ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನವ ಅಭಿಜಾತ ಪಂಥ
ನವ ಅಭಿಜಾತ ಪಂಥ - 1870ರಿಂದ 1ನೆಯ ಮಹಾಯುದ್ಧದವರೆಗಿನ ಅವಧಿಯಲ್ಲಿ ಯೂರೋಪ್ ಅಮೆರಿಕಗಳಲ್ಲಿ ಪ್ರಚಲಿತವಾಗಿದ್ದ, ಅರ್ಥಶಾಸ್ತ್ರಜ್ಞರ ಒಂದು ಪಂಥ. ಈ ಪಂಥದವರು 19ನೆಯ ಶತಮಾನದ ಆರಂಭದ ಕಾಲದಿಂದ ಅದುವರೆಗೆ ಸಂಭವಿಸಿದ್ದ ಬದಲಾವಣೆಗಳ ದೃಷ್ಟಿಯಲ್ಲಿ ಆರ್ಥಿಕ ಸಿದ್ಧಾಂತವನ್ನು ಪುನರ್ರಚಿಸಿದರು. ಇಂಗ್ಲೆಂಡಿನಲ್ಲಿ ವಿಲಿಯಂ ಸ್ಟಾನ್ಲೆ ಜೆವನ್ಸ್ (1835-1882). ಆಸ್ಟ್ರಿಯದಲ್ಲಿ ಕಾರ್ಲ್ ಮೆಂಜರ್ (1840-1921). ಫ್ರಾನ್ಸಿನಲ್ಲಿ ಲಿಯಾನ್ ವ್ಯಾಲ್‍ರಾ (1834-1910), ಇವರು ಈ ಪಂಥದ ಪ್ರವರ್ತಕರು. ಇವರಿಂದ ಅರ್ಥಶಾಸ್ತ್ರದ ಸ್ವರೂಪವೇ ಬಹಳಮಟ್ಟಿಗೆ ಬದಲಾಯಿತು. ಅರ್ಥಶಾಸ್ತ್ರ ಒಂದು ವಿಜ್ಞಾನ ಎಂಬ ಮನ್ನಣೆ ಪಡೆಯಲು ಇವರೂ ಇವರ ಅನಂತರ ಬಂದವರೂ ಪ್ರತಿಪಾದಿಸಿದ ಸಿದ್ಧಾಂತಗಳು ಬಹುತೇಕ ಕಾರಣ. ಅಭಿಜಾತ ಪಂಥದ ಸಿದ್ಧಾಂತಗಳೊಂದಿಗೆ ಹೋಲಿಸಿದರೆ ಇವರ ಸಿದ್ಧಾಂತಗಳು ಬಹಳ ಮಟ್ಟಿಗೆ ಗಣಿತೀಯವೆನ್ನಬಹುದು. ಇವರಿಂದಾಗಿ ಅರ್ಥಶಾಸ್ತ್ರದ ಪರಿಭಾಷೆ ವಿಶಿಷ್ಟವಾಗಿ ಬೆಳೆಯಿತು. ಆ ಕಾಲದಲ್ಲಿ ಇವರ ಚಿಂತನಗಳನ್ನು ಸರ್ಕಾರವೂ ಸಾಮಾನ್ಯರೂ ಅಷ್ಟಾಗಿ ಸ್ವಾಗತಿಸಲಿಲ್ಲ. ಒಟ್ಟು ಆರ್ಥಿಕ ಉತ್ಪನ್ನವನ್ನಾಗಲಿ ವರಮಾನವನ್ನಾಗಲಿ ಅಳೆಯುವಲ್ಲಿ ಅಭಿಜಾತ ಅರ್ಥಶಾಸ್ತ್ರಜ್ಞರು ಅನುಸರಿಸುತ್ತಿದ್ದ ಸಮಷ್ಟಿ ದೃಷ್ಟಿಯನ್ನು ಇವರು ತ್ಯಜಿಸಿದರು.
ನವ ಅಭಿಜಾತ ಪಂಥದ ಸ್ಥಾಪಕರ ಮಾರ್ಗವನ್ನು 20ನೆಯ ಶತಮಾನದ ಆದಿಯಲ್ಲಿ ಇಂಗ್ಲೆಂಡಿನ ಆಲ್ಫ್ರೆಡ್ ಮಾರ್ಷಲ್ (1842-1924), ಆಸ್ಟ್ರಿಯದ ಯೂಜಿನ ಫಾನ್ ಬಮ್ ಬಾವೆರ್ಕ್ (1851-1914) ಮತ್ತು ಫ್ರೀಡ್ರಿಕ್ ಫಾನ್ ವೀಸûರ್(1851-1926), ಸ್ವಿಟ್‍ಜûರ್ಲೆಂಡಿನ ವಿಲ್‍ಫ್ರೆಡೊ ಪಾರೇಟೊ (1848-1923), ಸ್ವೀಡನ್ನಿನ ನಟ್ ವಿಕ್ಸೆಲ್ (1851-1926), ಅಮೆರಿಕದ ಜೆ.ಬಿ. ಕ್ಲಾರ್ಕ್ (1847-1938), ಅರ್ವಿಂಗ್ ಫಿಷರ್ (1867-1947) ಮುಂತಾದ ಅರ್ಥಶಾಸ್ತ್ರಜ್ಞರು ಮುಂದುವರಿಸಿದರು.
ನವ ಅಭಿಜಾತ ಪಂಥದವರು ತಮ್ಮ ಹಿಂದಿನ ಅರ್ಥಶಾಸ್ತ್ರಜ್ಞರಂತೆ ಕೇವಲಮಾನವನ ಭಾವನೆಗಳಿಗೆ ಪ್ರಾಮುಖ್ಯ ಕೊಡಲಿಲ್ಲ. ಇವರು ವಾಸ್ತವಿಕ ಪ್ರಪಂಚದಲ್ಲಿ ಉಂಟಾಗುವ ಪ್ರತಿನಿತ್ಯದ ಆರ್ಥಿಕ ಚಟುವಟಿಕೆಗಳಿಗೆ ಪ್ರಾಮುಖ್ಯ ನೀಡಿ, ಅದರ ತಳಹದಿಯ ಮೇಲೆ ತಮ್ಮ ಸಿದ್ಧಾಂತಗಳನ್ನು ರೂಪಿಸಿದರು. ಇವರು ತಮ್ಮ ತತ್ತ್ವಗಳನ್ನು ಪ್ರತಿಪಾದಿಸುತ್ತಿದ್ದ ಅವಧಿಯಲ್ಲಿ ಸಮಾಜದ ಆರ್ಥಿಕ ಪರಿಸ್ಥಿತಿಯಲ್ಲಿ ಬಹಳಮಟ್ಟಿಗೆ ಬದಲಾವಣೆಯಾಗಿತ್ತು. ಕೈಗಾರಿಕಾ ದೇಶಗಳಲ್ಲಿ ತೀವ್ರಗತಿಯಲ್ಲಿ ತಾಂತ್ರಿಕ ಜ್ಞಾನ ಬೆಳೆದು ಬೆಳವಣಿಗೆಯ ವೇಗ ಹೆಚ್ಚುತ್ತಿತ್ತು. ಕಾರ್ಮಿಕರ ವರಮಾನ ಅಧಿಕಗೊಂಡು ಅವರಿಗೆ ಉತ್ತಮ ಜೀವನ ಮಟ್ಟದ ಅವಕಾಶ ದೊರಕಿತ್ತು. ಆದ್ದರಿಂದ ಅಭಿಜಾತ ಪಂಥದ ಅರ್ಥಶಾಸ್ತ್ರಜ್ಞರಾದ ರಿಕಾರ್ಡೊ, ಮಾಲ್ತಸ್ ಮುಂತಾದವರಂತೆ ನಿರಾಶೆಯ ವಾದಕ್ಕೆ ಎಡೆ ಇರಲಿಲ್ಲ. ನವ ಅಭಿಜಾತ ಪಂಥದವರು ಆಶಾವಾದದ ಆಧಾರದ ಮೇಲೆ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿದರು.
ಮೌಲ್ಯ ನಿರ್ಧಾರಣ ಸಿದ್ಧಾಂತವನ್ನು ರೂಪಿಸುವುದರಲ್ಲಿ ನವ ಅಭಿಜಾತ ಪಂಥದ ವಿಶಿಷ್ಟ ಕೊಡುಗೆ ಕಂಡುಬರುತ್ತದೆ. ಆರ್ಥಿಕ ವ್ಯವಸ್ಥೆಯಲ್ಲಿರುವ ಉತ್ಪಾದನ ಘಟಕಗಳೆಲ್ಲ ಸಣ್ಣ ಗಾತ್ರದವಾಗಿರುತ್ತವೆಂದೂ ಯಾವುದೇ ಒಂದು ಉತ್ಪಾದನಾ ಘಟಕ ತನ್ನ ಪ್ರಭಾವದಿಂದ ಮಾರುಕಟ್ಟೆಯ ಮೇಲೆ ಪರಿಣಾಮ ಉಂಟುಮಾಡುವ ಸಾಮಥ್ರ್ಯ ಹೊಂದಿಲ್ಲವೆಂದೂ ಅಭಿಜಾತ ಪಂಥದವರು ಭಾವಿಸಿದ್ದರು. ಆದ್ದರಿಂದ ಪರಿಪೂರ್ಣ ಪೈಪೋಟಿ ಮಾರುಕಟ್ಟೆ ವ್ಯವಸ್ಥೆಯ ಸಾಧ್ಯತೆಯನ್ನೂ ಸಹಜತೆಯನ್ನೂ ಅವರು ಸ್ವೀಕರಿಸಿದ್ದರು. ಆದರೆ ನವ ಅಭಿಜಾತ ಪಂಥದ 20ನೆಯ ಶತಮಾನದ ಅರ್ಥಶಾಸ್ತ್ರಜ್ಞರು ಈ ಪರಿಕಲ್ಪನೆಯನ್ನು ಪೂರ್ಣವಾಗಿ ಒಪ್ಪಿಕೊಳ್ಳಲಿಲ್ಲ. ಬೃಹದ್ಗಾತ್ರದ ಉತ್ಪಾದನ ಘಟಕಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಆರ್ಥಿಕತೆಯಲ್ಲಿ ಅಪರಿಪೂರ್ಣ ಪೈಪೋಟಿ ಮಾರುಕಟ್ಟೆ ಮತ್ತು ಏಕಸ್ವಾಮ್ಯ ಮಾರುಕಟ್ಟೆ ವ್ಯವಸ್ಥೆಗಳು ಕಂಡುಬರುತ್ತವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಣದ ಮೌಲ್ಯ ನಿರ್ಧಾರಣದಲ್ಲಿ ಅವರು ಅಭಿಜಾತ ಪಂಥದ ಅಭಿಪ್ರಾಯವನ್ನು ಒಪ್ಪಿಕೊಂಡರು. ಹಣದ ಪರಿಮಾಣದಲ್ಲಿ ಬದಲಾವಣೆಯಾದರೆ ಬೆಲೆಗಳ ಮೇಲೆ ಅದರ ಪರಿಣಾಮ ಉಂಟಾಗುತ್ತದೆ ಎಂಬ ಸಿದ್ಧಾಂತವನ್ನು ಸ್ವೀಕರಿಸಿದರು. ಆದರೆ ಉತ್ಪಾದನೆ ಮತ್ತು ವಿತರಣೆಯ ಮೇಲೆ ಅದರ ಪರಿಣಾಮ ಬಹಳ ಕಡಿಮೆ ಎಂಬುದು ಅವರ ಭಾವನೆ.
ಪದಾರ್ಥದ ಮೌಲ್ಯ ನಿರ್ಧಾರಣಕ್ಕೆ ಸಂಬಂಧಿಸಿದಂತೆ ಅಭಿಜಾತ ಪಂಥದವರು ರೂಪಿಸಿದ್ದ ಪರಿಕಲ್ಪನೆಯನ್ನು ನವ ಅಭಿಜಾತ ಪಂಥದವರು ತಳ್ಳಿಹಾಕಿದರು. ಉತ್ಪಾದನೆಯಲ್ಲಿ ತೊಡಗಿಸಲಾದ ಶ್ರಮಕ್ಕೆ ಅನುಗುಣವಾಗಿ ಪದಾರ್ಥದ ಉತ್ಪಾದನ ವೆಚ್ಚ ನಿರ್ಧಾರಿತವಾಗುತ್ತದೆ ಎಂದು ಅಭಿಜಾತ ಪಂಥದವರು ಭಾವಿಸಿದ್ದರು. ಈ ಉತ್ಪಾದನಾ ವೆಚ್ಚದ ಆಧಾರದ ಮೇಲೆ ವಸ್ತುವಿನ ಮೌಲ್ಯದ ನಿರ್ಧಾರಣವಾಗುತ್ತದೆ ಎಂದು ಅವರು ತಿಳಿದಿದ್ದರು. ಆದರೆ ನವ ಅಭಿಜಾತ ಪಂಥದವರು ಈ ವಾದವನ್ನು ಒಪ್ಪಿಕೊಳ್ಳಲಿಲ್ಲ. ಅನುಭೋಗಿ ಒಂದು ವಸ್ತುವನ್ನು ಉಪಯೋಗಿಸಿದಾಗ ಅದರಿಂದ ಆತ ಪಡೆಯುವ ತುಷ್ಟಿಗುಣದ ಆಧಾರದ ಮೇಲೆ ಆ ವಸ್ತುವಿನ ಮೌಲ್ಯ ನಿರ್ಧರಿಸಲ್ಪಡುತ್ತದೆ ಎಂದು ನವ ಅಭಿಜಾತ ಪಂಥದವರು ಪ್ರತಿಪಾದಿಸಿದರು.
ತುಷ್ಟಿಗುಣದ ಆಧಾರದ ಮೇಲೆ ಇವರು ವ್ಯಷ್ಟಿ ಅರ್ಥಶಾಸ್ತ್ರ ಸಿದ್ಧಾಂತವನ್ನು ರೂಪಿಸಿದರು. ಜೊತೆಗೆ ಉತ್ಪಾದನಾ ವ್ಯವಸ್ಥೆಯಲ್ಲಿ ಯಾವ ರೀತಿ ಸಮತೋಲ ಸ್ಥಿತಿ ಉಂಟಾಗುತ್ತದೆ ಎಂಬುದನ್ನು ಕುರಿತೂ ವಿಶ್ಲೇಷಿಸಿದರು. ಇದಕ್ಕಾಗಿ ಗಣಿತವಿಜ್ಞಾನದ ಸಾಧನಗಳನ್ನು ಬಳಸಿಕೊಂಡರು.
ಜರ್ಮನ್ ಅರ್ಥಶಾಸ್ತ್ರಜ್ಞ ಗೊಸೆನ್ (1810-1858) ತುಷ್ಟಿಗುಣ ಸಿದ್ಧಾಂತ ಕುರಿತು 1854ರಲ್ಲಿ ತನ್ನ ಪುಸ್ತಕವನ್ನು ಪ್ರಕಟಿಸಿ ಅರ್ಥಶಾಸ್ತ್ರಜ್ಞರಿಗೆ ಅದರ ಮಹತ್ತ್ವವನ್ನು ತೋರಿಸಿಕೊಟ್ಟಿದ್ದ. ಖಗೋಳವಿಜ್ಞಾನದ ಬೆಳವಣಿಗೆಗೆ ವಿಜ್ಞಾನಿ ಕೋಪರ್‍ನಿಕಸ್ ನೀಡಿದ ಕೊಡುಗೆಯಂತೆ ಅರ್ಥಶಾಸ್ತ್ರ ಬೆಳವಣಿಗೆಗೆ ತನ್ನದು ಪ್ರಮುಖ ಕೊಡುಗೆಯೆಂದು ಗೊಸೆನ್ ಹೇಳಿದ್ದ. ಆದರೆ ಅವನ ವಾದ ಆಗಿನ ಅರ್ಥಶಾಸ್ತ್ರಜ್ಞರ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ. ಅವನ ಪುಸ್ತಕವನ್ನು ಯಾರೂ ಕೊಳ್ಳಲಿಲ್ಲ. ಆಗ ಗೊಸೆನ್ ಕೋಪಗೊಂಡು ತನ್ನ ಪುಸ್ತಕದ ಪ್ರತಿಗಳನ್ನೆಲ್ಲ ಅಂಗಡಿಯಿಂದ ವಾಪಸು ತಂದು ನಾಶಮಾಡಿದ.
ಆದರೆ 1870ರ ವೇಳೆಗೆ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಗೊಸೆನನ ಕೊಡುಗೆಯ ಮಹತ್ತ್ವ ಗಣನೆಗೆ ಬರತೊಡಗಿತು. ಕಾರ್ಲ್ ಮೆಂಜರ್, ವ್ಯಾಲ್‍ರಾ, ಜೆವನ್ಸ್ ಮತ್ತು ಮಾರ್ಷಲರು ತುಷ್ಟಿಗುಣ ಸಿದ್ಧಾಂತದ ಮಹತ್ತ್ವವನ್ನು ಅರಿತುಕೊಂಡರು. ನವ ಅಭಿಜಾತ ಪಂಥದವರು ಸೀಮಾಂತ ತುಷ್ಟಿಗುಣ ಸಿದ್ಧಾಂತವನ್ನು ಬಳಕೆಗೆ ತಂದು, ಅರ್ಥಶಾಸ್ತ್ರದಲ್ಲಿ ಅದರ ಪ್ರಯೋಜನವನ್ನು ತೋರಿಸಿಕೊಟ್ಟರು.
ತುಷ್ಟಿಗುಣದ ಸಿದ್ದಾಂತದಿಂದ ಅರ್ಥಶಾಸ್ತ್ರದ ಎರಡು ಪ್ರಮುಖ ನಿಯಮಗಳ ಉದಯಕ್ಕೆ ಕಾರಣವಾಯಿತು. ಮೊದಲನೆಯದು ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮ. ಒಂದು ಆರ್ಥಿಕ ಸರಕಿನ ಘಟಕಗಳನ್ನು ಅನುಕ್ರಮವಾಗಿ ಪಡೆಯುತ್ತ ಹೋದಂತೆ ಅನುಭೋಗಿಗೆ ಅವುಗಳ ಸೀಮಾಂತ ತುಷ್ಟಿಗುಣಗಳು ಕಡಿಮೆಯಾಗುತ್ತ ಹೋಗುತ್ತವೆ. ಆ ಸರಕಿನ ಒಟ್ಟು ತುಷ್ಟಿಗುಣಕ್ಕೆ ಆಗುವ ಸೇರ್ಪಡೆಗಳು ಅನುಕ್ರಮವಾಗಿ ಇಳಿಯುತ್ತವೆ-ಎಂಬುದು ಈ ನಿಯಮ. ಎರಡನೆಯದು ಪ್ರತಿನಿಧಾನ ನಿಯಮ. ವಿವಿಧ ಆರ್ಥಿಕ ಸರಕುಗಳಿಂದ ತನಗೆ ದೊರಕುವ ಸೀಮಾಂತ ತೃಪ್ತಿಗಳು ಸಮನಾಗಿರುವಂತೆ ಅನುಭೋಗಿ ಆ ಸರಕುಗಳ ಕೊಳ್ಳಿಕೆಯನ್ನು ಸೂಕ್ತವಾಗಿ ಹೊಂದಿಸಿಕೊಳ್ಳುತ್ತಾನೆಂಬುದಾಗಿ ಪ್ರತಿವಿಧಾನ ನಿಯಮ ಹೇಳುತ್ತದೆ.
ಒಂದು ಸರಕಿನ ಮೌಲ್ಯ ಹೇಗೆ ನಿರ್ಧಾರಿತವಾಗುತ್ತದೆ ಎಂಬುದರ ಮೇಲೆ ನವ ಅಭಿಜಾತ ಪಂಥದವರು ರೂಪಿಸಿದ ಈ ಎರಡು ನಿಯಮಗಳು ಹೊಸ ಬೆಳಕನ್ನು ಚೆಲ್ಲುತ್ತವೆ. ಅಭಿಜಾತ ಅರ್ಥಶಾಸ್ತ್ರಜ್ಞರು ರೂಪಿಸಿದ ಮೌಲ್ಯ ನಿರ್ಧಾರಣ ಸಿದ್ಧಾಂತದ ವೈರುಧ್ಯವನ್ನು ನವ ಅಭಿಜಾತ ಪಂಥದ ಸೀಮಾಂತ ತುಷ್ಟಿಗುಣ ನಿಯಮ ಪರಿಹರಿಸುತ್ತದೆ. ವಜ್ರ, ಚಿನ್ನ ಮುಂತಾದವಕ್ಕೆ ಸಾಮಾನ್ಯವಾಗಿ ಏಕೆ ಬೆಲೆ ಹೆಚ್ಚು, ಆದರೆ ಗಾಳಿ ಮತ್ತು ನೀರಿಗೆ ಏಕೆ ಕಡಿಮೆ ಎಂಬುದಕ್ಕೆ ತರ್ಕಬದ್ಧ ಉತ್ತರ ನೀಡಲು ಆ ಪಂಥಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ನವ ಅಭಿಜಾತ ಪಂಥದ ಸೀಮಾಂತ ನಿಯಮ ಇದಕ್ಕೆ ಉತ್ತರ ನೀಡುತ್ತದೆ. ಗಾಳಿ, ನೀರು ಮುಂತಾದವುಗಳ ಸೀಮಾಂತ ತುಷ್ಟಿಗುಣ ಸಾಪೇಕ್ಷವಾಗಿ ಕಡಿಮೆ ಇರುತ್ತದೆ; ಆದ್ದರಿಂದ ಬೆಲೆ ಕಡಿಮೆ. ವಜ್ರ, ಚಿನ್ನ ಮುಂತಾದವಕ್ಕೆ ಇದು ಅಧಿಕ; ಆದ್ದರಿಂದ ಬೆಲೆ ಹೆಚ್ಚು ಎಂದು ನವ ಅಭಿಜಾತ ಪಂಥದವರು ವಾದಿಸುತ್ತಾರೆ.
ನವ ಅಭಿಜಾತ ಪಂಥದ ಪ್ರಮುಖ ಅರ್ಥಶಾಸ್ತ್ರಜ್ಞರಾದ ಜೆವನ್ಸ್, ಮಾರ್ಷಲ್ ಇವರು ತುಷ್ಟಿಗುಣ ನಿಯಮಗಳನ್ನು ಬಳಸಿಕೊಂಡು ಮೌಲ್ಯ ನಿರ್ಧಾರಣ ಸಿದ್ಧಾಂತವನ್ನು ಪರಿಪೂರ್ಣಗೊಳಿಸಿದರು. ಕತ್ತರಿಯ ಕೆಲಸ ಮಾಡಲು ಅದರ ಎರಡು ಅಲಗುಗಳು ಹೇಗೆ ಅವಶ್ಯಕವೋ ಹಾಗೆ ಆ ಒಂದು ಸರಕಿನ ಮೌಲ್ಯ ನಿರ್ಧಾರಣದಲ್ಲಿ ಎರಡು ಅಂಶಗಳು ಬಹಳ ಅವಶ್ಯಕ ಎಂದು ಮಾರ್ಷಲ್ ತೋರಿಸಿಕೊಟ್ಟರು. ಸರಕಿನ ಉತ್ಪಾದನ ವೆಚ್ಚ, ಆ ಸರಕಿನ ತುಷ್ಟಿಗುಣ-ಇವೇ ಆ ಎರಡು ಅಂಶಗಳು. ಸರಕಿನ ಪೂರೈಕೆಯನ್ನು ನಿರ್ಧರಿಸುವ ಅಂಶವೆಂದರೆ ಅದರ ಉತ್ಪಾದನ ವೆಚ್ಚ. ಅನುಭೋಗಿಯ ತುಷ್ಟಿಗುಣದಿಂದ ಆ ಸರಕಿಗೆ ಬೇಡಿಕೆಯ ನಿರ್ಧಾರಣವಾಗುತ್ತದೆ. ಈ ಎರಡೂ ಅಲಗುಗಳ ಪರಸ್ಪರ ಕ್ರಿಯೆಯಿಂದ ಸರಕಿನ ಬೆಲೆ ನಿರ್ಧರಿಸಲ್ಪಡುತ್ತದೆ-ಎಂದು ಮಾರ್ಷಲ್ ಪ್ರತಿಪಾದಿಸಿದ್ದಾರೆ.
ನವ ಅಭಿಜಾತ ಪಂಥದವರು ಪರಿಪೂರ್ಣ ಪೈಪೋಟಿ ಮಾರುಕಟ್ಟೆ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರು. ಆದ್ದರಿಂದ ಮಾರುಕಟ್ಟೆಯಲ್ಲಿ ಪ್ರಥಮತಃ ಸರಕಿನ ಬೆಲೆ ಅದರ ಬೇಡಿಕೆ ಮತ್ತು ಪೂರೈಕೆಗಳ ಆಧಾರದ ಮೇಲೆ ನಿರ್ಧಾರಿತವಾಗುತ್ತದೆ ಎಂದು ಪ್ರತಿಪಾದಿಸಿದರು. ಆದರೆ ಪ್ರಥಮತಃ ನಿರ್ಧಾರಿತವಾದ ಮಟ್ಟದಲ್ಲೇ ಸದಾ ಕಾಲಕ್ಕೂ ಅದರ ಬೆಲೆ ಇರುವುದಿಲ್ಲ ಎಂಬುದನ್ನು ಒಪ್ಪಿಕೊಂಡರು. ಮಾರುಕಟ್ಟೆಯಲ್ಲಿ ಕಂಡುಬರುವ ಪ್ರವೃತ್ತಿಗಳ ಪರಸ್ಪರ ಹೊಂದಾಣಿಕೆಗೆ ಸಾಕಷ್ಟು ಕಾಲಾವಕಾಶ ನೀಡಿದರೆ ಸರಕಿನ ಬೆಲೆ ಅಂತಿಮವಾಗಿ ಸಮತೋಲನ ಸ್ಥಿತಿಯಲ್ಲಿ ನಿರ್ಧಾರಿತವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಅರ್ಥಶಾಸ್ತ್ರದಲ್ಲಿ ಸಮತೋಲದ ಪರಿಕಲ್ಪನೆಯನ್ನು ತಂದ ಕೀರ್ತಿ ಸಂಪೂರ್ಣವಾಗಿ ನವ ಅಭಿಜಾತ ಪಂಥದವರಿಗೆ ಸೇರಿದ್ದು. ವ್ಯಾಲ್‍ರಾ ಮತ್ತು ಮಾರ್ಷಲರು ಈ ಪರಿಕಲ್ಪನೆಯನ್ನು ಬೆಳಸಿ, ವಿಶ್ಲೇಷಿಸಿ ಅದರ ಪ್ರಾಮುಖ್ಯವನ್ನು ಇತರ ಅರ್ಥಶಾಸ್ತ್ರಜ್ಞರಿಗೆ ತೋರಿಸಿಕೊಟ್ಟರು. ಸಮತೋಲ ವಿಶ್ಲೇಷಣೆಯನ್ನು ರೂಪಿಸುವಲ್ಲಿ ವ್ಯಾಲ್‍ರಾ ಗಣಿತದ ಬಳಕೆಗೆ ಪ್ರಾಮುಖ್ಯ ನೀಡಿದರು. ಆದರೆ ಮಾರ್ಷಲ್ ಇದನ್ನು ಒಪ್ಪಲಿಲ್ಲ. ಮಾರ್ಷಲ್ ಗಣಿತಶಾಸ್ತ್ರದಲ್ಲಿ ಮೇಧಾವಿಯಾಗಿದ್ದರೂ ಜನಸಾಮಾನ್ಯರಿಗೆ ಅರ್ಥಶಾಸ್ತ್ರದ ಸಿದ್ಧಾಂತಗಳು ತಿಳಿಯುವಂತಾಗಬೇಕಾದರೆ ಗಣಿತವನ್ನು ಕನಿಷ್ಠವಾಗಿ ಬಳಸಬೇಕೆಂದು ವಾದಿಸಿದರು.
ನವ ಅಭಿಜಾತ ಪಂಥದ ಬಗ್ಗೆ ಹಲವಾರು ಟೀಕೆಗಳಿವೆ. ಮನುಷ್ಯನ ನಡೆವಳಿಕೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಕುರಿತ ಸರಳ ಪರಿಕಲ್ಪನೆಗಳ ಮೂಲಕ ಈ ಪಂಥದವರು ಅರ್ಥಶಾಸ್ತ್ರ ಸಿದ್ಧಾಂತಗಳನ್ನು ರೂಪಿಸಲು ಯತ್ನಿಸಿದ್ದಾರೆ. ಇವರು ಭಾವಿಸಿರುವಂತೆ ತರ್ಕಿಸುವಂಥ ಬುದ್ಧಿಯುಳ್ಳ ಮನುಷ್ಯನನ್ನು ಸಾರ್ವತ್ರಿಕವಾಗಿ ಸಮಾಜದಲ್ಲಿ ಕಾಣುವುದು ಸಾಧ್ಯವಿಲ್ಲ. ಇವರು ಹೇಳುವಂತೆ ಅನುಭೋಗಿಗಳು ತಮ್ಮ ವ್ಯವಹಾರಗಳಲ್ಲಿ ಸರ್ವದಾ ವಿವೇಚನಾಪರರಾಗಿರುವುದಿಲ್ಲ. ಪರಿಪೂರ್ಣ ಪೈಪೋಟಿ ಮಾರುಕಟ್ಟೆ ವ್ಯವಸ್ಥೆಯನ್ನು ನಿಜಜೀವನದಲ್ಲಿ ಕಾಣುವುದು ಕಷ್ಟ. ಆದ್ದರಿಂದ ಇವರ ಸಿದ್ಧಾಂತಗಳು ಆರ್ಥಿಕ ಚಟುವಟಿಕೆಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲಲಾರವು. ವಾಸ್ತವಿಕ ಪ್ರಪಂಚದ ನಡೆವಳಿಕೆಗೂ ಇವರು ಪ್ರತಿಪಾದಿಸಿರುವ ತತ್ತ್ವಗಳಿಗೂ ಅಂತರವಿದೆ. ಇಪ್ಪತ್ತನೆಯ ಶತಮಾನದ ಬೃಹತ್ ಉದ್ಯಮ ಸಂಸ್ಥೆಗಳು, ಕಾರ್ಮಿಕ ಕೂಟಗಳು, ಸರ್ಕಾರದ ಚಟುವಟಿಕೆಗಳು ಮುಂತಾದ ವಿಚಾರಗಳಲ್ಲಿ ಇವರು ಯಾವ ಆರ್ಥಿಕ ಸಿದ್ಧಾಂತಗಳನ್ನೂ ರೂಪಿಸಲಿಲ್ಲ. ಆರ್ಥಿಕ ಬೆಳವಣಿಗೆ ಈ ಶತಮಾನದ ಪ್ರಮುಖ ವಿಷಯವಾಗಿದೆ. ನಿರುದ್ಯೋಗ ಸಮಸ್ಯೆ ಈ ಶತಮಾನದಲ್ಲಿ ಪ್ರಧಾನವಾಗಿದೆ. ಇವುಗಳ ವಿಷಯ ಕುರಿತು ಇವರು ಗಮನಾರ್ಹವಾದ ಚರ್ಚೆ ನಡೆಸಿಲ್ಲ. ತುಷ್ಟಿಗುಣವನ್ನು ಅಳೆಯಬಹುದು ಎಂಬ ಸಿದ್ಧಾಂತದ ಮೇಲೆ ಇವರು ತಮ್ಮ ಎಲ್ಲ ತತ್ತ್ವಗಳನ್ನು ಪ್ರತಿಪಾದಿಸಿದರು. ಆದರೆ ತುಷ್ಟಿಗುಣವನ್ನು ಅಳೆಯಲು ಸಾಧ್ಯವಿಲ್ಲ ಎಂಬುದು ಈಚಿನ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಸಂಪ್ರದಾಯಬದ್ಧವಾಗಿದ್ದ ನವ ಅಭಿಜಾತ ಮಾರ್ಗವನ್ನು 1930ರಲ್ಲಿ ಕೇನ್ಸ್, ಜಾನ್ ಮೇನರ್ಡ್ (ನೋಡಿ- ಕೇನ್ಸ್,-ಜಾನ್-ಮೇನರ್ಡ್) ಬಿಟ್ಟುಕೊಟ್ಟು ನವ ಅಭಿಜಾತ ದೃಷ್ಟಿಗೆ ವಿರುದ್ಧವಾದ ಸಿದ್ಧಾಂತಗಳನ್ನು ರೂಪಿಸಿದರು. ದ್ರವತ್ವ ಅಧಿಮಾನ್ಯತೆ, ಅಪೂರ್ಣೋದ್ಯೋಗ ಸ್ಥಿತಿಯ ಸಮತೋಲ-ಇವು ಈ ದೃಷ್ಟಿಕೋನಕ್ಕೆ ಅನುಗುಣವಾಗಿ ರೂಪಿತವಾದ ಪರಿಕಲ್ಪನೆಗಳು. ನವ ಅಭಿಜಾತ ಪಂಥದವರು ಅರ್ಥಶಾಸ್ತ್ರದ ಬೆಳವಣಿಗೆಗೆ ಕೆಲವು ವಿಶೇಷ ಕೊಡುಗೆಗಳನ್ನು ನೀಡಿದ್ದಾರೆಂಬುದರಲ್ಲಿ ಸಂದೇಹವಿಲ್ಲ. ಆಧುನಿಕ ಅರ್ಥಶಾಸ್ತ್ರಜ್ಞರು ಅಭಿವೃದ್ಧಿಪಡಿಸಿರುವ ಅನೇಕ ತತ್ತ್ವಗಳಿಗೆ ನವ ಅಭಿಜಾತ ಪಂಥದವರು ಪ್ರತಿಪಾದಿಸಿದ ಸಿದ್ಧಾಂತಗಳು ಆಧಾರವಾಗಿದೆ. ಸೀಮಾಂತ ತುಷ್ಟಿಗುಣ ಪರಿಕಲ್ಪನೆ ಅವರ ಮುಖ್ಯ ಕೊಡುಗೆ. ಇದರ ಪರಿಣಾಮವಾಗಿ ಸೀಮಾಂತ ಸರಕುಗಳು, ಸೀಮಾಂತ ವೆಚ್ಚ, ಸೀಮಾಂತ ವರಮಾನ, ಸೀಮಾಂತ ಉತ್ಪನ್ನ, ಸೀಮಾಂತ ಪ್ರತಿನಿಧಾನ ದರ ಮುಂತಾದವು ಬಳಕೆಗೆ ಬಂದವೆನ್ನಬಹುದು. ಇವನ್ನು ಬಳಸಿಕೊಂಡು ಆಧುನಿಕ ಅರ್ಥಶಾಸ್ತ್ರಜ್ಞರು ಹಲವು ಸಿದ್ಧಾಂತಗಳನ್ನು ರೂಪಿಸಲು ಯತ್ನಿಸಿದ್ದಾರೆ. ನವ ಅಭಿಜಾತ ಪಂಥದ ದೂರದೃಷ್ಟಿ ಮೆಚ್ಚುವಂಥದು. ಅದುವರೆಗೆ ಅಭಿಜಾತ ಪಂಥದವರು ಉತ್ಪಾದನೆಗೆ ಒಂದು ಸಿದ್ಧಾಂತ, ಮೌಲ್ಯ ನಿರ್ಧಾರಣಕ್ಕೆ ಇನ್ನೊಂದು ಸಿದ್ಧಾಂತ, ವಿತರಣೆಗೆ ಮತ್ತೊಂದು-ಹೀಗೆ ವಿವಿಧ ಸಿದ್ಧಾಂತಗಳನ್ನು ರೂಪಿಸಲು ಯತ್ನಿಸಿದ್ದರು. ಆದರೆ ಉತ್ಪಾದನೆ, ವಿಕ್ರಯ, ವಿತರಣೆ ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿವೆಯೆಂಬುದಾಗಿ ನವ ಅಭಿಜಾತ ಪಂಥದವರು ವಾದಿಸಿದರು. ಆದ್ದರಿಂದ ಇವೆಲ್ಲಕ್ಕೂ ಅನ್ವಯಿಸುವಂತೆ ಅವರು ಸೀಮಾಂತ ತತ್ತ್ವದ ಆಧಾರದ ಮೇಲೆ ಸಮಾನವಾದ ಸಿದ್ಧಾಂತವನ್ನು ರೂಪಿಸಿದರು.
ನವ ಅಭಿಜಾತ ಪಂಥದವರು ಪರಿಪೂರ್ಣ ಪೈಪೋಟಿ ಮಾರುಕಟ್ಟೆ ವ್ಯವಸ್ಥೆಯನ್ನು ಒಪ್ಪಿಕೊಂಡರೂ ಹಿಂದಿನವರ ಹಾಗೆ ಅದರ ಮಹತ್ತ್ವವನ್ನು ಒಪ್ಪಿಕೊಳ್ಳಲಿಲ್ಲ. ಅವರು ಈ ವ್ಯವಸ್ಥೆಯ ಕೆಲವು ದೋಷಗಳನ್ನು ಎತ್ತಿ ತೋರಿಸಿದ್ದಾರೆ: 1. ಪರಿಪೂರ್ಣ ಪೈಪೋಟಿ ಇರುವುದರಿಂದ ಜನರ ನಡುವೆ ವರಮಾನ ಹಂಚಿಕೆ ನ್ಯಾಯಯುತವಾಗಿ ಉಂಟಾಗುತ್ತದೆ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಈ ವ್ಯವಸ್ಥೆಯಲ್ಲಿ ವರಮಾನ ಹಂಚಿಕೆಯಾಗುವಾಗ ಒಳ್ಳೆಯ ಅಥವಾ ಕೆಟ್ಟ ಅಥವಾ ಕೆಟ್ಟದೆಂದು ಹೇಳಬಹುದಾದ ಪರಿಣಾಮಗಳಾಗಬಹುದು. 2. ಸಮಾಜದಲ್ಲಿ ವ್ಯಕ್ತಿಯ ಹಿತಾಸಕ್ತಿಗೆ ಪ್ರಾಮುಖ್ಯ ದೊರೆತು, ಸಾಮಾಜಿಕ ಹಿತಕ್ಕೆ ಧಕ್ಕೆಯುಂಟಾಗುವ ಪರಿಸ್ಥಿತಿ ಒದಗಬಹುದು.
ಮೇಲ್ಕಂಡ ದೋಷಗಳು ಉದ್ಭವಿಸಬಹುದಾದ್ದರಿಂದ ಸಮಾಜದ ಹಿತದೃಷ್ಟಿಯಿಂದ ಪರಿಪೂರ್ಣ ಪೈಪೋಟಿ ವ್ಯವಸ್ಥೆಯ ಮೇಲೆ ನಿಯಂತ್ರಣ ಇರಬೇಕಾದ್ದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು. ಇದರ ಆಧಾರದ ಮೇಲೆ ಅರ್ಥಶಾಸ್ತ್ರದಲ್ಲಿ ಕಲ್ಯಾಣ ಅರ್ಥಶಾಸ್ತ್ರ ಎಂಬ ಒಂದು ಶಾಖೆ ಅಸ್ತಿತ್ವಕ್ಕೆ ಬಂತು.
ನವ ಅಭಿಜಾತ ಪಂಥದವರು ಒದಗಿಸಿಕೊಟ್ಟ ತಳಹದಿಯ ಮೇಲೆ ಆಧುನಿಕ ಅರ್ಥಶಾಸ್ತ್ರಜ್ಞರು ಅನೇಕ ನೂತನ ಸಿದ್ಧಾಂತಗಳನ್ನು ರೂಪಿಸಿದ್ದಾರೆ. ನವ ಅಭಿಜಾತ ಪಂಥದವರ ಸಿದ್ಧಾಂತಗಳೂ ಅರ್ಥಶಾಸ್ತ್ರಜ್ಞರಲ್ಲಿ ಒಳ್ಳೆಯ ಪ್ರಚೋದನೆಯನ್ನು ಉಂಟುಮಾಡಿ, ಅವರು ವಾಸ್ತವಿಕ ಆರ್ಥಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತೆ ಮಾಡಿದವು. (ಎನ್.ಪಿ.ಎಸ್.)