ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗಾರ್ಜುನ

ವಿಕಿಸೋರ್ಸ್ದಿಂದ

ನಾಗಾರ್ಜುನ

ಪ್ರಾಚೀನ ಭಾರತದ ಮೂವರು ಪ್ರಸಿದ್ಧ ವಿಜ್ಞಾನಿಗಳು ನಾಗಾರ್ಜುನ ನಾಮಾಂಕಿತದವರು ನಮಗೆ ದೊರೆಯುತ್ತಾರೆ. 1, ಭಿಕ್ಷು ನಾಗಾರ್ಜುನ 2. ಸಿದ್ಧ ನಾಗಾರ್ಜುನ 3. ಭದಂತ ನಾಗಾರ್ಜುನ

ಮೊದಲಿಬ್ಬರ ಗುರುತು, ಕಾಲ, ಕಾರ್ಯಗಳ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲವಾದರೂ ಮೂರನೆಯ ವ್ಯಕ್ತಿಯ ಬಗ್ಗೆ ಖಚಿತ ಮಾಹಿತಿ ದೊರೆತಿದೆ.

1. ಭಿಕ್ಷು ನಾಗಾರ್ಜುನ: ಈತನು ಅರ್ಜುನ ಮರದಡಿ ಜನಿಸಿದನೆಂದು ಅಲ್ಲಿದ್ದ ನಾಗಾಗಳು ಜ್ಞಾನಧಾರೆಯೆರೆದುದರಿಂದ ನಾಗಾರ್ಜುನ ಹೆಸರು ಬಂದಿದೆಯೆಂಬ ಉಲ್ಲೇಖವಿದೆ. ಈತ ನಲಂದದಲ್ಲಿ ವಿದ್ಯೆ ಪಡೆದು ನಂತರ ದಕ್ಷಿಣ ಭಾರತಕ್ಕೆ ಬಂದು ಆಂಧ್ರಪ್ರದೇಶದ ಶ್ರೀಶೈಲ ಬೆಟ್ಟದಲ್ಲಿ ರಸವಿದ್ಯೆ ಅಭ್ಯಸಿಸಿದ. ಔಷಧ ತಯಾರಿಕೆಯಲ್ಲಿ ಪರದವನ್ನು (ಪಾದರಸ) ಬಳಸುವುದನ್ನು ಮೊಟ್ಟಮೊದಲು ತಿಳಿಸಿಕೊಟ್ಟ ನಾಗಾರ್ಜುನ ಹಲವಾರು ಧಾರ್ಮಿಕ ಮತ್ತು ವೈಜ್ಞಾನಿಕ ಪುಸ್ತಕಗಳನ್ನು ರಚಿಸಿದ. ಅವುಗಳಲ್ಲಿ 'ರಸರತ್ನಾಕರ ಬಹಳ ಪ್ರಸಿದ್ಧಿ ಪಡೆದ ಪುಸ್ತಕ. ಇದು ಶಾಲಿವಾಹನ (ಶಾತವಾಹನ), ರತ್ನಘೋಷ (ರಸವಿದ್ಯಾ ಪ್ರವೀಣ) ಮತ್ತು ನಾಗಾರ್ಜುನರ ಮಧ್ಯೆ ನಡೆದ ಸಂಭಾಷಣೆಯನ್ನೊಳಗೊಂಡಿದೆ.

2. ಸಿದ್ಧ ನಾಗಾರ್ಜುನ: ಕ್ರಿ.ಶ. 600 ರಲ್ಲಿ ಕರ್ನಾಟಕದಲ್ಲಿ ಹುಟ್ಟಿದ ಸಿದ್ಧ ನಾಗಾರ್ಜುನ ಪ್ರಸಿದ್ಧ ಜೈನಧರ್ಮ ತತ್ವಶಾಸ್ತ್ರಜ್ಞ, ತಜ್ಞವೈದ್ಯ ಪೂಜ್ಯದಾದರ ಸೋದರಳಿಯ. ಆರಂಭದಲ್ಲಿ ಪೂಜ್ಯದಾದರಿಂದಲೇ ವಿದ್ಯೆ ಕಲಿತ. ನಾಗಾರ್ಜುನ ಜೈನ ಮತದವನಾದರೂ ನಂತರ ಬೌದ್ಧಮತದೆಡೆಗೆ ಮನಸೋತು ಭಿಕ್ಷುವಾದ. ಬೌದ್ಧ ಮತಾವಲಂಬಿಯಾಗಿ ದೇಶದಾದ್ಯಂತ ಸಂಚರಿಸಿದನಲ್ಲದೇ ನೇಪಾಳ, ಟಿಬೆಟ್‍ಗಳಲ್ಲಿ ಬೌದ್ಧ ಮತ ಪ್ರಚಾರ ಮಾಡಿದ. ಟಿಬೆಟ್‍ನಲ್ಲಿ ದೀರ್ಘಕಾಲ ಇದ್ದು ಬೌದ್ಧ ಧರ್ಮದ ಕುರಿತಾಗಿ ಪುಸ್ತಕಗಳನ್ನು ರಚಿಸಿದ. ಆಯುರ್ವೇದ ಮತ್ತು ಬೌದ್ಧಧರ್ಮ ಪ್ರಚಾರ ಮಾಡುತ್ತ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ನೆಲೆಸಿದ. ರಸವಿದ್ಯೆಯಲ್ಲಿ ಪಾರಂಗತನಾಗಿ ಅನೇಕ ಸಿದ್ಧಿಗಳನ್ನು ಪಡೆದುದರಿಂದ ಸಿದ್ಧ ನಾಗಾರ್ಜುನ ಎಂಬ ಹೆಸರು ಬಂದಿದೆ. ಈತ ರಚಿಸಿದ ಪುಸ್ತಕಗಳ ರಸತಚಪುಟತಮ್, ತಕ್ಷಾಪುಡ ತಂತ್ರ ಅಥವಾ ಸಿದ್ಧ ಚಾಮುಂಡ. ಕರ್ನಾಟಕದಲ್ಲಿ ಹುಟ್ಟಿ ಪ್ರಸಿದ್ಧಿ ಹೊಂದಿದ ಸಿದ್ಧನಾಗಾರ್ಜುನನನ್ನು ಯಾರೂ ಮರೆಯುವಂತಿಲ್ಲ.

3. ಭದಂತ ನಾಗಾರ್ಜುನ: ಭದಂತ ನಾಗಾರ್ಜುನ ಕ್ರಿ.ಶ. 7ನೆಯ ಶತಮಾನಕ್ಕೆ ಸೇರಿದವ. ಈತನ ದಂತಪಂಕ್ತಿ ಸ್ಪಚ್ಛವಾಗಿ ಹೊಳೆಯುತ್ತಿದ್ದುದರಿಂದ ಭದಂತ ನಾಗಾರ್ಜುನನೆಂಬ ಹೆಸರು ಪ್ರಾಪ್ತವಾಯಿತು. ಈತ ಬೌದ್ಧಧರ್ಮ ಅನುಯಾಯಿಯಾಗಿದ್ದು ಕೇರಳದ ನಾಯರ್ ಸಮುದಾಯಕ್ಕೆ ಸೇರಿದವನೆಂದೂ ಸಂಸ್ಕøತ ಮತ್ತು ಆಯುರ್ವೇದದಲ್ಲಿ ಪಾರಂಗತನೆಂದೂ, ವಾಗ್ಭಟನಿಗಿಂತಲೂ ಮುಂಚಿನವನೆಂದೂ ತಿಳಿದುಬರುತ್ತದೆ. ಭದಂತ ನಾಗಾರ್ಜುನ ರಚಿಸಿದ 'ರಸವೈಶೇಷಿತ ಸೂತ್ರ ಆಯುರ್ವೇದದ ಮೂಲ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಇದರಲ್ಲಿ ಷಡ್ರಸಗಳ ಪಂಚಬೌತಿಕತ್ವ, ರಸಭೇದ ಮುಂತಾದವುಗಳು ವಿವರಿಸಲಾಗಿದೆ. ಬಾದರಾಯಣ ಬ್ರಹ್ಮ ಸೂತ್ರಗಳ ನಂತರ ರಸವೈಶೇಷಿತ ಸೂತ್ರ ರಚಿತವಾಗಿದೆ. ಮೊದಲ ಅಧ್ಯಾಯ 171 ಸೂತ್ರಗಳನ್ನು ಆರೋಗ್ಯ ಮತ್ತು ರೋಗಗಳ ಬಗ್ಗೆ, ಆಹಾರ, ವ್ಯಾಯಾಮ, ಋತುಮಾನಗಳನ್ನೊಳಗೊಂಡಿವೆ. ಎರಡನೆ ಅಧ್ಯಾಯ 123 ಸೂತ್ರಗಳಿದ್ದು ದ್ರಾವ್ಯಗಳ ಉಪಸ್ಥಿತಿ, ಅನುಪಸ್ಥಿತಿ, ಸ್ವಭಾವ ಮತ್ತು 3ನೇ ಅಧ್ಯಾಯದಲ್ಲಿ 73 ಸೂತ್ರಗಳಿದ್ದು ಅದರಲ್ಲಿ ಪಂಚಕರ್ಮ ಚಿಕಿತ್ಸೆ ಕುರಿತು ಅದರಲ್ಲಿಯೂ ವಮನ, ವಿವೇಚನದ ಕುರಿತು ವಿವರಿಸಲಾಗಿದೆ. 'ರಸವೈಶೇಷಿಕ ಸೂತ್ರ ತುಂಬ ಅಮೂಲ್ಯ ಗ್ರಂಥವಾಗಿದ್ದು ಈ ಪುಸ್ತಕಕ್ಕೆ ಟೀಕೆಯನ್ನು ನಾಗಾರ್ಜುನನ ಶಿಷ್ಯ ನಾರಸಿಂಹ ಸಂಸ್ಕøತದಲ್ಲಿ ಬರೆದಿದ್ದಾನೆ. (ಡಾ. ವಸುಂಧರಾ ಭೂಪತಿ)