ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಮಂಡಲಶಾಸ್ತ್ರ, ತುಲನಾತ್ಮಕ

ವಿಕಿಸೋರ್ಸ್ದಿಂದ

ನರಮಂಡಲಶಾಸ್ತ್ರ, ತುಲನಾತ್ಮಕ

ಪ್ರಾಣಿಗಳು ಹೆಚ್ಚು ಹೆಚ್ಚು ವಿಕಾಸವಾದಂತೆ ಅವುಗಳ ನರಮಂಡಲಗಳ ರಚನೆ ಮತ್ತು ಕಾರ್ಯಾಚರಣೆಯಲ್ಲಿ ಹೆಚ್ಚುತ್ತಿರುವ ಜಟಿಲತೆಗಳನ್ನು ಒಂದರೊಡನೊಂದನ್ನು ಹೋಲಿಸಿ ಪಡೆಯುವ ಜ್ಞಾನ (ಕಂಪ್ಯಾರಟಿವ್ ನ್ಯೂರಾಲಜಿ). ಅತ್ಯಲ್ಪ ವಿಕಸಿತ ಆದಿಪ್ರಾಣಿವರ್ಗ ಮೊದಲ್ಗೊಂಡು ಮಾನವನವರೆಗೂ ಜೀವನಕಾರ್ಯಗಳಿಗೆ ಆವಶ್ಯಕವಾದ ಬೌದ್ಧಿಕ ಚಟುವಟಿಕೆಗಳೆಲ್ಲವೂ ನರಮಂಡಲದ ಪ್ರಭಾವದಿಂದಲೇ ನಡೆಯುವುದಾಗಿದೆ. ಆವರಣದ ವ್ಯತ್ಯಾಸಗಳಿಗೆ ಅನುಕೂಲವಾಗಿ ಹೊಂದಿಕೊಳ್ಳುವುದು ಜೀವಿಗಳ ಸಹಜಗುಣ. ಈ ವ್ಯತ್ಯಾಸಗಳು ಜೀವಿಗಳ ಮೇಲೆ ಪ್ರಚೋದಕಗಳಾಗಿ ಪರಿಣಮಿಸುವುದರಿಂದ ಅವುಗಳಲ್ಲಿ ತಕ್ಕ ಪ್ರತಿಕ್ರಿಯೆಗಳು, ಬಹುತೇಕವಾಗಿ ಅವುಗಳಿಗೆ ಸುಖವನ್ನು ಉಂಟುಮಾಡುವ ಪ್ರತಿಕ್ರಿಯೆಗಳಂತೆಯೇ ಕಂಡುಬರುತ್ತವೆ.

ಆವರಣದ ವಿವಿಧ ವ್ಯತ್ಯಾಸಗಳು ಅರ್ಥಾತ್ ವಿವಿಧ ಪ್ರಚೋದನೆಗಳು ದೇಹದ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಪ್ರತಿಕ್ರಿಯೆಯನ್ನು ಉಂಟುಮಾಡುವುವು. ಈ ಸ್ಥಳಗಳಲ್ಲಿ ಪ್ರಚೋದನೆಯನ್ನು ಗ್ರಹಿಸಲು ವಿಶೇಷ ಕೋಶಗಳು ನಿರ್ಮಿತವಾಗಿರುತ್ತವೆ. ಇವುಗಳಿಗೆ ಗ್ರಾಹಿಗಳೆಂದು ಹೆಸರು. ಪ್ರಾಣಿಗಳಲ್ಲಿ ವಿವಿಧ ಗ್ರಾಹಿಗಳು ಸ್ಪರ್ಶನ, ಉಷ್ಣತಾವ್ಯತ್ಯಾಸ ರಾಸಾಯನಿಕ ಪ್ರಚೋದನೆ, ನೋವು, ಸ್ನಾಯುಸಂಕೋಚನಗಳನ್ನು ಗ್ರಹಿಸುತ್ತವೆ. ಇಂಥ ಗ್ರಾಹಿಗಳು ಸಾಮಾನ್ಯವಾಗಿ ಪ್ರಾಣಿಗಳ ಮೈಮೇಲೆಲ್ಲ ಇರುತ್ತವೆ. ಇವುಗಳಲ್ಲದೆ ಮೂಗು, ಕಣ್ಣು, ಕಿವಿ, ನಾಲಗೆ ಈ ಸ್ಥಳಗಳಲ್ಲಿ ವಾಸನೆ, ಬೆಳಕು, ಶಬ್ದ, ರುಚಿ ಇವು ಅನುಕ್ರಮವಾಗಿ ಗ್ರಹಿಸಲ್ಪಡುತ್ತವೆ. ಇಂಥ ವಿಶೇಷ ಪ್ರಚೋದನೆಗಳನ್ನು ಗ್ರಹಿಸುವ ದೇಹ ಭಾಗಗಳಿಗೆ ಅಂದರೆ ಮೂಗು ವಗೈರೆ ಅಂಗಗಳಿಗೆ ವಿಶೇಷ ಜ್ಞಾನೇಂದ್ರಿಯಗಳೆಂದು (ಸ್ಪೆಶಲ್ ಸೆನ್ಸಸ್) ಹೆಸರು.

ಗ್ರಾಹೀಕೋಶದಲ್ಲಿ ಪ್ರಚೋದನೆಯಿಂದ ಉಂಟಾದ ಪ್ರತಿಕ್ರಿಯೆ ಸಂಘಟ್ಟಿತ ಸ್ಥಳದಿಂದ ಹರಡಿ ದೂರದಲ್ಲಿರುವ ಇತರ ಗ್ರಾಹಿಗಳನ್ನು ಪ್ರೇರೇಪಿಸುತ್ತದೆ. ಇಂಥ ಹರಡುವಿಕೆಗೆ ಸಂವಹನಸಾಮಥ್ರ್ಯವೆಂದು ಹೆಸರು. ಪ್ರಚೋದನೆಗೆ ಪ್ರತಿಕ್ರಿಯೆ ತೋರುವಂತೆಯೇ ಸಂವಹನಸಾಮಥ್ರ್ಯ ಕೂಡ ಎಲ್ಲ ಕೋಶಗಳ ಸಾಮಾನ್ಯ ಲಕ್ಷಣ. ಆದರೆ ನರಕೋಶಗಳಲ್ಲಿ ಮತ್ತು ನರಗಳಲ್ಲಿ ಪ್ರತಿಕ್ರಿಯಾಸಾಮಥ್ರ್ಯ ಹಾಗೂ ಸಂವಹನಸಾಮಥ್ರ್ಯ ಉತ್ತಮತಮ. ಅತ್ಯಂತ ಕೆಳಮಟ್ಟದ ಪ್ರಾಣಿಗಳು ಏಕಕೋಶಿಕಗಳು, ಕೋಶದಲ್ಲಿ ಮೋಟೋರಿಯಮ್ ಎಂಬ ಸ್ಥಳದಿಂದ ತಂತುಗಳು ಕೋಶದ ಎಲ್ಲ ಭಾಗಗಳಿಗೂ ಹಬ್ಬಿರುತ್ತದೆ. ಇದರಿಂದ ಪ್ರಚೋದನೆ ಕೋಶದೊಳಗೆಲ್ಲ ಹರಡಿ ಜೀವಿ ಚಲಿಸಲು ಸಾಧ್ಯವಾಗುತ್ತದೆ. ಜೆಲ್ಲಿಮೀನು ಎಂಬ ಜಲಪ್ರಾಣಿಯಲ್ಲಿ ಗ್ರಾಹಿಕೋಶಗಳೇ ಕಾರ್ಯಕಾರೀ ಕೋಶಗಳಾದ್ದರಿಂದ ಅವೇ ಆಹಾರ ಸ್ವೀಕರಣೆ ಮತ್ತು ಚಲನೆಗಳನ್ನು ನಡೆಸುತ್ತವೆ. ಸೀ ಅನಿಮೋನ್ ಎಂಬ ಸ್ವಲ್ಪ ಹೆಚ್ಚು ವಿಕಸಿತವಾದ ಪ್ರಾಣಿಯಲ್ಲಿ ಕಾರ್ಯಕಾರಿಯಾಗಿ ಬೇರೆಯಾಗಿಯೇ ಸ್ನಾಯುಗಳು ಆಗಲೇ ಉದ್ಭವಿಸಿರುತ್ತದೆ. ಗ್ರಾಹಿಕೋಶಗಳು ಪ್ರಾಣಿಯ ಅಂಕಗಳಿದ್ದು (ಟೆಂಟಕಲ್ಸ್) ಆಹಾರ ಮತ್ತು ಇತರ ಸಂವೇದನೆಗಳಿಂದ ಪ್ರಚೋದಿತವಾಗುತ್ತವೆ. ಇವುಗಳ ಪ್ರತಿಕ್ರಿಯೆಯ ಫಲವಾಗಿ ಆ ಅಂಗಕದ ಸ್ನಾಯುವಿಗೇ ಅಲ್ಲದೆ ಎಲ್ಲ ಅಂಗಕಗಳ ಸ್ನಾಯುಗಳಿಗೂ ಪ್ರಚೋದನೆ ಸಂವಹನಿಸುವಂತೆ ಏರ್ಪಟ್ಟಿದೆ. ಇದರಿಂದ ಎಲ್ಲ ಅಂಗಕಗಳೂ ಕಾರ್ಯಕಾರಿಗಳಾಗಿ, ಬಗ್ಗಿ ಆಹಾರವನ್ನು ಬಾಯಿಯೊಳಕ್ಕೆ ದಬ್ಬುತ್ತವೆ. ಎರೆಹುಳು ಮತ್ತು ಕೀಟಗಳಲ್ಲಿ ತಲೆಭಾಗದ ನರಕೇಂದ್ರಗಳು ಪ್ರಮುಖವಾಗಿ ಅತ್ಯಲ್ಪ ವಿಕಸಿತವಾದ ಮಿದುಳಿನಂತೆ (ಮಸ್ತಿಷ್ಕದಂತೆ) ವರ್ತಿಸುತ್ತವೆ. ಇವುಗಳಿಂದ ಹೊರಟ ಎರಡು ನರತಂತುಗಳು ಶರೀರದ ಉದ್ದಕ್ಕೂ ಪಸರಿಸಿವೆ. ಖಂಡದೇಹಿಗಳಾದ (ಸೆಗ್‍ಮೆಂಟೆಡ್ ಬಾಡಿ) ಈ ಪ್ರಾಣಿಗಳಲ್ಲಿ ಪ್ರತಿಯೊಂದು ಖಂಡದಲ್ಲಿಯೂ ಬೆನ್ನಿನ ಕಡೆ ತಳಗಡೆ ಎರಡೆರಡು ನರಗ್ರಂಥಿಗಳಿದ್ದು ಅವುಗಳ ನಡುವೆಯೂ ನರತಂತುಗಳೊಡನೆಯೂ ಸಂಪರ್ಕವಿರುತ್ತದೆ. ಆದ್ದರಿಂದ ಯಾವ ಖಂಡದಲ್ಲಿ ಸಂವೇದನೆ ಉದ್ಭವವಾದರೂ ನರಗ್ರಂಥಿಗಳು, ನರತಂತುಗಳು, ಮಿದುಳು ಇವುಗಳ ಮೂಲಕ ದೇಹದ ಎಲ್ಲ ಸ್ನಾಯುಗಳಿಗೂ ಪ್ರಚೋದನೆ ಒಯ್ಯಲ್ಪಟ್ಟು ಕ್ರಮಬದ್ಧ ಪ್ರತಿಕ್ರಿಯೆ ಜರುಗುವಂತೆ ಏರ್ಪಟ್ಟಿದೆ.

ಹೆಚ್ಚು ವಿಕಸಿತವಲ್ಲದ ಕೆಳದರ್ಜೆ ಪ್ರಾಣಿಗಳ ಒಂದು ವೈಶಿಷ್ಟ್ಯವೆಂದರೆ ಸಹಜಪ್ರವೃತ್ತಿಗಳು (ಇನ್‍ಸ್ಟಿಂಕ್ಟ್ಸ್), ಇವು ಮೇಲೆ ವಿವರಿಸಿರುವ ಪ್ರಚೋದನ ಪ್ರತಿಕ್ರಿಯೆಗಳಿಗಿಂತ ಮೇಲ್ಮಟ್ಟದ ಕಾರ್ಯಸಾಧಕಗಳು, ಅವಶ್ಯಕ ಪ್ರಚೋದನೆ ಇದ್ದರೆ ಸಾಕು. ಅದಕ್ಕೆ ಅನುಕೂಲವಾದ, ಅನೇಕ ಜಟಿಲವಾದ, ಕಾರ್ಯಗಳು ಕೂಡಲೆ ಆಚರಣೆಗೆ ಬರುತ್ತವೆ. ಸಹಜಪ್ರವೃತ್ತಿ ಆಜನ್ಮ ಕ್ರಿಯೆ. ಶಿಕ್ಷಣವಿಲ್ಲದೆ ವ್ಯಕ್ತವಾಗುವಂಥದು. ಉದಾಹರಣೆಗೆ ಜೇನುಗೂಡು ಕಟ್ಟುವುದು, ನಾಯಿಗಳು ಹೊಸಬರು ಬಂದೊಡನೆ ಬೊಗಳುವುದು, ಕರುಗಳು ಹುಟ್ಟಿದ ಸ್ವಲ್ಪ ಹೊತ್ತಿನಲ್ಲೆ ಮೊಲೆಹಾಲನ್ನು ಸೇವಿಸುವುದು ಇತ್ಯಾದಿ. ಸಹಜಪ್ರವೃತ್ತಿಯ ಅವಶಿಷ್ಟ ಮಾನವನಲ್ಲಿಯೂ ಇದೆ- ಮಗು ಹುಟ್ಟಿದ ಕೂಡಲೇ ಅಳುವುದು, ಹುಟ್ಟಿದ ಕೆಲವೇ ಮಿನಿಟುಗಳಲ್ಲಿ ಸ್ತನಾಗ್ರವನ್ನೋ ಬೆರಳುತುದಿಯನ್ನೋ ಬಾಯೊಳಗೆ ಇಟ್ಟರೆ ಚೀಪುವುದು, ಇತ್ಯಾದಿ.

ಕಶೇರುಕಗಳಲ್ಲಿ ನರಮಂಡಲದ ರಚನೆ ಹೆಚ್ಚು ಜಟಿಲವಾಗಿದೆ, ಕಾರ್ಯಶೀಲತೆ ಹೆಚ್ಚು ಕ್ಲಿಷ್ಟವಾಗಿದೆ. ಈ ನರಮಂಡಲದ ಅತಿಮುಖ್ಯಭಾಗಗಳೆಂದರೆ ತಲೆಬುರುಡೆಯೊಳಗೆ ಅಡಗಿರುವ ಮಿದುಳು ಮತ್ತು ಬೆನ್ನು ಮೂಳೆಯ ತೋಡಿನಲ್ಲಿ ಅಡಗಿರುವ ಮಿದುಳುಬಳ್ಳಿ. ಮಿದುಳು ಅಗ್ರಭಾಗ (ಫೋರ್ ಬ್ರೆಯ್ನ್), ಅಂತರಭಾಗ (ಬಿಟ್‍ವೀನ್ ಬ್ರೆಯ್ನ್), ಮಧ್ಯಭಾಗ (ಮಿಡ್ ಬ್ರೆಯ್ನ್), ಉಪಮಿದುಳು ( ಸೆರಿಬೆಲ್ಲಮ್) ಮತ್ತು ಅಂತ್ಯಭಾಗ (ಮೆಡ್ಯುಲ್ಲ ಆಬ್ಲಾಂಗೇಟ) ಈ ಭಾಗಗಳನ್ನು ಒಳಗೊಂಡಿದೆ. ವಿವಿಧ ಪ್ರಾಣಿಗಳ ಚರ್ಯೆಗೆ ತಕ್ಕಂತೆ ಈ ಭಾಗಗಳ ಗಾತ್ರ ಮತ್ತು ಕಾರ್ಯಶೀಲತೆಗಳಲ್ಲಿ ವ್ಯತ್ಯಾಸ ಉಂಟು. ಮಿದುಳು ಬಳ್ಳಿ ಸಾಧಾರಣವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವ ಭಾಗವಾಗಿದ್ದರೂ ನಿರ್ದಿಷ್ಟ ವೇಳೆಗಳಲ್ಲಿ ಅದು ಮಿದುಳಿನಿಂದ ಪ್ರಭಾವಿತವಾಗುತ್ತಲೇ ಇರುವುದು. ಕಶೇರುಕ ಪ್ರಾಣಿಗಳಲ್ಲಿ ಹೆಚ್ಚು ಹೆಚ್ಚು ವಿಕಾಸವಾಗುತ್ತ ಇಂಥ ಪ್ರಭಾವ ಹೆಚ್ಚುತ್ತಲೇ ಹೋಗುತ್ತದೆ. ಮಾನವನಲ್ಲಿ ಮಿದುಳು ಬಳ್ಳಿ ಸಾಧಾರಣವಾಗಿ ಮಿದುಳಿನ ಹತೋಟಿಯಲ್ಲೆ ಕೆಲಸ ಮಾಡುವುದು. ನೇರವಾಗಿ ಮಿದುಳು ಬಳ್ಳಿಯ ಪ್ರತಿಕ್ರಿಯೆ ಮಾನವನಲ್ಲಿ ಕಂಡುಬರುವುದು ಅಪರೂಪ.

ಮಿದುಳಿನಲ್ಲಿ ತೊಗಟೆಯಂತಿರುವ ಹೊರಭಾಗದಲ್ಲಿ ಸಂವೇದಕ (ಸೆನ್ಸರಿ), ಚಾಲಕ (ಮೋಟರ್) ಮತ್ತು ಸಂಬಂಧಿಕ (ಅಸೋಸಿಯೇಷನ್) ಕ್ಷೇತ್ರಗಳಿರುವುದನ್ನು ಗುರುತಿಸಬಹುದು. ಸಂಬಂಧಿಕ ಕ್ಷೇತ್ರದ ವ್ಯಾಪಕತೆ ಪ್ರಾಣಿಯ ವಿಕಾಸದಲ್ಲಿ ಎಷ್ಟು ಉನ್ನತಮಟ್ಟದ್ದು ಎನ್ನುವುದನ್ನು ಅವಲಂಬಿಸಿದೆ. ಸಹಜವಾಗಿಯೇ ಮಾನವನಲ್ಲಿ ಈ ಕ್ಷೇತ್ರ ವ್ಯಾಪಕವಾಗಿಯೂ ಅತ್ಯಂತ ಜಟಿಲವಾಗಿಯೂ ಇದೆ. ಹೀಗಿರುವುದರಿಂದಲೇ ಕಣ್ಣು, ಕಿವಿ, ಮೂಗು ಇತ್ಯಾದಿಗಳಿಂದಲೂ ಶರೀರದ ಇನ್ನಿತರ ಭಾಗಗಳಿಂದಲೂ ಒದಗುವ ಸಂವೇದನೆಗಳು ತೆಲಮಸ್ ಮತ್ತು ಮಹಾಮಸ್ತಿಷ್ಕದ ಮೂಲಕ ಒಂದಕ್ಕೊಂದು ಅರ್ಥವತ್ತಾಗಿ ಸಂಬಂಧಗೊಂಡು ಪ್ರಾಣಿ ಉನ್ನತ ಸ್ಥಿತಿಯಲ್ಲಿ ಇರಲು ನೆರವಾಗುತ್ತದೆ.

ಹೆಚ್ಚು ಹೆಚ್ಚು ವಿಕಾಸವಾದಂತೆ ಮೇಲ್ಮಟ್ಟದ ಪ್ರಾಣಿವರ್ಗಗಳಲ್ಲಿ ಸಂವೇದನ ಮತ್ತು ಪ್ರತಿಕ್ರಿಯೆಗಳ ವೇಗ ಹೆಚ್ಚುತ್ತ ಹೋಗುತ್ತವೆ. ಈ ಕಾರಣದಿಂದ ಮಾನವನಲ್ಲಿ ಈ ಕಾರ್ಯಗಳ ವೇಗ ಜೆಲ್ಲಿ ಮೀನಿನಲ್ಲಿಯ ವೇಗದ ನೂರು ಮಡಿಯಷ್ಟು ಇದೆ. ಅಲ್ಲದೆ ಸಂವೇದನ ಸ್ವರೂಪದ ಪ್ರಚೋದನೆಯ ವ್ಯಾಪ್ತಿ ಅನುಕಲನದಿಂದಾಗಿ (ಇಂಟೆಗ್ರೆಷನ್) ಪ್ರತಿಕ್ರಿಯೆಯ ತೀವ್ರತೆ ಮತ್ತು ವ್ಯಾಪ್ತಿ ಹೆಚ್ಚಾಗಬಹುದು ಇಲ್ಲವೇ ಕಡಿಮೆ ಆಗಬಹುದು.

ಮಾನವನಲ್ಲಿ ಮಾತ್ರ ಮಸ್ತಿಷ್ಕ ಹಿಂದೆ ಪಡೆದ ಅನುಭವಗಳನ್ನು ಮುಂದಾಗಬಹುದಾದ ಘಟನೆಗಳಿಗೆ ಅನುಕಲನ ಮಾಡುವ ಯೋಗ್ಯತೆಯನ್ನು ಹೊಂದಿದೆ. ಇದರಿಂದಾಗಿ ಪುಸ್ತಕಗಳನ್ನು ಓದಿ ಅಭಿಮತ ಮತ್ತು ವ್ಯಕ್ತಿತ್ವವನ್ನು ರೂಢಿಸಿಕೊಂಡು, ಇದರ ನಿಮಿತ್ತ ಮುಂದಾಲೋಚನೆ, ಕಲ್ಪನೆ, ರಸಗ್ರಹಣ ಸಾಮಥ್ರ್ಯ (ಈಸ್ಥೆಟಿಕ್ ಸೆನ್ಸ್) ಮತ್ತು ನೈತಿಕ ಗುಣಗಳನ್ನು ಸ್ಫುರಿಸಿಕೊಳ್ಳುವ ಸೌಲಭ್ಯವನ್ನು ಮಾನವ ಪಡೆದಿದ್ದಾನೆ. (ಕೆ.ಎಸ್‍ಯು.)