ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಮಂಡಲ ರೋಗವಿಜ್ಞಾನ

ವಿಕಿಸೋರ್ಸ್ದಿಂದ

ನರಮಂಡಲ ರೋಗವಿಜ್ಞಾನ - ರೋಗಗಳಿಂದಾಗಿ ಮಿದುಳು, ಮಿದುಳುಬಳ್ಳಿ ಹಾಗೂ ನರಕೋಶಗಳಲ್ಲಿ ಆಗುವ ಬದಲಾವಣೆ ಹಾಗೂ ಲಕ್ಷಣ ವೈಶಿಷ್ಟ್ಯಗಳನ್ನು ತಿಳಿಸುವ ವಿಜ್ಞಾನ (ನ್ಯೂರೊಪೆಥಾಲಜಿ). ಇದು ವೈದ್ಯ ವಿಜ್ಞಾನದಲ್ಲಿ ಇನ್ನೂರು ವರ್ಷಗಳಿಂದ ಈಚಿನ ಬೆಳೆವಣಿಗೆ. ವಿಷ ವಸ್ತುಗಳು ಕೇಂದ್ರನರಮಂಡಲಕ್ಕೆ ವ್ಯಾಪಿಸುವುದು ಬಹುಶಃ ನರಕಾಂಡಗಳ (ನರ್ವ್‍ಟ್ರಂಕ್ಸ್) ಮೂಲಕ ಎಂಬುದಾಗಿ ಮಾರ್ಗಾಗ್ನಿ ಎಂಬ ವೈದ್ಯವಿಜ್ಞಾನಿ 1769ರಲ್ಲಿ ಸಲಹೆ ಮಾಡಿದ್ದೇ ಈ ವಿಜ್ಞಾನದ ಪ್ರಾರಂಭ ಎನ್ನಬಹುದು. ಈ ಸಲಹೆಯ ವಾಸ್ತವತೆಯನ್ನು ಫಾಂಟಾನಾ ಎಂಬಾತ 1781ರಲ್ಲಿ ಪ್ರಾಯೋಗಿಕವಾಗಿ ಪರಿಶೋಧಿಸಿ ಸ್ಥಿರೀಕರಿಸಿದ. ಇದಕ್ಕಾಗಿ ಇವನು ಹಾವಿನ ವಿಷವನ್ನು ಬಳಸಿದ್ದು ತಿಳಿದಿದೆ. ಆದರೆ, ನಿಜವಾಗಿ ನರಮಂಡಲ ರೋಗವಿಜ್ಞಾನಕ್ಕೆ ಭದ್ರವಾದ ತಳಹದಿ ಹಾಕಿದಂತಾದದ್ದು ಇನ್ನೂ ನೂರು ವರ್ಷಗಳ ಮೇಲೆ. 1889-91ರ ಅವಧಿಯಲ್ಲಿ ಸಾಂಟಿಯಾಗೋ ರೇಮನ್ ವೈ ಕಹಾಲ್, ಹಿಸ್, ಪೊವೆಲ್ ಇವರುಗಳ ಆದಿ ಪರಿಶೋಧನೆಗಳಿಂದ ನರಮಂಡಲದ ರಚನಾ ಘಟಕವೂ ಕ್ರಿಯಾಘಟಕವೂ ನರಕೋಶವೇ ಎಂಬ ಮೂ¯ಸಿದ್ಧಾಂತ ಪ್ರತಿಪಾದಿಸಲ್ಪಟ್ಟಿತು. ಕಳೆದ ಶತಮಾನದ ಅಂತ್ಯ ಮತ್ತು ವರ್ತಮಾನ ಶತಮಾನದ ಆದಿ ವರ್ಷಗಳಲ್ಲಿ ಇವರ ಮತ್ತು ಫ್ರಾನ್ಸ್ ನಿಸ್ಲ್, ವೀಗರ್ಟ್ ಮುಂತಾದ ಇತರ ಪ್ರಸಿದ್ಧ ವಿಜ್ಞಾನಿಗಳ ವ್ಯಾಸಂಗಗಳಿಂದ ನರಮಂಡಲ ರೋಗ ವಿಜ್ಞಾನ ಸ್ಫುರಿಸಿತು ಎನ್ನುವುದರಲ್ಲಿ ಅನುಮಾನವಿಲ್ಲ.

ನರಮಂಡಲ ರೋಗವಿಜ್ಞಾನದಲ್ಲಿ ರೋಗಸ್ಥಳನಿರ್ದೇಶನ, ನರಮಂಡಲದಲ್ಲಿ ರೋಗದಿಂದಾದ ವಿಕೃತಿ, ರೋಗಲಕ್ಷಣಗಳು ಇವೆಲ್ಲವುಗಳ ತಪಶೀಲುಗಳ ಗಣನೆ ಮುಖ್ಯ. ಚಾರ್‍ಕಾಟ್ ಆದಿಯಾಗಿ ಫ್ರೆಂಚ್ ವಿಜ್ಞಾನಿಗಳು ಇಂಥ ವಿಕೃತಿಗಳಿಂದ ನರಕೋಶಕೇಂದ್ರಗಳಿಗೂ (ನರ್ವ್ ಸೆಂಟರ್ಸ್, ನ್ಯೂಕ್ಲಿಯೈ) ನರಪಥಗಳಿಗೂ ಇರುವ ಸಂಬಂಧವನ್ನು ಪ್ರಮುಖವಾಗಿ ಗಮನಿಸಿದರು. ಅಲ್ಲದೆ ಇವರ ವ್ಯಾಸಂಗದಿಂದ ತಿಳಿದುಬಂದಂತೆ ನರಮಂಡಲದಲ್ಲಿ ವ್ಯಾಧಿಗ್ರಸ್ತಸ್ಥಳಕ್ಕೂ ರೋಗದ ವಿಶಿಷ್ಟಲಕ್ಷಣಗಳಿಗೂ ಇರುವ ಸಂಬಂಧದ ಗಣನೆ ಮಾನವನ ಮಿದುಳು, ಮಿದುಳುಬಳ್ಳಿಯ ನರಕೋಶಕೇಂದ್ರಗಳ ಮತ್ತು ನರಪಥಗಳ ವಿಶಿಷ್ಟಕ್ರಿಯೆಯನ್ನು ಅರಿತುಕೊಳ್ಳಲು ಸಹಾಯಕವಾಯಿತು.

ಇದಕ್ಕೆ ವಿರುದ್ಧವಾಗಿ ವೀಗರ್ಟ್, ನಿಸ್ಲ್, ಆಲ್ಜೈಮರ್ ಮುಂತಾದ ಜರ್ಮನ್ ವಿಜ್ಞಾನಿಗಳು ನರಕೋಶಗಳಲ್ಲಿ ಹಾಗೂ ನ್ಯೂರೋಗ್ಲಿಯ ಎಂಬ ಆಧಾರಕೋಶಗಳಲ್ಲಿ ಉಂಟಾಗುವ ವ್ಯತ್ಯಾಸಗಳೇ ನರಮಂಡಲ ರೋಗಕ್ಕೆ ಕಾರಣಗಳು ಹಾಗೂ ರೋಗಲಕ್ಷಣಗಳನ್ನು ಉಂಟುಮಾಡತಕ್ಕವು ಎಂದು ಪ್ರತಿಪಾದಿಸಿದರು. ಈಗ ಇವೆರಡು ದೃಷ್ಟಿಗಳನ್ನೂ ಮೇಳೈಸಿ ನರಮಂಡಲದ ಸ್ಥೂಲರಚನೆ, ಕೋಶರಚನೆ ಹಾಗೂ ಕೋಶಗಳಲ್ಲಿಯ ರಾಸಾಯನಿಕಗಳು ಇವುಗಳಲ್ಲಿ ಉಂಟಾಗಿರುವ ವ್ಯತ್ಯಾಸಗಳನ್ನು ಗಮನಿಸಿ ಅವುಗಳ ಅನುಕಲನದಿಂದ ರೋಗದ ಸ್ವಭಾವವನ್ನು ಅರಿಯಬಹುದಾಗಿದೆ.

ನರಮಂಡಲರೋಗಗಳಲ್ಲಿ ಕೆಲವು ಆಜನ್ಮ ನ್ಯೂನಾತಿರೇಕಗಳು ಮಿದುಳೇ ಇಲ್ಲದಿರುವಿಕೆ (ಆ್ಯನೆನ್‍ಕಿಫೆಲಿ), ಮಿದುಳು ಚಿಕ್ಕದಾಗಿ ಅಥವಾ ದೊಡ್ಡದಾಗಿದ್ದು ಅದಕ್ಕೆ ತಕ್ಕಂತೆ ತಲೆಗಾತ್ರವಾಗಿರುವಿಕೆ (ಮೈಕ್ರೊಕೆಫೆಲಿ ಮತ್ತು ಮೆಗಕೆಫೆಲಿ), ಮಿದುಳುಬಳ್ಳಿ ಭಾಗಶಃ ಹೊರಚ್ಚಾಗಿರುವಿಕೆ (ಸ್ಪೈನ ಬೈಫಿಡ), ಮಿದುಳು ಮಿದುಳುಬಳ್ಳಿಗಳನ್ನು ಆವರಿಸಿರುವ ಪದರದ ನೀರ್ಗುಳ್ಳೆಗಳು (ಮೆನಿಂಗೊಸೀಲ್, ಮೆನಿಂಗೊಎನ್‍ಕಿಫೆಲೊಸೀಲ್ ಮತ್ತು ಮೆನಿಂಗೊಮೈಯಲೊಸೀಲ್), ಆಜನ್ಮಬುದ್ದಿ ಮಾಂದ್ಯತೆ (ಮುಂಗೋಲಿಸಮ್ / ಡೌನ್ಸ್ ಸಿಂಡ್ರೋಮ್) ಇವು ಇಂಥವು.

ನರಮಂಡಲದ ಇನ್ನು ಕೆಲವು ರೋಗಗಳು ಉರಿಊತದಿಂದಾದವು. ಉರಿಊತಕ್ಕೆ ವೈರಸುಗಳು, ಏಕಾಣುಗಳು, ಬೂಷ್ಟು, ಪರಪಿಂಡಿಗಳು ಯಾವುವಾದರೂ ಕಾರಣವಾಗಿರಬಹುದು. ಇವು ಮಿದುಳುಬಳ್ಳಿಯ ಒಳಗಾಗಲಿ ಅವನ್ನು ಆವರಿಸಿರುವ ಪೊರೆಯಲ್ಲಾಗಲಿ ರೋಗವನ್ನು ಉಂಟುಮಾಡಬಹುದು. ಕ್ಷಯರೋಗದ ಏಕಾಣುಗಳು ಆರು ತಿಂಗಳಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ಸೋಂಕನ್ನು ಉಂಟುಮಾಡುವುದಾದರೂ ಯಾವ ವಯಸ್ಸಿನವರೂ ಇವಕ್ಕೆ ಹೊರತಲ್ಲ. ಈ ರೋಗದಲ್ಲಿ ಮಿದುಳಿನ ಪೊರೆ ವ್ಯಾಪಕವಾಗಿ ರೋಗಗ್ರಸ್ತವಾಗಿರಬಹುದು (ಟ್ಯುಬರ್‍ಕ್ಯುಲರ್ ಮೆನಿನ್‍ಜೈಟಿಸ್) ಇಲ್ಲವೆ ಮಿದುಳು ಹಾಗೂ ಮಿದುಳುಬಳ್ಳಿಯ ಒಳಗೆ ರೋಗಾಣುಗಳು ನೆಲಸಿ ಅಲ್ಲಿ ಗಂಟುಗಳಾಗಬಹುದು (ಟ್ಯುಬರ್‍ಕ್ಯುಲೋಮ). ಸ್ಟ್ರೆಪ್ಟೊಮೈಸಿನ್, ಐ.ಎನ್.ಎಚ್., ಇತ್ಯಾದಿ ಔಷಧಗಳು ಬರುವ ಮುನ್ನ ಈ ರೋಗ ಸಾಮಾನ್ಯವಾಗಿ ಮಾರಕವಾಗಿಯೇ ಪರಿಣಮಿಸುತ್ತಿತ್ತು. ಪರಂಗಿರೋಗದ ಏಕಾಣುಗಳಿಂದ (ಸ್ಪೈರೊಕೀಟ ಪ್ಯಾಲಿಡ) ನರಮಂಡಲಕ್ಕೆ ಸೋಂಕು ಉಂಟಾಗಬಹುದು. ರೋಗ ಮಿದುಳಿಗೆ ಮತ್ತು ಮಿದುಳಿನ ಪೊರೆಗೆ ಮಾತ್ರ ಸೀಮಿತವಾಗಿರಬಹುದು. ಇಲ್ಲವೆ ಮಿದುಳುಬಳ್ಳಿಗೆ ಸೀಮಿತವಾಗಿರಬಹುದು. ಮಿದುಳುಪೊರೆ ರೋಗಗ್ರಸ್ತವಾದಾಗ ಅದರ ಊತದಿಂದ ಶಿರನರಗಳು (ಕ್ರೇನಿಯಲ್ ನವ್ರ್ಸ್) ಮುಖ್ಯವಾಗಿ 3ನೆಯ, 4ನೆಯ ಮತ್ತು 6ನೆಯ ಶಿರನರಗಳು ಬಾಧಿತವಾಗಬಹುದು. ತತ್ಫಲವಾಗಿ ಮಾಲಗಣ್ಣು, ದ್ವಿದೃಷ್ಟಿ (ಡಿಪ್ಲೋಪಿಯ), ಕಣ್ಣುರೆಪ್ಪೆ ಇಳಿಬೀಳುವುದು ಕಂಡುಬರಬಹುದು. ಚಿಕಿತ್ಸೆಗೆ ಒಳಗಾಗದ ಪರಂಗಿರೋಗ (ಸಿಫಿಲಿಸ್) ಅದು ತಗಲಿದ ಎರಡು ವರ್ಷದಿಂದ ಹದಿನೈದು ವರ್ಷಗಳ ಅವಧಿಯಲ್ಲಿ ಯಾವಾಗಲಾದರೂ ಮಿದುಳುಬಳ್ಳಿಗೆ ವ್ಯಾಪಿಸಿ ಟೇಬೀಸ್ ಡಾಸ್ರ್ಯಾಲಿಸ್ (ಲೋಕೊಮೋಟರ್ ಅಟಾಕ್ಸಿಯ) ಎಂಬ ರೋಗವನ್ನು ಉಂಟುಮಾಡಬಹುದು. ಸ್ನಾಯುಸಂಕೋಚನಜ್ಞಾನದ ನಾಶ, ಸ್ಪಂದನಗ್ರಹಿಕೆಯ ನಾಶ, ಇನ್ನಿತರ ಸಂವೇದನಾನುಭವಗಳಲ್ಲಿ ಏರುಪೇರು, ಚಲನಸಾಮಥ್ರ್ಯದ ದೌರ್ಬಲ್ಯ ಇವು ಈ ರೋಗದ ಲಕ್ಷಣಗಳು. ಮಿದುಳು ಮಿದುಳುಬಳ್ಳಿಯ ಒಳಗೆ ಗುಮ್ಮ ಎಂಬ ವಿಶಿಷ್ಟರೀತಿಯ ವ್ರಣಗಳೂ ಕಂಡುಬರಬಹುದು. ಕೊನೆಯದಾಗಿ ನರಮಂಡಲದ ಪರಂಗಿರೋಗದಲ್ಲಿ ಮನೋವಿಕಲತೆ ಹಾಗೂ ಸಂಪೂರ್ಣ ನಿಶ್ಚೇಷ್ಟತೆ (ಜನರಲ್ ಪೆರಾಲಿಸಿಸ್ ಆಫ್ ದಿ ಇನ್‍ಸೇನ್-ಜಿ.ಪಿ.ಐ.) ಉಂಟಾಗಬಹುದು. ಇನ್ನು ಕೆಲವು ಏಕಾಣುಗಳ ಸೋಂಕಿನಿಂದ ಮಿದುಳಿನಲ್ಲಿ ಕೀವುಹುಣ್ಣು ಆಗಬಹುದು. ಧನುರ್ವಾಯುವಿನ (ಟೆಟನಸ್) ಏಕಾಣು ಸೋಂಕಿನಲ್ಲಿ ಏಕಾಣುಜನಿತವಿಷ ನರತಂತುಗಳ ನಡುವೆ ನಾಳರೂಪದಲ್ಲಿರುವ ಸ್ಥಳಗಳ ಮೂಲಕ ಪಸರಿಸಿ ಮಿದುಳನ್ನು ತಲಪುವುದನ್ನು ಖಚಿತವಾಗಿ ತೋರಿಸಲಾಗಿದೆ. ಇದೇ ರೀತಿ ನಾಯಿಹುಚ್ಚನ್ನು (ರೇಬೀಸ್, ಹೈಡ್ರೊಫೋಬಿಯ) ಉಂಟುಮಾಡುವ ವೈರಸ್ ಮತ್ತು ಪೋಲಿಯೊ ವೈರಸ್ಸುಗಳೂ ನರಗಳ ಮೂಲಕ ಪಸರಿಸುತ್ತವೆ. ಇವು ರಕ್ತಪರಿಚಲನೆಯಿಂದ ಪಸರಿಸಬಹುದೆಂಬುದೂ ತಿಳಿದಿದೆ.

ನರಮಂಡಲದಲ್ಲಿ ಗಂತಿಯಂತೆ ದುರ್ಮಾಂಸ (ಟ್ಯುಮರ್) ಬೆಳೆಯಬಹುದು. ಗ್ಲೈಯೋಮ ಮತ್ತು ಪ್ರಸಾರ ಮೂಲಕ ನಾಟಿಯಾದ ಏಡಿಗಂತಿ-ಇವು ಮಿದುಳು ಮತ್ತು ಮಿದುಳುಬಳ್ಳಿಯಲ್ಲಿ ಕಂಡುಬರಬಹುದು. ಗ್ಲೈಯೋಬ್ಲಾಸ್ಟೋಮ, ಮೆಡ್ಯುಲ್ಲೊಬ್ಲಾಸ್ಟೋಮ ಮುಂತಾದ ದುರ್ಮಾಂಸಗಳು ವಾಸ್ತವವಾಗಿ ನರಮಂಡಲದ ಏಡಿಗಂತಿಗಳೇ. ದುರ್ಮಾಂಸ ಮಿದುಳಿನ ಹೊರಗೆ ಕಂಡುಬರಬಹುದು. ಮಿದುಳು ಪೊರೆಯ ಗಂತಿ (ಮೆನಿಂಜಿಯೋಮ), ಶ್ರವಣನರಗಂತಿ (ಅಕೂಸ್ಟಿಕ್ ನ್ಯೂರೋಮ), ಪಿಟ್ಯುಯಿಟರಿ ಗ್ರಂಥಿಯ ದುರ್ಮಾಂಸ ಇವು ನೆರೆಯಲ್ಲಿರುವ ಮಿದುಳಿನ ಪ್ರಾಂತ್ಯದ ಮೇಲೆ ಒತ್ತಡವನ್ನು ಉಂಟುಮಾಡಿ ವಿವಿಧ ಬಾಧೆಗಳಿಗೆ ಕಾರಣವಾಗಬಹುದು. ನರಗಳಲ್ಲಿ ಗಂತಿ ಕಂಡುಬರಬಹುದು. ಕೋರಿಯ ಮತ್ತು ಪಾರ್ಕಿನ್‍ಸನ್ನನ ರೋಗಗಳ ಕಾರಕಗಳು ಯಾವುವು ಎಂದು ತಿಳಿಯದು. ಉಪಾಪಚಯ ವ್ಯತ್ಯಾಸಗಳಿಂದ ಕೆಲವು ನರಮಂಡಲರೋಗಗಳು ಉಂಟಾಗಬಹುದೆಂಬುದು ತಿಳಿದಿದೆ. " ಇವಲ್ಲದೆ ನರಮಂಡಲದ ಕ್ರಿಯೆಗೆ ಸಂಬಂಧಪಟ್ಟಂತೆ ಅನೇಕ ಮನೋರೋಗಗಳಿರುವುದು ವ್ಯಕ್ತ ವಿಷಯ. ಸಹಜಕ್ರಿಯೆಯ ಏರುಪೇರಿಗೆ ಕಾರಣವೇನೆಂಬುದು ಬಹುಸಂದರ್ಭಗಳಲ್ಲಿ ಅವ್ಯಕ್ತ. ಆದರೆ ಈಚಿನ ವ್ಯಾಸಂಗಗಳಿಂದ ಇಂಥ ಎಷ್ಟೊ ಮನೋರೋಗ ಪ್ರಸಂಗಗಳಲ್ಲಿ ರೋಗ ಪೀಡಿತ ಪ್ರದೇಶಗಳು ನರಮಂಡಲದಲ್ಲಿ ಇರುವುದು ಖಚಿತವೆಂದೂ ಅವೇ ಮನೋರೋಗಕ್ಕೆ ಕಾರಣವೆಂದೂ ವಿಶದಪಟ್ಟಿದೆ. ಅಲ್ಲದೆ ಮಿದುಳಿನಲ್ಲಿ ಹೈಪೊತೆಲಮಸ್ ಮತ್ತು ಪ್ರಿಫ್ರಾಂಟಲ್‍ಲೋಬ್ ಎಂಬ ಭಾಗಗಳಲ್ಲಿ ಆಗುವ ನರವಾಹಕಗಳ ವ್ಯತ್ಯಾಸ ಅಥವಾ ಹಾನಿಯ ಮನೋರೋಗ ಲಕ್ಷಣಗಳಿಗೆ ಕಾರಣ ಎಂದು ಸ್ಪಷ್ಟವಾಗತೊಡಗಿದೆ. ನರಮಂಡಲದ ರೋಗಲಕ್ಷಣಗಳನ್ನು ಗಮನಿಸಿ ರೋಗ ನಿರ್ಧಾರಮಾಡುವಾಗ ಈ ವಿಷಯವನ್ನೂ ಲಕ್ಷ್ಯದಲ್ಲಿಟ್ಟುಕೊಳ್ಳಬೇಕಾಗಿದೆ. (ಎಂ.ಕೆ.ಬಿಎಚ್.)