ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರನಾರಾಯಣ
ನರನಾರಾಯಣ
ಇವರ ವಿಷಯ ಕಾಲಿಕಾಪುರಾಣ, ದೇವಿ ಭಾಗವತ, ಮಹಾಭಾಗವತ ಮೊದಲಾದ ಗ್ರಂಥಗಳಲ್ಲಿ ಬರುತ್ತದೆ. ಅಂತೆಯೇ ವಿವರಗಳಲ್ಲಿ ಭಿನ್ನತೆಯಿದೆ.
ನರನಾರಾಯಣರು ಬ್ರಹ್ಮ ಮಾನಸಪುತ್ರನಾದ ಧರ್ಮ ಹಾಗೂ ದಕ್ಷನ ಪುತ್ರಿ ಮೂರ್ತಿ (13ನೆಯವಳು) ಇವರ ಮಕ್ಕಳು; ನರಹಿರಿಯವನು ನಾರಾಯಣ ಈತನ ತಮ್ಮ. ಇನ್ನೊಂದೆಡೆ ಇವರನ್ನು ಕಷ್ಣಾರ್ಜುನರೆಂದು ಹೇಳಿದರೆ, ಭಾಗವತದಲ್ಲಿ ಒಂದಾಗಿ ಇವರನ್ನು ವಿಷ್ಣು ಎಂದೇ ಹೇಳಿದೆ.
ಇವರನ್ನು ಪೂರ್ವದೇವಾ, ದೇವಾ ಋಷಿ, ಋಷಿಸತ್ತಮಾ ಎಂದೂ ಕರಯಲಾಗಿದೆ. ಮಹಾಮೇಧಾವಿಗಳಾದ ಇವರಿಬ್ಬರೂ ಬದರಿಕಾಶ್ರಮದಲ್ಲಿ ತಪೋನಿರತರಾಗಿದ್ದರು. ಸೃಷ್ಟಿಗೆ ಇವರೇ ಕಾರಣಕರ್ತರು. ಇವರ ತಪಸ್ಸಿನಿಂದ ಭೀತನಾದ ಇಂದ್ರ ಇವರ ತಪಸ್ಸನ್ನು ಕೆಡಿಸಲು ಅಪ್ಸರೆಯರು, ವಸಂತ ಮೊದಲಾದವರನ್ನು ಕಳುಹಿಸಿದ. ಇದನ್ನು ನರನಾರಾಯಣರು ಅರಿತರು. ನಾರಾಯಣ ತನ್ನ ತೊಡೆಯಿಂದ (ಊರು) ಅಪೂರ್ವ ಸುಂದರಿಯೊಬ್ಬಳನ್ನೂ (ಊರ್ವಶಿ) ತನ್ನ ಸೇವೆಗಾಗಿ ಸೃಷ್ಟಿಸಿದ. ಇವಳೊಡನೆ ಇನ್ನೂ ಹಲವು ಅದ್ಭುತ ಸುಂದರಿಯರನ್ನೂ ಸೃಷ್ಟಿಸಲಾಯಿತು. ಬಂದ ಅಪ್ಸರೆಯರು ಈ ಸುಂದರಿಯರನ್ನು ಕಂಡು ಚಕಿತರಾದರು. ಇವರಲ್ಲಿ ಯಾರಾದರೂ ನಿಮಗೆ ಬೇಕೆ ಎಂದು ನವನಾರಾಯಣರು ಕೇಳಲು ಅಪ್ಸರೆಯರು ಊರ್ವಶಿಯನ್ನು ಬೇಡಿ ಅವಳನ್ನು ತಮ್ಮೊಡನೆ ಕರೆದುಕೊಂಡು ಹೋಗಿ, ಇಂದ್ರನಿಗೆ ಸಕಲ ವೃತ್ತಾಂತವನ್ನೂ ತಿಳಿಸಿದರು. ನರನಾರಾಯಣರ ಬಲವನ್ನು ಕಂಡು ಇಂದ್ರ ವಿಸ್ಮಿತನಾದ.
ಒಮ್ಮೆ ಪ್ರಹ್ಲಾದನು ಬದರೀಕಾಶ್ರಮಕ್ಕೆ ಬಂದು ಸಾಟಿಯಿಲ್ಲದ ಈ ತಪಸ್ವಿಯನ್ನು ಕುರಿತು ತುಚ್ಛನಾಗಿ ಮಾತನಾಡಿದ. ಬಳಿಯಲ್ಲಿ ಆಯುಧಗಳಿದ್ದುದರಿಂದ ಅವರನ್ನು ಕಪಟಿಗಳೆಂದು ಹೀಯಾಳಿಸಿದ. ಕುಪಿತರಾದ ನರನಾರಾಯಣರು ಯುದ್ಧ ಮಾಡಿ ಪ್ರಹ್ಲಾದನನ್ನು ಸೋಲಿಸಿದರು. ಸೋತ ಪ್ರಹ್ಲಾದ ತನ್ನ ಇಷ್ಟದೇವನಾದ ವಿಷ್ಣುವನ್ನು ಪ್ರಾರ್ಥಿಸಿದ. ವಿಷ್ಣು ಕಾಣಿಸಿಕೊಂಡು, ನರನಾರಾಯಣರು ತನ್ನ ಅಂಶವೇ ಎಂದು ತಿಳಿಸಿ ಸಂತೈಸಿದ.
ನರನಾರಾಯಣರ ಆಶ್ರಮಕ್ಕೆ ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಹೋಗಿದ್ದರೆಂದು ಮಹಾಭಾರತದ ವನಪರ್ವ ತಿಳಿಸುತ್ತದೆ. ಅಲ್ಲಿ ಅವರ ಜನ್ಮ ಮತ್ತು ಕಾರ್ಯಗಳನ್ನು ಹೀಗೆ ಹೇಳಿದೆ. ನರನಾರಾಯಣರು ವಿಷ್ಣುವಿನ ಅಂಶದಿಂದ ಜನಿಸಿದರು. ಉದ್ದೇಶ ಸಹಸ್ರಕವಚನೆಂಬ ರಾಕ್ಷಸನ ನಿಗ್ರಹ. ಈ ರಕ್ಕಸನನ್ನು ಕೊಲ್ಲುವವರು 1000 ವರ್ಷ ತಪಸ್ಸು ಮಾಡಿದವರಾಗಬೇಕಿತ್ತು. ನರನಾರಾಯಣರು ತಪಸ್ಸು ಮಾಡಲು ಆರಂಭಿಸಿದರು. ಕೆಲಕಾಲಾನಂತರ ನಾರಾಯಣ ಯುದ್ಧಕ್ಕೆ ಹೋದ. ಅವನು ಹಿಂತಿರುಗಿದ ಮೇಲೆ ನರ ಹೋದ. ಹೀಗೆ ಸರದಿಯಂತೆ ಯುದ್ಧ ಹಾಗೂ ತಪಸ್ಸು ಮಾಡಿ ಸಹಸ್ರಕವಚನ 999 ಕವಚಗಳನ್ನು ಕತ್ತರಿಸಿ ಹಾಕಿದರು. ರಾಕ್ಷಸ ಸತ್ತು ಸಕವಚನಾಗಿ ಕರ್ಣನಾಗಿ ಹುಟ್ಟಿದ. ನರನಾರಾಯಣರು ಕೃಷ್ಣಾರ್ಜುನರಾದರು. ಅರ್ಜುನನಿಂದ ಕರ್ಣ ಹತನಾದ.
ಈಗ ಹಿಮಾಲಯದ ತಪ್ಪಲಿನಲ್ಲಿ ಗಂಗಾನದೀ ತೀರದಲ್ಲಿರುವ ಬದರಿಯಲ್ಲಿ ನಾರಾಯಣ ಸ್ವಾಮಿ ಮಂದಿರವಿದೆ. ಅಲ್ಲೊಂದು ಊರ್ವಶಿಕುಂಡವೂ ಇದೆಯೆಂದು ವರಾಹಪುರಾಣವು ತಿಳಿಸುತ್ತದೆ. (ಆರ್.ಎಸ್.ಎಸ್; ಬಿ.ಎನ್.ಸಿ.)