ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗಾಯಿ

ವಿಕಿಸೋರ್ಸ್ದಿಂದ

ನಾಗಾಯಿ ಶಾಸನ :- ಪ್ರಾಚೀನ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದ ಒಂದು ಉನ್ನತ ಶಿಕ್ಷಣ ಕೇಂದ್ರ. ಗುಲ್ಬರ್ಗದ ಬಳಿಯಿರುವ ಈ ಸ್ಥಳದಲ್ಲಿ ಕದಂಬರ ಕಾಲದಲ್ಲಿ ಒಂದು ಘಟಿಕಾಲಯ ಏರ್ಪಟ್ಟಿತ್ತು. ಇದಕ್ಕೆ ಸೇರಿದಂತೆ ಎರಡು ಆವರಣ (ಕ್ಯಾಂಪಾಸ)ಗಳಿದ್ದುವು. ಅನಂತರ ಹನ್ನೊಂದನೆಯ ಶತಮಾನದ ಸುಮಾರಿನಲ್ಲಿ ಅಲ್ಲಿನ ಮಧುಸೂದನ ದೇವಾಲಯಕ್ಕೆ ಸೇರಿದ ಒಂದು ಮಠ ಖ್ಯಾತಿವೆತ್ತ ಮತ್ತೊಂದು ಉನ್ನತ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿತು. ಕಲ್ಯಾಣ ಚಾಲುಕ್ಯ ಅರಸನಾದ ಸೋಮೇಶ್ವರ 1, ನಾಲ್ವಡಿ ವಿಕ್ರಮಾದಿತ್ಯ ಮತ್ತು ಜಗದೇಕಮಲ್ಲರ ಆಳ್ವಿಕೆಯ ಕಾಲ ಅದು. ಅಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣಗಳೆರಡಕ್ಕೂ ವ್ಯವಸ್ಥೆಗೊಳಿಸಿತ್ತು. ಈ ಸಂಸ್ಥೆಗೆ ಮೊದಲನೆಯ ಸೋಮೇಶ್ವರ ವಿಸ್ತಾರವಾದ ಭೂಮಿಯನ್ನು ದತ್ತಿಯಾಗಿ ಕೊಟ್ಟಿದ್ದನು. ಇಲ್ಲಿಗೆ ವಟುಗಳನ್ನೂ ವಿರಕ್ತರನ್ನೂ ಸೇರಿಸಿಕೊಳ್ಳಲಾಗುತ್ತಿತ್ತು. ಈ ವಿದ್ಯಾಭವನದಲ್ಲಿ ಹಲವು ಪಾಠಗಳ ಕೊಠಡಿಗಳು ಒಂದು ನೃತ್ಯಮಂದಿರವೂ ಇದ್ದುವು. ವಿದ್ಯಾಲಯದ ಆವರಣದಲ್ಲಿ ಒಂದು ಸಭಾಭವನವೂ ಸೇವಕರಿಗಾಗಿ ಪ್ರತ್ಯೇಕ ಕೊಠಡಿಗಳೂ ಇದ್ದುವು. ಕಟ್ಟಡವನ್ನೂ ಸಂಸ್ಥೆಗೆ ದತ್ತಿಯಾಗಿ ಕೊಟ್ಟಿದ್ದ ಭೂಹಿಡುವಳಿಯನ್ನು ನೋಡಿಕೊಳ್ಳಲು ಅಗತ್ಯವಾಗ ಸೇವಕರನ್ನು ಮತ್ತು ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಭೂಮಿಯಿಂದ ಬಂದ ಆದಾಯವನ್ನು ಅಧ್ಯಾಪಕರ ಮತ್ತು ಇತರರ ಸಂಭಾವನೆಗೂ ವಿದ್ಯಾರ್ಥಿಗಳ ಜೀವನದ ವೆಚ್ಚಕ್ಕೂ ಬಳಸಲಾಗುತ್ತಿತ್ತು. ಅಲ್ಲಿ ವೇದಗಳ ವ್ಯಾಸಾಂಗ ಮಾಡುವ 200 ಜನ ಸ್ನಾತಕೋತ್ತರ ವಿದ್ಯಾರ್ಥಿಪಂಡಿತರಿಗೆ, ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿದ್ದ 52 ಜನ ವಿದ್ಯಾರ್ಥಿಪಂಡಿತರಿಗೆ ಅವರ ಮೂವರು ಅಧ್ಯಾಪಕರಿಗೆ, ಭಟ್ಟದರ್ಶನ, ಪ್ರಭಾಕರ, ನ್ಯಾಸ ಕಲಿಸುವ ಮೂವರು ಅಧ್ಯಾಪಕರಿಗೆ, ವೇದಗಳ ಮೂವರು ಅಧ್ಯಾಪಕರಿಗೆ, ಆರು ಜನ ಸರಸ್ವತೀ ಭಾಂಡಾರಕರಿಗೆ (ಲೈಬ್ರೇರಿಯನ್ಸ್) ಇವರೆಲ್ಲರ ಭೋಜನ ಹಾಗೂ ವಸತಿಗಾಗಿ ಈ ವಿಶ್ವವಿದ್ಯಾಲಯದಲ್ಲಿ ವ್ಯವಸ್ಥೆ ಇತ್ತು. ಪ್ರಾಧ್ಯಾಪಕರಿಗೆ ಕೊಟ್ಟ ದತ್ತಿಯ ಭೂಮಿಯ ವಿವರಗಳೂ ಲಭ್ಯವಾಗಿವೆ. ಉದಾ: ಭಟ್ಟದರ್ಶನ ಉಪಾಧ್ಯಾಯರಿಗೆ 35 ಮತ್ತರು, ನ್ಯಸನ ಉಪಾಧ್ಯಾಯರಿಗೆ 50 ಮತ್ತರು, ಪ್ರಭಾಕರದ ಉಪಾಧ್ಯಾಯರಿಗೆ 45 ಮತ್ತರು, ಸರಸ್ವತೀ ಭಾಂಡಾರಕರಿಗೆ ತಲಾ 30 ಮತ್ತರು ಭೂಮಿಯನ್ನು ಕೊಡಲಾಗಿತ್ತು. ಈ ಕೇಂದ್ರ ಒಟ್ಟು 257 ಜನರನ್ನೊಳಗೊಂಡಿತ್ತು. ಒಂದು ರೀತಿಯಲ್ಲಿ ಇದು ಈಗಿನ ವಸತಿ ವಿಶ್ವವಿದ್ಯಾಲಯದ (ರೆಸಿಡೆನ್ಷಿಯಲ್ ಯೂನಿವರ್ಸಿಟಿ) ರೀತಿಯಲ್ಲಿತ್ತು.

ಗಮನಾರ್ಹವಾದ ಕೆಲವು ಶಿಲಾಲೇಖನಗಳು ನಾಗಾಯಿಯಲ್ಲಿ ದೊರೆತಿವೆ. ಚಾಲುಕ್ಯ ವಿಕ್ರಮಾದಿತ್ಯರ ಆಸ್ಥಾನದಲ್ಲಿ ಮಹಾಸೇನಾನಿ ಹಾಗೂ ವಿದ್ವಾಂಸನೆಂದು ಖ್ಯಾತನಾಗಿದ್ದ ಕಾಳಿದಾಸ ದಂಡನಾಥನ ಪ್ರಸ್ತಾಪ ಇಲ್ಲಿನ ಎರಡು ಶಿಲಾಲೇಖನಗಳಲ್ಲಿದೆ. ಅವನ ಈ ಮಹಾಸೇನಾನಿ ಸಾಹಿತ್ಯಾಭಿರುಚಿಯುಳ್ಳವನು; ರಾಜಕಾರಣದಲ್ಲಿ ಬೃಹಸ್ಪತಿಯೆಂದೂ ಧೈರ್ಯದಲ್ಲಿ ಗರುಡನೆಂದೂ ಈತನನ್ನು ವರ್ಣಿಸಲಾಗಿದೆ. ಮಧುಸೂದನನ ಮಗ ಮೊದಲನೆಯ ಕಾಳಿದಾಸ. ಇವನ ಮಗ ಇಮ್ಮಡಿ ಕಾಳಿದಾಸನು ಎರಡನೆಯ ಜಯಸಿಂಹ, ಮೊದಲನೆಯ ಸೋಮೇಶ್ವರ ಹಾಗೂ ನಾಲ್ಕನೆಯ ವಿಕ್ರಮಾದಿತ್ಯ ಈ ಚಾಳುಕ್ಯ ಅರಸರಿಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದಂತೆ ಶಿಲಾಶಾಸನಗಳು ಹೇಳುತ್ತವೆ. ಮೊದಲನೆಯ ಕಾಳಿದಾಸ ಈ ನಾಗಾಯಿಯಲ್ಲಿ ಒಂದು ಅಗ್ರಹಾರವನ್ನು ಸ್ಥಾಪಿಸಿದಂತೆ ತೋರುತ್ತದೆ. 400 ಜನ ವೇದ ಪಾರಂಗತರಾದ ಬ್ರಾಹ್ಮಣರಿಗಾಗಿ ಎರಡನೆಯ ಜಯಸಿಂಹನಿಂದ ತಾಮ್ರಪತ್ರದ ಮೂಲಕ ದತ್ತಿಯನ್ನು ಈತ ಪಡೆದನೆಂದು ಗೊತ್ತಾಗಿದೆ. ಕುಂತಲದೇಶದಲ್ಲಿ ಅರಲು ಮುನ್ನೂರಕ್ಕೆ ತಿಲಕದಂತಿದ್ದ ಮಹಾಗ್ರಹಾರ ಎಂದು ಶಾಸನವೊಂದರಲ್ಲಿ ನಾಗಾಯಿಯನ್ನು ವರ್ಣಿಸಲಾಗಿದೆ. ಎರಡನೆಯ ಕಾಳಿದಾಸ ತ್ರಿಮೂರ್ತಿಗಳ ದೇವಾಲಯವಾದ ಕಟಕ ಕೋಮಲಾರ್ಕ ದೇವಾಲಯವನ್ನು ಕಟ್ಟಿಸಿದುದಲ್ಲದೆ ನಾಗಾಯಿಯ ಸೌಂದರ್ಯಾಭಿವೃದ್ಧಿಗೆ ಕಾರಣನಾದಂತೆ ಕಂಡುಬರುತ್ತದೆ. 61 ಕಂಬಗಳ ಸುಂದರ ಕೆತ್ತನೆಯ ಕೆಲಸವಿರುವ ಜೈನಶಿಲ್ಪದ ಒಂದು ದೇವಾಲಯ ನಾಗಾಯಿಯಲ್ಲಿದೆ. ಈ ದೇವಾಲಯದ ಮುಂದೆ ಏಳು ಅಡಿ ಎತ್ತರವಿರುವ ಚೌಕವಾದ ದ್ವಜಸ್ತಂಭದ ಮೇಲೆ ಚಾಳುಕ್ಯರ ಆಳ್ವಿಕೆಯನ್ನು ವಿವರಿಸುವ ಕುತೂಹಲಕರವಾದ ಶಿಲಾಶಾಸನವಿದೆ. ಇಲ್ಲಿನ ಇತರ ಅನೇಕ ದೇವಾಲಯಗಳು ಪ್ರಾಚೀನ ಕಟ್ಟಡಗಳೂ ಭಗ್ನಸ್ಥಿತಿಯಲ್ಲಿವೆ.

ಅರ್ವಾಚೀನವಾದ ಎಲ್ಲಮ್ಮ ದೇವಸ್ಥಾನ ವಿಶಾಲವಾಗಿದ್ದು ಈಗ ಯಾತ್ರಿಕರನ್ನು ಆಕರ್ಷಿಸುತ್ತಿದೆ. (ಜೆ.ಆರ್.ಪಿ.)