ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗಮಣಿ ಎಸ್ ರಾವ್

ವಿಕಿಸೋರ್ಸ್ದಿಂದ

ನಾಗಮಣಿ ಎಸ್ ರಾವ್ - 1936-. ಕನ್ನಡದ ಮೊದಲ ಕಾರ್ಯನಿರತ ಪತ್ರಕರ್ತೆ. ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿನ ವೃತ್ತಿಪರತೆಗಾಗಿ 2004ನೇ ಸಾಲಿನ ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕøತೆ.

ಜನನ ಮೇ 11, 1936ರಲ್ಲಿ, ಮೈಸೂರಿನಲ್ಲಿ. ತಂದೆ ರಾಮೋಹಳ್ಳಿ ರಾಮಚಂದ್ರರಾವ್, ತಾಯಿ ಶಾರದಮ್ಮ. ಪತಿ ಬಿ ಸತ್ಯಾಜಿರಾವ್. ಕರ್ನಾಟಕದ ಪ್ರಸಿದ್ಧ ಕ್ರಿಕೆಟ್ ಅಂಪೈರ್. ಕ್ರಿಕೆಟ್ ವಲಯದಲ್ಲಿ ಗೌರವಾನ್ವಿತ ಹೆಸರು. ವೈಜ್ಞಾನಿಕ ಅಧಿಕಾರಿಯಾಗಿ ಕೇಂದ್ರ ಸರಕಾರದ ಸೇವೆಯಲ್ಲಿದ್ದವರು. ನಾಗಮಣಿಯವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಧರೆ. ವಿಶ್ವವಿದ್ಯಾಲಯಕ್ಕೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಗೌರವ. ಬೆಂಗಳೂರಿನ ಕಾನೂನು ಕಾಲೇಜಿನಿಂದ ಸ್ನಾತಕೋತ್ತರ ಕಾನೂನು ಪದವೀಧರೆ.

1956 ರಿಂದಲೇ ತಾಯಿನಾಡು ಸಂಪರ್ಕ. ಹೆಸರಾಂತ ಪತ್ರಕರ್ತ ಪಿ ಬಿ ಶ್ರೀನಿವಾಸನ್ ಮಾರ್ಗದರ್ಶನ. ಮಾಲೀಕ ವಿ ಆರ್ ರಾಮಯ್ಯ ಪತ್ರಿಕೆಯನ್ನು ಕಾಮಗಾರಿ ಗುತ್ತಿಗೆದಾರ ಹಾಗೂ ಉದ್ಯಮಿ ಎಂ ಎಸ್ ರಾಮಯ್ಯನವರಿಗೆ ಹಸ್ತಾಂತರಿಸಿದ ನಂತರ, `ಜನಮಿತ್ರ ಪತ್ರಿಕೆಗೆ ಸೇರ್ಪಡೆ. ಹೊಸ ಆಡಳಿತದಲ್ಲಿ `ತಾಯಿನಾಡು ಆರಂಭವಾದಾಗ, ನಾಗಮಣಿಯವರಿಗೆ ಕರೆ. ಐದು ವರ್ಷಕಾಲ ತಾಯಿನಾಡು ಸಂಪಾದಕರ ವರ್ಗದಲ್ಲಿ ಸಕ್ರಿಯ ಪಾತ್ರ. ನಿಯತಕಾಲಿಕೆಗಳಿಗಿಂತ ದಿನಪತ್ರಿಕೆಗಳು ಭಿನ್ನ ಸ್ವರೂಪದ ದುಡಿಮೆಯನ್ನು ನಿರೀಕ್ಷಿಸುತ್ತವೆ. ಹಗಲು, ರಾತ್ರಿಯ ಪಾಳಿಗಳಲ್ಲಿ ಕೆಲಸ ಹೊತ್ತು ಗೊತ್ತಿಲ್ಲದ ದುಡಿಮೆ. ಕಾಲಮಿತಿ ದಾಟದಂತಹ ಕಾರ್ಯಕ್ಷಮತೆ, ಇವೆಲ್ಲ ಪುರುಷರಿಗೇ ಸವಾಲನ್ನೆಸೆಯುವ ಕ್ಷೇತ್ರ. ಮಹಿಳೆಯರು ಅಂದಿನ ಪರಿಸರ ಮತ್ತು ಸಾಮಾಜಿಕ ವಾತಾವರಣದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಪ್ರವೇಶಿಸುವ ಕಲ್ಪನೆಯೂ ಅಸಾಧ್ಯವಾಗಿದ್ದ ಕಾಲ. ಇಂತಹ ವಾತಾವರಣದಲ್ಲಿ ಪುರುಷಪ್ರಧಾನವಾದ ಪತ್ರಿಕೋದ್ಯಮ ಪ್ರವೇಶಿಸಿದವರು ನಾಗಮಣಿ, ಸರಕಾರಿ ಮಾನ್ಯತೆ ಪಡೆದ ಪ್ರಥಮ ಮಹಿಳಾ ವರದಿಗಾರ್ತಿಯೂ ಆದರು.

ಸಂಪಾದಕೀಯ ಕಛೇರಿಯಲ್ಲಿ ಸುದ್ದಿಸಂಪಾದನೆ ಮಾಡಿದರು. ಅವಶ್ಯಕತೆ ಬಿದ್ದಾಗ, ನಗರದಲ್ಲಿ ಹಾಗೂ ಪರಸ್ಥಳಗಳಿಗೆ ತೆರಳಿ, ವರದಿ ಮಾಡಿದರು, ಲೇಖನಗಳನ್ನು ಬರೆದರು. ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳ ವರದಿಗಳನ್ನು, ವಿಮರ್ಶೆಗಳನ್ನು ಬರೆದರು. ಸಂಪಾದಕರ ಸಹೋದ್ಯೋಗಿಗಳ ಮುಕ್ತಪ್ರಶಂಸೆಗೆ ಪಾತ್ರರಾದರು. ತಾವು ನಿರ್ವಹಿಸುತ್ತಿದ್ದ ಅಂಕಣಗಳಿಗೆ ಹೊಸ ವರ್ಚಸ್ಸು ನೀಡಿದರು. ಮಹಿಳಾಪುಟ - ಒಂದಿಷ್ಟು ಶುಷ್ಕ ಉಪದೇಶ, ಅಡಿಗೆ, ರಂಗವಲ್ಲಿ ಇಷ್ಟಕ್ಕೇ ಸೀಮಿತವಾಗಿದ್ದ ಅಂಕಣಕ್ಕೆ ಹೊಸ ಚೇತನ ನೀಡಿದರು. ಹಣಕಾಸು ನಿರ್ವಹಣೆ, ಮೂಢನಂಬಿಕೆಗಳ ನಿವಾರಣೆ, ವೈಜ್ಞಾನಿಕ ಮನೋಭಾವದ ಬೆಳವಣಿಗೆ, ಸಾಮಾಜಿಕ ಬದಲಾವಣೆ, ಮಹಿಳಾಜಾಗೃತಿ ಮೊದಲಾದ ವಿಷಯಗಳ ಬಗೆಗೆ ಲೇಖನಗಳನ್ನು ಬರೆದರು. ಮಾತುಕತೆ ಹೆಣೆದರು.

1962ರಲ್ಲಿ ನಾಗಮಣಿಯವರು, `ತಾಯಿನಾಡು ಬಿಟ್ಟು, ಬೆಂಗಳೂರು ಆಕಾಶವಾಣಿಯ ಸುದ್ದಿವಿಭಾಗ ಸೇರಲು ಹೊರಟಾಗ ತಾಯಿನಾಡು ಸಂಪಾದಕರು ತಮ್ಮ ಅಂಕಣದಲ್ಲಿ ಬೀಳ್ಕೊಡಿಗೆಯ ನುಡಿಗಳನ್ನಾಡಿ "ನಮ್ಮ ನಷ್ಟ, ಆಕಾಶವಾಣಿಯ ಲಾಭ ಎಂದು ಬರೆದರು.

ಅದೊಂದು ಕಾಲ. ರೇಡಿಯೋ ಮನೆಮನೆಗಳನ್ನು ತಲುಪುತ್ತಿದ್ದ ಕಾಲ. ಪ್ರದೇಶ `ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್ ಎಂಬ ವಾರ್ತಾರಂಭದ ವಾಕ್ಯದೊಂದಿಗೆ ಅವರು ಏರಿದ ಎತ್ತರ ಸಾಮಾನ್ಯವಾದುದಲ್ಲ. ಪಂಡಿತ ಪಾಮರರಿಗೆ ಪ್ರಿಯವಾಗುವ ಸರಳವಾದ ಭಾಷೆ, ಶುದ್ಧ ಭಾಷೆ ಬಳಸಿ, ರೂಪಿಸಲಾಗುತ್ತಿದ್ದ ಸುದ್ದಿಗಳು. ನಾಗಮಣಿ ಅವನ್ನು ಓದುವ ಶೈಲಿಯೇ ವಿಶಿಷ್ಟ. ಸ್ಫುಟ, ಸ್ಪಷ್ಟ ಮಧುರವಾಣಿ. ನಾಗಮಣಿ-ಆಕಾಶವಾಣಿ ವಾರ್ತಾಪ್ರಸಾರದೊಂದಿಗೆ ಬಿಡಿಸಲಾಗದ ನಂಟು. 1994ರಲ್ಲಿ ಆಕಾಶವಾಣಿಯಿಂದ ನಿವೃತ್ತರಾಗುವವರೆಗೆ ಸುದ್ದಿ ವಿಭಾಗದಲ್ಲಿ ಭಾರತೀಯ ಸಮಾಚಾರ ಸೇವೆಯ ಅಧಿಕಾರಿಯಾಗಿ, ಸಹಾಯಕ ಸಂಪಾದಕಿಯಾಗಿ ಅತ್ಯಂತ ಸಂಕೀರ್ಣ ಪರಿಸ್ಥಿತಿಗಳಲ್ಲಿ ನಿರ್ವಹಿಸಿದ ಪಾತ್ರ ಮಹತ್ತರವಾದುದು. 1962ರ ಭಾರತ-ಚೀನಾ ಸಮರ, 1965ರ ಭಾರತ-ಪಾಕ್ ಯುದ್ಧ, 1971ರ ಬಾಂಗ್ಲಾ ವಿಮೋಚನಾ ಸಮರ, 1962-94ರ ನಡೆದ ಸಾರ್ವತ್ರಿಕ ಚುನಾವಣೆಗಳು, ದುರಂತಗಳು, ಅಪಘಾತಗಳು ಮುಂತಾದ ಸಂದರ್ಭಗಳಲ್ಲಿ ಅವರು ಪ್ರಸಾರ ಕಾರ್ಯಕ್ರಮಗಳನ್ನು ಕಟ್ಟಿಕೊಡುತ್ತಿದ್ದ ರೀತಿ ಅನನ್ಯ. ಚುನಾವಣಾ ವಾರ್ತೆಗಳಿಗೆ ಪ್ರಸಾರವನ್ನು ಜನರು ಆಸಕ್ತಿಯಿಂದ ಎದುರು ನೋಡುತ್ತಿದ್ದರು. 1994ರ ಅಂತ್ಯದಲ್ಲಿ ದೂರದರ್ಶನದ ಮೂಲಕ ಕನ್ನಡದಲ್ಲಿ ಪ್ರಸಾರ ಮಾಡಿದ ಕಾರ್ಯಕ್ರಮಗಳ ಪ್ರಸ್ತುತಕರ್ತೆಯಾಗಿ ವಿಶಿಷ್ಟ ರೀತಿಯಲ್ಲಿ ಸಮರ್ಥವಾಗಿ ನಡೆಸಿಕೊಟ್ಟರು. ಚುನಾವಣಾ ಫಲಿತಾಂಶದ ಜೊತೆಜೊತೆಯಲ್ಲಿ ವಿವಿಧ ರಾಜಕಾರಣಿಗಳ ದಿಢೀರ್ ಸಂದರ್ಶನದಿಂದ ಕೂಡಿದ ಈ ಪ್ರಸಾರ ಕಾರ್ಯಕ್ರಮಗಳು, ಬೇರೆ ವಾಹಿನಿಗಳಲ್ಲಿ ಅನುಭವಿ ಪ್ರಸ್ತುಕರ್ತರು. ಪ್ರಸಾರ ಮಾಡಿದ ಕಾರ್ಯಕ್ರಮಕ್ಕೆ ಯಾವ ರೀತಿಯಲ್ಲೂ ಕಡಿಮೆಯಿರಲಿಲ್ಲ.

ಬರಹ ಹಾಗೂ ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ನಾಗಮಣಿಯವರು, ಕರ್ನಾಟಕ ಲೇಖಕಿಯರ ಸಂಘದೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದಾರೆ. ಎರಡು ಅವಧಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ (1992) ಪಡೆದ ಪ್ರಥಮ ಮಹಿಳಾ ಪತ್ರಕರ್ತೆ. ಟಿಯೆಸ್ಸಾರ್ ಪ್ರಶಸ್ತಿ ಆರಂಭ (1993)ವಾದ 11 ವರ್ಷಗಳ ನಂತರ ಪ್ರಶಸ್ತಿಗೆ ಪಾತ್ರರಾದ ಮೊದಲ ಪತ್ರಕರ್ತೆ ನಾಗಮಣಿರಾವ್.

*