ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಟಿ ಓಕ್ ಮರ

ವಿಕಿಸೋರ್ಸ್ದಿಂದ

ನಾಟಿ ಓಕ್ ಮರ ಪ್ರೋಟಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮರ (ಸಿಲ್ವರ್ ಓಕ್). ಗ್ರೆವಿಲಿಯ ರೊಬಸ್ಟ ಇದರ ವ್ಶೆಜ್ಞಾನಿಕ ನಾಮ. ಓಕ್ ಮರವನ್ನು ಬಲುವಾಗಿ ಹೋಲುವುದರಿಂದ ಇದಕ್ಕೆ ನಾಟಿ ಓಕ್ ಮರ ಎಂಬ ಹೆಸರು ಬಂದಿದೆ. ಇದು ಮೂಲತಃ ಆಸ್ಟ್ರೇಲಿಯ ದೇಶದ್ದು. ಅಲಂಕಾರಕ್ಕಾಗಿ ಭಾರತದಲ್ಲಿ ಬೆಳೆಸಲಾಗುತ್ತದೆ. ನಾಟಿ ಓಕ್ ಮರ ಸಾಮಾನ್ಯವಾಗಿ 50 ಮೀ. ಎತ್ತರಕ್ಕೆ ಬೆಳೆಯುವುದು. 700-2000ಮೀ ಎತ್ತರದ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. ಇದರಲ್ಲಿ ಬಲು ಉದ್ದವಾದ ಮೂಲಕಾಂಡ ಉಂಟು. ಎಲೆಗಳು ಜರೀ ಗಿಡಗಳ ಎಲೆಗಳನ್ನು ಹೋಲುತ್ತವೆ. ಇವುಗಳ ಉದ್ದ 15-30 ಸೆಂಮೀ. ಇವುಗಳ ಮೇಲ್ಭಾಗ ಹಸುರು. ತಳಭಾಗ ಬೆಳ್ಳಿಯ ಬಣ್ಣದ್ದು. ಇದರಿಂದಾಗಿಯೇ ಇದಕ್ಕೆ ಸಿಲ್ವರ್ ಓಕ್ ಎಂಬ ಹೆಸರು ಬಂದಿದೆ. ಹೂಗಳು ಒಂಟೊಂಟಿಯಾಗಿ ಇಲ್ಲವೆ ಗೊಂಚಲುಗೊಂಚಲಾಗಿ ಅರಳುವುವು. ಇವುಗಳ ಬಣ್ಣ ಕಿತ್ತಳೆ. ಬೀಜಗಳ ಸುತ್ತ ಬಲು ತೆಳುವಾದ ರೆಕ್ಕೆಯಂಥ ಪೊರೆಯುಂಟು.

ನಾಟಿ ಓಕ್ ಮರ ವಿವಿಧ ರೀತಿಯ ವಾತಾವರಣ ಪ್ರದೇಶಗಳಲ್ಲಿ ಬೆಳೆಯಬಲ್ಲದು. ಆದರೆ ತುಂಬ ಬಿರುಸಾದ ಗಾಳಿಯನ್ನು ಎದುರಿಸಲಾರದು. ಈ ಮರವನ್ನು ಸಾಮಾನ್ಯವಾಗಿ ಕಾಫಿ ಮತ್ತು ಟೀ ತೋಟಗಳಲ್ಲಿ ನೆರಳಿಗಾಗಿ ಬೆಳೆಸಲಾಗುತ್ತದೆ. ಉದ್ಯಾನಗಳಲ್ಲೂ ರಸ್ತೆಗಳ ಪಕ್ಕದಲ್ಲೂ ಅಲಂಕಾರಕ್ಕಾಗಿ ಬೆಳೆಸುವುದಿದೆ. ಇದರ ಎಲೆಗಳು ಕಾಫಿ ಮತ್ತು ಟೀ ಗಿಡಗಳಿಗೆ ಹಸಿರು ಗೊಬ್ಬರವಾಗುತ್ತದೆ. ಮರದ ತೊಗಟೆಯಿಂದ ಹಳದಿ ಬಣ್ಣದ ಅಂಟನ್ನು ಪಡೆಯಬಹುದು. ಇದರ ಚೌಬೀನೆ ತುಂಬ ದೃಢವಾಗಿಯೂ ಹಗುರವಾಗಿಯೂ ಇದ್ದು ಬಾಳಿಕೆ ಬರುತ್ತದೆ. ಗೊಂಬೆ, ಕುರ್ಚಿ, ಮೇಜುಗಳು, ಮನೆಕಟ್ಟುವ ಮರದ ಸಾಮಾನುಗಳನ್ನು ಇದರಿಂದ ತಯಾರಿಸುವುದುಂಟು.

													(ಬಿ.ಪಿ.)