ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಗದು ಉದರಿ

ವಿಕಿಸೋರ್ಸ್ದಿಂದ

ನಗದು ಉದರಿ - ಒಂದು ಬ್ಯಾಂಕು ತನ್ನ ಗ್ರಾಹಕನಿಗೆ ಸಾಲ ನೀಡುವ ಬಗೆಗಳಲ್ಲಿ ಇದು ಪ್ರಮುಖವಾದ್ದು. ಬ್ಯಾಂಕಿನಲ್ಲಿ ಗ್ರಾಹಕ ಇಟ್ಟ ಠೇವಣಿಯ ಮೊಬಲಗನ್ನು ಮೀರಿ, ತನ್ನ ಅವಶ್ಯಕತೆಗೆ ಅನುಗುಣವಾಗಿ, ವಿಧಿಗಳನ್ವಯ, ಒಂದು ಗರಿಷ್ಠ ಪರಿಮಿತಿಯವರೆಗೆ ಬ್ಯಾಂಕಿನಿಂದ ಹಣವನ್ನು ಡ್ರಾ (ನಿಕಾಲೆ) ಮಾಡಲು ಅವನಿಗೆ ಬ್ಯಾಂಕು ಈ ಮೂಲಕ ಅನುವು ಮಾಡಿಕೊಡುತ್ತದೆ. ಬ್ಯಾಂಕಿನ ವಿಧಿಗಳನ್ವಯ ಈ ಸಾಲಕ್ಕೆ ಭದ್ರತೆಯಾಗಿ ಬೇರೆ ಆಸ್ತಿಗಳ ಆಧಾರವಿರುವುದುಂಟು; ಗ್ರಾಹಕನ ವೈಯಕ್ತಿಕ ಭರವಸೆಯೂ ಇರುತ್ತದೆ. ಠೇವಣಿಯ ಹಣವನ್ನು ಮೀರಿ ಹೀಗೆ ಡ್ರಾ ಮಾಡುವ ಸೌಲಭ್ಯ ತಾತ್ಕಾಲಿಕವಾಗಿದ್ದರೆ ಅದನ್ನು ಮೀರೆಳೆತವೆಂದೂ (ಓವರ್ ಡ್ರಾಫ್ಟ್) ದೀರ್ಘಾವಧಿಯದಾದರೆ ನಗದು ಉದರಿಯೆಂದೂ ಕರೆಯಲಾಗುತ್ತದೆ.

ಮೀರೆಳೆತ ಅಥವಾ ನಗದು ಉದರಿಯಲ್ಲಿ ಗ್ರಾಹಕನಿಗೆ ಕೆಲವು ಅನುಕೂಲತೆಗಳುಂಟು. ಅವನು ತನಗೆ ಅಗತ್ಯವಿದ್ದಷ್ಟು ಮೊಬಲಗನ್ನು ಮಾತ್ರ, ಬೇಕೆನಿಸಿದಾಗ, ಡ್ರಾ ಮಾಡಬಹುದು. ಠೇವಣಿಯನ್ನು ಮೀರಿ ಹೀಗೆ ಡ್ರಾ ಮಾಡಿದ ಮೊಬಲಗೆಷ್ಟೋ ಅಷ್ಟರ ಮೇಲೆ ಮಾತ್ರ ಬಡ್ಡಿಯ ಲೆಕ್ಕ ಹಾಕಲಾಗುತ್ತದೆ. ಸಾಲವನ್ನು ಪಡೆದಾಗ ಬ್ಯಾಂಕು ಹಾಗೆ ನೀಡಿದ ಸಾಲದ ಒಟ್ಟು ಮೊಬಲಗಿನ ಮೇಲೆ ಬಡ್ಡಿ ವಿಧಿಸುತ್ತದೆ. ಅವನು ಆ ಸಾಲದ ಮೊಬಲಗಿನ ಒಂದು ಭಾಗವನ್ನು ಖರ್ಚು ಮಾಡದೆ ತನ್ನ ಲೆಕ್ಕದಲ್ಲಿಟ್ಟಿದ್ದರೂ ಅದಕ್ಕೂ ಬಡ್ಡಿ ಕೊಡಬೇಕಾಗುತ್ತದೆ. ಆದ್ದರಿಂದ ವ್ಯವಹಾರಗಾರರು ನೇರ ಸಾಲಕ್ಕಿಂತ ನಗದು ಉದ್ದರಿ ಅಥವಾ ಮೀರೆಳೆತದ ಸೌಲಭ್ಯವನ್ನೇ ಮಾಡಿಕೊಳ್ಳುತ್ತಾರೆ. (ಸಿ.ಎಂ.ಎಂ.)