ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂದಾ
ನಂದಾ ಸಾಲಪೋತಕನೆಂಬ ಸರ್ಪರಾಜನ ಮಗಳು. ಸಾಲಪೋತಕ ಒಮ್ಮೆ ಅರಣ್ಯದಲ್ಲಿ ಸಂಚರಿಸುವಾಗ ಉತ್ತಮನ ರಾಣಿ ಬಹುಳೆಯನ್ನು ಕಂಡು ಮೋಹಪರವಶನಾಗಿ ಆಕೆಯನ್ನು ಸಂಗಡ ಕರೆತಂದ. ಬಹುಳೆಯನ್ನು ನೋಡಿದ ನಂದ ತನ್ನ ತಾಯಿಗೆ ಆಕೆ ಸವತಿಯಾಗುವಳೆಂಬ ಭಯದಿಂದ ಆಕೆಯನ್ನು ತಂದೆಗೆ ತಿಳಿಯದಂತೆ ಬಚ್ಚಿಟ್ಟಳು. ತನ್ನ ತಂದೆ ಎಷ್ಟು ಕೇಳಿದರೂ ಬಹುಳೆ ಇದ್ದ ಜಾಗವನ್ನು ತಿಳಿಸಲಿಲ್ಲ. ಇದರಿಂದ ಕೋಪಗೊಂಡ ಸಾಲಪೋತಕ ಮಗಳು ಮೂಕಿಯಾಗುವಂತೆ ಶಾಪವಿತ್ತ. ಬಹುಳೆಯ ಪತಿ ಬಲಾಕ ರಾಕ್ಷಸನ ಮಾಯಾಬಲದಿಂದ ಬಹುಳೆಯನ್ನು ತನ್ನಲ್ಲಿಗೆ ಕರೆಸಿಕೊಂಡನಲ್ಲದೆ ಅನಂತರ ನಂದೆಯ ಉಪಕಾರಕ್ಕೆ ಪ್ರತಿಯಾಗಿ ಸಾರಸ್ವತ ಕ್ರತುವನ್ನು ಮಾಡಿಸಿ, ನಂದೆಯ ಮೂಕತ್ವವನ್ನು ಕಳೆದ. ಗರ್ಗಮುನಿಯಿಂದ ಇದನ್ನರಿತ ನಂದೆ ಉತ್ತಮ-ಬಹುಳೆಯರ ಬಳಿ ಬಂದು ಕೃತಜ್ಞತೆಯನ್ನು ಸೂಚಿಸಿ ಮಹಾವೀರನೂ ಶಾಸ್ತ್ರವಿದನೂ ಧರ್ಮಿಷ್ಠನೂ ಮನ್ವಂತರಾಧಿಪನೂ ಆದ ಮಗ ಜನಿಸಲೆಂದು ಹರಸಿ ಪಾತಾಳ ಲೋಕವನ್ನು ಸೇರಿದಳು.
ಋಷಭಕೂಟಪರ್ವತದಲ್ಲಿ ಹುಟ್ಟಿ ಕುಬೇರನ ರಾಜಧಾನಿಯಾದ ಅಲಕಾ ಪಟ್ಟಣದ ಬಳಿ ಹರಿಯುವ ಒಂದು ನದಿ. ಈ ನದಿಗೆ ಅಲಕನಂದಾ ಎಂಬ ಹೆಸರೂ ಉಂಟು. ಈ ನದಿಯ ತೀರದಲ್ಲಿ ದೇವತೆಗಳು ಅನೇಕ ಯಜ್ಞಗಳನ್ನು ಮಾಡಿದರೆಂದೂ, ಇದರ ಸ್ನಾನ ಸಮಸ್ತ ಪಾಪನಾಶಕ್ಕೆ ಕಾರಣವೆಂದೂ ಹೇಳಲಾಗಿದೆ.
ಧರ್ಮಪ್ರಜಾಪತಿಯ ಮಗ ಹರ್ಷನ ಹೆಂಡತಿಗೂ ಈ ಹೆಸರಿದೆ. (ಎಚ್.ಎಸ್.ಎಸ್‍ಯುಜೆ.)