ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗಾಭರಣ, ಟಿ ಎಸ್

ವಿಕಿಸೋರ್ಸ್ದಿಂದ

ನಾಗಾಭರಣ, ಟಿ ಎಸ್ - 1953 ಕನ್ನಡ ರಂಗಭೂಮಿ, ಚಿತ್ರರಂಗಗಳಿಗೆ ವಿಶಿಷ್ಟ ಸೇವೆ ಸಲ್ಲಿಸಿದವರು ಟಿ.ಎಸ್. ನಾಗಾಭರಣ. ಕರ್ನಾಟಕದ, ಸಂಸ್ಕøತಿಯ ಮಹತ್ವವನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ದವರು.

ನಾಗಾಭರಣ ಟಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ 23-01-1953ರಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ತಂದೆ ಎ. ಶ್ರೀನಿವಾಸಯ್ಯ, ತಾಯಿ ರುದ್ರಮ್ಮ. ಈ ಕೃಷಿಕ ದಂಪತಿಗಳ ಐವರು ಮಕ್ಕಳಲ್ಲಿ ಎರಡನೆಯವರು ನಾಗಾಭರಣ. ವಿದ್ಯಾಭ್ಯಾಸ ತಲಕಾಡಿನ ಪ್ರೈಮರಿ ಶಾಲೆಯಲ್ಲಿ ಪ್ರಾರಂಭವಾದದ್ದು ಮುಂದೆ ಬೆಂಗಳೂರಿನ ಚಾಮರಾಜಪೇಟೆಯ ಕಾರ್ಪೊರೇಷನ್ ಶಾಲೆ, ಕೆಲಕಾಲ ನ್ಯಾಷನಲ್ ಕಾಲೇಜು, ಒಕ್ಕಲಿಗರ ಸಂಘದ ಕಲೆ ಮತ್ತು ವಿಜ್ಞಾನ ಕಾಲೇಜು, ರೇಣುಕಾಚಾರ್ಯ ಕಾಲೇಜುಗಳಲ್ಲಿ ಮುಂದುವರೆಯಿತು. ಬಿ.ಎಸ್‍ಸಿ., ಎಲ್.ಎಲ್.ಬಿ. ಪದವಿಗಳನ್ನು ಪಡೆದರು. ಬಾಲ್ಯದಿಂದಲೂ ಯಕ್ಷಗಾನ ಬಯಲಾಟದ ಸಂಪರ್ಕವಿದ್ದುದರಿಂದಾಗಿ ಒಲವು ಕಲೆಯ ಕ್ಷೇತ್ರದ ಕಡೆಗೇ ಎಳೆಯುತ್ತಿತ್ತು. ಮುಂದೆ ಕಾಲೇಜು ದಿನಗಳಲ್ಲಿ ಅಧ್ಯಾಪಕರಾಗಿದ್ದ ರಂಗತಜ್ಞ ಎಂ.ಎಸ್. ನಾಗರಾಜ್ ಅವರು ನಾಗಾಭರಣರನ್ನು ಅಭಿನಯ, ನೇಪಥ್ಯಗಳಲ್ಲಿ ತೊಡಗಿಸಿಕೊಂಡರು. ಶ್ರೀರಂಗರು ಶಿಕ್ಷಕರಿಗೆಂದು ಪ್ರಾರಂಭಿಸಿದ ರಂಗಶಿಕ್ಷಣ ಕಮ್ಮಟ (ಥಿಯೇಟರ್ ವರ್ಕ್‍ಶಾಪ್) ದಲ್ಲಿ ಸಹಾಯಕ್ಕೆ ನಿಂತ ಈ ವಿದ್ಯಾರ್ಥಿಗೆ ರಂಗಭೂಮಿ ಮತ್ತಷ್ಟು ಹತ್ತಿರವಾಯಿತು. ಅನಂತರ ಬಿ.ವಿ.ಕಾರಂತರು ಅವರ ಎಲ್ಲ ರಂಗಪ್ರಯೋಗಗಳಲ್ಲೂ ನೇಪಥ್ಯದಲ್ಲಿ ದುಡಿಸಿಕೊಂಡರು, ರಂಗದ ಮೇಲೂ ಮೆರೆಸಿದರು. ಗಿರೀಶ್ ಕಾರ್ನಾಡರು `ಕಾಡು ಚಿತ್ರದ ಕಲಾನಿರ್ದೇಶನ, ವಸ್ತ್ರವಿನ್ಯಾಸಕ್ಕೆ ಕರೆದವರು, ಸಹ ನಿರ್ದೇಶಕನಾಗಿಯೂ ತೊಡಗಿಸಿಕೊಂಡರು. ಹೀಗೆ ಪ್ರಾರಂಭವಾದ ರಂಗಯಾತ್ರೆ ಮತ್ತು ಚಲನಚಿತ್ರ ಕ್ಷೇತ್ರದ ಕಾರ್ಯಗಳೇ ನಾಗಾಭರಣರ ಕಾಯಕವೂ ಆದವು.

ಖ್ಯಾತ ಹಿಂದೂಸ್ಥಾನೀ ಗಾಯಕ ಶೇಷಾದ್ರಿ ಗವಾಯಿಗಳ ಬಳಿ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಪಡೆದ ನಾಗಾಭರಣರಿಗೆ ಮೊದಲೇ ಇದ್ದ ಜನಪದ ಗಾಯನದ ಅನುಭವ, ಕಾರಂತರೊಂದಿಗಿನ ರಂಗಸಂಗೀತಾಭ್ಯಾಸ ಹಾಗೂ ಆಸಕ್ತಿಯಿಂದ ಸಂಗ್ರಹಿಸಿದ ಶಾಸ್ತ್ರೀಯ - ಪಾಶ್ಚಾತ್ಯ ಸಂಗೀತದ ಗಾನತಟ್ಟೆಗಳು, ಧ್ವನಿಸುರುಳಿಗಳ ಮೂಲಕ ಲಭ್ಯವಾದ ತಿಳಿವಳಿಕೆ ಸೇರಿದ್ದರಿಂದಾಗಿ ಸಂಗೀತ ಕ್ಷೇತ್ರದಲ್ಲಿ ವಿಶೇಷ ಆಸ್ಥೆ ಮೂಡಿತ್ತು. ಮುಂದೆ ಅವರು ದೃಶ್ಯ ಮಾಧ್ಯಮಗಳಲ್ಲಿ ಅಪರೂಪವೆನಿಸುವ ಸಂಗೀತವನ್ನು ಅಳವಡಿಸಿದರು; ಸಂಗೀತವೇ ಪ್ರಧಾನವಾದ ಕೃತಿಗಳನ್ನೂ ನಿರ್ಮಿಸಿ ಯಶಸ್ವಿಯಾದರು.

ನಾಗಾಭರಣ ರಂಗಭೂಮಿಯನ್ನು ಎಂದೂ ನಿರ್ಲಕ್ಷಿಸಲಿಲ್ಲ. ಬಿ.ವಿ. ಕಾರಂತರು ಪ್ರಾರಂಭಿಸಿದ `ಬೆನಕ ರಂಗತಂಡದಲ್ಲಿ ನಟ, ನಿರ್ದೇಶಕ, ಗಾಯಕನಾಗಿ, ದುಡಿದಿದ್ದಾರೆ. ರಂಗಸಂಪದ ತಂಡಕ್ಕೆ, ಕೆಲವು ಪ್ರಸಿದ್ಧ ಕಾರ್ಖಾನೆಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದಾರೆ. `ಬೆನಕ ಸಂಸ್ಥೆಯ ಬೆನಕ ಮಕ್ಕಳ ರಂಗಭೂಮಿಯ ಸಂಸ್ಥಾಪಕ ಸದಸ್ಯರಾಗಿ ಪ್ರೇಮಾ ಕಾರಂತರೊಂದಿಗೆ ಮಕ್ಕಳ ರಂಗಭೂಮಿಗೆ ಶ್ರಮಿಸಿದ್ದಾರೆ. ಇವರು ನಿರ್ದೇಶಿಸಿ, ಅಭಿನಯಿಸಿದ `ಸಂಗ್ಯಾಬಾಳ್ಯ ನಾಟಕವು ನೂರಕ್ಕೂ ಹೆಚ್ಚು ಪ್ರಯೋಗ ಕಂಡಿದೆ. `ಕತ್ತಲೆ-ಬೆಳಕು ನಾಟಕದಲ್ಲಿ ಮುಖ್ಯಪಾತ್ರಧಾರಿ. `ಶಕಾರನ ಸಾರೋಟು (ವಸಂತಸೇನೆ), `ಈಡಿಪಸ್ `ಕೃಷ್ಣಪಾರಿಜಾತ, `ಟಿಂಗರ ಬುಡ್ಡಣ್ಣ, `ಮುಂದೇನ ಸಖಿ ಮುಂದೇನ, `ಹಯವದನ, `ಬಕ, ಬ್ಲಡ್ ವೆಡ್ಡಿಂಗ್ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ `ಜೋಕುಮಾರಸ್ವಾಮಿ, `ಸತ್ತವರ ನೆರಳು ನಾಟಕಗಳು ನೂರು, ಇನ್ನೂರು ಬಾರಿ ಪ್ರದರ್ಶನಗೊಂಡಿವೆ. ಇವರ ಏಕವ್ಯಕ್ತಿ ಪ್ರಸ್ತುತಿಯಾದ `ನೀಗಿಕೊಂಡ ಸಂಸ ಒಂದು ವಿಶಿಷ್ಟ ಪ್ರಯೋಗವಾಗಿತ್ತು. ರಂಗಗೀತೆಗಳ ಗಾಯನದಲ್ಲೂ ನಾಗಾಭರಣ ಮುಂದು.

ನಾಗಾಭರಣರು 27ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಕೆಲವನ್ನು ತಾವೇ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಹಲವು ನಿರ್ಮಾಪಕರಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಚಿತ್ರಗಳಲ್ಲಿ ಸುಮಾರು ಹನ್ನೊಂದು ಚಿತ್ರಗಳು ರಾಜ್ಯ ರಾಷ್ಟ್ರ ಪ್ರಶಸ್ತಿ ಪಡೆದಿವೆ. ಹಲವು ಚಿತ್ರಗಳು ವಿದೇಶಗಳ ಉತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಂಸೆಗಳಿಸಿವೆ. ನಾಗಾಭರಣರು ಎಲ್ಲ ಬಗೆಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರಗಳಲ್ಲಿ ಅವರಿಗೆ ಕಲಾತ್ಮಕ, ಬ್ರಿಡ್ಜ್ ಸಿನಿಮಾ, ವಾಣಿಜ್ಯ ಪ್ರಧಾನ ಇತ್ಯಾದಿ ಭೇದವಿಲ್ಲ. ಈ ಚಿತ್ರಗಳು ವಸ್ತು, ನಿರೂಪಣೆಯ ದೃಷ್ಟಿಯಿಂದ ಮುಖ್ಯವಾದವು ಮತ್ತು ನಾಗಾಭರಣರ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿದಂತಹವು.

ಪ್ರಶಸ್ತಿ ಪಡೆದ ಚಿತ್ರಗಳಲ್ಲಿ `ಗ್ರಹಣ (1978-79) ಇವರ ಮೊದಲ ಚಿತ್ರ. ತುಳಿತಕ್ಕೊಳಗಾಗಿರುವ ಕೆಳ ಜಾತಿಯ ಜನರು ಮೂಢನಂಬಿಕೆಯಂಥ ವಿಧಿಯಾಚರಣೆಗಳಿಂದಾಗಿ ಏನೆಂಥ ಸಂಕಷ್ಟಗಳಿಗೆ ಈಡಾಗುತ್ತಾರೆಂಬ ಬಗ್ಗೆ ಬೆಳಕು ಚೆಲ್ಲುವ ಕಥಾವಸ್ತುವನ್ನು ಸಾಕ್ಷ್ಯಚಿತ್ರದ ರೀತಿಯಲ್ಲಿ ನಿರೂಪಿಸಿದ್ದರು. ಈ ಚಿತ್ರಕ್ಕೆ ಭಾವೈಕ್ಯತಾ (ನ್ಯಾಷನಲ್ ಇಂಟಿಗ್ರೇಷನ್) ಪ್ರಶಸ್ತಿ, ಉತ್ತಮ ಕಥೆಗಾಗಿ ರಾಷ್ಟ್ರ ಪ್ರಶಸ್ತಿ ಬಂದವು. ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ, ಚಿನ್ನದ ಪದಕ ಲಭಿಸಿತು. ಮ್ಯಾನ್‍ಹೀಮ್, ಜರ್ಮನಿ, ಚೀನಾ, ಭಾರತಗಳಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರವೇಶ ಪಡೆದಿತ್ತು. ಮ್ಯಾನ್‍ಹೀಮ್‍ನ ವಿಮರ್ಶಕರ ಪ್ರಶಸ್ತಿ ಪಡೆಯಿತು. ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿತ್ತು. `ಸಂತ ಶಿಶುನಾಳ ಶರೀಫ (1989-90) ಸೂಫಿ ಸಂತ ಶರೀಫರ ತತ್ತ್ವಪದಗಳನ್ನು ಆಧರಿಸಿಯೇ ಅವರ ಜೀವನ ಕಥನವನ್ನು ಸೊಗಸಾಗಿ ಹೆಣೆಯಲಾಗಿತ್ತು. ಕಲಾತ್ಮಕ ಹಾಗೂ ವಾಣಿಜ್ಯ ದೃಷ್ಟಿಯಿಂದ ಯಶಸ್ವಿಯಾದ ಚಿತ್ರವೆಂದೂ ಪರಿಗಣಿತವಾಯಿತು. ರಾಜ್ಯ ಸರ್ಕಾರದ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ಚಿತ್ರದ ಇತರ ವಿಭಾಗಗಳಿಗೆ ವಿಶೇಷ ಪ್ರಶಸ್ತಿಗಳನ್ನು ಪಡೆದುಕೊಂಡಿತು. `ಮೈಸೂರು ಮಲ್ಲಿಗೆ (1991-92) ಖ್ಯಾತ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಗಳ ಮೂಲಕವೇ ಕಟ್ಟಿದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯ ಚಿತ್ರ. ಇದಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕಭಾಷಾ ಚಿತ್ರವೆಂಬ ಗೌರವ ದೊರೆತಿತ್ತು. ಕವಿತೆಗಳಿಗಾಗಿ ಕವಿ ಕೆ.ಎಸ್. ನರಸಿಂಹಸ್ವಾಮಿಯವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತು. ಎರಡನೆಯ ಅತ್ಯುತ್ತಮ ಚಿತ್ರವೆಂಬ ರಾಜ್ಯ ಪ್ರಶಸ್ತಿ, ಗೀತೆಗಳು ಮತ್ತು ಇತರ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿದವು. ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಯಿತು. ಅಂತಾರಾಷ್ಟ್ರೀಯ ಚಿತ್ರೋತ್ಸವ, ಇಟಲಿ ದೇಶದ ಚಿತ್ರೋತ್ಸವಗಳಿಗೆ ಆಯ್ಕೆಯಾಯಿತು. ಮುಖ್ಯವಾಗಿ ತುಂಬಿದ ಚಿತ್ರಮಂದಿರಗಳಲ್ಲಿ 25 ವಾರಗಳಿಗೂ ಹೆಚ್ಚು ಕಾಲ ಪ್ರದರ್ಶಿತವಾದ ಜನಪ್ರಿಯ ಚಿತ್ರವಿದು.

`ಚಿನ್ನಾರಿಮುತ್ತ (1993-94) ಚಿತ್ರವು ಮಕ್ಕಳನ್ನು ಪ್ರಧಾನವಾಗಿಟ್ಟುಕೊಂಡು ಸಿದ್ಧವಾದ ಕಥೆಯಾಗಿತ್ತು. ಅತ್ಯುತ್ತಮ ಭಾಷಾಚಿತ್ರವೆಂಬ ಮನ್ನಣೆ, ರಾಜ್ಯದಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಮತ್ತು ಇತರ ನಾಲ್ಕು ವಿಭಾಗಗಳಿಗೆ ಪ್ರಶಸ್ತಿ ಲಭಿಸಿತ್ತು. ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. `ಜನುಮದ ಜೋಡಿ (1996-97) ಜ್ಞಾನಪೀಠ ಪ್ರಶಸ್ತಿ ಪಡೆದ ಗುಜರಾತಿ ಕಾದಂಬರಿಯೊಂದನ್ನು ಆಧರಿಸಿದ ಚಿತ್ರ, ಗಳಿಕೆಯಲ್ಲೂ ದಾಖಲೆ ನಿರ್ಮಿಸಿದ ಜನಪ್ರಿಯ ಚಿತ್ರ. ಈ ಚಿತ್ರವು ರಾಜ್ಯ ಸರ್ಕಾರದ ಪ್ರಶಸ್ತಿ ಸಮಿತಿ ಸದಸ್ಯರ ವಿಶೇಷ ಪ್ರಶಸ್ತಿ (ಜ್ಯೂರಿ ಪ್ರಶಸ್ತಿ), ಶ್ರೇಷ್ಠ ಅಭಿನೇತ್ರಿ, ಸಂಗೀತ, ಗೀತರಚನೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ ಮೊದಲಾದ ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿತು. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಅಮೆರಿಕೆಯ ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ಅಧ್ಯಯನಕ್ಕಾಗಿ ಈ ಚಿತ್ರ ಆಯ್ಕೆಯಾಗಿದೆ

`ನಾಗಮಂಡಲ (1996-97) ಗಿರೀಶ್ ಕಾರ್ನಾಡರ ನಾಟಕವನ್ನು ಆಧರಿಸಿದ ಚಿತ್ರ. ಅತ್ಯುತ್ತಮ ನಿರ್ದೇಶಕರಲ್ಲಿ ಎರಡನೆಯವರಾಗಿ ನಾಗಾಭರಣರಿಗೆ ರಾಜ್ಯ ಪ್ರಶಸ್ತಿ ಬಂದಿತು. ಮತ್ತು ಪೋಷಕನಟನೆ, ಕಲಾನಿರ್ದೇಶನ, ಛಾಯಾಗ್ರಹಣ ವಿಭಾಗಗಳೂ ರಾಜ್ಯ ಪ್ರಶಸ್ತಿ ಪಡೆದವು. ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡಿತು.

ನಾಗಮಂಡಲ (1996-97) ಚಂದ್ರಶೇಖರ ಕಂಬಾರರ ಕಾದಂಬರಿ ಆಧರಿತ ಸಿಂಗಾರೆವ್ವ (2002-03), ಶಿವರಾಮ ಕಾರಂತರ ಕಾದಂಬರಿ ಆಧರಿಸಿದ ಚಿಗುರಿದ ಕನಸು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳಿಸಿದ, ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾದ ಚಿತ್ರಗಳು. ದೇಹಕ್ಕೆ ಅಂಟಿದ ಅರ್ಬುದ ರೋಗದ ವಿರುದ್ಧ ಸೆಣಸಾಡುವ ಗಿರಿಬಾಲೆ ತನ್ನ ಸಮಾಜಕ್ಕೆ ಕ್ಯಾನ್ಸರ್ ಆಗಿ ಕಾಡುವ ಜಮೀನ್ದಾರರ ದಬ್ಬಾಳಿಕೆ ವಿರುದ್ಧ ಸೆಣೆಸಾಡುವ ಕತೆಯಿಂದ ಕೂಡಿದ ನೀಲಾ (2001-02) ರಾಜ್ಯದ ಅತ್ಯುತ್ತಮ ಪ್ರಶಸ್ತಿ ಪಡೆಯಿತು. ಕಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.

`ಸಂಕ್ರಾಂತಿ 520ಕ್ಕೂಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಮೊಟ್ಟಮೊದಲ ಜನಪ್ರಿಯ. ಮೆಗಾ ಧಾರಾವಾಹಿ. `ಗೆಳತಿ 250 ಕಂತುಗಳಲ್ಲಿ `ದೂರ ತೀರ ಯಾನ 250ಕ್ಕಿಂತ ಹೆಚ್ಚು ಕಂತುಗಳಲ್ಲಿ, ನಿರಂಜನರ ಕಾದಂಬರಿ ಆಧರಿಸಿದ `ಜೀವನ್ಮುಖಿ ಸಹ 200ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರ ಕಂಡಿತು. ವಿಶಿಷ್ಟ ರೀತಿಯಲ್ಲಿ ಗ್ರಾಫಿಕ್ ತಂತ್ರಜ್ಞಾನವನ್ನು ಬಳಸಿ ಚಿತ್ರಿಸಿದ ಮೊದಲ ಕನ್ನಡ ಧಾರಾವಾಹಿ `ಮಹಾಮಾಯೆ. ಬೆಂಗಳೂರು ದೂರದರ್ಶನಕ್ಕೆ ಸಿದ್ಧಪಡಿಸಿದ ತೆನಾಲಿರಾಮ, `ಶ್ರೀಸಾಮಾನ್ಯ, `ನಮ್ಮ ನಮ್ಮಲ್ಲಿ, `ಆಫೀಸಾಯಣ `ತಿರುಗುಬಾಣ `ಹೃದಯ, ಹಿಡಿ ಹೃದಯ ಧಾರಾವಾಹಿಗಳು ಮತ್ತು ಕನ್ನಡದ ಕವಿಗಳ ಆಯ್ದ ಗೀತೆಗಳನ್ನು ಆಧರಿಸಿ ಚಿತ್ರಿಸಿದ `ಗೀತಮಾಧುರಿ ಜನಪ್ರಿಯವಾದವು. ಜನಪದ ಕಲೆಯ ವಿಶಿಷ್ಟ ಪ್ರಕಾರವಾದ `ಬಯಲಾಟ ಹಾಗೂ `ಶ್ರದ್ಧಾಕೆ ಮೆಹಕ್ ಎಂಬ (ಹಿಂದಿ) ಟೆಲಿಫಿಲಂಗಳನ್ನೂ ದೂರದರ್ಶನದ ರಾಷ್ಟ್ರೀಯ ಪ್ರಸಾರಕ್ಕೆ ಸಿದ್ಧಪಡಿಸಿದರು. ಬಿ.ವಿ.ಕಾರಂತರನ್ನು ಕುರಿತ ಚಿತ್ರ `ಭಾರತೀಯ ರಂಗಗಗನ ಕಂಡ ಶಬ್ದಬಾನಾಡಿ ಸೇರಿದಂತೆ ನಾಗಾಭರಣರು ಅನೇಕ ಕಿರು ಚಿತ್ರಗಳನ್ನು ವಿವಿಧ ಸಂಸ್ಥೆಗಳಿಗೆ ನಿರ್ಮಿಸಿದ್ದಾರೆ.

ನಾಗಾಭರಣರು ಚಲನಚಿತ್ರ ಹಾಗೂ ರಂಗಭೂಮಿಗೆ ಸೇರಿದ ಅನೇಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ, ಆದರ್ಶ ಫಿಲಂ ಇನ್‍ಸ್ಟಿಟ್ಯೂಟ್, ಚಿಲ್ಡ್ರನ್ ಫಿಲಂ ಸೊಸೈಟಿಯ ವರ್ಕ್‍ಶಾಪ್‍ಗಳಲ್ಲಿ ಪ್ರಾಚಾರ್ಯರು, ಶಿಕ್ಷಕರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ನಾಗಾಭರಣ ಅವರಿಗೆ ರಾಜ್ಯ ನಾಟಕ ಅಕಾಡೆಮಿ ಹಾಗೂ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ನರ್ಗಿಸ್‍ದತ್ ಪ್ರಶಸ್ತಿ, ಚಲನಚಿತ್ರ ನಿರ್ದೇಶಕರ ಸಂಘದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ (ಅತಿ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಕ್ಕಾಗಿ) ಸಂದಿದೆ. ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು 7 ಬಾರಿ ಪಡೆದರು. ಅತ್ಯುತ್ತಮ ಪ್ರಾದೇಶಿಕ ಭಾಷಾ ನಿರ್ದೇಶಕ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ 8 ಬಾರಿ ಪಡೆದರು. ರಾಜ್ಯ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ (1999-00) ಪುರಸ್ಕøತರು.

ನಾಗಾಭರಣ ಅವರು `ಶ್ರುತಾಲಯ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಚಲನಚಿತ್ರ ನಿರ್ಮಾಣ, ಕಲಿಕೆ, ಸಂಶೋಧನೆ ಈ ಸಂಸ್ಥೆಯ ಪ್ರಧಾನ ಕಾರ್ಯಗಳು. ಈ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಇಲ್ಲಿಗೆ ಮುಕ್ತ ಪ್ರವೇಶವುಂಟು. ಶ್ರುತಾಲಯ ಕಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಗುಣಮಟ್ಟಕ್ಕಾಗಿ ಶ್ರಮಿಸುವ ಸಂಸ್ಥೆಯಾಗಿ ಹೆಸರಾಗಿದೆ. ಸಂಸ್ಥೆಯಲ್ಲಿ ನಾಗಾಭರಣರ ಕಲಾವಿದೆ ಮಡದಿ ನಾಗಿಣಿ ಹಾಗೂ ಮಕ್ಕಳ ಕ್ರಿಯಾಶೀಲ ತೊಡಗಿಕೊಳ್ಳುವಿಕೆ ಇದೆ. (ವಿಜಯಾ)