ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸ ನಾಯಕ

ವಿಕಿಸೋರ್ಸ್ದಿಂದ

ನರಸ ನಾಯಕ - ವಿಜಯನಗರವನ್ನಾಳಿದ ಸಾಳುವ ವಂಶದ ಎರಡನೆಯ ಹಾಗೂ ಕೊನೆಯ ದೊರೆ ಇಮ್ಮಡಿ ನರಸಿಂಹನ ಪೋಷಕನಾಗಿದ್ದವ. ಇವನ ತಂದೆ ತುಳುವ ಈಶ್ವರ ನಾಯಕ. ಒಂದನೆಯ ನರಸಿಂಹನ ಕಾಲದಲ್ಲಿ ತುಳುವ ನರಸ ನಾಯಕ ಅವನ ಸೇನಾಧಿಪತಿ ಹಾಗೂ ಮಂತ್ರಿಯಾಗಿದ್ದ. ಒಂದನೆಯ ನರಸಿಂಹನ ಮರಣಕಾಲದಲ್ಲಿ ಅವನ ಇಬ್ಬರ ಮಕ್ಕಳೂ ಇನ್ನೂ ಚಿಕ್ಕವರಾಗಿದ್ದುದರಿಂದ ನರಸ ನಾಯಕನನ್ನು ಆ ಮಕ್ಕಳಿಗೆ ಪೋಷಕನಾಗಿ ಹಾಗೂ ರಾಜಪ್ರತಿನಿಧಿಯಾಗಿ ನೇಮಿಸಿ, ಅವರು ಪ್ರಾಪ್ತವಯಸ್ಕರಾದ ಮೇಲೆ ಅವರಲ್ಲಿ ಯೋಗ್ಯನಾದವನೊಬ್ಬನಿಗೆ ಪಟ್ಟಕಟ್ಟಬೇಕೆಂದು ದೊರೆ ಅವನಿಗೆ ಆದೇಶ ನೀಡಿದ. ದೊರೆ ತೀರಿಕೊಂಡ ಮೇಲೆ ಅವನ ಮಕ್ಕಳು ದೊಡ್ಡವರಾಗುವ ತನಕ ನರಸನಾಯಕ ಕಾಯದೆ, ಅವರಲ್ಲಿ ಹಿರಿಯವನಾದ ತಿಮ್ಮನನ್ನು ಸಿಂಹಾಸನದ ಮೇಲೆ ಕೂರಿಸಿದ. ರಾಜ್ಯಸೂತ್ರಗಳನ್ನು ತಾನೇ ವಹಿಸಿಕೊಂಡು ವಾಸ್ತವವಾಗಿ ತಾನೇ ಪ್ರಭುವಾದ.

ರಾಜ್ಯದ ಒಳಗೂ ಹೊರಗೂ ನರಸ ನಾಯಕ ಅನೇಕ ಶತ್ರುಗಳನ್ನೆದುರಿಸಬೇಕಾಯಿತು. ದೊರೆ ತಿಮ್ಮನನ್ನು ಮಂತ್ರಿಯೊಬ್ಬ ಕೊಂದು, ನರಸ ನಾಯಕನ ಆದೇಶದ ಮೇರೆಗೆ ತಾನು ಈ ಅಕೃತ್ಯ ಮಾಡಿದುದಾಗಿ ಸಾರಿದ. ಆದರೆ ಚತುರನಾಗಿದ್ದ ನರಸನಾಯಕ ಈ ದೋಷಾರೋಪಣೆ ಸತ್ಯಕ್ಕೆ ದೂರವಾದುದೆಂಬುದನ್ನು ತೋರಿಸುವುದಕ್ಕಾಗಿ ಒಂದನೆಯ ನರಸಿಂಹನ ಕಿರಿಯ ಮಗ ಇಮ್ಮಡಿ ನರಸಿಂಹನಿಗೆ ಪಟ್ಟ ಕಟ್ಟಿದ. ಆದರೆ ಇವನು ನರಸ ನಾಯಕನಿಗೆ ವಿರುದ್ಧವಾಗಿ ನಿಂತು ಅವನ ವೈರಿಯಾಗಿದ್ದ ಮಂತ್ರಿಯತ್ತ ಒಲವನ್ನು ತೋರಿಸಿದ. ನರಸ ನಾಯಕ ತನ್ನ ಹಿಡಿತವನ್ನು ಬಲಪಡಿಸಿಕೊಂಡು ಇಮ್ಮಡಿ ನರಸಿಂಹನನ್ನು ಪೆನುಗೊಂಡೆಯಲ್ಲಿಟ್ಟು ಭದ್ರವಾದ ಕಾವಲು ಏರ್ಪಡಿಸಿದ.

ನರಸ ನಾಯಕ ಆಂತರಿಕವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಮೇಲೆ ಸಾಳುವ ನರಸಿಂಹ ಬಿಟ್ಟುಹೋದ ರಾಜ್ಯವನ್ನು ಸಂಘಟಿಸುವ ಕಾರ್ಯ ಕೈಗೊಂಡ. ಉಮ್ಮತ್ತೂರು ಪಾಳೆಯಗಾರರ ದಂಗೆಯನ್ನು ಅಡಗಿಸಿದ. ಬಹಮನಿ ಅರಸರ ಪರಸ್ಪರ ಕಲಹ ಇವನಿಗೆ ಅನುಕೂಲವಾಗಿ ಪರಿಣಮಿಸಿತು. ಇವನು ರಾಯಚೂರು ಮತ್ತು ಮುದ್ಗಲ್ ಪ್ರದೇಶಗಳನ್ನು ವಶಪಡಿಸಿಕೊಂಡ. ಆಕ್ರಮಣಕಾರ ಗಜಪತಿ ಪ್ರತಾಪರುದ್ರನನ್ನು ಸೋಲಿಸಿ ಓಡಿಸಿದ. ವಿಜಯನಗರ ಸಾಮ್ರಾಜ್ಯ ಮತ್ತೆ ತನ್ನ ಹಳೆಯ ಎಲ್ಲೆಯವರೆಗೂ ವಿಸ್ತರಿಸಿತು. ಹೀಗೆ ನರಸ ನಾಯಕನ ಸಾಮಥ್ರ್ಯದಿಂದಾಗಿ ವಿಜಯನಗರ ಸಾಮ್ರಾಜ್ಯ ಮತ್ತೆ ಪ್ರಬಲವಾಯಿತು. ಇವನು 1503ರಲ್ಲಿ ತೀರಿಕೊಂಡ. ಅನಂತರ ಇವನ ಮಗ ವೀರ ನರಸಿಂಹ ತಾನೇ ಪ್ರಭುವೆಂಬಂತೆ ಆಡಳಿತ ನಡೆಸಿದ. (ಎಂ.ಬಿ.ಪಿ.)