ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗಲೋಟಿಮಠ, ಸ ಜ

ವಿಕಿಸೋರ್ಸ್ದಿಂದ

ನಾಗಲೋಟಿಮಠ, ಸ ಜ - ಡಾ|| ಸದಾಶಿವಯ್ಯ ಜಂಬಯ್ಯ ನಾಗಲೋಟಮಠ ಜುಲೈ 30, 1940 ರಂದು ಜನಿಸಿದರು. ನಿರಾಡಂಬರ ಜೀವನ, ಸರಳ ಸಜ್ಜನಿಕೆಯ ಬದುಕನ್ನು ತಮ್ಮದಾಗಿಸಿಕೊಂಡಿರುವ ಡಾ|| ಸ.ಜ.ನಾ ಎಂ.ಬಿ.ಬಿ.ಎಸ್ ಪದವಿಯಲ್ಲಿ ವಿಶ್ವವಿದ್ಯಾಲಯದಲ್ಲಿಯೇ ಅತ್ಯುತ್ತಮ ಸಾಧನೆಗಾಗಿ ಸುವರ್ಣ ಪದಕ ಪಡೆದವರು. ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ, ಹುಬ್ಬಳ್ಳಿ, ಜಿ.ಎನ್. ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿ, ಬಿ.ಎಲ್.ಡಿ.ಇ. ವೈದ್ಯಕೀಯ ಮಹಾವಿದ್ಯಾಲಯ, ಬಿಜಾಪುರದಲ್ಲಿ ಪ್ರಾಧ್ಯಾಪಕರಾಗಿ, ರೀಡರ್ ಆಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಡಾ|| ಸ.ಜ. ನಾಗಲೋಟಿಮಠರವರು ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ವೈದ್ಯಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗಾವಿ ಜೆ. ಎನ್. ಎಂ.ಸಿ ಯ ಪೆಥಾಲಜಿ ಮ್ಯೂಸಿಯಂ ಮತ್ತು ಬಿಜಾಪುರದ ಬಿ.ಎಲ್.ಡಿ.ಇ.ಎ. ವೈದ್ಯಕೀಯ ಕಾಲೇಜಿನ ದೇಹದ ಹರಳುಗಳ ಸಂಗ್ರಹಾಲಯಗಳು ಡಾ|| ಸ.ಜ.ನಾಗಲೋಟಮಠರ ಅಭೂತಪೂರ್ವ ಕೊಡುಗೆಗಳಲ್ಲಿ ಪ್ರಮುಖವಾದವು. ದೇಶದಲ್ಲಿ ಮತ್ತು ವಿಶ್ವದಲ್ಲಿ ಅತ್ಯುತ್ತಮ ಮ್ಯೂಸಿಯಂ ಎಂಬ ಹೆಸರೂ ಪಡೆದುಕೊಂಡಿದೆ. ವೈದ್ಯರಾಗಿ, ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಮಾತ್ರವಲ್ಲ ಅತ್ಯುತ್ತಮ ವೈದ್ಯಸಾಹಿತಿಯಾಗಿಯೂ ಅಗ್ರಮಾನ್ಯರು. ಜೀವನಾಡಿ ಆರೋಗ್ಯ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಇವರು ಕನ್ನಡದ ಓದುಗರಿಗೆ ಸುಮಾರು 40 ಪುಸ್ತಕಗಳನ್ನು ನೀಡಿದ್ದಾರೆ. ಇವರು ಬರೆದ ವೈದ್ಯ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕುವೆಂಪು ಪ್ರಶಸ್ತಿ ದೊರೆತಿದೆ. ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಡಾ|| ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಭಾರತದ ಶ್ರೇಷ್ಠ ಪೌರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಾಳುಕ್ಯ ಪ್ರಶಸ್ತಿ, ಮುಂತಾದವುಗಳು ಪ್ರಮುಖವಾದವುಗಳು. ಇವಲ್ಲದೇ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂಶೋಧನಾ ಪ್ರಬಂಧಕರಾಗಿ ಅಮೆರಿಕಾ, ಫಿಲೆಡೆಲ್ಫಿಯಾ, ಸ್ಪೈನ್, ಆಸ್ಟ್ರೇಲಿಯಾ, ಜರ್ಮನಿ ಮುಂತಾದೆಡೆ ಪ್ರವಾಸ ಮಾಡಿ ಭಾರತದ ವೈದ್ಯಕೀಯ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿರುವ ಇವರು ನಾಡಿನಲ್ಲಿಯೇ ಪ್ರಸಿದ್ಧವಾದ ಬೆಳಗಾವಿ ವಿಜ್ಞಾನ ಸಂಸ್ಥೆಯ ಸಂಸ್ಥಾಪಕರು. ವಿಜ್ಞಾನ ವಸ್ತುಭಂಡಾರ ಮತ್ತು ವಿಜ್ಞಾನ ಕ್ಯಾಲೆಂಡರ್ ಸಿದ್ಧಪಡಿಸಿದ ಹೆಗ್ಗಳಿಕೆ ಇವರದು. (ಡಾ. ವಸುಂಧರಾ ಭೂಪತಿ)