ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಯಾಗರ ಫಾಲ್ಸ್‌

ವಿಕಿಸೋರ್ಸ್ದಿಂದ

ನಯಾಗರ ಫಾಲ್ಸ್ - ಈ ಹೆಸರಿನ ಎರಡು ಪಟ್ಟಣಗಳು ಇವೆ. ಅಮೆರಿಕದ ನ್ಯೂಯಾರ್ಕ್ ರಾಜ್ಯದ ಪಶ್ಚಿಮದ ಭಾಗದಲ್ಲಿ ಬಫಲೋ ಪಟ್ಟಣಕ್ಕೆ 27 ಕಿಮೀ. ದೂರದಲ್ಲಿ ನಯಾಗರ ನದಿಯ ಪೂರ್ವ ದಂಡೆಯ ಮೇಲಿರುವುದು ಒಂದು ಪಟ್ಟಣ. ನಯಾಗರ ಜಲಪಾತದ ಅಂಚಿನ ತಳಕ್ಕೂ ಮೇಲಕ್ಕೂ ಇದು ವ್ಯಾಪಿಸಿದೆ. ಜನಸಂಖ್ಯೆ 85,315 (1970). ಪಟ್ಟಣಕ್ಕೆ ನ್ಯೂ ಯಾರ್ಕ್ ಸೆಂಟ್ರಲ್ ರೈಲು ಮಾರ್ಗ ಹಾಗೂ ಅಮೆರಿಕನ್ ವಿಮಾನ ಮಾರ್ಗಗಳ ಸಂಪರ್ಕವಿದೆ. ಇದು ವಿದ್ಯುದ್ರಸಾಯನ ಹಾಗೂ ವಿದ್ಯುತ್ ಲೋಹ ಕೈಗಾರಿಕೆಗಳ ಕೇಂದ್ರ. ಕ್ಲೋರಿನ್, ಫ್ಲೋರಿನ್, ಕಾಸ್ಟಿಕ್ ಸೋಡ, ಅಲ್ಯೂಮಿನಿಯಂ ವಸ್ತುಗಳು, ಕಾಗದ, ಕ್ಷಿಪಣಿ ಭಾಗಗಳು, ಪ್ಲಾಸ್ಟಿಕ್ ಸಾಮಾನು ಮೊದಲಾದ ವಸ್ತುಗಳು ಇಲ್ಲಿ ತಯಾರಾಗುತ್ತವೆ. ನಯಾಗರ ಜಲಪಾತವನ್ನು ನೋಡಲು ಬರುವ ಪ್ರವಾಸಿಗಳು ಈ ಪಟ್ಟಣಕ್ಕೆ ಬರುತ್ತಾರೆ. ನಯಾಗರ ರಾಜ್ಯೋದ್ಯಾನ ಇಲ್ಲಿದೆ. ಪ್ರಾಸ್ಪೆಕ್ಟ್ ಪಾಯಿಂಟ್, ಲೂನ, ಗೋಟ್ ಐಲೆಂಡ್ ಹಾಗೂ ಇತರ ದ್ವೀಪಗಳು, ಹ್ವಿರ್ಲ್‍ಪೂಲ್ ಮತ್ತು ಡೆವಿಲ್ಸ್‍ಹೋಲ್, ಕೇವ್ ಆಫ್ ದಿ ವಿಂಡ್ಸ್, ನಯಾಗರ ಜಲಪಾತದ ಅಮೆರಿಕನ್ ಕವಲು ಇವೆಲ್ಲವೂ ಈ ರಾಜ್ಯೋದ್ಯಾನದ ಕಕ್ಷೆಯೊಳಗಿವೆ. ಇಲ್ಲಿ 1856ರಲ್ಲಿ ನಯಾಗರ ವಿಶ್ವವಿದ್ಯಾಲಯ ಸ್ಥಾಪಿತವಾಯಿತು.

ಕೆನಡದ ಆಂಟೆರಿಯೋ ಪ್ರಾಂತ್ಯಕ್ಕೆ ಸೇರಿದ ವೆಲೆಂಡ್ ಕೌಂಟಿಯಲ್ಲಿ ಈ ಹೆಸರಿನ ಇನ್ನೊಂದು ಪಟ್ಟಣ ಇದೆ. ಇದು ನಯಾಗರ ಜಲಪಾತದ ಕೆಳಗೆ, ನಯಾಗರ ನದಿಯ ಪಶ್ಚಿಮ ದಂಡೆಯ ಮೇಲೆ, ಬಫಲೋ ಪಟ್ಟಣದ ವಾಯುವ್ಯಕ್ಕೆ 29 ಕಿಮೀ. ಮತ್ತು ಟರಾಂಟೋ ಪಟ್ಟಣದ ಆಗ್ನೇಯಕ್ಕೆ 67 ಕಿಮೀ. ದೂರದಲ್ಲಿ, ಅಮೆರಿಕದಲ್ಲಿರುವ ನಯಾಗರ ಫಾಲ್ಸ್ ಪಟ್ಟಣಕ್ಕೆ ಎದುರಾಗಿ ಇದೆ. ಜನಸಂಖ್ಯೆ 65,271 (1971). ಇಲ್ಲಿರುವ ಕ್ವೀನ್ ವಿಕ್ಟೋರಿಯ ಪಾರ್ಕ್‍ನಿಂದ ನಯಾಗರ ಜಲಪಾತದ ಸುಂದರ ನೋಟವನ್ನು ಕಾಣಬಹುದು. ಪ್ರಪಂಚದಲ್ಲೆಲ್ಲ ಅತ್ಯಂತ ದೊಡ್ಡದಾದ ವಿದ್ಯುತ್ ಉತ್ಪಾದನ ಕೇಂದ್ರಗಳು ಇಲ್ಲಿವೆ. ರಸಾಯನ ವಸ್ತುಗಳು, ರಸಗೊಬ್ಬರ, ಬೆಳ್ಳಿಯ ಸಾಮಾನುಗಳು, ಕ್ರೀಡೋಪಕರಣ ಮೊದಲಾದವು ಇಲ್ಲಿ ತಯಾರಾಗುತ್ತವೆ. ಇದು 1853ರಲ್ಲಿ ಸ್ಥಾಪಿತವಾಯಿತು. 1856ರಿಂದ 1881ರವರೆಗೆ ಇದಕ್ಕೆ ಕ್ಲಿಫ್ಟನ್ ಎಂಬ ಹೆಸರಿತ್ತು. ಅಮೆರಿಕ ಮತ್ತು ಕೆನಡಗಳ ನಡುವೆ ಸಂಪರ್ಕ ಕಲ್ಪಿಸುವ ಅಂತರರಾಷ್ಟ್ರೀಯ ಮಾರ್ಗ ಈ ಪಟ್ಟಣದ ಮೂಲಕ ಸಾಗುತ್ತದೆ. (ವಿ.ಜಿ.ಕೆ.)