ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರಾ

ವಿಕಿಸೋರ್ಸ್ದಿಂದ

ನಾರಾ ಜಪಾನಿನ ಪ್ರಸಿದ್ಧ ಐತಿಹಾಸಿಕ ಪಟ್ಟಣ. ಎಂಟನೆಯ ಶತಮಾನದ ಜಪಾನಿನ ಇತಿಹಾಸದಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ಈ ಕಾಲವನ್ನು ಜಪಾನಿನ ಇತಿಹಾಸದಲ್ಲಿ ನಾರಾ ಕಾಲವೆಂದೇ ಕರೆಯುತ್ತಾರೆ. ಈ ಕಾಲದಲ್ಲಿ ಜಪಾನೀಯರ ಧರ್ಮ, ಕಲೆ, ಸಾಹಿತ್ಯ, ಜನಜೀವನಗಳು ಚೀನದ ಸಂಸ್ಕøತಿಯಿಂದ ಪ್ರಭಾವಗೊಂಡು ಬೆಳೆದುವು. ಷೋತೋಕು ಟೈಷಿ ಎಂಬ ಚಕ್ರವರ್ತಿ ಬೌದ್ಧಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಅದು ದೇಶದಲ್ಲೆಲ್ಲ ಹರಡಲು ಕಾರಣವಾಗಿ ಜಪಾನಿನ ಅಶೋಕ ಚಕ್ರವರ್ತಿ ಎಂಬ ಕೀರ್ತಿಯನ್ನು ಪಡೆದ. ಚೀನದಿಂದ ಶಿಲ್ಪಿಗಳನ್ನು ಕರೆಸಿಕೊಂಡು ರಾಜಧಾನಿಯಾದ ನಾರಾ ಪಟ್ಟಣದಲ್ಲಿ, ತೋಟೈಜಿ, ಯಾಕುಷಿಜಿ, ಹೋರೆಯುಜಿ, ಮೊದಲಾದ ಬೌದ್ಧ ದೇವಾಲಯಗಳನ್ನು ಕಟ್ಟಿಸಿದ. ಪ್ರಾಚೀನ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿರುವ ಹಾಗೂ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿರುವ ಕೋಜುಕಿ ಮತ್ತು ನಿಹೋಂಗಿಗಳೆಂಬ ಗ್ರಂಥಗಳು ಇದೇ ಕಾಲದಲ್ಲಿ ರಚಿಸಲ್ಪಟ್ಟವು. ವೂನ್ಯೋಷು ಎಂಬ ಪದ್ಯ ಸಂಕಲನವೊಂದು ಈ ಕಾಲದ ಪ್ರಮುಖ ಸಾಹಿತ್ಯ ಗ್ರಂಥ. (ಎಸ್.ಕೆ.ಎಸ್.)