ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರದ

ವಿಕಿಸೋರ್ಸ್ದಿಂದ
Jump to navigation Jump to search

ನಾರದ ಬಹುಪಾಲು ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಈತನನ್ನು ಕುರಿತು ಜನ ಸಾಮಾನ್ಯರಲ್ಲಿ ಹಲವು ಕಲ್ಪನೆಗಳು ರೂಢವಾಗಿವೆ. ಈತ ಮಹಾನ್ ಭಕ್ತ. ಎಂದು ಎಷ್ಟು ಪ್ರಸಿದ್ದನೋ ಅಷ್ಟೇ ಇಬ್ಬರ ನಡುವೆ ಜಗಳ ಹಚ್ಚುವುದರಲ್ಲಿ ಹಾಗೂ ಜಗಳಗಳನ್ನು ಬಗೆಹರಿಸುವುದರಲ್ಲಿ ನಿಪುಣನೆಂದೂ ವರ್ಣಿತನಾಗಿದ್ದಾನೆ.

ಭಗವದ್ಗೀತೆ ಈತನನ್ನು ದೇವರ್ಷಿ ಎಂದು ಬಣ್ಣಿಸಿದೆ. ಹಾಗೆ ನೋಡಿದರೆ ಈತನ ಉಲ್ಲೇಖ ವೇದಕಾಲದಿಂದ ಹಿಡಿದು ಪುರಾಣ ಪುಣ್ಯಕಥೆಗಳಲ್ಲಿಯೂ ಕಂಡುಬರುವುದು. ಈತನ ಮೂಲದ ಬಗೆಗೆ ಬೇರೆಬೇರೆ ಕಡೆ ಬೇರೆಬೇರೆ ರೀತಿಯಾಗಿ ಹೇಳಲಾಗಿದೆ.

ಪುರಾಣಗಳಲ್ಲಿ ಈತನ ಉಲ್ಲೇಖ ಹೀಗಿದೆ : ವಾಯು ಪುರಾಣದಲ್ಲಿ ಈತ ಕಶ್ಯಪ ಪ್ರಜಾಪತಿಯ ಪುತ್ರ. ಅಯೋನಿಜ, ಸಂಕಲ್ಪ ಮಾತ್ರದಿಂದ ಹುಟ್ಟಿದವ. ಮತ್ಸ್ಯ ಪುರಾಣದಲ್ಲಿ ಬ್ರಹ್ಮನ ಮಾನಸಪುತ್ರ. ಬ್ರಹ್ಮಾಂಡ ಮತ್ತು ಬ್ರಹ್ಮ ಪುರಾಣಗಳಲ್ಲಿ ಪರಮೇಷ್ಠಿ ದಕ್ಷ ಪುತ್ರಿಯ ಮಗ. ಭಾಗವತದಲ್ಲಿ ಸಾಕ್ಷಾತ್ ಬ್ರಹ್ಮನ ಮೂರನೆಯ ಅವತಾರ ಮತ್ತು ಅವನ ಜಂಘೆಯಿಂದ ಹುಟ್ಟಿದವ, ದಾಸೀಪುತ್ರ, ಭಗವದ್ಭಕ್ತಿಯಿಂದ ಈತನಿಗೆ ವಿಷ್ಣು ಸಾನಿದ್ಯ. ದಾಸಿಪುತ್ರನೆಂಬ ಬಗ್ಗೆ ಬ್ರಹ್ಮ ವೈವರ್ತ ಪುರಾಣದಲ್ಲಿಯೂ ಉಲ್ಲೇಖವಿದೆ. ವರಾಹ ಪುರಾಣದಲ್ಲಿ ಈತ ಸಾರಸ್ವತ ಬ್ರಾಹ್ಮಣ.

ನಾರಂ ಜಲಂ ದದಾತಿ, ನೀರನ್ನು ಕೊಡುವವ; ನಾರಂ ಜ್ಞಾನಂ ದದಾತಿ, ಜ್ಞಾನವನ್ನು ಕೊಡುವವ; ನರಸ್ಯ ಇದು ನಾರಂ ಮನುಷ್ಯತ್ವಂ ದದಾತಿ, ಮನುಷ್ಯತ್ವವನ್ನು ಉಪದೇಶಿಸುವವ ಎಂಬುದಾಗಿ ನಾರದ ಪದದ ವ್ಯುತ್ಪತ್ತಿಯನ್ನು ಹೇಳಲಾಗಿದೆ.

ಈಗಿನ ಬಗೆಗಿನ ಕಥೆಗಳು ಹೀಗಿವೆ : ಐತರೇಯ ಬ್ರಾಹ್ಮಣರಲ್ಲಿ ಈತ ಹರಿಶ್ಚಂದ್ರನ ಪುರೋಹಿತ. ಸಾಂಖ್ಯಾಯನ ಶ್ರೌತ ಸೂತ್ರದಲ್ಲಿ ಪರ್ವತ ಋಷಿಗಳ ಸಹಯೋಗಿ. ಐತರೆಯ ಬ್ರಾಹ್ಮಣ ಮತ್ತು ಮೈತ್ರಾಯಿಣಿ ಸಂಹಿತೆಯಲ್ಲಿ ಈತ ಅಧ್ಯಾಪಕ. ಸಾಮವಿಧಾನ ಬ್ರಾಹ್ಮಣದಲ್ಲಿ ಬ್ರಹ್ಮಸ್ಪತಿಯ ಶಿಷ್ಯ. ಸಾಮಗಾನದ ವಿಷಯದಲ್ಲಿ ನಾರದೀಯಾ ಶಿಕ್ಷಾ ಎಂಬ ಗ್ರಂಥ ಪ್ರಸಿದ್ಧವಿದೆ. ಮಹಾಭಾರತದಲ್ಲಿ ಈತ ಸನತ್ಕುಮಾರರೊಡನೆ ಮಾಡಿದ ವಾರ್ತಾಲಾಪ, ಶುಕನಿಗೆ ಮಾಡಿದ ಜ್ಞಾನೋಪದೇಶ. ನಾರಾಯಣನಿಗೆ ನೀಡಿದ ಆತ್ಮತತ್ವದ ಉಪದೇಶ ಇತ್ಯಾದಿಗಳ ಉಲ್ಲೇಖವಿದೆ. ಭಾಗವತದಲ್ಲಿ ಸೌವರ್ಣಿ ಎಂಬ ಎಂಟನೆಯ ಮನುವಿಗೆ ಪಂಚರಾತ್ರಾಗಮದ ಉಪದೇಶ ಹಾಗೂ ವಾಸುದೇವನಿಗೆ ಭಾಗವತ ಧರ್ಮವನ್ನು ಹೇಳಿದ ಸಂಗತಿ ಇದೆ. ಪುಂಡರೀಕನಿಗೆ ನಾರಾಯಣ ಮಹಾತ್ಮವನ್ನು ಹೇಳಿದವನು ಈತನೇ. ದ್ರುವನಿಗೆ ಓಂ ನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರ ಮಂತ್ರವನ್ನು ಹೇಳೀ ದೀಕ್ಷೆ ಕೊಟ್ಟವ.

ಅಘಟಿತಘಟನಾಪಟು ಎಂದು ಈತನ ಪ್ರಸಿದ್ಧಿ. ಆ ದೃಷ್ಟಿಯಿಂದ ಶ್ರೀಶಂಕರ ಪಾರ್ವತಿಯರ ವಿವಾಹದಲ್ಲಿ ಈತ ಮಧ್ಯಸ್ಥನಾದುದು. ವಿಷ್ಣುವಿನ ಐದನೆಯ ಅವತಾರವಾದ ವಾಮನನ ಉಪನಯನ ಕಾರ್ಯವನ್ನೆಸಗಿದುದು, ದಕ್ಷನ ಶಾಪವನ್ನು ನಿಶ್ಫಲಗೊಳಿಸಲು ಈತ ಮಾಡಿದ ಕಾರ್ಯ, ಕೃಷ್ಣಾವತಾರದಲ್ಲಿ ಈತ ಆಡಿದ ಪಾತ್ರಗಳು ಉಲ್ಲೇಖನೀಯ.

ಒಟ್ಟಿಗೆ ನೋಡಲಾಗಿ ವೇದಗಳನ್ನು ಮೊದಲ್ಗೊಂಡು ಪುರಾಣಾದಿಗಳಲ್ಲೆಲ್ಲಾ ಉಲ್ಲೇಖಿಸಲಾದ ಪಾತ್ರಗಳಲ್ಲಿ ಈತನ ಪಾತ್ರ ಚಿತ್ತರಂಜನೀಯವಾಗಿದೆ. ವಿದ್ವತ್ತು, ಅನುಭವ, ಜ್ಞಾನ, ಕರ್ಮಕ್ಷೇತ್ರ, ಗಂಭೀರ ಘಟನೆ, ವಿನೋದ ಪ್ರಸಂಗ ಮುಂತಾದುವಲ್ಲಿ ಪಾತ್ರ ವಹಿಸಿದ ಕೆಲವು ವ್ಯಕ್ತಿಗಳಲ್ಲಿ ಈತನೂ ಒಬ್ಬ. ವಿಶೇಷತಃ ಭಕ್ತಿ ಸಾಮ್ರಾಜ್ಯದಲ್ಲಿ ಈತ ಸಾಮ್ರಾಟನೆಂದೇ ಹೇಳಬೇಕು. ತಂಬೂರಿ ತಾಳವನ್ನು ಹಿಡಿದುಕೊಂಡು, ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಹಾಡುತ್ತಾ ಕುಣಿಯುತ್ತಾ, ತ್ರಿಭುವನ ಸಂಚಾರ ಮಾಡುತ್ತ ದೇವಮಾನವರಲ್ಲಿಯ, ದೇವದೇವತೆಗಳಲ್ಲಿಯ ತೊಡಕುಗಳನ್ನು ಬಿಗಿಯುತ್ತ ಸಡಲಿಸುತ್ತ ಹೋಗುತ್ತಿರುವ ಭಕ್ತಾಗ್ರೇಸರ ಈತ. (ಆರ್.ಆರ್.ಡಿ)