ನಂದಕುಮಾರನ ನ್ಯಾಯವಾದಿ ಕ್ಷಮಾದಾನದ ಮನವಿ ಸಲ್ಲಿಸದಂತೆ ಹೇಸ್ಟಿಂಗ್ಸನ ಕೈಗೊಂಬೆಯೊಬ್ಬ ತಡೆಗಟ್ಟಿದ. 1775ರ ಆಗಸ್ಟ್ 5ರಂದು ನಂದಕುಮಾರನನ್ನು ಗಲ್ಲಿಗೇರಿಸಲಾಯಿತು. ಈ ಪ್ರಕರಣ ವಾರನ್ ಹೇಸ್ಟಿಂಗ್ಸನ ಆಡಳಿತದ ಕಪ್ಪು ಕಲೆಗಳಲ್ಲಿ ಒಂದಾಗಿ ಉಳಿಯಿತು. ಅಂದಿನ ಬ್ರಿಟಿಷ್ ಆಡಳಿತದ ವೈಖರಿಯನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ. (ಎಂ.ಕೆ.ಬಿ.)