ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಹರಿ ಚಕ್ರವರ್ತಿ

ವಿಕಿಸೋರ್ಸ್ದಿಂದ

ನರಹರಿ ಚಕ್ರವರ್ತಿ 18ನೆಯ ಶತಮಾನದ ಬಂಗಾಳಿ ಕವಿ. ಚೈತನ್ಯ ಸಂಪ್ರದಾಯದವ. ಸಂಸ್ಕøತದಲ್ಲಿ ವಿಶೇಷ ಪಾಂಡಿತ್ಯವನ್ನು ಪಡೆದಿದ್ದ ಈತ ಭಕ್ತಿರತ್ನಾಕರ ಎಂಬ ಒಂದು ದೊಡ್ಡ ಗ್ರಂಥವನ್ನು ಬರೆದಿದ್ದಾನೆ. ಇದನ್ನು ಬಂಗಾಲದಲ್ಲಿ ವೈಷ್ಣವಪಂಥದವರ ವಿಶ್ವಕೋಶವೆಂದು ಪರಿಗಣಿಸುತ್ತಾರೆ. ಬಂಗಾಳಿ ಆರ್ವಾಚೀನ ಸಾಹಿತ್ಯದಲ್ಲಿ ಇದಕ್ಕೊಂದು ವಿಶಿಷ್ಟಸ್ಥಾನವಿದೆ. ಗ್ರಂಥದಲ್ಲಿ 15 ಪ್ರಕರಣಗಳಿವೆ. ಗ್ರಂಥವನ್ನು ರಚಿಸುವಲ್ಲಿ ವರಾಹಪುರಾಣ, ಭಾಗವತ, ನವಪದ್ಮ ಗೋಪಾಲಚಂಪೂ, ಮಧುರಾಖಂಡ, ಲಘುತೋಷಿಣೀ ಮುಂತಾದ ವೈಷ್ಣವ ಸಂಪ್ರದಾಯದ ಕೃತಿಗಳನ್ನು ವಿಶೇಷವಾಗಿ ಬಳಸಿಕೊಳ್ಳಲಾಗಿದೆ. ನರೋತ್ತಮ ವಿಲಾಸ ಇನ್ನೊಂದು ಕೃತಿ. 12 ಪ್ರಕರಣಗಳನ್ನೊಳಗೊಂಡ ಇದರಲ್ಲಿ ನರೋತ್ತಮ ಎಂಬ ಒಬ್ಬ ಶೂದ್ರ ಸಂತನ ಚರಿತ್ರೆಯನ್ನು ಹೇಳಿದೆ. ನರೋತ್ತಮನ ಕರ್ತೃತ್ವ ಶಕ್ತಿಯೇ ಕಾವ್ಯದ ಕಥಾವಸ್ತುವಾದರೂ ಬ್ರಾಹ್ಮಣ ಕವಿಯೊಬ್ಬ ಶೂದ್ರನ ಚರಿತ್ರೆಯನ್ನು ವರ್ಣಿಸುವುದು ಅಂದಿನ ಬ್ರಾಹ್ಮಣ ಸಮಾಜಕ್ಕೆ ಹಿಡಿಸಲಿಲ್ಲ. ಈ ಕಾವ್ಯ ಅಂದಿನ ತಾಂತ್ರಿಕ ಆಚಾರವಿಚಾರಗಳ ಮೇಲೆ ಕಶಾಪ್ರಹಾರವನ್ನೇ ಮಾಡಿತು. ಅಂತೆಯೆ ಇದು ಅಂದಿನ ಸಮಾಜದ ರೇಖಾಚಿತ್ರ ಎಂದು ಕೆಲವರಿಂದ ಪ್ರಶಂಸಿಸಲ್ಪಟ್ಟಿದೆ. ಗೀತಚಂದ್ರೋದಯ, ಛಂದಃಸಮುದ್ರ, ಗೌರಕೃಷ್ಣಾಮೃತ, ಗೌರಕೃಷ್ಣಭಾವನಾಮೃತ, ಗೌರಕೃಷ್ಣಚರಿತಾಮೃತ-ಇವು ಈತನ ಇತರ ಕೃತಿಗಳು. ಛಂದಃಸಮುದ್ರ ಈತನ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. (ಎಸ್.ಎಸ್.ಜೆ.ಎ.)