ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರಾಯಣಮೂರ್ತಿ, ಎನ್ ಆರ್

ವಿಕಿಸೋರ್ಸ್ದಿಂದ

ನಾರಾಯಣಮೂರ್ತಿ, ಎನ್ ಆರ್

ಇಪ್ಪತ್ತು ಇಪ್ಪತ್ತೊಂದನೆಯ ಶತಮಾನಗಳ ಹೊಸ ಆವಿಷ್ಕಾರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರ ವಿಜ್ಞಾನವನ್ನು ಮಾನ ಕಲ್ಯಾಣಕ್ಕಾಗಿ ಸಮರ್ಥವಾಗಿ ಬಳಸುತ್ತಿರುವ ಸಮಕಾಲೀನ ವಿಜ್ಞಾನಿ-ಎನ್.ಆರ್.ನಾರಾಯಣಮೂರ್ತಿ. ಬಂಡವಾಳವನ್ನೇ ಪ್ರಧಾನ ಹಾಗೂ ಮೂಲದ್ರವ್ಯವೆಂದು ನಂಬಿದ್ದ ವಿಶ್ವ ಮಾರುಕಟ್ಟೆಗೆ ಸವಾಲನ್ನೆಸೆದ ಧೀರ. ಬಡಪರಿಸರದ ಭಾರತದಲ್ಲಿ ಇನ್‍ಫೋಸಿಸ್ ತಂತ್ರಜ್ಞಾನ ಬಳಗವನ್ನು ಕಟ್ಟಿ ಪ್ರತಿಭೆ ಮತ್ತು ಕಾರ್ಯನಿಷ್ಠೆಯಿಂದ ವಾಮನ ಪ್ರಯತ್ನವನ್ನು ತ್ರಿವಿಕ್ರಮನನ್ನಾಗಿಸಿದ ಉತ್ಸಾಹಿ ಉದ್ದಿಮೆದಾರ.

ಸಂಶೋಧಕ, ವಿಜ್ಞಾನ ಪ್ರಯೋಗಶೀಲ, ಸೌಜನ್ಯಪೂರ್ಣ ಕನ್ನಡಿಗ 1946ರ ಆಗಸ್ಟ್ 20 ಕರ್ನಾಟಕದಲ್ಲಿ ಜನನ. ಮಂಡ್ಯ-ಬೆಂಗಳೂರಿನಲ್ಲಿ ಬಾಲ್ಯ. ಮೈಸೂರು ವಿಶ್ವವಿದ್ಯಾನಿಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರ ನಾರಾಯಣಮೂರ್ತಿ ಪ್ರತಿಭಾವಂತ ವಿದ್ಯಾರ್ಥಿ ಕಾನ್ಪುರದ ಐಐಟಿಯ ಸ್ನಾತಕೋತ್ತರ ತಂತ್ರವಿಜ್ಞಾನಿ.

ಐದಾರು ಮಂದಿ ಉತ್ಸಾಹಿ ಸಾಫ್ಟ್‍ವೇರ್ ತಂತ್ರಜ್ಞರೊಂದಿಗೆ ಬೆಂಗಳೂರಿನಲ್ಲಿ ನಾರಾಯಣಮೂರ್ತಿಯವರು ಇನ್‍ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಆರಂಭಿಸಿದಾಗ (1981) ಏಷಿಯಾ ಖಂಡದಲ್ಲಿ ಮಾಹಿತಿ ತಂತ್ರಜ್ಞಾನದ ಬಗೆಗೆ ಸಾಮಾನ್ಯ ಪರಿಚಯವೂ ಇರಲಿಲ್ಲ. ಇನ್‍ಫೋಸಿಸ್ ಅಮೇರಿಕೆಯ ಸ್ಟಾಕ್ ಎಕ್ಸ್‍ಚೇಂಜಿನಲ್ಲಿ ನೋಂದಾಯಿತವಾದ (ಮಾರ್ಚ್ 1999) ಮೊದಲ ಭಾರತೀಯ ಸಾಫ್ಟ್‍ವೇರ್ ಸಂಸ್ಥೆ. ಪ್ಯಾರಿಸ್ಸಿನ ಛಾರಲ್ಸ್ ಡಿಗಾಲೆ ವಿಮಾನ ನಿಲ್ದಾಣದ ಸರಕು ದಟ್ಟಣೆಯ ಸುಲಲಿತ ನಿರ್ವಹಣೆ ವ್ಯವಸ್ಥೆಗೆ (1985-86) ಮಾರ್ಗದರ್ಶನ ನೀಡಿದಾಗ ಪ್ರಪಂಚಕ್ಕೆ ನಾರಾಯಣಮೂರ್ತಿಯವರ ಮಾಹಿತಿ ತಂತ್ರಜ್ಞಾನ ಸಾಮಥ್ರ್ಯದ ಪರಿಚಯವಾಯಿತು. ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನಿ ಸೇವಾ ಸಂಘಟನೆ (ನ್ಯಾಸ್‍ಕ್ಯಾಮ್) ಮೂರ್ತಿಯವರ ನೇತೃತ್ವದಲ್ಲಿ (1992-1994) ಸ್ಪಷ್ಟ ಧ್ಯೇಯೋದ್ದೇಶಗಳ ರೂಪುರೇಷೆ ಪಡೆಯಿತು. 1981ರಲ್ಲಿ ಇನ್‍ಫೋಸಿಸ್ ಜನನ. ಇಂದಿಗೂ ನಾರಾಯಣಮೂರ್ತಿ ಇನ್‍ಫೋಸಿಸ್ ಸಂಸ್ಥೆಯ ಪ್ರಧಾನಾಧ್ಯಕ್ಷ. ರಾಷ್ಟ್ರೀಯ ತಂತ್ರಜ್ಞಾನ ಕಾರ್ಯತಂಡದ ಸದಸ್ಯ ಹಾಗೂ ಪ್ರಧಾನ ಮಂತ್ರಿಯವರ ವ್ಯಾಪಾರ ಮತ್ತು ಕೈಗಾರಿಕಾ ಪರಿಷತ್ತಿನ ಸದಸ್ಯೆ-ಸಲಹೆಗಾರ ಭಾರತೀಯ ರಿಸರ್ವ್‍ಬ್ಯಾಂಕಿನ ನಿರ್ದೇಶಕ ಮಂಡಲಿ ಸದಸ್ಯೆ.

ಎಕನಾಮಿಕ್ ಟೈಮ್ಸ್ ಉದ್ದಿಮೆದಾರ ವಾರ್ಷಿಕ ಪ್ರಶಸ್ತಿ (2000-2001); ದಿ ಮಾಕ್ಸ್ ಸ್ಕಿಮಿಡೆನಿ ಪ್ರಶಸ್ತಿ(2001); ಏಷಿಯಾ ಪ್ರತಿಷ್ಠಿತ ವ್ಯಕ್ತಿ-ಏಷಿಯಾವೀಕ್ ಪ್ರಶಸ್ತಿ(2000); ಬಿಸಿನೆಸ್ ವೀಕ್‍ನ ಪ್ರತಿಷ್ಠಿತ ಉದ್ದಿಮೆದಾರ ಪ್ರಶಸ್ತಿ (1999); ಕಾರ್ಪೊರೇಟ್ ಜಗತ್ತಿನ ಅತ್ಯುನ್ನತ ``1999ರ ಪ್ರತಿಷ್ಠಿತ ಉದ್ದಿಮೆದಾರ ಪ್ರಶಸ್ತಿ (1999) ಏಷಿಯಾ ಧ್ರುವತಾರೆ ಪ್ರಶಸ್ತಿ (ಅನುಕ್ರಮವಾಗಿ 1998, 1999 ಮತ್ತು 2000); ಜೆಆರ್‍ಡಿ ತಾತ ಕಾರ್ಪೊರೇಟ್ ಮುಂದಾಳು ಪ್ರಶಸ್ತಿ (1996-97) ಇವು ನಾರಾಯಣಮೂರ್ತಿಗೆ ಸಂದ ಕೆಲವು ಪ್ರಶಸ್ತಿ-ಗೌರವಗಳು.

ಇಂಡೋ-ಬ್ರಿಟೀಷ್ ಸಹಯೋಗ ಪರಿಷತ್ತಿನ ಸಹ-ಅಧ್ಯಕ್ಷ; ಸದರನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಪರಿಷತ್ತು ಮತ್ತು ವಾರ್ಟೆಸನ್ ಬಿಸಿನೆಸ್ ಸ್ಕೂಲಿನ ಏಷಿಯಾ ಕಾರ್ಯನಿರ್ವಾಹಕ ಮಂಡಲಿಗೆ ಇವರು ಸದಸ್ಯರು. (ಎಸ್.ಕೆ.ಎಸ್)