ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಮ್ಮಾಳ್ವಾರ್

ವಿಕಿಸೋರ್ಸ್ ಇಂದ
Jump to navigation Jump to search

ತಾವು ರಚಿಸಿರುವ ಪ್ರಬಂಧಗಳ ಮಹತ್ತ್ವದಿಂದ ಆಳ್ವಾರುಗಳ ಅಗ್ರಪದವಿಗೇರಿದ ಈ ಮಹಾನುಭಾವರ ಕಾಲ ನಿಷ್ಕೃಷ್ಟವಾಗಿ ತಿಳಿಯದು; 6ನೆಯ ಶತಮಾನದ ಆದಿಭಾಗದಲ್ಲಿದ್ದರೆಂದು ಸ್ಥೂಲವಾಗಿ ಹೇಳಬಹುದು. ಕೆಲವರು ಇದನ್ನು ಎಂಟನೆಯ ಶತಮಾನದ ಆದಿಭಾಗಕ್ಕೊಯ್ಯುತ್ತಾರೆ. ವೃಷಭಮಾಸದ ವಿಶಾಖಾ ನಕ್ಷತ್ರದ ದಿವಸ ತಿರುಕ್ಕುರುಹೂರ್ (ತಿನ್ನವೆಲ್ಲಿ ಜಿಲ್ಲೆ) ಎಂಬ ಗ್ರಾಮದಲ್ಲಿ ಈ ವಿಷ್ವಕ್ಸೇನಾಂಶರು ಅವತರಿಸಿದರೆಂದು ಗುರುಪರಂಪರಾಪ್ರಭಾವದಿಂದ ತಿಳಿದುಬರುತ್ತದೆ. ಇವರ ತಂದೆ ವೆಲ್ಲಾಳ ಕುಲದ ಕಾರಿಯರ್ ಎಂಬವರು; ತಾಯಿಯ ಹೆಸರು ಉಡೈಯ ನಂಗೈಯಾರ್. ತಂದೆ ತಾಯಿಗಳು ಹರಕೆ ಹೊತ್ತು ಪಡೆದ ಈ ಮಗನಿಗೆ ಮಾರ ಎಂದು ಹೆಸರಿಟ್ಟರು. ಇವರಿಗೆ ಶಠಾರಿ, ಶಡಗೋಪ ಎಂದೂ ಹೆಸರುಂಟು. ಈ ಕೂಸು ಹುಟ್ಟಿದಾಗಿನಿಂದ ಅಳಲೂ ಇಲ್ಲ, ಉಣ್ಣಲೂ ಇಲ್ಲ; ಆದರೂ ಕಳೆಗುಂದದಿತ್ತು. ಇಂಥ ಮಗುವನ್ನು ಏನು ಮಾಡಬೇಕೆಂದು ತೋಚದೆ ಅವರು ತಮ್ಮೂರ ಹೊಳೆಯ ದಂಡೆಯ ಗುಡಿಯಲ್ಲಿ ಒಂದು ತೊಟ್ಟಿಲನ್ನು ತೂಗುಹಾಕಿ ಕೂಸನ್ನು ಅಲ್ಲಿ ಮಲಗಿಸಿ ಬಂದರು. ಕೂಸು ಯಾರ ಹಂಗೂ ಇಲ್ಲದೆ ಚೆನ್ನಾಗಿ ಬೆಳೆಯಿತು; ಎದ್ದು ಕೂತಿತು; ಕಾಲಾಡಲು ಬಂದಾಗ ನಡೆದುಕೊಂಡು ಹೋಗಿ ದೇವಾಲಯದಲ್ಲಿದ್ದ ಒಂದು ಹುಣಸೆಮರದ ದೊಗರಿನಲ್ಲಿ ನೆಲಸಿತು. ಹೀಗೆ ಸ್ವಾನುಭವದ ಆನಂದಯೋಗದಲ್ಲಿ ಹದಿನಾರು ಪ್ರಾಯ ತುಂಬುವವರೆಗೂ ಮೌನವಾಗಿದ್ದ ಈ ಮರುಳರನ್ನು ಮಧುರಕವಿ ಎಂಬ ಮುಮುಕ್ಷು ಬ್ರಾಹ್ಮಣ ಕಂಡು ಮಾತಾಡಿಸಿದರು. ಇವರಿಬ್ಬರ ಸಂಗಡಿಕೆಯಲ್ಲಿ ನಾವು ಚಾರಿತ್ರಿಕಾಂಶವನ್ನು ಮುಟ್ಟುತ್ತೇವೆ. ನಮ್ಮಾಳ್ವಾರರನ್ನು ಕಂಡು ನುಡಿಸಿದ ಕೂಡಲೆ ಮಧುರಕವಿಗಳು ತಾವು ಶ್ರೇಷ್ಠಕುಲದವರೆಂಬುದನ್ನೂ ವಿದ್ಯಾವಂತರೆಂಬುದನ್ನೂ ಕವಿತಾಸಂಪನ್ನರೆಂಬುದನ್ನೂ ಸಂಪೂರ್ಣವಾಗಿ ಮರೆತಂತೆ ತೋರುತ್ತದೆ. ತಾವು ಅರಸುತ್ತಿದ್ದ ಗುರುವನ್ನು ಈ ಶಡಗೋಪರಲ್ಲಿ ಕಂಡುಕೊಂಡು ಇವರ ಸೇವೆಗೆ ನಿಂತರು, ಮಧುರಕವಿ. ಇವರ ಪ್ರತಿಭೆಯನ್ನು ಪ್ರಚೋದಿಸಿ ಮೌನದ ಮುದ್ರೆಯನ್ನೊಡೆದು ತನ್ಮುಖೇನ ನಾಲ್ಕು ದಿವ್ಯ ಪ್ರಬಂಧಗಳನ್ನು ಹೊರತಂದು, ಮುಖಸ್ಥ ಮಾಡಿಕೊಂಡು ಕೇರಿಕೇರಿಗಳಲ್ಲಿ ಹಾಡಿ ಹರಡಿದರು. ಈ ಗುರು ಶಿಷ್ಯರ ಮಿಲನ ಸಿದ್ಧಿಬುದ್ಧಿಗಳ ಮಿಲನದಂತೆ ತುಂಬ ಮನೋಹರವಾಗಿದೆ.

ನಮ್ಮಾಳ್ವಾರರಿಂದ ಲಭ್ಯವಾಗಿರುವ ರಚನೆಗಳು ನಾಲ್ಕು : ತಿರುವಿರುತ್ತಂ (ನೂರು ಬಿಡಿ ಪದ್ಯಗಳು) ತಿರುವಾಶಿರಿಯಂ (ಏಳು ಬಿಡಿ ಪದ್ಯಗಳು) ಪೆರಿಯ ತಿರುವಂದಾದಿ (87 ಬಿಡಿ ಪದ್ಯಗಳು), ತಿರುವಾಯ್ ಮೊಳಿ (1102 ಪದ್ಯಗಳು), ಒಟ್ಟು 1296 ಬಿಡಿ ಪದ್ಯಗಳು. ತಿರುವಾಯ್ ಮೊಳಿಗೆ ಐದು ದೊಡ್ಡ ವ್ಯಾಖ್ಯಾನಗಳಿವೆ : ಶ್ರೀವೈಷ್ಣವ ಸಮಯವನ್ನರಿಯ ಬಯಸುವವರಿಗೆ ಈ ವ್ಯಾಖ್ಯಾನಗಳು ತುಂಬ ಸ್ವಾರಸ್ಯವಾಗಿವೆ. ಮೊದಲನೆಯ ವ್ಯಾಖ್ಯಾನಕ್ಕೆ ಆರಾಯಿರಪ್ಪಡಿ ಎಂದು ಹೆಸರು; ಇದನ್ನು ರಾಮಾನುಜರು ತಮ್ಮ ಅಗ್ರಶಿಷ್ಯರಾದ ತಿರುಕ್ಕುರುಕೈಪ್ಪಿರಾನ್ ಎಂಬವರಿಂದ ಬರೆಯಿಸಿದರು. ಅಲ್ಲಿಂದ ಮುಂದೆ ಮಿಕ್ಕ ನಾಲ್ಕು ವ್ಯಾಖ್ಯಾನಗಳೂ ಆದುವು. ವೇದಾಂತ ದೇಶಿಕರ್ ಎಂಬ ಆಚಾರ್ಯವರ್ಯರು ದ್ರವಿಡೋಪನಿಷತ್ ತಾತ್ಪರ್ಯ ರತ್ನಾವಳೀ ಎಂಬ ಸಂಸ್ಕೃತ ಪದ್ಯಮಾಲಿಕೆಯಲ್ಲಿಯೂ ಅಳಹಿಯ ಮಣವಾಳಜೀಯರ್ ಎಂಬ ಆಚಾರ್ಯರು ದ್ರವಿಡೋಪನಿಷತ್ಸಂಗತಿ ಎಂಬ ಪದ್ಯಮಾಲಿಕೆಯಲ್ಲಿಯೂ ತಿರುವಾಯ್ಮೊಳಿಯ ಸಾರವನ್ನು ಸಂಗ್ರಹಿಸಿದ್ದಾರೆ. ಆಧುನಿಕರಾದ ಶ್ರೀಮಾನ್ ಎಂ.ಟಿ. ನರಸಿಂಹಾಚಾರ್ಯ (ಶ್ರೀ ಕಲ್ಕಿ) ಸ್ವಾಮಿಗಳವರು ಈ ಪ್ರಬಂಧಕ್ಕೆ ಕನ್ನಡದಲ್ಲಿ ಪ್ರತಿ ಪದಾರ್ಥವನ್ನೂ ತಾತ್ಪರ್ಯವನ್ನೂ ಬರೆದು ಪ್ರತಿ ಪದ್ಯವನ್ನೂ ಸಂಸ್ಕೃತದಲ್ಲಿ ಮನೋಹರವಾಗಿ ಅನುವಾದಿಸಿದ್ದಾರೆ. ತಿರುವಾಯ್ಮೊಳಿಗೆ ಈ ಪರಿಯಲ್ಲಿ ಆಚಾರ್ಯರೆಲ್ಲರೂ ಪ್ರಾಶಸ್ತ್ಯ ಕೊಟ್ಟಿರುವುದು ತುಂಬ ಉಚಿತವೆನಿಸುತ್ತದೆ. ಜೀವಾತ್ಮನಿಗೆ ಅಚಿತ್ ಸಂಸರ್ಗದಿಂದ ಸುಖಭ್ರಾಂತಿ ಮತ್ತು ಭಗವದ್ವಿಶ್ಲೇಷಣ; ಭಗವತ್ ಸಂಶ್ಲೇಷಣದಿಂದ ಅಚಿತ್ ಸಂಗವಿಮುಕ್ತಿ ಮತ್ತು ಶಾಶ್ವತಸುಖ ಎಂಬುದನ್ನು ಮನಗಾಣಬಯಸುವವರಿಗೆ ಶಠಾರಿಮುನಿಯ ಸೂಕ್ತಿಗಳೊಂದು ರಸನಿಧಿ. ವೇದಾಂತೋದಿತಾರ್ಥಗಳಿಗೆ ಭಾಗವತ ಮಾರ್ಗದ ಭಕ್ತಿರಸವನ್ನು ಹೊಂದಿಸಿ ಒಂದು ಸುಂದರವೂ ಸಹಜವೂ ಸಾರವುಳ್ಳದ್ದೂ ಆದ ದರ್ಶನವನ್ನು ಈ ಗೀತೆಗಳು ರೂಪಿಸಿವೆ. ದಾರ್ಶನಿಕರಿಗೆ ಇಲ್ಲಿ ಸದ್ದರ್ಶನ ಸಿಕ್ಕುತ್ತದೆ, ಲೌಕಿಕ ರಸಿಕರಿಗೆ ಪ್ರತಿಭಾಸಂಪನ್ನವೂ ಸಕಲಾಲಂಕಾರಪೂರ್ಣವು ರಸಸ್ಯಂದಿಯೂ ಆದ ಕವಿತೆ ದೊರೆಯುತ್ತದೆ. ಭಕ್ತರಿಗೆ ತಮ್ಮ ನಿಷ್ಠೆ ಹೇಗಿರಬೇಕೆಂಬುದು ಸ್ಪಷ್ಟವಾಗುತ್ತದೆ. ಆಪನ್ನರಿಗೆ ನಲ್ ಮೊರೆಗಳು ಲಭಿಸುತ್ತವೆ.

ಈ ವೇದಂ ತಮಿಳ್ ಶೈದ ಮಾರನ್, ಪ್ರಪನ್ನ ಜನಕೂಟಸ್ಥರೆನಿಸಿದ ನಮ್ಮಾಳ್ವಾರರು ಕೇವಲ 35 ವರ್ಷಗಳು ಬದುಕಿದ್ದರೆಂದೂ ಇದ್ದ ಜಾಗವನ್ನು ಬಿಟ್ಟು ಕದಲಲಿಲ್ಲವೆಂದೂ ಸಂಪ್ರದಾಯ ತಿಳಿಸುತ್ತದೆ. ಆದರೆ ಇವರ ಗೀತೆಗಳಲ್ಲಿ ಅನೇಕ ದಿವ್ಯ ಸ್ಥಳಗಳ ಅರ್ಚಾವತಾರ ಮೂರ್ತಿಗಳ ಸ್ತೋತ್ರಗಳಿರುವುದರಿಂದ ಇವರು ಚೋಳ, ಪಾಂಡ್ಯ, ಕೇರಳ ದೇಶಗಳಲ್ಲಿ ಕ್ಷೇತ್ರಯಾತ್ರೆಗಳನ್ನು ಸ್ವಲ್ಪಕಾಲ ನಡೆಸಿದರೆಂದು ಊಹಿಸಬಹುದು. ಮತ್ತು ತಮ್ಮ ಪ್ರಬಂಧಗಳ ಮಹಿಮೆಯಿಂದ ಇವರು ಬೌದ್ಧ ಜೈನಾದಿ ಇತರ ಮತಗಳ ಪ್ರಾಬಲ್ಯವನ್ನು ಮುರಿದರೆಂಬುದು ಇವರಿಗೆ ಭಕ್ತರಿತ್ತ ಪರಾಂಕುಶ ಎಂಬ ಬಿರುದಿನಿಂದ ವ್ಯಕ್ತವಾಗುತ್ತದೆ.