ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಕ್ಷತ್ರ ವೀಕ್ಷಕ

ವಿಕಿಸೋರ್ಸ್ದಿಂದ

ನಕ್ಷತ್ರ ವೀಕ್ಷಕ

ಯುರ್ಯಾನೊಸ್ಕಾಪಿಡೀ ಕುಟುಂಬಕ್ಕೆ ಸೇರಿದ ಒಂದು ಮೀನು (ಸ್ಟಾರ್‍ಗೇಜûರ್). ಯುರ್ಯಾನೊಸ್ಕೋಪಸ್ ಇದರ ಶಾಸ್ತ್ರೀಯ ಹೆಸರು. ದಕ್ಷಿಣ ಮತ್ತು ಉತ್ತರ ಅಟ್ಲಾಂಟಿಕ್ ಮಹಾಸಾಗರದ ಕರಾವಳಿಯಲ್ಲಿ ದೊರೆಯುತ್ತದೆ. ಸುಮಾರು 30 ಸೆಂಮೀ. ಉದ್ದಕ್ಕೆ ಬೆಳೆಯುವುದು. ಚಪ್ಪಟೆ ದೇಹ ಮತ್ತು ಘನಾಕೃತಿಯ ತಲೆ ಇರುವ ಈ ಮೀನು ಬಹಳ ಕುರೂಪಿ. ಕಣ್ಣುಗಳು ತಲೆಯ ಮೇಲ್ಭಾಗದಲ್ಲಿ ಇರುವುದರಿಂದ ಸದಾಕಾಲ ನಕ್ಷತ್ರಗಳನ್ನೇ ವೀಕ್ಷಿಸುವುವೋ ಎಂಬಂತೆ ನೆಟ್ಟಗೆ ಮೇಲಕ್ಕೆ ನೋಡುತ್ತಿರುವಂತೆ ಭಾಸವಾಗುತ್ತದೆ. ಆದ್ದರಿಂದಲೇ ಈ ಮೀನಿಗೆ ನಕ್ಷತ್ರವೀಕ್ಷಕ ಎಂಬ ಹೆಸರು ಬಂದಿದೆ. ಕಣ್ಣುಗಳ ಹಿಂಭಾಗದಲ್ಲಿ ಎರಡು ವಿದ್ಯುತ್ ಅಂಗಗಳುಂಟು. ಎಕ್ಸ್ಟ್ರಾಆಕ್ಯುಲರ್ ಸ್ನಾಯುಗಳ ಮಾರ್ಪಾಡಿನಿಂದ ರೂಪುಗೊಂಡಿರುವ ಇವು ಒಂದು ಸಲಕ್ಕೆ ಸುಮಾರು 50 ವೋಲ್ಟ್ ವಿದ್ಯುತ್ತನ್ನು ಉತ್ಪಾದಿಸಬಲ್ಲವು. ತಮ್ಮ ಎದೆಯನ್ನು ಆಘಾತಗೊಳಿಸಲು ಈ ವಿದ್ಯುತ್ತನ್ನು ಬಳಸಬಹುದೆಂದು ಶಂಕಿಸಲಾಗಿದೆ. ಆದರೆ ತಮ್ಮ ಸುತ್ತ ಒಂದು ವಿದ್ಯುತ್ ಕ್ಷೇತ್ರವನ್ನು ರಚಿಸಿ ಅದರಿಂದ ತಮ್ಮ ಹಿಂದೆಮುಂದೆ ಬರುವ ಇತರ ಜೀವಿಗಳನ್ನು ಪತ್ತೆಹಚ್ಚುವ ಸಾಧನವಾಗಿ ಈ ಅಂಗಗಳನ್ನು ಬಳಸಿಕೊಳ್ಳುವುದೆಂಬ ಊಹೆಯೂ ಇದೆ. ಈ ಮೀನುಗಳು ಬಂಡೆಗಳ ಮಧ್ಯೆ ಇರುವ ಉಸುಬಿನಲ್ಲಿ ಕಣ್ಣುಗಳನ್ನು ಬಿಟ್ಟು ತಮ್ಮ ಉಳಿದೆಲ್ಲ ದೇಹವನ್ನು ಹೂತುಕೊಂಡು ವಾಸಿಸುವ ಸ್ವಭಾವದವು. ಇವು ಈ ಸ್ಥಿತಿಯಲ್ಲಿಯೆ ಇದ್ದುಕೊಂಡು ತಮ್ಮ ಹತ್ತಿರ ಸುಳಿದಾಡುವ ಇತರ ಸಣ್ಣಪುಟ್ಟ ಪ್ರಾಣಿಗಳನ್ನು ಭಕ್ಷಿಸುತ್ತವೆ. ಆದರೆ ವಯಸ್ಕ ನಕ್ಷತ್ರವೀಕ್ಷಕಗಳಿಂದ ಸ್ವರೂಪದಲ್ಲಿ ಬೇರೆಯಾಗಿ ಕಾಣುವ ಮರಿನಕ್ಷತ್ರವೀಕ್ಷಕಗಳು ಮಹಾಸಾಗರದಲ್ಲಿ ತೇಲುತ್ತಿರುವಾಗ ಟ್ಯೂನ ಮೀನುಗಳ ಆಹಾರವಾಗುವುದುಂಟು. ನಕ್ಷತ್ರವೀಕ್ಷಕ ತಿನ್ನಲು ರುಚಿ. ಆದರೂ ಆರ್ಥಿಕ ದೃಷ್ಟಿಯಿಂದ ಈ ಮೀನು ಮುಖ್ಯವೆನಿಸಿಲ್ಲ. (ಎಸ್.ಬಿ.ಎಂ.)