ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸಿಂಹರಾವ್, ಪಿ ವಿ

ವಿಕಿಸೋರ್ಸ್ದಿಂದ

ನರಸಿಂಹರಾವ್, ಪಿ ವಿ 1921-2005. ಮಾಜಿ ಪ್ರಧಾನಿ. 50 ವರ್ಷಗಳಿಗೂ ಹೆಚ್ಚಿನ ಕಾಲ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಹಭಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ, ಅಖಿಲಭಾರತದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷ, ನೆಹರು, ಇಂದಿರಾಗಾಂಧಿ ಸಂಪುಟದಲ್ಲಿ ಮಂತ್ರಿ ಹಾಗೂ 1991 ರಿಂದ 1996ರವರೆಗೆ ದೇಶದ ಪ್ರಧಾನಿ. ಬಹು ಕಷ್ಟಕಾಲದಲ್ಲಿ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದು ಆರ್ಥಿಕ ಉದಾರೀಕರಣದ ಹೊಸ ಮನ್ವಂತರದ ಹರಿಕಾರರಾದರು. ಹತ್ತು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ಇಡೀ ದೇಶದ ಮೀಟರ್‍ಗೇಜ್ ರೈಲುಮಾರ್ಗವನ್ನು ಬ್ರಾಡ್‍ಗೇಜ್‍ಗೆ ಪರಿವರ್ತನೆ ಇವರ ಮಹಾನ್ ಸಾಧನೆ. ಬಹುಮತ ಇಲ್ಲದಿದ್ದರೂ 5 ವರ್ಷಗಳ ಕಾಲ ಕೇಂದ್ರ ಸರ್ಕಾರ ನಡೆಸಿ ಸುಧಾರಣೆ ತಂದು ದೇಶಕ್ಕೆ ಹೊಸ ಆಯಾಮ ಒದಗಿಸಿದರು. ಗಾಂಧೀಯುಗದ ಮೌಲ್ಯಗಳನ್ನು ಕಾಪಾಡಿಕೊಂಡದ್ದಲ್ಲದೆ, ಆಧುನಿಕ ಅಗತ್ಯ ಮತ್ತು ವಾಸ್ತವಸ್ಥಿತಿಗೆ ಸ್ಪಂದಿಸಿದರು. ಪರಿಸ್ಥಿತಿಯ ಫಲವಾಗಿ ಮಾಜಿ ಪ್ರಧಾನಿಯಾಗಿ ನ್ಯಾಯಾಲಯ ಎಡತಾಗಿದ್ದು ನಂತರ ಎಲ್ಲವೂ ಅವರ ಪರವಾಗಿಯೇ ಬಗೆಹರಿದು ಸೆಪ್ಟೆಂಬರ್ 2004ರ ಡಿಸೆಂಬರ್ 23ರಂದು ತಮ್ಮ 83ನೇ ವಯಸ್ಸಿನಲ್ಲಿ ವಿಧಿವಶರಾದರು.

ವಿದ್ವಾಂಸ, ಗಾಂಧೀಮೌಲ್ಯಗಳಲ್ಲಿ ಶ್ರದ್ಧೆ ಹೊಂದಿದ ಬಹುಭಾಷಾ ಪಂಡಿತ, ಉತ್ತಮ ಆಡಳಿತಗಾರ, ಪರಂಪರೆಯ ಜೊತೆ ಜಾತ್ಯತೀತ ಮೌಲ್ಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಮೇಳೈಸಿಕೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ. ಆಂಧ್ರಪ್ರದೇಶದ ಕರೀಂನಗರದಲ್ಲಿ ಜೂನ್ 28, 1921 ರಂದು ಜನನ. ತಂದೆ ಪಿ. ರಂಗರಾವ್. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯ, ಮುಂಬೈ ವಿಶ್ವವಿದ್ಯಾನಿಲಯ ಹಾಗೂ ನಾಗಪುರ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ. ಅವರು ಮೂಲತಃ ಕೃಷಿಕರು ಹಾಗೂ ವೃತ್ತಿಯಲ್ಲಿ ವಕೀಲರು. ಆಂಧ್ರಪ್ರದೇಶ ಸರಕಾರದಲ್ಲಿ ಸಚಿವರಾಗಿ ಹಲವು ಖಾತೆಗಳನ್ನು ನಿಭಾಯಿಸಿದರು. 1962-64ರಲ್ಲಿ ಕಾನೂನು ಮತ್ತು ವಾರ್ತಾ ಸಚಿವ; 1964-67ರಲ್ಲಿ ದತ್ತಿ ಹಾಗೂ ಕಾನೂನು ಖಾತೆ; 1967ರಲ್ಲಿ ಆರೋಗ್ಯ ಮತ್ತು ವೈದ್ಯ; 1968-71ರವರೆಗೆ ಶಿಕ್ಷಣ; 1971-73ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ; 1975-76ರವರೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ; 1957-77ರವರೆಗೆ ಆಂಧ್ರ ವಿಧಾನಸಭಾ ಸದಸ್ಯ; 1977-84- ಲೋಕಸಭಾ ಸದಸ್ಯ; 1984ರಲ್ಲಿ ರಾಮಠೇಕ್‍ನಿಂದ ಲೋಕಸಭೆಗೆ ಆಯ್ಕೆ; ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿದ್ದರು.

ಜನವರಿ 14, 1980 ರಿಂದ ಜುಲೈ 18, 1984 ರವರೆಗೆ ವಿದೇಶಾಂಗ ಸಚಿವ; ಜುಲೈ 19, 1984ರಿಂದ ಡಿಸೆಂಬರ್ 1984ರವರೆಗೆ ಕೇಂದ್ರ ಗೃಹಸಚಿವ; ಡಿಸೆಂಬರ್ 31, 1984 ರಿಂದ ಸೆಪ್ಟೆಂಬರ್ 25, 1985ರವರೆಗೆ ರಕ್ಷಣಾಸಚಿವ; ಸೆಪ್ಟೆಂಬರ್ 25, 1985 ರಿಂದ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿಖಾತೆ ಸಚಿವ.

ಪಿ ವಿ ನರಸಿಂಹರಾವ್ ವಿದೇಶಾಂಗ ಸಚಿವರಾಗಿದ್ದಾಗ, ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಮೇಲೆ ತಮ್ಮ ಶ್ರೀಮಂತ ವಿದ್ವತ್ ಹಾಗೂ ಹಿನ್ನಲೆ ಹಾಗೂ ಅಪಾರ ಆಡಳಿತಾತ್ಮಕ ಅನುಭವಗಳ ಛಾಪು ಮೂಡಿಸಿದರು. 1982 ಮತ್ತು 1983ರ ಸಮಯ ಭಾರತದ ವಿದೇಶಾಂಗ ನೀತಿ ಉತ್ತುಂಗಕ್ಕೇರಿದ ಅವಧಿಯಾಗಿತ್ತು.

1991-96ರ ಅವಧಿಯಲ್ಲಿ ಪ್ರಧಾನಿಯಾಗಿ, ಅವರು ತಮ್ಮ ಅಂದಿನ ಅರ್ಥಸಚಿವ ಡಾ. ಮನಮೋಹನಸಿಂಗ್ ಜೊತೆಗೂಡಿ ತಂದ ಆರ್ಥಿಕ ಸುಧಾರಣೆ, ಇಂದು ಭಾರತವನ್ನು ಆರ್ಥಿಕ ಪ್ರಗತಿಪಥದಲ್ಲಿ ಮುಂಚೂಣಿಯಲ್ಲಿ ತಂದು ನಿಲ್ಲಿಸಲು ಕಾರಣವಾಗಿದೆ. ಭಾರತ, ಪ್ರಬಲ ಆರ್ಥಿಕ ರಾಷ್ಟ್ರವೆಂದು ಹೆಗ್ಗಳಿಕೆ ಪಡೆದಾಗ, ಪಿ ವಿ ಎನ್ ಅವರ ಕೊಡುಗೆಯ ವಸ್ತುನಿಷ್ಠ ವಿಶ್ಲೇಷಣೆ ಒಂದು ವೈಜ್ಞಾನಿಕ ಅಗತ್ಯವಾಗುತ್ತದೆ. ಭಾರತ ಚಿನ್ನವನ್ನು ಹೊರದೇಶಗಳಲ್ಲಿ ಅಡ ಇಡುವ ಸ್ಥಿತಿಯಲ್ಲಿ ಪ್ರಧಾನಿ ಹುದ್ದೆಯ ಅಧಿಕಾರ ವಹಿಸಿಕೊಂಡ ರಾವ್ ಅವರ ಕೊಡುಗೆ ಇನ್ನೂ ಸರಿಯಾಗಿ ಸ್ಪಷ್ಟಗೊಳ್ಳಬೇಕಾಗಿದೆ.

ಪಿ ವಿ ಎನ್ ಅವರ ಆಸಕ್ತಿ-ಅಭಿರುಚಿ ಹಲವು ಹತ್ತು. ಸಂಗೀತ, ಸಿನೆಮಾ, ರಂಗಭೂಮಿ, ಸಾಹಿತ್ಯ, ಭಾರತೀಯ ದರ್ಶನ ಹಾಗೂ ಸಂಸ್ಕøತಿ ಅವರ ವಿಶೇಷ ಅಭಿರುಚಿಯ ಕ್ಷೇತ್ರಗಳು. ಕತೆ ಬರೆಯುವುದು, ರಾಜಕೀಯ ವ್ಯಾಖ್ಯಾನ, ಭಾಷೆಗಳನ್ನು ಕಲಿಯುವುದು, ತೆಲುಗು ಹಾಗೂ ಹಿಂದಿಗಳಲ್ಲಿ ಕವನರಚನೆ ಅವರ ಪ್ರವೃತ್ತಿಯಾಗಿತ್ತು. ವಿಶ್ವನಾಥ ಸತ್ಯನಾರಾಯಣ ಅವರ ತೆಲುಗು ಕಾದಂಬರಿ `ವೇಯಿ ಪಡಗಲು ಇವರ ಕೈಯಲ್ಲಿ `ಸಹಸ್ರ ಫನ್ ಆಗಿ ಹಿಂದಿಗೆ ತರ್ಜುಮೆಗೊಂಡಿತು. ಹರಿನಾರಾಯಣ ಆಪ್ಟೆ ಅವರ `ಪನ್ ಲಕ್ಷತ್ ಕೋನೆ ಘೇತೊ ಕಾದಂಬರಿಯನ್ನು `ಅಬಲ ಜೀವಿತಂ' ಎಂದು ತೆಲುಗು ಭಾಷೆಗೆ ಅನುವಾದ ಮಾಡಿದರು.

ಇನ್ನೂ ಹಲವಾರು ಖ್ಯಾತಕೃತಿಗಳನ್ನು ಮರಾಠಿಯಿಂದ ತೆಲುಗಿಗೆ, ತೆಲುಗಿನಿಂದ ಹಿಂದಿಗೆ ರಾವ್ ಭಾಷಾಂತರ ಮಾಡಿದ್ದಾರೆ. ರಾಜಕೀಯ ವಿಷಯಗಳನ್ನು ಕುರಿತು ಅಮೆರಿಕ ಹಾಗೂ ಪಶ್ಚಿಮ ಜರ್ಮನಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಿದ್ದಾರೆ. (ಕೆ.ಎಸ್.ಅಚ್ಯುತನ್)