ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಮಂಡಲ

ವಿಕಿಸೋರ್ಸ್ದಿಂದ

ನರಮಂಡಲ- ಜೀವಿ ತನ್ನ ಹೊರ ಅಥವಾ ಒಳ ಆವರಣದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಗುರುತಿಸಿ ಅವಕ್ಕೆ ತಕ್ಕಂತೆ ತನಗೆ ಅನುಕೂಲವಾಗುವ ಪ್ರತಿಕ್ರಿಯೆಗಳನ್ನು ಕಲ್ಪಿಸಿ ಕ್ರಿಯೆ ಜರಗುವ ದೇಹಭಾಗಗಳಿಗೆ ಪ್ರತಿಕ್ರಿಯಾದೇಶಗಳನ್ನು ಒಯ್ಯುವ ಅಂಗಗಳ ಸಮೂಹ (ನರ್ವಸ್ ಸಿಸ್ಟ್‍ಮ್). ಪ್ರಪಂಚದಲ್ಲಿ ಇಂದು ಅಸ್ತಿತ್ವದಲ್ಲಿರುವ ಅತ್ಯಂತ ಪ್ರಾಚೀನ ಜೀವಿಗಳು ಕಾಲಾನಂತರ ವಿಕಸಿಸಿದವುಗಳಿಗಿಂತ ಸುಲಭ ರಚನೆಯುಳ್ಳವಾಗಿಯೂ ಸಣ್ಣವಾಗಿಯೂ ಇರುವುದು ವಿದಿತ. ಏಕಕೋಶಿಕವಾದ ಅಮೀಬದಲ್ಲಿ ಚಲನೆ, ದೃಷ್ಟಿ, ಆಹಾರ ಪಚನ ಮುಂತಾದವಕ್ಕೆಂದೇ ಮೀಸಲಾದ ವಿಶಿಷ್ಟ ಅಂಗಗಳಿಲ್ಲ. ಅದರ ಮೇಲ್ಮೈಯ ಯಾವ ಭಾಗವನ್ನು ಮುಟ್ಟಿ ಪ್ರಚೋದಿಸಿದರೂ ಒಂದೇ ರೀತಿಯ ಪ್ರತಿಕ್ರಿಯೆ ಉಂಟಾಗುವುದಲ್ಲದೆ ಆ ಪ್ರತಿಕ್ರಿಯೆ ಪೂರ್ತಿಯಾಗಿ ಕೋಶವನ್ನು ಆವರಿಸುತ್ತದೆ.

ವಿಕಾಸಕ್ರಮದಲ್ಲಿ ಬಹುಕೋಶಿಕ ಜೀವಿಗಳು ಉದ್ಭವಿಸಿದ ತರುವಾಯ ಕೋಶ ಕ್ರಿಯೆಗಳಲ್ಲಿ ಬಗೆಬಗೆಯ ವೈಶಿಷ್ಟ್ಯಗಳು ಉದ್ಭವಿಸಿದವು. ಉದಾಹರಣೆಗೆ ಸ್ಪಂಜಿನಲ್ಲಿ ದೇಹದಿಂದ ನೀರನ್ನು ಹೊರ ಹಾಕಲು ನರಕೋಶದಂತೆಯೂ ಸ್ನಾಯು ಕೋಶದಂತೆಯೂ ಕೂಡಿಯೇ ಕ್ರಿಯೆ ಇರುವ ವಿಶಿಷ್ಟ ಕೋಶಗಳಿವೆ. ಆದರೆ, ಇವು ಹೆಚ್ಚೂ ಕಡಿಮೆ ಒಂದಕ್ಕೊಂದು ಸಂಬಂಧವಿಲ್ಲದಂತೆ ವರ್ತಿಸುವುವು. ಸ್ಪಂಜಿಗಿಂತ ಹೆಚ್ಚು ವಿಕಸಿತವಾದ ತಟ್ಟೆ ಹುಳುಗಳಲ್ಲಿ (ಫ್ಲ್ಯಾಟ್ ವರ್ಮ್) ನಿಷ್ಕøಷ್ಟ ನರಕೋಶಗಳುಂಟು. ಅವೆಲ್ಲ ಸಂಪರ್ಕಗೊಂಡು ನರರಜ್ಜುಗಳಾಗಿವೆ. (ನರ್ವ್ ಕಾಡ್ರ್ಸ್). ಜೊತೆಗೆ ಕೆಲವು ನರಕೋಶಗಳು ಗುಂಪಾಗಿ ಸೇರಿ ಪ್ರಾಚೀನ ಮಿದುಳು ಎನ್ನಿಸಿಕೊಳ್ಳಬಲ್ಲ ಅಂಗವಾಗಿಯೂ ಮಾರ್ಪಟ್ಟಿವೆ. ಮಣ್ಣು ಹುಳುವಿನಲ್ಲಿ ಇದೇ ರೀತಿ ಇದ್ದರೂ ಮಿದುಳು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಿದೆ. ಅದರಲ್ಲಿ ಮಿದುಳಿನಂತಿರುವ ನರಕೋಶಗಳ ಗುಂಪಿನಿಂದ ಎರಡು ನರಗಳು ಹೊರಟು ಹುಳುವಿನ ಮುಂತುದಿಯನ್ನು ಸೇರುತ್ತವೆ. ಇವು ನೇತ್ರಬಿಂದುಗಳು (ಐಸ್ಪಾಟ್ಸ್). ಈ ಸ್ಥಳಗಳ ಮೇಲೆ ಬೆಳಕು ಬಿದ್ದಾಗ ಸಮಾಚಾರ ಮಿದುಳಿನೆÀಡೆಗೆ ಒಯ್ಯಲ್ಪಡುತ್ತದೆ. ನೇತ್ರಬಿಂದುಗಳು ಹೆಚ್ಚಿನ ಕ್ರಿಯೆ ಏನನ್ನೂ ತೋರಿಸಲಾರವು. ಅವು ಕಣ್ಣುಗಳಲ್ಲ. ಅವುಗಳಿಂದ ದೃಷ್ಟಿ ಲಾಭವಿಲ್ಲ. ಇವೆಲ್ಲದರಿಂದ ಅರ್ಥವಾಗುವುದು ಇಷ್ಟು ; ವಿಕಾಸ ವರ್ಧಿಸಿದಂತೆಲ್ಲ ಅಂಗಗಳಲ್ಲಿ ಜಟಿಲತೆ ಉಂಟಾಗುವುದು. ಅವುಗಳಿಗೆ ವಿಶಿಷ್ಟ ಕ್ರಿಯೆಗಳು ಇರುವುದು ಕಂಡುಬರುತ್ತದೆ. ಅವೆಲ್ಲವನ್ನೂ ನರಮಂಡಲ ಅನುಕರಿಸುತ್ತದೆ. ನರಮಂಡಲದ ವಿಕಾಸದ ಸಂಕ್ಷೇಪ ಕಥೆ ಇದೇ. ನಡುವಣ ಹಂತಗಳನ್ನು ಬಿಟ್ಟು ಉನ್ನತ ದರ್ಜೆಯ ಪ್ರಾಣಿಗಳ ನರಮಂಡಲವನ್ನು ಮುಂದೆ ವಿವರಿಸಿದೆ.

 ಮಾನವರಲ್ಲಿ ನರಮಂಡಲವನ್ನು ಕೇಂದ್ರ ನರಮಂಡಲ, (ಸೆಂಟ್ರಲ್ ನರ್ವಸ್ ಸಿಸ್ಟ್‍ಮ್) ಮತ್ತು ಸ್ವತಂತ್ರ ನರಮಂಡಲವೆಂಬ (ಆಟೋನಾಮಿಕ್ ನರ್ವಸ್ ಸಿಸ್ಟ್‍ಮ್) ಬೇರೆ ಬೇರೆ ವಿಶಿಷ್ಟ ಕ್ರಿಯೆಗಳುಳ್ಳ ಭಾಗಗಳಾಗಿ ವಿಂಗಡಿಸಿದ್ದಾರೆ. ಕೇಂದ್ರನರಮಂಡಲದಲ್ಲಿ ಮಿದುಳು, ಮಿದುಳು ಬಳ್ಳಿ (ಸ್ಪೈನಲ್ ಕಾರ್ಡ್), ನರಗಳು ಹಾಗೂ ಜ್ಞಾನೇಂದ್ರಿಯಗಳು (ಸೆನ್ಸರಿ ಆರ್ಗನ್ಸ್) ಇವೆ. ನರ ಒಮ್ಮೆಗೇ ಅನೇಕ ಸಂದೇಶಗಳನ್ನು ಒಯ್ಯಲಾರದು. ಪ್ರತಿಸಲವೂ ಒಂದು ಸಂದೇಶವನ್ನು ಮಾತ್ರ ಒಯ್ಯಬಲ್ಲದು. ಜ್ಞಾನೇಂದ್ರಿಯಗಳಿಂದ ಸಂಗ್ರಹೀತವಾಗಿ ಒಳಮುಖವಾಗಿ ಮಿದುಳಿಗೆ ಒಯ್ಯಲ್ಪಡುವ ಸಂದೇಶಗಳೂ ಮಿದುಳು, ಮಿದುಳು ಬಳ್ಳಿಗಳಿಂದ ಹೊರಟು ಹೊರಮುಖವಾಗಿ ಸ್ನಾಯುಗಳಿಗೆ ಒಯ್ಯಲ್ಪಡುವ ಸಂದೇಶಗಳೂ ವಿದ್ಯುತ್ ಸ್ಪಂದನಗಳಾಗಿ ಮಾರ್ಪಡುತ್ತವೆ. ಇವೇ ನರಪ್ರಚೋದನೆಗಳು (ನರ್ವ್ ಇಂಪಲ್ಸಸ್). ನರಪ್ರಚೋದನೆಗಳನ್ನು ಕೇಂದ್ರಕ್ಕೆ ಒಯ್ಯುವ ನರಗಳಿಗೆ ಅಭಿವಾಹಿ ಸಂವೇದನಾ ನರಗಳೆಂದೂ (ಅಫರೆಂಟ್, ಸೆನ್ಸರಿ ನರ್ವ್) ಹೊರಕ್ಕೆ ಒಯ್ಯುವ ನರಗಳಿಗೆ ಅಪವಾಹಿಚಾಲಕನರಗಳೆಂದೂ (ಇಫರೆಂಟ್, ಮೋಟರ್ ನರ್ವ್) ಹೆಸರು. ಮಿದುಳಿನಲ್ಲಾಗಲೀ ಮಿದುಳು ಬಳ್ಳಿಯಲ್ಲಾಗಲೀ ನರಗ್ರಂಥಿಯಲ್ಲಾಗಲೀ (ಗ್ಯಾನ್‍ಗ್ಲಿಯಾನ್) ಇರುವ ಪ್ರತಿಯೊಂದು ನರಕೋಶಕ್ಕೂ ತಂತುವಿನಂಥÀ ಚಾಚು (ಆ್ಯಕ್ಸಾನ್) ಉಂಟು. ಇದೇ ನರಪ್ರಚೋದನೆಯನ್ನು ಒಯ್ಯುವ ನರ. ಬಹುತೇಕ ನರಗಳು ಹೊರಹೊರಡುವುದಕ್ಕೆ ಮುನ್ನ ಮಿದುಳುಬಳ್ಳಿಯ ಮೂಲಕ ಹಾಯಬೇಕು. ಮಿದುಳು ಬಳ್ಳಿ ಬೆನ್ನುಮೂಳೆಯಲ್ಲಿ ಸುgಕ್ಷಿತವಾಗಿ ಅಡಗಿದೆ.
 ಕೇಂದ್ರ ನರಮಂಡಲದ ಮುಖ್ಯ ಭಾಗ ಮಿದುಳು. ಇದರಲ್ಲಿ ನರಕೋಶಗಳೇ ಪ್ರಧಾನ. ಇವು ಸಂಖ್ಯಾವೃದ್ಧಿಯನ್ನು ತೋರಲಾರವು.  ಆದ್ದರಿಂದ ಒಂದು ನರಕೋಶವು ಸತ್ತು ಹೋದರೆ, ಮೂಳೆ ಅಥವಾ ರಕ್ತದಲ್ಲಿ ಆಗುವಂತಲ್ಲದೇ ಅದರ ಜಾಗದಲ್ಲಿ ಇನ್ನೊಂದು ಕೋಶದ ಸೃಷ್ಟಿ ಆಗದು. ಮಿದುಳಿನಲ್ಲಿ ಬಲು ದೊಡ್ಡ ಹಾಗೂ ಮುಖ್ಯವಾದ ಭಾಗ ಮಹಾಮಸ್ತ್ತಿಷ್ಕ (ಸೆರಿಬ್ರಮ್). ತರುವಾಯ ಉಪ ಮಸ್ತಿಷ್ಕ (ಸೆರಿಬೆಲ್ಲಮ್), ಕೊನೆಗೆ ಮಿದುಳುಬಳ್ಳಿಯಾಗಿ ಲಂಬಿಸುವ ಮೆಡುಲ್ಲ ಅಬ್ಲಾಂಗೇಟ.
 ಮಾನವರ ನರಮಂಡಲ ಕ್ರಿಯೆಯಲ್ಲಿ ಮಹಾಮಸ್ತಿಷ್ಕದ ರಗಟೆಯ (ಕಾರ್ಟೆಕ್ಸ್) ಪಾತ್ರವೇ ಪ್ರಧಾನ. ಈ ರಗಟೆ ಬಲುಕಾಲವಾದ ಮೇಲೆ ವಿಕಸಿಸಿದ ಭಾಗ. ಆದ್ದರಿಂದ ಕೆಳದರ್ಜೆ ಪ್ರಾಣಿಗಳಲ್ಲಿ ಮಸ್ತಿಷ್ಕದ ರಗಟೆ ಭಾಗದ ನರಕೋಶಗಳು ಆ ಪ್ರಾಣಿಗಳ ಒಳಭಾಗದಲ್ಲಿರುವ ಕೋಶಗಳಿಗಿಂತ ಭಿನ್ನವಾಗಿಲ್ಲ. ಅಲ್ಲದೇ ರಗಟೆಯ ಮೇಲ್ಮೈ ನುಣುಪಾಗಿಯೂ ಇದೆ. ಆದರೆ, ಮಾನವರ ಮಹಾಮಸ್ತಿಷ್ಕದ ಮೇಲ್ಮೈ ವಿಶಿಷ್ಟವಾದ ಡೊಂಕುಮಡಿಕೆಗಳಿಂದ (ಗೈರೈ) ಕೂಡಿದೆ. ಇಂಥ ರಚನೆಯಿಂದ ಮೇಲ್ಮೈ ಕ್ಷೇತ್ರ ಪ್ರಮಾಣ ಹೆಚ್ಚಿ ಅಲ್ಲಿ ಗಾತ್ರದಲ್ಲಿ ಅಧಿಕ ಕೋಶಗಳು ಅಡಗಿರಲು ಸಾಧ್ಯವುಂಟು. ಮಹಾಮಸ್ತಿಷ್ಕದ ಪ್ರತಿ ಅರ್ಧಗೋಳವನ್ನೂ ನಡುಸೀಳು (ಸೆಂಟ್ರಲ್ ಸಲ್ಕಸ್) ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಕಾಣುವ ಮುಂಭಾಗಗಳಾಗಿ ವಿಭಜಿಸಿದೆ. ಮುಂಭಾಗಕ್ಕೆ ಮುಂದಿನ ಹಾಲೆ (ಫ್ರಾಂಟಲ್ ಲೋಬ್) ಎಂದೂ ಸೀಳಿನ ಹಿಂದಿರುವ ಭಾಗಕ್ಕೆ ಹೊರಹಾಲೆ (ಪೆರೈಟಲ್ ಲೋಬ್) ಎಂದೂ ಹೆಸರು. ಹೊರಹಾಲೆಗಿಂತ ಇನ್ನೂ ಹಿಂದಿರುವ ಭಾಗಕ್ಕೆ ಹಿಂದಲೆಹಾಲೆ (ಆಕ್ಸಿಪಿಟಲ್ ಲೋಬ್) ಎಂದೂ ಕೆಳ ಮತ್ತು ಪಕ್ಕದಲ್ಲಿ ಇರುವ ಭಾಗಕ್ಕೆ ಕಪೋಲಹಾಲೆ (ಟೆಂಪೋರಲ್ ಲೋಬ್) ಎಂದೂ ಹೆಸರು.

ಬಲುಮುಖ್ಯ ಅಂಗವೇ ಆದ ಮಹಾಮಸ್ತಿಷ್ಕದ ರಗಟೆ ಕೇಂದ್ರ ಅಂಚೆ ಕಚೇರಿಯನ್ನು ನೆನಪಿಗೆ ತರುವಂತೆ ಇದೆ. ಅದಕ್ಕಿಂತಲೂ ಮಿಗಿಲು ಎಂದೇ ಹೇಳಬಹುದು. ರಗಟೆಯಲ್ಲಿ ವಿಶಿಷ್ಟ ಕ್ರಿಯೆಗಳಿಗೆ ಮೀಸಲಾದ ವಿಶಿಷ್ಟ ಕ್ಷೇತ್ರಗಳಿವೆ. ಉದಾಹರಣಗೆ, ದೃಷ್ಟಿಕ್ರಿಯೆಯ ಕ್ಷೇತ್ರ ಹಿಂದಲೆಹಾಲೆಯ ಅತ್ಯಂತ ಹಿಂಭಾಗದಲ್ಲಿ ಉಪಸ್ಥಿತವಾಗಿದೆ. ಕಣ್ಣುಗುಡ್ಡೆಯಿಂದ ಹೊರಟ ನರಪ್ರಚೋದನೆ ಇಲ್ಲಿ ಅಂತ್ಯಗೊಳ್ಳುವುದು. ಈ ಸ್ಥಳ ರೋಗದಿಂದ ಹಾನಿಗೊಂಡಾಗ ಇಲ್ಲವೇ ಇದನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಿದಾಗ ವ್ಯಕ್ತಿಯ ಕಣ್ಣುಗಳು ಮಾಮೂಲಿನಂತೆ ಕ್ರಿಯಾಗತವಾಗಿದ್ದರೂ, ನರ ಮಾರ್ಗ ಅವಿಚ್ಛಿನ್ನವಾಗಿದ್ದರೂ ವ್ಯಕ್ತಿ ಕುರುಡಾಗುವುದು ನಿಜ. ಹೀಗೆಯೇ ಶ್ರವಣಕ್ಕೆ ಮೀಸಲಾದ ಸ್ಥಳ, ಸ್ಪರ್ಶಕ್ಕೆ ಮೀಸಲಾದ ಸ್ಥಳ ಇತ್ಯಾದಿ ಇವೆ. ಇವೆಲ್ಲ ಒಂದಲ್ಲ ಒಂದು ಸಂವೇದನೆಯನ್ನು ಅನುಭವ ಮಾಡಿಕೊಡುವ ಸ್ಥಳಗಳಾಗಿದ್ದರಿಂದ ಇವೆಲ್ಲಕ್ಕೂ ಒಟ್ಟಿಗೆ ಸಂವೇದನಾ ಕ್ಷೇತ್ರವೆಂದು (ಸೆನ್ಸರಿ ಏರಿಯಾ) ಹೆಸರಿದೆ. ಇದೇ ರೀತಿ ಒಂದಲ್ಲ ಇನ್ನೊಂದು ಅಂಗದ ಚಲನೆಗೆ ಕಾರಣಭೂತವಾದ ಕ್ಷೇತ್ರಗಳಿಗೆ ಚಾಲಕಕ್ಷೇತ್ರಗಳೆಂಬ (ಮೋಟರ್ ಏರಿಯಾಸ್) ಹೆಸರುಂಟು. ಮಹಾಮಸ್ತಿಷ್ಕ ಸಂವೇದನಾನುಭವ ಹಾಗೂ ಚಾಲಕಕ್ರಿಯೆಗಳ ನೆಲೆಯಾಗಿರುವುದಲ್ಲದೇ, ಯೋಚನೆ, ತರ್ಕ ಮುಂತಾದ ಉಚ್ಚ ಮಾನಸಿಕ ಕ್ರಿಯೆಗಳಿಗೆ ಹೊಣೆಯೂ ಆಗಿದೆ.

ಮಸ್ತಿಷ್ಕದ ಕಾರ್ಯಕ್ಷೇತ್ರಗಳನ್ನು ಪ್ರತ್ಯೇಕವಾಗಿ ಗುರುತಿಸಲೂ ಅವು ಯಾವ ಅಂಗಕ್ಕೆ ಸಂಬಂಧಿಸಿರುವÀವು ಎಂಬುದುನ್ನು ಪತ್ತೆ ಮಾಡಲೂ ಅನೇಕ ವಿಧಾನಗಳಿವೆ. ಇವುಗಳಲ್ಲಿ ವಿದ್ಯುತ್ತಿನಿಂದ ಮಿದುಳಿನ ನಿರ್ದಿಷ್ಟ ಸ್ಥಳವನ್ನು ಪ್ರಚೋದಿಸುವುದೂ ಒಂದು. ಮುಂದಿನ ಹಾಲೆ ಮತ್ತು ಹೊರ ಹಾಲೆಗಳನ್ನು ವಿಭಜಿಸುವ ನಡುಸೀಳಿನ ಒತ್ತಿನಲ್ಲಿ ಎರಡು ಅರ್ಧಗೋಳಗಳಲ್ಲಿಯೂ ಕಾಲು ಬೆರಳುಗಳ ಚಲನೆಗೆ ಕಾರಣವಾದ ಒಂದೊಂದು ಚಿಕ್ಕಕ್ಷೇತ್ರ ಉಂಟು. ಯಾವುದೇ ಕ್ಷೇತ್ರವನ್ನು ವಿದ್ಯುತ್ತಿನಿಂದ ಪ್ರಚೋದಿಸಿದಾಗ ದೇಹದ ವಿರುದ್ಧ ಭಾಗದ ಕಾಲು ಬೆರಳುಗಳು ಅಲುಗಾಡುತ್ತವೆ.

ಉಪಮಸ್ತಿಷ್ಕ ತಲೆಯ ಹಿಂಭಾಗದಲ್ಲಿ ಮಹಾಮಸ್ತಿಷ್ಕದ ಬುಡದಲ್ಲಿ ಇದೆ. ಇದೂ ಮಿದುಳಿನ ಭಾಗವೇ ಆಗಿದ್ದರೂ ಉಚ್ಚ ಮಾನಸಿಕ ಕ್ರಿಯೆಗಳಿಗೆ ಏನೂ ಸಂಬಂಧಪಟ್ಟಿಲ್ಲ. ಉಪಮಸ್ತಿಷ್ಕ ಮುಖ್ಯವಾಗಿ ನಿಲವಿನ ಭಂಗಿ (ಪಾಶ್ಚರ್) ಹಾಗೂ ನಡೆಯುವ ರೀತಿ ಅಥವಾ ಠೀವಿಗೆ (ಗೆಯ್ಟ್) ಹಾಗೂ ಸಮತೋಲನ ಚಲನೆಗೆ ಸಂಬಂಧಪಟ್ಟಿದೆ. ಶಸ್ತ್ರಕ್ರಿಯೆಯಿಂದ ಉಪಮಸ್ತಿಷ್ಕವನ್ನು ಕಳೆದುಕೊಂಡು ಅನಂತರ ಚೇತರಿಸಿಕೊಂಡಿರುವ ಇಲಿಯಲ್ಲಿ ಇಲ್ಲವೇ ಪಾರಿವಾಳದಲ್ಲಿ ಸಮತೋಲ ತಪ್ಪಿರುವುದೂ ಅಮಲೇರಿದವರಂತೆ ನಡೆಯುವುದೂ ನಿಸ್ಸಂದೇಹವಾಗಿ ಕಂಡುಬರುವುದು.

ಬೆನ್ನುಮೂಳೆಯಲ್ಲಿ ಮಿದುಳು ಬಳ್ಳಿಯಾಗಿ ಮುಂದುವರಿಯುವ ಮೆಡುಲ್ಲ ಅಂಬ್ಲಾಗೇಟ ಎಂಬ ಭಾಗ, ಉಸಿರಾಟ, ರಕ್ತ ಪರಿಚಲನೆ ಮುಂತಾದ ಕ್ರಿಯೆಗಳ ಮೂಲಸ್ಥಾನ. ಮೆಡುಲ್ಲ ಒಂದು ಪ್ರತ್ಯೇಕ ಅಂಗವಾಗಿರದೇ ಮೇಲೆ ಮಿದುಳಿನ ಬೇರೆ ಭಾಗಗಳಿಗೆ ಸೇರಿಸುವ ಮಧ್ಯ ಮಸ್ತಿಷ್ಕದೊಡನೆ (ಮಿಡ್ ಬ್ರೆಯ್ನ್) ಅಖಂಡವಾಗಿದೆ. ಮೆಡುಲ್ಲ, ಮಧ್ಯ ಮಸ್ತಿಷ್ಕಗಳಿಗೆ ಒಟ್ಟಿಗೆ ಮಿದುಳು ಕಾಂಡ (ಬ್ರೆನ್ ಸ್ಟೆಮ್) ಎಂದು ಹೆಸರು. ಇದರ ಅಗ್ರಭಾಗ ತೆಲಮಸ್. ಇದೊಂದು ರಿಲೇಸ್ಟೇಶನ್ ಇದ್ದ ಹಾಗೆ ಸಂವೇದನಾನುಭವ ಕ್ರಿಯೆಯಲ್ಲಿ ತೆಲಮಸ್ ಮತ್ತು ಮಹಾಮಸ್ತಿಷ್ಕದ ರಗಟೆಗಳು ಜಂಟಿಯಾಗಿ ಒಂದೇ ಅಂಗದಂತೆ ಕೆಲಸ ಮಾಡುತ್ತವೆ ಎಂದು ಈಗ ನಂಬಲಾಗಿದೆ. ತೆಲಮಸ್ಸಿನ ಅಡಿಯಲ್ಲಿ ಇರುವುದು ಹೈಪೋತೆಲಮಸ್. ಇದು ಹಸಿವು, ನೀರಡಿಕೆ ಮುಂತಾದ ಒಳಾಂಗಗಳ ಕಾರ್ಯಾಚರಣೆಯ ನಿಯಂತ್ರಣದಲ್ಲಿ ಉದ್ಯುಕ್ತವಾಗಿದೆ. ಉದಾಹರಣೆಗೆ ಹಸಿವಾದಾಗ ವಾಸ್ತವವಾಗಿ ಜಠÀರದ ಸ್ನಾಯುಗಳು ಮೇಲಿಂದ ಮೇಲೆ ಸಂಕೋಚಿಸುತ್ತ ತೀವ್ರಕ್ಷುದ್ಬಾಧೆಯನ್ನು ಉಂಟುಮಾಡುವುವು. ಜಠರ ಸ್ನಾಯುಗಳ ಸಂಕೋಚನೆಯೂ ಕ್ಷುದ್ಬಾಧೆಯೂ ಹೈಪೋತೆಲಮಸ್ಸಿನಲ್ಲಿರುವ ನರಕೇಂದ್ರಗಳಿಂದ (ನ್ಯೂಕ್ಲಿಯೈ) ನಿಯಂತ್ರಿತವಾದವು. ಈ ನರಕೇಂದ್ರಗಳನ್ನು ಪ್ರಚೋದಿಸಿದರೆ, ಜಠರದ ಸ್ನಾಯು ಸಂಕೋಚನವÉೀ ಅಲ್ಲದೇ ಹಸಿವೂ ಕಡಿಮೆ ಆಗುತ್ತದೆ. ಈ ಕೇಂದ್ರಗಳಿಗೂ ನರಮಂಡಲದ ಇತರ ಭಾಗಗಳಿಗೂ ಇರುವ ಸಂಪರ್ಕ ಕಡಿಯಲ್ಪಟ್ಟರೆ ಜಠರದ ಸಂಕೋಚನಗಳು ಇದ್ದಕ್ಕಿದ್ದಂತೆ ಹೆಚ್ಚುವುವಲ್ಲದೇ ಮುಕ್ಕಿರಿದು ತಿನ್ನುವಂತೆ ಕೂಡ ಆಗುತ್ತದೆ. ಇಂಥ ಸ್ಥಿತಿಯಲ್ಲಿರುವ ಪ್ರಾಣಿಗಳು ಅವುಗಳ ಗಾತ್ರದ ಮೂರರಷ್ಟು ಆಹಾರವನ್ನು ಮುಕ್ಕÀಬಹುದು. ಭಾವೋದ್ರೇಕವನ್ನು ಹೊರಪಡಿಸಲು ಕೂಡ ಹೈಪೋತೆಲಮಸ್ ಕಾರಣವಾಗಿದೆ. ಹೈಪೋತೆಲಮಸ್ಸಿನ ನಿರ್ದಿಷ್ಟ ಭಾಗಗಳನ್ನು ವಿದ್ಯುತ್ತಿನಿಂದ ಪ್ರಚೋದಿಸಿದಾಗ ರೇಗುವುದು, ಕೋಪಗೊಳ್ಳುವುದು ಇತ್ಯಾದಿ ಹೊರಸೂಚನೆಗಳು ಕಂಡುಬರುತ್ತವೆ. ಇಂಥ ಸ್ಥಿತಿಯಲ್ಲಿರುವ ಬೆಕ್ಕು ಕಮಾನಿನಂತೆ ಬೆನ್ನು ಬಗ್ಗಿಸಿ, ಕೂದಲನ್ನು ನಿಮಿರಿಸಿ, ಹಲ್ಲು ಕಡಿದು ಕೋಪದಿಂದ ಗುರುಗುಟ್ಟುವುದುಂಟು.

ಸ್ವತಂತ್ರ ನರಮಂಡಲ : ನಾವು ಬಾಹ್ಯ ಪರಿಸ್ಥಿತಿಗೆ (ಎಕ್ಸ್‍ಟರ್ನಲ್ ಎನ್ವೈರನ್‍ಮೆಂಟ್) ಒಗ್ಗಿಕೊಳ್ಳಲು ನಮಗೆ ಅಗತ್ಯವಾದ ಹೊಂದಾಣಿಕೆಗಳು ಕೇಂದ್ರ ನರಮಂಡಲದ ಆಣತಿಗಳಂತೆ ಜರಗುತ್ತವೆ. ಉದಾಹರಣಾಗೆ ಕಣ್ಣಿನ ಮೇಲೆ ಬಿಸಿಲು ಬಿದ್ದಾಗ ತಲೆ ಒತ್ತಟ್ಟಿಗೆ ತಿರುಗುವುದು ಕೇಂದ್ರ ನರಮಂಡಲದ ಕ್ರಿಯೆಯಿಂದ. ಹೀಗೆಯೇ ನಾವು ಬಾಹ್ಯಾವರಣದ ಪ್ರಚೋದನೆಗಳಿಗೆ ನೂರಾರು ರೀತಿಯಲ್ಲಿ ಹೊಂದಿಕೊಳ್ಳುತ್ತೇವೆ. ಬಾಹ್ಯಾವರಣದಂತೆಯೇ ಗಣನೆಗೆ ತೆಗೆದುಕೊಳ್ಳಬೇಕಾದುದು ಆಂತರಿಕಾವರಣ. ಅಪಾಯದಿಂದ ಪಾರಾಗಲೆಂದು ಓಡಿ ಹೋಗುವಾಗ ಕೈಕಾಲು ಮುಂಡಗಳ ಸ್ನಾಯುಗಳು ಹೆಚ್ಚಾಗಿ ಕೆಲಸ ಮಾಡಬೇಕಾಗಿ ಬಂದು ರಕ್ತ ಒದಗಿಸುತ್ತಿರುವ ಶಕ್ತಿ ಮೂಲವಸ್ತು ಸಾಲದೇ ಹೋಗುತ್ತದೆ. ಆದ್ದರಿಂದ ಇಂಥ ವೇಳೆ ಅಗತ್ಯವಾದಷ್ಟು ಮೂಲವಸ್ತುವನ್ನು ಸರಬರಾಜು ಮಾಡಲು ಎದೆಗುಂಡಿಗೆ ತ್ವರೆಯಿಂದ ಮಿಡಿಯಬೇಕು ಮತ್ತು ಗ್ಲೈಕೋಜೆನ್ ಗ್ಲೂಕೋಸ್ ಪರಿವರ್ತನೆಗೊಂಡು ಯಕೃತ್ತಿನಿಂದ ಬಿಡುಗಡೆ ಆಗಬೇಕು. ಇಷ್ಟೇ ಅಲ್ಲ, ಹೆಚ್ಚುಹೆಚ್ಚಾಗಿ ಶೇಖರಣೆಗೊಳ್ಳುವ ಇಂಗಾಲದ ಡೈಆಕ್ಸೈಡನ್ನು ಫುಪ್ಪುಸಗಳು ವಿಸರ್ಜಿಸಲೂ ಬೇಕು. ಇವಕ್ಕೆಲ್ಲ ಅಗತ್ಯ ಪ್ರಚೋದನೆಗಳು ದೇಹದ ಒಳಗೇ ಅಂದರೆ, ಅಂಗಗಳ ಆಂತರಿಕಾವರಣದಲ್ಲಿ ಉದ್ಭವಿಸುತ್ತವೆ. ಅಂದರೆ ಓಡುವುದರಿಂದ ದೇಹದ ಆಂತರಿಕಾವರಣದಲ್ಲಿ ಪ್ರಚೋದನಾಸರಪಣಿಯೇ ಸೃಷ್ಟಿ ಆಗುತ್ತದೆ. ದೇಹದ ಯಾವುದೋ ಅಂಗ ಕ್ರಿಯೆ ಹಠಾತ್ತಾಗಿ ಹೆಚ್ಚಾಗಬಹುದು. ಇಲ್ಲವೇ ಕಡಿಮೆ ಆಗಬಹುದು. ಇದರಿಂದ ಸಂಬಂಧಪಟ್ಟ ಇತರ ಅಂಗಗಳಲ್ಲಿ ಆಯ ತಪ್ಪಿದಂತಾಗಿ ಅವು ಶೀಘ್ರವಾಗಿ ಸ್ವಪ್ರಯತ್ನದಿಂದಲೇ ಸರಿ ಹೊಂದಿಸಿಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಸ್ವತಂತ್ರ ನರಮಂಡಲದ ಕ್ರಿಯೆ ವ್ಯಕ್ತವಾಗುವುದು. ಸ್ವತಂತ್ರ ನರಮಂಡಲ ಕೇಂದ್ರ ನರಮಂಡಲದಿಂದ ಪೂರ್ತಿ ನಿರಂಕುಶವಾಗಿಲ್ಲದಿದ್ದರೂ ಬಲುಮಟ್ಟಿಗೆ ನಿರಂಕುಶಿಯಾಗಿ ಕೆಲಸ ಮಾಡಬಲ್ಲದು.

ಜಠರ, ಯಕೃತ್ತು ಮುಂತಾದ ಆಂತರಿಕಾಂಗಗಳನ್ನು ಪೂರೈಸುವ ಸ್ವತಂತ್ರ ನರಮಂಡಲದಲ್ಲಿ ಸಂವೇದಕ ಹಾಗೂ ಅನುಸಂವೇದಕ ಎಂಬ ಎರಡು ಭಾಗಗಳುಂಟು. ಸಾಮಾನ್ಯವಾಗಿ ಇವೆರಡೂ ವಿಭಾಗಗಳು ಪರಸ್ಪರ ವಿರುದ್ಧವಾಗಿ ಕಾರ್ಯಾಚರಣೆ ಮಾಡುವುವು. ಉದಾಹರಣೆಗೆ ಸಂವೇದಕ ನರಗಳ ಪ್ರಭಾವದಿಂದ ಗುಂಡಿಗೆಯ ಮಿಡಿತದ ದರ ಹೆಚ್ಚುತ್ತದೆ ಮತ್ತು ಪಚನಕ್ರಿಯೆ ಕಡಿಮೆ ಆಗುತ್ತದೆ. ಆದರೆ ಅನುಸಂವೇದಕ ನರಗಳ ಪ್ರಭಾವಗಳು ಗುಂಡಿಗೆಯ ಮಿಡಿತದ ದರವನ್ನು ಕಡಿಮೆ ಮಾಡಿ, ಪಚನ ಕ್ರಿಯೆಯನ್ನು ವೃದ್ಧಿಸುವಂಥವು. ಆಂತರಿಕಾಂಗಗಳು ಸದಾ ಒಂದು ನಿರ್ದಿಷ್ಟ ಮಟ್ಟದ ಚಟುವಟಿಕೆ ತೋರುವುದೂ ಕಾಲಕ್ಕೆ ಅನುಸಾರವಾಗಿ ಈ ಚಟುವಟಿಕೆ ಮಟ್ಟವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುವುದೂ ಈ ರೀತಿ ಸಾಧ್ಯವಾಗಿದೆ. ಸ್ವತಂತ್ರ ನರಮಂಡಲ ತಾನಾಗಿಯೇ ಕೆಲಸ ಮಾಡುವುದರ ಜೊತೆಗೆ ಹಾರ್ಮೋನುಗಳ ನೆರವಿನಿಂದ ಶರೀರ ಏಕೈಕ ಸಂಸ್ಥೆಯಾಗಿ ವರ್ತಿಸುವಂತೆ ಮಾಡಿ ಅನೇಕಾಂಗಗಳ ವಿವಿಧ ಕ್ರಿಯೆಗಳು ಏಕೀಭವಿಸುವಂತೆ ಕೂಡ ಮಾಡುತ್ತದೆ.

(ಎನ್.ಎಂ.ಯು)