ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನವೀನ ನ್ಯಾಯ

ವಿಕಿಸೋರ್ಸ್ದಿಂದ

ನವೀನ ನ್ಯಾಯ - ಭಾರತೀಯ ನ್ಯಾಯಶಾಸ್ತ್ರ ಪ್ರಾಚೀನ ನ್ಯಾಯ ಮತ್ತು ನವೀನ ನ್ಯಾಯ ಎಂಬ ಎರಡು ವಿಭಾಗಗಳನ್ನೊಳಗೊಂಡಿದೆ. ನ್ಯಾಯ ಮತ್ತು ವೈಶೇಷಿಕ ಎಂಬ ಪ್ರತ್ಯೇಕವಾದ ಎರಡು ಶಾಸ್ತ್ರಗಳನ್ನೇ ಪ್ರಾಚೀನ ನ್ಯಾಯವೆನ್ನುತ್ತಾರೆ. ಇವೆರಡನ್ನೂ ಒಟ್ಟುಗೂಡಿಸಿ ಬೆಳೆಸಿದ ಶಾಸ್ತ್ರವೇ ನವೀನ ನ್ಯಾಯ. ಪ್ರತ್ಯೇಕವಾದ ಎರಡು ಶಾಸ್ತ್ರಗಳನ್ನೂ ಒಟ್ಟುಗೂಡಿಸಿರುವುದು ಹೀಗೆ:

ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸಾ, ವೇದಾಂತ ಎಂದು ಆಸ್ತಿಕ ದರ್ಶನಗಳು ಆರು. ಇದರಲ್ಲಿ ನ್ಯಾಯ ಮತ್ತು ವೈಶೇಕ್ಷಿಕ, ಸಾಂಖ್ಯ ಮತ್ತು ಯೋಗ, ಮೀಮಾಂಸ ಮತ್ತು ವೇದಾಂತ ಎಂದು ಮೂರು ದ್ವಂದ್ವಶಾಸ್ತ್ರಗಳು ಜೋಡಿ ಶಾಸ್ತ್ರಗಳಾಗುತ್ತವೆ. ಒಂದೊಂದು ಜೊತೆಯಲ್ಲಿರುವ ಎರಡೆರಡು ಶಾಸ್ತ್ರಗಳು ಪರಸ್ಪರ ಪೂರಕವಾದವು. ಒಂದಕ್ಕೊಂದು ಅನೇಕ ಭಾಗಗಳಲ್ಲಿ ಸಹಕಾರಿಯಾಗಿವೆ. ಆದ್ದರಿಂದ ಇವನ್ನು ಸಮಾನ ತಂತ್ರವೆಂದು ಕರೆಯುತ್ತಾರೆ. ಅಂದರೆ ನ್ಯಾಯ ವೈಶೇಷಿಕ ಒಂದು ಸಮಾನ ತಂತ್ರ. ಹೀಗೆ ಸಾಂಖ್ಯ ಯೋಗ ಸಮಾನ ತಂತ್ರ. ಮೀಮಾಂಸಾ, ವೇದಾಂತ ಸಮಾನ ತಂತ್ರ. ಈ ಮೂರು ಜೊತೆಗಳನ್ನೂ ಕ್ರಮವಾಗಿ ತರ್ಕ, ಸಾಂಖ್ಯ, ಮೀಮಾಂಸಾ ಎಂದು ವ್ಯವಹರಿಸುವುದೂ ಉಂಟು. ಹೀಗೆ ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಪ್ರತ್ಯೇಕವಾಗಿದ್ದರೂ ಇವನ್ನು ತರ್ಕಶಾಸ್ತ್ರ ಎಂದು ಒಟ್ಟುಗೂಡಿಸಿ ವ್ಯವಹರಿಸುವಾಗಲೆ ಇವೆರಡು ಶಾಸ್ತ್ರಗಳ ಪ್ರಾಚೀನ ತರ್ಕ ಅಥವಾ ಪ್ರಾಚೀನ ನ್ಯಾಯ ಎಂಬ ಹೆಸರನ್ನು ಪಡೆಯುತ್ತವೆ. ಇವೆರಡು ಶಾಸ್ತ್ರಗಳು ತಮ್ಮ ಪ್ರತ್ಯೇಕತೆಯನ್ನು ಕಳೆದುಕೊಂಡು ಮಿಲನವಾದಾಗಲೇ ನವೀನ ನ್ಯಾಯಶಾಸ್ತ್ರದ ಉಗಮವಾಯಿತು. ಮೈಥಿಲ ದೇಶದ ಗಂಗೇಶೋಪಾಧ್ಯಾಯನೇ (ಸುಮಾರು 13ನೆಯ ಶತಮಾನ) ಈ ಎರಡು ಶಾಸ್ತ್ರಗಳನ್ನೂ ಅದ್ಭುತ ರೀತಿಯಲ್ಲಿ ಒಟ್ಟುಗೂಡಿಸಿ ನವೀನ ನ್ಯಾಯ ಶಾಸ್ತ್ರ ಪ್ರವರ್ತಕನಾದ. ನ್ಯಾಯ ಪ್ರಮಾಣ ಶಾಸ್ತ್ರ, ವೈಶೇಷಿಕ ಪ್ರಮೇಯ ಶಾಸ್ತ್ರ, ಅಂದರೆ ಪ್ರತ್ಯಕ್ಷಾದಿ ಪ್ರಮಾಣಗಳ ನಿರೂಪಣೆಯೇ ನ್ಯಾಯಶಾಸ್ತ್ರದ ಪ್ರಧಾನ ಗುರಿ. ದ್ರವ್ಯಾದಿ ಪದಾರ್ಥಗಳ ನಿರೂಪಣೆಯೇ ವೈಶೇಷಿಕ ಶಾಸ್ತ್ರದ ಪ್ರಧಾನ ಗುರಿ, ಪ್ರಮಾಣ ಮತ್ತು ಪ್ರಮೇಯಗಳು ಪರಸ್ಪರ ಪೂರಕವಾಗಿವೆ. ಪ್ರಮೇಯವಿಲ್ಲದಿದ್ದಲ್ಲಿ ಪ್ರಮಾಣಗಳಿಗೆ ಸ್ಥಾನವೇ ಇಲ್ಲ. ಪ್ರಮಾಣವಿಲ್ಲದಿದ್ದಲ್ಲಿ ಪ್ರಮೇಯಗಳು ಸಿದ್ಧಿಸುವುದೇ ಇಲ್ಲ. ಆದ್ದರಿಂದ ವೈಶೇಷಿಕರು ಹೇಳಿದ ಪ್ರಮೇಯಗಳನ್ನೂ ನ್ಯಾಯದವರು ಹೇಳಿದ ಪ್ರಮಾಣಗಳನ್ನೂ ಒಂದೇ ಗ್ರಂಥದಲ್ಲಿ ವಿಸ್ತಾರವಾಗಿ ಗಂಗೇಶೋಪಾಧ್ಯಾಯ ನಿರೂಪಿಸಿದ್ದಾನೆ. ಇವನ ಪ್ರಕಾರ ತರ್ಕಶಾಸ್ತ್ರದಲ್ಲಿ ಪ್ರಮೇಯಗಳು 7, ಪ್ರಮಾಣಗಳು 4. ಇದರಿಂದ ಈ ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಒಂದಾಗಿ ಮಿಲಿತವಾದವು. ಇದನ್ನು ಸಾಧಿಸಿರುವ ಗ್ರಂಥಕ್ಕೆ ತತ್ತ್ವಚಿಂತಾಮಣಿ ಎಂದು ಹೆಸರು. ಈಗ ನಮಗೆ ದೊರೆಯುವ ನವೀನ ನ್ಯಾಯ ಶಾಸ್ತ್ರ ಗ್ರಂಥಗಳೆಲ್ಲವೂ ತತ್ತ್ವಚಿಂತಾಮಣಿಯನ್ನೇ ಮೂಲಗ್ರಂಥವನ್ನಾಗಿ ಇಟ್ಟುಕೊಂಡು ರಚಿತವಾಗಿದೆ. ಗಂಗೇಶೋಪಾಧ್ಯಾಯನ ಅನಂತರ ರಘುನಾಥ ಶಿರೋಮಣಿ, ಮಧುರಾನಾಥ, ಜಗದೀಶ, ಗದಾಧರ ಮುಂತಾದ ಅನೇಕ ಪ್ರೌಢ ವಿದ್ವಾಂಸರು ಈ ತತ್ತ್ವಚಿಂತಾಮಣಿಗೆ ವ್ಯಾಖ್ಯಾನಗಳನ್ನು ಬರೆದು ಈ ಶಾಸ್ತ್ರವನ್ನು ಬಹಳವಾಗಿ ವಿಸ್ತರಿಸಿದ್ದಾರೆ. (ಕೆ.ಎಸ್.ವಿ.)