ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂದಿಬಟ್ಟಲು

ವಿಕಿಸೋರ್ಸ್ದಿಂದ

ನಂದಿಬಟ್ಟಲು

ಅಪ್ರೋಸೈನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಟ್ಯಾಬರ್‍ನೀಮಾಂಟಾನ ಕಾರೊನೇರಿಯ ಇದರ ವೈಜ್ಞಾನಿಕ ಹೆಸರು. ಪರ್ಯಾಯ ನಾಮ ಎರ್‍ವಟಾಮಿಯ. ಇದು 1.2 ರಿಂದ 2.4 ಮೀ. ಎತ್ತರಕ್ಕೆ ಬೆಳೆಯುವಂಥ ಪೊದೆ. ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಉದ್ದ 7 ರಿಂದ 15 ಸೆಂ.ಮೀ. ನಂದಿಬಟ್ಟಲು ವರ್ಷಪೂರ್ತಿ ಹೂಬಿಡುತ್ತದೆ. ಹೂಗಳು ಬಿಳಿಬಣ್ಣದವು. ರಾತ್ರಿ ವೇಳೆ ಸುವಾಸನೆಯನ್ನು ಬೀರುತ್ತದೆ. ಫಲ ಫಾಲಿಕಲ್ ಮಾದರಿಯದು. ಉದ್ದವಾಗಿಯೂ ಡೊಂಕಾಗಿಯೂ ಇರುತ್ತದೆ. ಹಣ್ಣಿನ ತಿರುಳು ಕೆಂಪು ಬಣ್ಣದ್ದು. ಮೂರರಿಂದ ಆರು ಬೀಜಗಳಿರುವುವು. ಸೀಮಿತವಾಗಿರುವ ಈ ಸಸ್ಯ ಗಢವಾಲಿನ ಪೂರ್ವದಿಂದ ಅಸ್ಸಾಂ, ಬಂಗಾಳ, ದಕ್ಷಿಣಕ್ಕೆ ವಿಶಾಖ ಪಟ್ಟಣದ ಗುಡ್ಡಗಳವರೆಗೆ ಹರಡಿದೆ. ಸರಾಗವಾಗಿ ನೀರು ಹರಿಯುವ, ಬಿಸಿಲು ಚೆನ್ನಾಗಿ ಬೀಳುವ ತೋಟದ ಮಣ್ಣಿನಲ್ಲಿ ಇದು ಹುಲುಸಾಗಿ ಬೆಳೆಯಬಲ್ಲುದು. ಹಸಿರು ಸಸಿಗಳಲ್ಲಿ (ಲಾನ್) ಅಥವಾ ಉದ್ಯಾನಗಳ ಅಂಚಿನಲ್ಲಿ ಅಲಂಕಾರಕ್ಕೆ ಬೆಳೆಸುವ ಎರಡು ಸುತಿನ್ತ ದಳದ ತಳಿ ಅತ್ಯಂತ ಮನಮೋಹಕ.

ನಂದಿಬಟ್ಟಲಿನ ಬೇರು ಒಗರು ರುಚಿಯದು. ಇದನ್ನು ಅಗಿಯುವುದರಿಂದ ಹಲ್ಲುನೋವು ಉಪಶಮನಗೊಳ್ಳುತ್ತದೆ. ಬೇರನ್ನು ನೀರಿನೊಂದಿಗೆ ತೇದು ಕ್ರಿಮಿನಾಶಕವಾಗಿ ಬಳಸಲಾಗುವುದು. ನಿಂಬೆರಸದೊಂದಿಗೆ ಬೆರೆಸಿದ ಇದರ ಲೇಪ ಕಣ್ಣುಗುಡ್ಡೆಯ ಪಾರದರ್ಶಕ ಪಟಲದ ಮಬ್ಬನ್ನು ನಿವಾರಿಸುತ್ತದೆ. ಇದರ ಹೂವಿನ ರಸ ಕಣ್ಣುನೋವಿಗೆ ಮತ್ತು ಚರ್ಮರೋಗಗಳಿಗೆ ಒಳ್ಳೆಯ ಔಷಧಿ. ಹೂವಿನ ರಸದಿಂದ ಕಾಡಿಗೆಯನ್ನು ತಯಾರಿಸುವುದಿದೆ. ಬೀಜದ ಸುತ್ತಲಿನ ಕೆಂಪು ತಿರುಳನ್ನು ಬಟ್ಟೆಗಳಿಗೆ ಬಣ್ಣಕಟ್ಟಲು ಉಪಯೋಗಿಸುವುದುಂಟು. ಕಾಂಡ ಮತ್ತು ಬೇರಿನ ತೊಗಟೆಯಲ್ಲಿ ಟ್ಯಾಬರ್ನಮಾಂಟನೀನ್ ಮತ್ತು ಕಾರೊನೇರಿನ್ ಎಂಬ ಎರಡು ಸಸ್ಯಕ್ಷಾರಗಳು, ಸಕ್ಕರೆ ಮತ್ತು ಕೊಬ್ಬು ಪದಾರ್ಥಗಳಿವೆ. ಮರವನ್ನು ಧೂಪ ಮತ್ತು ಸುಗಂಧದ್ರವ್ಯಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. (ಟಿ.ಎನ್.ಎಸ್.) (ಪಿ.ಆರ್.ಎಂ.)