ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರಾಯಣನ್, ಕೆ ಆರ್

ವಿಕಿಸೋರ್ಸ್ದಿಂದ

ನಾರಾಯಣನ್, ಕೆ ಆರ್ (1921-2005). ಭಾರತದ 10ನೆಯ ರಾಷ್ಟ್ರಪತಿ. ದೇಶದ ಮೊಟ್ಟಮೊದಲ ದಲಿತ ರಾಷ್ಟ್ರಪತಿ. ಜುಲೈ 25, 1997ರಂದು ಅಧಿಕಾರ ವಹಿಸಿಕೊಂಡರು. ಜುಲೈ 25, 2002ರವರೆಗೆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ನವೆಂಬರ್ 9, ಬುಧವಾರ 2005 ತಮ್ಮ 85ನೇ ವಯಸ್ಸಿನಲ್ಲಿ ನಿಧನಹೊಂದಿದರು.

ಪತ್ರಕರ್ತ, ಪ್ರಾಧ್ಯಾಪಕ, ವಿದ್ವಾಂಸ, ರಾಜತಾಂತ್ರಿಕ, ರಾಜಕಾರಿಣಿ ಕೊಛೇರಿಲ್ ರಾಮನ್ ನಾರಾಯಣನ್ ಅಕ್ಟೋಬರ್ 27, 1921ರಂದು ಕೇರಳದ ಕೊಟ್ಟಾಯಂ ಜಿಲ್ಲೆ ಉeóÁವೂರ್ ಗ್ರಾಮದಲ್ಲಿ ಜನಿಸಿದರು. ತಂದೆ ನಾಟಿ ಔಷಧಿ ವೈದ್ಯ ರಾಮನ್‍ವೈದ್ಯನ್. ದಿನಂಪ್ರತಿ ಹತ್ತುಮೈಲು ನಡೆದು ಕೆ.ಆರ್. ನಾರಾಯಣನ್ ಶಾಲೆಗೆ. ಆದರೆ ಅವರ ಜನ್ಮದಿನಾಂಕ ಸರಿಯಾಗಿ ತಿಳಿಯದ ಅವರ ಚಿಕ್ಕಪ್ಪ ಶಾಲೆಗೆ ಸೇರಿಸುವಾಗ 1920, ಅಕ್ಟೋಬರ್ 27ಎಂದು ದಾಖಲಿಸಿದರು. ತಿರುವಾಂಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ. ಮೊದಲಿಗರಾಗಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ. ತಿರುವಾಂಕೂರು ವಿಶ್ವವಿದ್ಯಾಲಯದಲ್ಲಿ ಪ್ರಥಮರ್ಯಾಂಕ್ ಪಡೆದರೂ ಅವರು ಹಿಂದುಳಿದವರೆಂಬ ಕಾರಣಕ್ಕೆ ಉಪನ್ಯಾಸಕ ಹುದ್ದೆಯನ್ನು ಅವರಿಗೆ ನಿರಾಕರಿಸಲಾಯಿತು. ಕೋಪ-ಅಸಮಾಧಾನಗೊಂಡ ನಾರಾಯಣ್ ಅವರಿಂದ ಆ ಹುದ್ದೆ ನಿರಾಕರಣೆ 50 ವರ್ಷಗಳ ನಂತರ ಕೆ.ಆರ್.ಎನ್. ಉಪರಾಷ್ಟ್ರಪತಿಯಾಗಿ ಅದೇ ವಿಶ್ವವಿದ್ಯಾಲಯ ಪದವಿ ಸ್ವೀಕರಿಸುವಂತೆ ಕೋರಿದಾಗ ಅವರು ಸಂತೋಷದಿಂದ ಒಪ್ಪಿದರು. ರಾಜ್ಯಶಾಸ್ತ್ರದಲ್ಲಿ ವಿಶೇಷ ಪ್ರಾವಿಣ್ಯತೆಯೊಡನೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಬಿ.ಎಸ್‍ಸಿ(ಎಕನಾಮಿಕ್ಸ್) ವಿಷಯದಲ್ಲಿ ಫಸ್ಟ್‍ಕ್ಲಾಸ್ ಆನರ್ಸ್ ಪದವಿ ಪಡೆದರು. 1944-45ರ ಅವಧಿಯಲ್ಲಿ ಮದ್ರಾಸ್-ಇಂದಿನ ಚೆನ್ನೈನ-ದಿ ಹಿಂದೂ ಹಾಗೂ ಬಾಂಬೆಯ-ಇಂದಿನ ಮುಂಬೈದ-ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿಮೆ. ಲಂಡನಿನಲ್ಲಿ ವಿದ್ಯಾರ್ಥಿಯಾಗಿರುವಾಗಲೇ 1945-48ರ ಸಮಯದಲ್ಲಿ ಕೆ ಎಂ ಮುನ್ಷಿ ಅವರ ಸಂಪಾದಕತ್ವದ ಮುಂಬೈ ವಾರಪತ್ರಿಕೆ `ಸೋಷಿಯಲ್ ವೆಲ್‍ಫೇರ್‍ಗೆ ಲಂಡನ್ ವರದಿಗಾರರಾಗಿ ಕೆಲಸ ಮಾಡಿದರು ನಾರಾಯಣನ್.

1949ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದ ಕೆ ಆರ್ ನಾರಾಯಣನ್, ವಿದೇಶಾಂಗ ಸಚಿವ ಖಾತೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ರಂಗೂನ್, ಟೋಕಿಯೋ, ಲಂಡನ್, ಕ್ಯಾನ್ಬೆರಾ ಮತ್ತು ಹನಾಯ್‍ಗಳಲ್ಲಿನ ಭಾರತೀಯ ದೂತಾವಾಸಗಳಲ್ಲೂ ಸೇವೆ ಸಲ್ಲಿಸಿದರು. ಇದರ ನಡುವೆ 1954ರಿಂದ 1955ರವರೆಗೆ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಆರ್ಥಿಕ ಆಡಳಿತ ವಿಷಯ ಬೋಧಿಸಿದರು. ಸೆಂಟ್ರಲ್ ಫಾರ್ ಫಾರಿನ್ ಟೆಕ್ನೀಷಿಯನ್ಸ್‍ನಲ್ಲಿ ಜಂಟಿನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದರು.

1967-69ರಲ್ಲಿ ಥಾಯ್ಲೆಂಡಿನಲ್ಲಿ, 1973-75ರಲ್ಲಿ ತುರ್ಕಿಯಲ್ಲಿ, 1976-78ರಲ್ಲಿ ಚೀಣಾದಲ್ಲಿ ಭಾರತದ ರಾಯಭಾರಿ. 1976ರಲ್ಲಿ ವಿದೇಶಾಂಗ ಕಾರ್ಯದರ್ಶಿ. 1978ರಲ್ಲಿ ಸೇವೆಯಿಂದ ನಿವೃತ್ತಿ. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ 1979ರ ಜನವರಿಯಲ್ಲಿ ನೇಮಕ. 1980ರ ಅಕ್ಟೋಬರ್‍ವರೆಗೆ ಈ ಹುದ್ದೆಯಲ್ಲಿ ಮುಂದುವರೆದರು. 1980-84ರ ಅವಧಿಯಲ್ಲಿ ಅಮೆರಿಕದಲ್ಲಿ ಭಾರತದ ರಾಯಭಾರಿ; ಆ ಹುದ್ದೆ ನಿರ್ವಹಿಸಿ ಸ್ವದೇಶಕ್ಕೆ ಮರಳಿದ ನಂತರ ರಾಜಕಾರಣಕ್ಕೆ ಪ್ರವೇಶ. ಇಂದಿರಾಗಾಂದಿಯವರ ಮನವಿಗೆ ಓಗೊಟ್ಟು ರಾಜಕಾರಣಕ್ಕೆ. 1984, 1989 ಹಾಗೂ 1991ರಲ್ಲಿ ಕೇರಳದ ಒಟ್ಟಪಳಂ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ. 1985ರಿಂದ 1992ರವರೆಗೆ ಲೋಕಸಭಾಸದಸ್ಯರಾಗಿದ್ದರು. ಇದೇ ಅವಧಿಯಲ್ಲಿ ಯೋಜನಾಖಾತೆ ರಾಜ್ಯಸಚಿವರಾಗಿ, ವಿದೇಶಾಂಗ ಖಾತೆ ಸಚಿವರಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ, ಅಣುಶಕ್ತಿ, ಬಾಹ್ಯಾಕಾಶ, ವಿದ್ಯುನ್ಮಾನ, ಸಾಗರ ಅಭಿವೃದ್ಧಿ ಸಚಿವರಾಗಿ ಸೇವೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ. ಆಗಸ್ಟ್ 21, 1992- ಕೆ ಆರ್ ನಾರಾಯಣನ್ ಅವರ ಸಾರ್ವಜನಿಕ ಜೀವನದಲ್ಲಿ ಮಹತ್ವ ಮಜಲು. ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆ. ರಾಜ್ಯಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ. 1997ರ ಜುಲೈ 25ರಂದು ರಾಷ್ಟ್ರಪತಿಯಾಗಿ ಆಯ್ಕೆಯಾಗುವವರೆಗೆ ಹುದ್ದೆಯಲ್ಲಿ ಸೇವೆ.

ರಾಷ್ಟ್ರಪತಿಯಾಗಿ ಅಧಿಕಾರ ನಿರ್ವಹಿಸಿದ ಕಾಲದಲ್ಲಿ ದಿವಂಗತ ಕೆ.ಆರ್. ನಾರಾಯಣನ್ ದೇಶಕಂಡ ಅತ್ಯಂತ ಕ್ರಿಯಾಶೀಲ ರಾಷ್ಟ್ರಪತಿಗಳ ಪೈಕಿ ಒಬ್ಬರಾಗಿದ್ದರು. ತಮ್ಮ ವಿಶಿಷ್ಟ ನಡವಳಿಕೆಯಿಂದ ಪ್ರಸಿದ್ಧಿ ಪಡೆದರು. ನೇರವಾಗಿ ತಮ್ಮ ಅಭಿಪ್ರಾಯಮಂಡನೆ, ಸೂಕ್ತ ಪರಾಮರ್ಶೆಯಿಲ್ಲದೆ ಯಾವುದನ್ನೂ ಒಪ್ಪದ ನಿಲುವು, ದಲಿತರು, ಅಸಹಾಯಕರ ಬಗ್ಗೆ ಅನನ್ಯಕಾಳಜಿ, ತಮ್ಮ ನಿರ್ಧಾರಗಳಲ್ಲಿ ಪಾರದರ್ಶಕತೆ ಅವರ ವಿಶಿಷ್ಟ ಗುಣ.

1998 ಸಾರ್ವತ್ರಿಕ ಚುನಾವಣೆಯಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ರಾಷ್ಟ್ರಪತಿಗಳಾಗಿದ್ದಾಗ ಪೂಜಾ, ಪ್ರಾರ್ಥನಾ ಸ್ಥಳಗಳಿಗೆ, ಮಠಾಧಿಪತಿಗಳು, ದೇವಮಾನವರೆಂದು ಹೇಳಿ ಕೊಳ್ಳುವವರಬಳಿ ಹಾಯಲಿಲ್ಲ. ವಿದೇಶಗಳಿಗೆ ತೆರಳಿದ ಹಲವಾರು ಭಾರತೀಯ ನಿಯೋಗಗಳಲ್ಲಿ ಸದಸ್ಯರಾಗಿ, ವಿವಿಧ ಪುರಸ್ಕಾರ ಆಯ್ಕೆ ಸಮಿತಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಲೇಖಕ ವಿದ್ವಾಂಸ ಕೆ ಆರ್ ನಾರಾಯಣನ್, `ಇಂಡಿಯಾ ಅಂಡ್ ಅಮೆರಿಕ, `ಇಮೇಜಸ್ ಅಂಡ್ ಇನ್‍ಸೈಟ್ಸ್, `ನೆಹರೂ ಅಂಡ್ ಹಿಸ್ ಮಿಷನ್ ಸೇರಿದಂತೆ ನಾಲ್ಕು ಗ್ರಂಥಗಳನ್ನು ರಚಿಸಿದರು. ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟೋರೆಟ್ ಪಡೆದರು. ರಾಜಕೀಯ ವಿಚಾರ, ಅಂತಾರಾಷ್ಟ್ರೀಯ ವ್ಯವಹಾರ, ಶಿಕ್ಷಣ, ದರ್ಶನ, ವಿಜ್ಞಾನ, ತಂತ್ರಜ್ಞಾನ, ಕಾವ್ಯ, ಸಾಹಿತ್ಯ, ಲಲಿತಕಲೆಗಳಲ್ಲಿ ಆಸಕ್ತಿ. ಮಡದಿ ಶ್ರೀಮತಿ ಉಷಾನಾರಾಯಣನ್, ಇಬ್ಬರು ಪುತ್ರಿಯರು ಚಿತ್ರ ಮತ್ತು ಅಮೃತಾ. (ಕೆ.ಎಸ್.ಅಚ್ಯುತನ್)