ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಟಾಲ್
ನಟಾಲ್ ದಕ್ಷಿಣ ಆಫ್ರಿಕ ಗಣರಾಜ್ಯದ ಒಂದು ಪ್ರಾಂತ್ಯ. ಅದರ ನಾಲ್ಕು ಪ್ರಾಂತ್ಯಗಳಲ್ಲಿ ಇದು ಅತ್ಯಂತ ಚಿಕ್ಕದು. ಈ ಪ್ರಾಂತ್ಯದ ಉತ್ತರದಲ್ಲಿ ಟ್ರಾನ್ಸ್‍ವಾಲ್ ಪ್ರಾಂತ್ಯ, ಸ್ವಾಜಿûಲ್ಯಾಂಡ್ ಮತ್ತು ಮೋಜûಂಬೀಕ್, ಪಶ್ಚಿಮದಲ್ಲಿ ಆರೆಂಜ್ ಫ್ರೀ ಸ್ಟೇಟ್ ಪ್ರಾಂತ್ಯ ಮತ್ತು ಲೆಸೋತೊ, ದಕ್ಷಿಣದಲ್ಲಿ ಕೇಪ್ ಆಫ್ ಗುಡ್ ಹೋಪ್ ಪ್ರಾಂತ್ಯ ಮತ್ತು ಪೂರ್ವದಲ್ಲಿ ಹಿಂದೂ ಸಾಗರ ಇದೆ. ಪಶ್ಚಿಮದಲ್ಲಿ ಡ್ರೇಕನ್‍ಬರ್ಗ್ ಶ್ರೇಣಿಯ ಇಳಿಜಾರೂ ಉತ್ತರದಲ್ಲಿ ಬಹು ದೂರ ಪೊಂಗೋಲ ನದಿಯೂ ದಕ್ಷಿಣದಲ್ಲಿ ಭಾಗಶಃ ಉಮ್‍ಜಿûಕೂಲೂ ನದಿಯೂ ಇದರ ನೈಸರ್ಗಿಕ ಮೇರೆಗಳಾಗಿವೆ. ಪ್ರಾಂತ್ಯದ ವಿಸ್ತೀರ್ಣ 86,967 ಚ.ಕಿಮೀ. ಜನಸಂಖ್ಯೆ 21,40,166 (1970). ರಾಜಧಾನಿ ಪೀಟರ್‍ಮ್ಯಾರಿಟ್ಸ್‍ಬರ್ಗ್.
ಮೇಲ್ಮೈ ಲಕ್ಷಣ: ದಕ್ಷಿಣ ಆಫ್ರಿಕ ಗಣರಾಜ್ಯದ ಪೂರ್ವಭಾಗದಲ್ಲಿರುವ ಈ ಪ್ರಾಂತ್ಯ ಸಾಮಾನ್ಯವಾಗಿ ಪರ್ವತಮಯವಾದದ್ದು. ಇದರಲ್ಲಿ ಮೂರು ನೈಸರ್ಗಿಕ ವಿಭಾಗಗಳಿವೆ. ಕರಾವಳಿ ಪ್ರದೇಶ ಸಮುದ್ರಮಟ್ಟದಿಂದ ಸುಮಾರು 900 ಮೀ.ವರೆಗೆ ಏರುತ್ತದೆ. ಮಧ್ಯದ ಪ್ರದೇಶ 900-1,000 ಮೀ. ಎತ್ತರವಾಗಿದೆ. ಪಶ್ಚಿಮದಲ್ಲಿ ಡ್ರೇಕನ್ಸ್‍ಬರ್ಗ್ ಪರ್ವತ ಸುಮಾರು 3,350 ಮೀ.ವರೆಗೂ ಎತ್ತರವಾಗಿದೆ. ಪರ್ವತಗಳಿಂದ ಹರಿದುಬರುವ ನದಿಗಳು ಬಂಡೆಗಳನ್ನು ಕೊರೆದು ಅಂಕುಡೊಂಕಾದ ನಕ್ಷೆಗಳನ್ನು ತೆಗೆದಂತೆ ಕಾಣಿಸುತ್ತವೆ. ರಭಸದಿಂದ ಹರಿಯುವಲ್ಲಿ ಈ ನದಿಗಳು ಬದಿಯ ಭೂಭಾಗವನ್ನು ಕೆತ್ತಿಕೊಂಡು ಹೋಗುತ್ತವೆ. ಪ್ರಾಂತ್ಯದ ಉತ್ತರ ಗಡಿಯಲ್ಲಿ ಹರಿಯುವ ಪೊಂಗೋಲ, ಮಧ್ಯ ಪ್ರದೇಶದಲ್ಲಿ ಹರಿಯುವ ತುಗೇಲ, ಕೇಪ್ ಪ್ರಾಂತ್ಯದ ಗಡಿಗುಂಟ ಹರಿಯುವ ಉಮ್‍ಜಿûಕೂಲೂ ಮತ್ತು ಉಮ್ಟಾಮ್ವುನಾ ಇವು ಈ ಪ್ರಾಂತ್ಯದ ಪ್ರಮುಖ ನದಿಗಳು.
ವಾಯುಗುಣ: ಈ ಪ್ರಾಂತ್ಯದ ವಾಯುಗುಣ ಎತ್ತರಕ್ಕೆ ಅನುಗುಣವಾಗಿ ವ್ಯತ್ಯಾಸವಾಗಿದೆ. ದಕ್ಷಿಣಾರ್ಧಗೋಳದಲ್ಲಿರುವ ಈ ಪ್ರದೇಶದ ಉಷ್ಣತೆ ಜನವರಿಯಲ್ಲಿ ಗರಿಷ್ಠ, ಜುಲೈ ತಿಂಗಳಲ್ಲಿ ಕನಿಷ್ಠ, ಜುಲೈ ತಿಂಗಳಲ್ಲಿ ಮಾಧ್ಯ ಉಷ್ಣತೆ ಕರಾವಳಿಯಲ್ಲಿ 10 ಡಿಗ್ರಿ ಸೆಂಟಿಗ್ರೇಡ್‍ಗಿಂತ ಅಧಿಕವಾಗಿರುತ್ತದೆ; ಒಳನಾಡಿನಲ್ಲಿ 7 ಡಿಗ್ರಿ-10 ಡಿಗ್ರಿ ಸೆಂಟಿಗ್ರೇಡ್. ಕರಾವಳಿಯಲ್ಲಿ ಜನವರಿಯಲ್ಲಿ ಮಾಧ್ಯ ಮಾಸಿಕ ಉಷ್ಣತೆ ಡರ್ಬನ್‍ನಿಂದ ಉತ್ತರಕ್ಕೆ 24 ಡಿಗ್ರಿ ಸೆಂಟಿಗ್ರೇಡ್. ಒಳನಾಡಿನ ತಗ್ಗಿನಲ್ಲೂ ಜûೂಲೂಲ್ಯಾಂಡಿನಲ್ಲೂ ಮಾಧ್ಯ ಗರಿಷ್ಠ ಉಷ್ಣತೆ 29 ಡಿಗ್ರಿ ಸೆಂಟಿಗ್ರೇಡ್‍ಗಿಂತ ಅಧಿಕವಾಗಿರುತ್ತದೆ. ಕೆಲವು ವೇಳೆ 32 ಡಿಗ್ರಿ ಸೆಂಟಿಗ್ರೇಡ್‍ಗಿಂತ ಹೆಚ್ಚಿನ ಉಷ್ಣತೆ ಇರುವುದುಂಟು. ಕರಾವಳಿಯಲ್ಲಿ ಕಣಿವೆಗಳ ತಳದಲ್ಲಿ ಜುಲೈ ತಿಂಗಳಲ್ಲಿ ತೆಳ್ಳಗೆ ಮಂಜು ಬೀಳುತ್ತದೆ; ಉಳಿದ ಕಾಲದಲ್ಲಿ ಅಪರೂಪ. ಎತ್ತರದ ಪ್ರದೇಶದಲ್ಲಿ ಮೇ ಮಧ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಮಂಜು ಬೀಳುತ್ತದೆ.
ಈ ಪ್ರಾಂತ್ಯದಲ್ಲಿ ಸಾಮಾನ್ಯವಾಗಿ ಬೇಸಗೆಯಲ್ಲಿ ಮಳೆಯಾಗುತ್ತದೆ. ಆದರೆ ಕರಾವಳಿ ಪ್ರದೇಶದಲ್ಲಿ ಆಗುವ ಶೇ. 30ಕ್ಕಿಂತ ಅಧಿಕ ಭಾಗ ಚಳಿಗಾಲವನ್ನೊಳಗೊಂಡ ಅರ್ಧವರ್ಷದಲ್ಲಿ ಬೀಳುತ್ತದೆ. ಕರಾವಳಿಯಲ್ಲಿಯ ವಾರ್ಷಿಕ ಮಳೆ 1.016 ಮಿಮೀ. ನಡುನಾಡಿನಲ್ಲಿ 762 ಮಿಮೀ. ಆಗುತ್ತದೆ. ಪಶ್ಚಿಮದ ಕಡೆಗೆ ಸಾಗಿದಂತೆ, ಪ್ರಸ್ಥಭೂಮಿಯಲ್ಲಿ, ಮಳೆ 1.016 ಮಿಮೀ.ಗೆ ಏರುತ್ತದೆ. ಡ್ರೇಕನ್ಸ್‍ಬರ್ಗ್‍ನಲ್ಲಿ 1.524 ಮಿಮೀ. ಮಳೆ ಆಗುತ್ತದೆ.
ಸಸ್ಯ ಪ್ರಾಣಿ ಜೀವನ: ಕರಾವಳಿಯ ಉದ್ದಕ್ಕೂ ಹಬ್ಬಿದ 10-30 ಮೀ. ಅಗಲದ ಪಟ್ಟಿ ಉಪೋಷ್ಣವಲಯದ ಕಾಡು ಅಥವಾ ನಿತ್ಯಹಸುರಿನ ಪೊದೆಗಳಿಂದ ಕೂಡಿದೆ. ಒಳನಾಡಿಗೆ ಸಾಗಿದಂತೆ ಸಮಾನ ಪ್ರರೂಪಿ ಸಸ್ಯವರ್ಗ ಇದೆ. ಪ್ರಾಂತ್ಯದ ದಕ್ಷಿಣ ಭಾಗದ ಎತ್ತರ ಪ್ರದೇಶದಲ್ಲಿ ಅಲ್ಲಲ್ಲಿ ತೇಪೆ ಹಾಕಿದಂತೆ ಸಮಶೀತೋಷ್ಣ ವಲಯ ಕಾಡು ಇದೆ. 900-1,000 ಮೀ. ಎತ್ತರದ ನೆಲದಲ್ಲಿ ಬೆಳೆಯುವ ಸಸ್ಯವರ್ಗವಿದು. ಇನ್ನೂ ಎತ್ತರದಲ್ಲಿ ಹುಲ್ಲು ಪ್ರಧಾನ ಸಸ್ಯ. ದಕ್ಷಿಣದ ತಗ್ಗಿನ ಕಣಿವೆಗಳಲ್ಲೂ ಉತ್ತರದ ತಗ್ಗು ನೆಲದಲ್ಲೂ ಮುಳ್ಳುಕಂಟಿಗಳಿವೆ.
ಈ ಪ್ರಾಂತ್ಯದ ಉತ್ತರದಲ್ಲಿ ಉಷ್ಣವಲಯದ ಜೀವಿಗಳಾದ ಟ್ಸೆಟ್ಸಿ ನೊಣ, ಸಿಂಪಿಗ ಇರುವೆ, ಭೂತಕಪ್ಪೆ, ಕರಿಯ ಬಿಳಿಯ ಖಡ್ಗಮೃಗಗಳು, ಚಿಗರೆಗಳು ಇವೆ. ಉತ್ತರದ ಕಡೆಯಿಂದ ದಕ್ಷಿಣಕ್ಕೆ ಹಲವು ಪೂರ್ವ ಆಫ್ರಿಕನ್ ಮತ್ತು ಉಷ್ಣವಲಯದ ಹಕ್ಕಿಗಳೂ ಬಂದಿವೆ. ಉತ್ತರದ ಹಾಗೂ ದಕ್ಷಿಣದ ಪ್ರಾಣಿಗಳು ಈ ಪ್ರಾಂತ್ಯದಲ್ಲಿ ಮಿಶ್ರಗೊಂಡಿವೆ. ಉತ್ತರದ ತುದಿಯಲ್ಲಿ ನದಿಗಳಲ್ಲಿ ನೀರಾನೆ, ಮೊಸಳೆ ಮುಂತಾದವು ಇವೆ.
ಜನಜೀವನ, ಶಿಕ್ಷಣ: ಈ ಪ್ರಾಂತ್ಯದಲ್ಲಿ ವಿವಿಧ ಜನಾಂಗಗಳ ಜನರಿದ್ದಾರೆ. ಬಿಳಿಯರೂ ಕರಿಯರೂ ಅಲ್ಲದೆ ಮಿಶ್ರವರ್ಣೀಯರೂ ಭಾರತೀಯರೂ ಇದ್ದಾರೆ. ಬಿಳಿಯರು ಕಪ್ಪು ಜನರನ್ನು ಪ್ರತ್ಯೇಕಿಸಿದ್ದಾರೆ. ಬಿಳಿಯರು ಪ್ರಧಾನವಾಗಿ ಬ್ರಿಟಿಷ್ ಅಥವಾ ಡಚ್ ಮೂಲದವರು. ಆಫ್ರಿಕನ್ನರು ಮುಖ್ಯವಾಗಿ ಬಾಂಟೂ ಭಾಷೆ ಆಡುವವರು. ಬಾಂಟೂಗಳಿಗೆ ಅಲ್ಲಲ್ಲಿ ವಸತಿಗಳನ್ನು ಕಲ್ಪಿಸಲಾಗಿದೆ. ವರ್ಣದ್ವೇಷ ತೀವ್ರವಾಗಿ, ಅಶಾಂತಿಗೆ ಎಡೆಕೊಟ್ಟಿದೆ. ಬಿಳಿಯರೇ ಆರ್ಥಿಕವಾಗಿಯೂ ರಾಜಕೀಯವಾಗಿಯೂ ಬಲಿಷ್ಠರು. ನಟಾಲಿನ ಮೂರನೆಯ ಎರಡು ಭಾಗ ನೆಲ ಬಿಳಿಯರ ಒಡೆತನದಲ್ಲಿದೆ. ಅವರು ಬಹುತೇಕ ಡರ್ಬನ್‍ನಲ್ಲಿ ಮತ್ತು ಅದರ ನೆರೆಯಲ್ಲಿ ವಾಸಿಸುತ್ತಾರೆ. ದಕ್ಷಿಣ ಆಫ್ರಿಕದಲ್ಲಿರುವ ಭಾರತೀಯ ಸಂಜಾತರಲ್ಲಿ ಶೇ. 80ರಷ್ಟು ಮಂದಿ ನಟಾಲಿನಲ್ಲಿದ್ದಾರೆ. ಪ್ರಾಂತ್ಯದ ಒಟ್ಟು ಜನಸಂಖ್ಯೆಯಲ್ಲಿ ಮೂರನೆಯ ಒಂದು ಭಾಗಕ್ಕಿಂತ ಹೆಚ್ಚು ಜನರು ಪಟ್ಟಣಗಳಲ್ಲಿ ವಾಸಿಸುತ್ತಾರೆ. ಬಿಳಿಯರಲ್ಲಿ ಶೇ. 90, ವರ್ಣೀಯರಲ್ಲಿ ಶೇ. 89, ಭಾರತೀಯರಲ್ಲಿ ಶೇ. 85 ಮತ್ತು ಬಾಂಟೂಗಳಲ್ಲಿ ಶೇ. 22 ಮಂದಿ ಪಟ್ಟಣವಾಸಿಗಳು. ಡಬ್ನ್, ಪೀಟರ್‍ಮ್ಯಾರಿಟ್ಸ್‍ಬರ್ಗ್, ಲೇಡಿಸ್ಮಿತ್ ಇವು ಪ್ರಮುಖ ಪಟ್ಟಗಳು. ನಟಾಲಿನಲ್ಲಿ ಬಿಳಿಯರಿಗಾಗಿ 360 ಶಾಲೆಗಳೂ ಇತರರಿಗೆ 1,200 ಶಾಲೆಗಳೂ ಇವೆ. ಪ್ರತ್ಯೇಕ ಕಾಲೇಜುಗಳೂ ಉಂಟು.
ಆಡಳಿತ: ನಟಾಲಿನ ಆಡಳಿತಕ್ಕಾಗಿ ಒಬ್ಬ ಆಡಳಿತಗಾರನೂ ಪ್ರಾಂತೀಯ ಮಂಡಲಿಯೂ ಅದರ ಕಾರ್ಯನಿರ್ವಾಹಕ ಸಮಿತಿಯೂ ಉಂಟು. ತೆರಿಗೆ, ಶಿಕ್ಷಣ, ಆಸ್ಪತ್ರೆಗಳು, ಸ್ಥಳೀಯ ಕಾಮಗಾರಿ ಮುಂತಾದ ವಿಚಾರಗಳಲ್ಲಿ ಪ್ರಾಂತೀಯ ಸರಕಾರಕ್ಕೆ ಅಧಿಕಾರವಿದೆ.
ಆರ್ಥಿಕತೆ: ನಟಾಲಿನಲ್ಲಿ ಎರಡು ಬಗೆಯ ಆರ್ಥಿಕತೆಗಳುಂಟು. ಬಾಂಟೂಗಳದು ಜೀವನಾಧಾರ ಆರ್ಥಿಕತೆ. ದನ ಸಾಕುವುದು, ಮುಸುಕಿನ ಜೋಳ ಬೆಳೆಯುವುದು ಇವು ಇವರ ಉದ್ಯೋಗ. ಇವರು ವಾಸಿಸುವ ನೆಲ ಫಲವತ್ತಾಗಿಲ್ಲ. ಸಂಪದ್ಯುಕ್ತವಾಗಿಲ್ಲ. ಬಿಳಿಯರು ವಾಣಿಜ್ಯಾಧಾರಿತವಾದ ಪ್ರಗತಿಪರ ಕೃಷಿಯಲ್ಲಿ ನಿರತರಾಗಿದ್ದಾರೆ. ಬಿಳಿಯರಲ್ಲದವರು ಇವರಲ್ಲಿ ಕೂಲಿಗಾರರು. ಮುಖ್ಯ ಬೆಳೆ ಕಬ್ಬು.
ನಟಾಲಿನ ಕಲ್ಲಿದ್ದಲು ಉತ್ತಮವಾಧದ್ದು. ವಾರ್ಷಿಕ ಕಲ್ಲಿದ್ದಲು ಉತ್ಪಾದನೆ 1 ಕೋಟಿ ಟನ್. ವಾಯುವ್ಯದ ನ್ಯೂಕ್ಯಾಸ್‍ಲ್-ರೈಹೀಡ್-ಡಂಡೀ-ಯುಟ್ರೆಕ್ಟ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಳಿವೆ. ನಟಾಲಿನ ಶೇ. 80ರಷ್ಟು ಕಾರ್ಖಾನೆಗಳು ಡರ್ಬನ್‍ನಲ್ಲಿವೆ. ಡರ್ಬನ್‍ನಿಂದ ಪೀಟರ್‍ಮ್ಯಾರಿಟ್ಸ್‍ಬರ್ಗ್ ಮೂಲಕ ವಿಟ್‍ವಾಟರ್ಸ್‍ರ್ಯಾಂಡ್‍ಗೆ ಒಂದು ರೈಲುಮಾರ್ಗವಿದೆ. ಕರಾವಳಿಯ ರೈಲುಮಾರ್ಗಗಳಿಗೆ ಹಲವು ಕವಲುಗಳುಂಟು. ರೈಲುಮಾರ್ಗಗಳಿಗೆ ಸಮಾಂತರದಲ್ಲೂ ಒಳನಾಡಿನಲ್ಲೂ ಹಲವು ರಸ್ತೆಗಳಿವೆ. ಡರ್ಬನಿನಿಂದ ದಕ್ಷಿಣ ಆಫ್ರಿಕದ ಇತರ ನಗರಗಳಿಗೂ ಮೋಜಂಬೀಕ್ ಮತ್ತು ರೊಡೀಷಿಯಾಕ್ಕೂ ವಿಮಾನ ಹಾರಾಟವುಂಟು. (ಬಿ.ಎ.ಎಸ್.)
ಇತಿಹಾಸ: ಹಲವು ಶತಮಾನಗಳ ಹಿಂದೆ ಬಾಂಟೂವಿನ ನ್ಗುನಿ ಶಾಖೆಯ ಜನರು ಉತ್ತರದಿಂದ ಬಂದು ಇಲ್ಲಿ ನೆಲೆಸಿದರು. ಯೂರೋಪಿಯನರು ಇಲ್ಲಿ ವ್ಯಾಪಾರಕೋಠಿಯನ್ನು ಸ್ಥಾಪಿಸಿದ್ದು 1824ರಲ್ಲಿ. ಆದರೆ ಇವರು ಒಳನಾಡಿಗೆ ಹೋಗಿರಲಿಲ್ಲ. ಆಫ್ರಿಕಾನರು (ಯೂರೋಪಿಯನ್ ವಲಸೆಗಾರರು) 1837ರಲ್ಲಿ ಕೇಪ್ ಕಾಲೊನಿಯಿಂದ ಡ್ರೇಕನ್ಸ್‍ಬರ್ಗ್‍ನ ಕಣಿವೆಗಳ ಮೂಲಕ ಇಲ್ಲಿಗೆ ಬಂದರು. ಇಲ್ಲಿ ಪ್ರಬಲರಾಗಿದ್ದ ಜûೂಲೂಗಳನ್ನು 1838ರಲ್ಲಿ ಸೋಲಿಸಿ ನಟಾಲ್ ಗಣರಾಜ್ಯವನ್ನು ಸ್ಥಾಪಿಸಿದರು. 1843ರಲ್ಲಿ ಬ್ರಿಟನ್ನು ನಟಾಲನ್ನು ವಶಪಡಿಸಿಕೊಂಡಿತು. ಆಫ್ರಿಕಾನರು ಒಳನಾಡಿಗೆ ಹೋದರು. ಬ್ರಿಟನ್ನಿನಿಂದ ವಲಸೆ ಬಂದವರು ಅವರ ಸ್ಥಳದಲ್ಲಿ ನೆಲೆಸಿದರು. ಕರಾವಳಿಯ ಕಬ್ಬಿನ ತೋಟಗಳಲ್ಲಿ ಕೆಲಸ ಮಾಡಲು ಭಾರತೀಯರು 1860ರಲ್ಲಿ ಅಧಿಕಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿದರು. ಟುಗೇಲ ನದಿಯ ಉತ್ತರಕ್ಕಿರುವ ಜûೂಲೂಲ್ಯಾಂಡನ್ನು ಬ್ರಿಟಿಷರು ನಟಾಲಿಗೆ ಸೇರಿಸಿಕೊಂಡರು (1879). ನಟಾಲಿನ ವಿಸ್ತೀರ್ಣ ಬೆಳೆಯಿತು. ಬಫೆಲೊ ನದಿಯ ಉತ್ತರಕ್ಕಿರುವ ಪ್ರದೇಶ 1902ರಲ್ಲಿ ಇದಕ್ಕೆ ಸೇರಿತು. 1899-1902ರಲ್ಲಿ ಬ್ರಿಟಿಷರಿಗೂ ಡಚ್ ವಲಸೆಗಾರರ ಆಫ್ರಿಕನ್ ವಂಶಸ್ಥರಾದ ಬೋಯರರಿಗೂ ನಡುವೆ ಯುದ್ಧ ನಡೆಯಿತು. ಬ್ರಿಟಿಷರು ಅವರನ್ನು ಲೇಡಿಸ್ಮಿತ್ ಬಳಿಯಲ್ಲಿ ತಡೆದರು. 1910ರಲ್ಲಿ ನಟಾಲ್ ದಕ್ಷಿಣ ಆಫ್ರಿಕ ಒಕ್ಕೂಟದ ಪ್ರಾಂತ್ಯವಾಯಿತು. 1961ರಿಂದ ಇದು ದಕ್ಷಿಣ ಆಫ್ರಿಕ ಗಣರಾಜ್ಯದ ಒಂದು ಪ್ರಾಂತ್ಯವಾಗಿದೆ. (ಜಿ.ಆರ್.ಕೆ.)