ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರುಳ್ಳಿ ಹಂದಿ
ನರುಳ್ಳಿ ಹಂದಿ - ಸ್ತನಿವರ್ಗದ, ಅಂಗ್ಯುಲೇಟ ಗಣ, ಆರ್ಟಿಯೋಡ್ಯಾಕ್ಟಿಲ ಉಪಗಣ ಮತ್ತು ಸುಯಿಡೀ ಕುಟುಂಬಕ್ಕೆ ಸೇರಿದ ಒಂದು ವನ್ಯಪ್ರಾಣಿ (ವಾರ್ಟ್ ಹಾಗ್). ಫ್ಯಾಕೊಕೀರಸ್ ಈತಿಯಾಪಿಕಸ್ ಇದರ ಶಾಸ್ತ್ರೀಯ ಹೆಸರು. ಆಫ್ರಿಕದಲ್ಲಿ ಕಂಡುಬರುತ್ತದೆ. ಹಂದಿಗಳಲ್ಲೆಲ್ಲ ವಿಶಿಷ್ಟ ರೀತಿಯ ಹಾಗೂ ನೋಡಲು ಬಲು ವಿಕಾರವಾದ ಪ್ರಾಣಿ. ದೇಹದ ಉದ್ದ ಸುಮಾರು 1 ಮೀಟರು; ಎತ್ತರ ಭುಜದ ಬಳಿ 70 ಸೆಂಮೀ; ತೂಕ 75-100 ಕೆಜಿ. ಗಂಡಿನಲ್ಲೂ ಹೆಣ್ಣಿನಲ್ಲೂ ಉದ್ದನೆಯ ಕೋರೆಗಳುಂಟು. ಗಂಡಿನ ಕೋರೆಗಳು 25-60 ಸೆಂಮೀ ಇದ್ದರೆ ಹೆಣ್ಣಿನವು 15-25 ಸೆಂಮೀ ಉದ್ದ ಇವೆ. ಕತ್ತಿನಿಂದ ಹಿಡಿದು ಬೆನ್ನ ಉದ್ದಕ್ಕೂ ಉದ್ದನೆಯ ಒರಟು ಕೂದಲುಗಳ ಅಯಾಲು ಉಂಟು. ಪೃಷ್ಠ ಭಾಗದಲ್ಲೂ ವಿರಳವಾಗಿ ಕೂದಲು ಇವೆ. ದೇಹದ ಉಳಿದೆಡೆಗಳಲ್ಲಿ ಇರುವುದು ಬಿರುಗೂದಲುಗಳು ಮಾತ್ರ. ದೇಹದ ಬಣ್ಣ ಕಗ್ಗೆಂದು ಇಲ್ಲವೆ ಕಪ್ಪು. ಮರಿಗಳು ಕೆಂಗಂದು ಬಣ್ಣಕ್ಕಿವೆ. ಕೆನ್ನೆಗಳ ಮೇಲೆ ಉದ್ದನೆಯ ಮಡಿಕೆಯಿರುವುದೂ ಕಣ್ಣುಗಳ ಮುಂಭಾಗ ಹಾಗೂ ಮೂತಿಯ ಆಚೀಚೆ ದಪ್ಪಗಂತಿಗಳಿರುವುದೂ ನರುಳ್ಳಿ ಹಂದಿಯ ವಿಚಿತ್ರ ಲಕ್ಷಣ. ಈ ಗಂತಿಗಳು ಕೇವಲ ಚರ್ಮದ ಬೆಳವಣಿಗೆಗಳಾಗಿದ್ದು ಇವುಗಳಲ್ಲಿ ಮೂಳೆಗಳೇನೂ ಇರುವುದಿಲ್ಲ.
ನರುಳ್ಳಿ ಹಂದಿ ಜೌಗುಪ್ರದೇಶದಲ್ಲಿ ವಾಸಿಸುತ್ತದೆ. ಹುಲ್ಲು, ಗೆಡ್ಡೆಗಳು, ಸಣ್ಣಪುಟ್ಟ ಹಣ್ಣುಗಳು, ಮರಗಿಡಗಳ ತೊಗಟೆ ಇದರ ಪ್ರಧಾನ ಆಹಾರ. ತನ್ನ ಕೋರೆಗಳಿಂದ ಗೆಡ್ಡೆಗಳನ್ನು ಹೆಕ್ಕಿ ತಿನ್ನುತ್ತವೆ. ಹೀಗೆ ಆಹಾರವನ್ನು ಕೆದಕುವಾಗ ತನ್ನ ಮಂಡಿಗಳನ್ನು ಊರುವುದೂ ಗುರುಗುಡುವುದೂ ಮಾಡುತ್ತದೆ. ಹೆಣ್ಣು ಹಂದಿಗಳು ಒಂಟಿಯಾಗಿ ಇಲ್ಲವೆ ಜೊತೆಜೊತೆಯಾಗಿ ಇಲ್ಲವೆ ಸಣ್ಣ ಗುಂಪುಗಳಲ್ಲಿ ಓಡಾಡುವುವು. ಗಂಡುಗಳು ಮಾತ್ರ ಒಂಟಿಯಾಗಿಯೇ ಇರುವುವು. ಎಲ್ಲ ಹಂದಿಗಳಂತೆ ಈ ಹಂದಿಗೂ ಕೆಸರಲ್ಲಿ ಹೊರಳಾಡುವುದೆಂದರೆ ಬಲು ಇಷ್ಟ. ನೋಡಲು ಭೀಕರವಾಗಿ ಕಂಡರೂ ನರುಳ್ಳಿ ಹಂದಿ ತಾನಾಗಿಯೇ ಆಕ್ರಮಣ ಮಾಡದು. ಆದರೆ ಶತ್ರುಗಳಿಂದ ಆವೃತವಾದಾಗ ಹೋರಾಡುತ್ತದೆ.
ಇದರ ಸಂತಾನಾಭಿವೃದ್ಧಿಯ ಶ್ರಾಯ ಅಕ್ಟೋಬರ್-ನವೆಂಬರ್. ಒಂದು ಸಲಕ್ಕೆ 2-4 ಮರಿಗಳು ಹುಟ್ಟುವುವು. ಇದರ ಮಾಂಸ ರುಚಿಕರವಾಗಿದೆಯಾದ್ದರಿಂದ ಇದನ್ನು ಬೇಟೆಯಾಡುವುದಿದೆ. (ಬಿ.ಕೆ.ಜೆ.)