ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರಾಯಣಶಾಸ್ತ್ರೀ, ಎನ್ ಎಸ್

ವಿಕಿಸೋರ್ಸ್ದಿಂದ

ನಾರಾಯಣಶಾಸ್ತ್ರೀ, ಎನ್ ಎಸ್ , 1902-1955. ಕರ್ನಾಟಕದ ಪ್ರಸಿದ್ಧ ಮನೋವಿಜ್ಞಾನಿ. ನಾಟಕಕಾರ ಹಾಗೂ ನಟ. 12-6-19902ರಂದು ನರಸಿಂಹ ರಾಜಪುರದಲ್ಲಿ ಜನಿಸಿದರು. ತಂದೆ ವೈದಿಕ ವಿದ್ವಾಂಸರಾಗಿದ್ದ ಸುಬ್ರಹ್ಮಣ್ಯಶಾಸ್ತ್ರೀ. ಇವರದು ಹೆಸರಾದ ನಗಳೀಪುರ ಮನೆತನ. ಪದವೀಪೂರ್ವದ ವಿದ್ಯಾಭ್ಯಾಸ ಹುಟ್ಟೂರು ಮತ್ತು ತುಮಕೂರುಗಳಲ್ಲಿ ನಡೆಯಿತು. ಅನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 1925ರಲ್ಲಿ ಬಿ.ಎ. 1927ರಲ್ಲಿ ಎಂ.ಎ ಪದವಿ ಪಡೆದರು. ಎಂ.ಎ ಪದವಿ ವ್ಯಾಸಾಂಗ ಪ್ರಧಾನ ವಿಷಯ ಪ್ರಾಯೋಗಿಕ ಮನೋವಿಜ್ಞಾನ. ಗುರುಗಳಾಗಿದ್ದ ಗೋಪಾಲಸ್ವಾಮಿಯವರಿಗೆ ಇವರು ಪ್ರಿಯಶಿಷ್ಯರಾಗಿದ್ದರು. ಅಧ್ಯಯನ ಮಾಡಿದ ಕಾಲೇಜಿನಲ್ಲಿಯೆ ಅಧ್ಯಾಪಕರಾಗಿ ನೇಮಕಗೊಂಡರು. ಅಧ್ಯಾಪನದೊಂದಿಗೆ ಸಂಶೋಧನೆಯನ್ನೂ ನಡೆಸಿ ಸೌಂದರ್ಯಾನುಭೂತಿಯ ಮನೋವೈಜ್ಞಾನಿಕ ವಿವರಣೆ ಎಂಬ ಮಹಾಪ್ರಬಂಧ ಬರೆದು ಡಿ. ಲಿಟ್. ಪದವಿ ಪಡೆದರು (1940). ಕೆಲವು ವರ್ಷಗಳ ಅನಂತರ ಬೆಂಗಳೂರಿನ ತಾತಾ ವಿಜ್ಞಾನ ಸಂಸ್ಥೆಯ ಮನೋವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾದರು. 1945-51ರ ವರೆಗೆ ಭಾರತೀಯ ವಿಜ್ಞಾನ ಮನೋವಿಜ್ಞಾನ ವಿಭಾಗಕ್ಕೆ ಅಧ್ಯಕ್ಷರಾಗಿದ್ದರು. 1953ರಲ್ಲಿ ಇಂಗ್ಲೆಂಡಿನ ಅಧ್ಯಯನ ಪ್ರವಾಸ ಮಾಡಿ ಹಿಂದಿರುಗಿದರು. ಅದೇ ವರ್ಷ ಬ್ರಿಟನ್ನಿನ ಮನೋವಿಜ್ಞಾನದ ಸಂಘದ ಸದಸ್ಯರಾಗಿ ಆಯ್ಕೆಗೊಂಡರು. ಈ ಗೌರವಕ್ಕೆ ಪಾತ್ರರಾದ ಭಾರತೀಯರಲ್ಲಿ ಇವರು ಮೊದಲಿಗರು. ಈ ವಿಜ್ಞಾನ ಕ್ಷೇತ್ರದಲ್ಲಿ ಇವರಿಗಿದ್ದ ಅಗಾಧ ಪ್ರೌಢಿಮೆಯನ್ನು ಗುರುತಿಸಿ ಯುನೆಸ್ಕೋ ಶಾಖೆ ಕೈರೋ ನಗರದಲ್ಲಿನ ಸಮಾವೇಶದಲ್ಲಿ ಇವರನ್ನು ತನ್ನ ಪ್ರಧಾನಾಧಿಕಾರಿಗಳಲ್ಲಿ ಒಬ್ಬರನ್ನಾಗಿ ನೇಮಿಸಿಕೊಂಡಿತ್ತು. ಬಹುಮುಖ ಪಾಂಡಿತ್ಯ ಪ್ರತಿಭೆಗಳ ಸಂಗಮವಾಗಿದ್ದ ಈ ವಿಜ್ಞಾನಿ, ದೆಹಲಿಯ ಮನೋವೈಜ್ಞಾನಿಕ ಕೇಂದ್ರ ಸಭೆಯಲ್ಲಿ ಭಾಗವಹಿಸಲು ಹೋಗಿದ್ದಾಗ 1955 ರ ಸೆಪ್ಟೆಂಬರ್ 5 ರಂದು ಆಕಸ್ಮಿಕವಾಗಿ ಮರಣ ಹೊಂದಿದರು.

ಸಾಹಿತ್ಯ ಪ್ರೇಮಿಗಳಾಗಿದ್ದ ಶಾಸ್ತ್ರಿಗಳು ನಾಟಕ ಸಾಹಿತ್ಯದ ಬಗ್ಗೆ ವಿಶೇಷ ಒಲವನ್ನು ಬೆಳೆಸಿಕೊಂಡಿದ್ದರು. ಮಹಾರಾಜ ಕಾಲೇಜಿನಲ್ಲಿ ಕಾಲೇಜು ಸಂಘ ಮತ್ತು ಕರ್ಣಾಟಕ ಸಂಘಗಳ ವತಿಯಿಂದ ನಡೆಯುತ್ತಿದ್ದ ವಾರ್ಷಿಕ ನಾಟಕ ಪ್ರದರ್ಶನಗಳಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದರು. ಕುವೆಂಪು ಅವರ ಯಮನಸೋಲಿನಲ್ಲಿ ಯಮ, ಬಿರುಗಾಳಿಯಲ್ಲಿ ಭೈರವನಾಯಕ, ಶ್ರೀಯವರ ಗದಾಯುದ್ದ ನಾಟಕದಲ್ಲಿ ಭೀಮ, ಅಶ್ವತ್ಥಾಮನ್‍ದಲ್ಲಿ ಅಶ್ವತ್ಥಾಮನ್, ಎ ಎನ್ ಮೂರ್ತಿರಾಯರ ಆಷಾಢಭೂತಿ ನಾಟಕದಲ್ಲಿ ಶಂಕರಪ್ಪ, ವೆಂಬಾರ ವೆಂಕಟಾಚಾರ್ಯರ ಸಾವಿನ ಸಮಸ್ಯೆ ನಾಟಕದಲ್ಲಿ ತೆನಾಲಿ ರಾಮಕೃಷ್ಣ - ಹೀಗೆ ಹಲವು ಪಾತ್ರಗಳಲ್ಲಿ ಅಭಿನಯಿಸಿದ್ದುಂಟು. ಪಾತ್ರ ಹಾಸ್ಯಮಯವಾಗಿರಲಿ. ಗಂಭೀರಮಯವಾಗಿರಲಿ ಶಾಸ್ತ್ರಿಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಅದನ್ನು ಅಭಿನಯಿಸಿ ಅಪೂರ್ವವಾದ ರಸದೌತಣವನ್ನು ಪ್ರೇಕ್ಷಕ ವರ್ಗಕ್ಕೆ ನೀಡುತ್ತಿದ್ದರು. ಮೈಸೂರಿನ ಸಾಹಿತ್ಯ ಕಲಾ ಸಂಸ್ಥೆಯವರು ಆಡುತ್ತಿದ್ದ ಕನ್ನಡ ಹಾಗೂ ಇಂಗ್ಲೀಷ್ ನಾಟಕಗಳಲ್ಲಿಯೂ ಇವರು ಅಭಿನಯಿಸಿದ್ದುಂಟು. ಮೃಚ್ಛಕಟಿಕದ ರೂಪಾಂತರವಾದ ವಸಂತಸೇನದ ಮೂಕಿ ಚಲನಚಿತ್ರದಲ್ಲಿ ಪಾಲಕ ಮಹಾರಾಜನ ಪಾತ್ರ ಇವರದು. ಹವ್ಯಾಸಿ ಕಲಾ ರಂಗಭೂಮಿಯ ವಿನೂತನ ವಾಸ್ತವ ಶೈಲಿಯ ಬೆಳವಣಿಗೆಗೆ ಇವರದು ಬೆಲೆಯುಳ್ಳ ಕೊಡುಗೆ.

ರಂಗಭೂಮಿಯ ಸ್ವಾನುಭಾವವುಳ್ಳ ಶಾಸ್ತ್ರಿಗಳು ಭಾಸನ ಪಂಚರಾತ್ರ ರೂಪಕವನ್ನು ಪ್ರಯೋಗ ದೃಷ್ಟಿಯಿಂದ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ತನ್ಮೂಲಕ ಲಕ್ಷಣಬದ್ದ ಪುರಾತನ ಕೃತಿಯೊಂದನ್ನು ಆಧುನಿಕ ರಂಗಪ್ರಯೋಗದ ಅಗತ್ಯಗಳಿಗೆ ಅನುಗುಣವಾಗಿ ಅಳವಡಿಸುವ ಒಳ್ಳೆಯ ಮಾದರಿಯನ್ನು ಒದಗಿಸಿದ್ದಾರೆ.

ಶಾಸ್ತ್ರಿಗಳಿಗೆ ಕನ್ನಡ ಭಾಷೆಯ ಮೇಲೆ ತುಂಬಾ ಪ್ರೇಮ. ಕನ್ನಡದಲ್ಲಿ ವೈಜ್ಞಾನಿಕ ವಿಚಾರಗಳನ್ನು ಕುರಿತು ಬರೆಯುವುದು, ಭಾಷಣ ಮಾಡುವುದು ಅಸಾಧ್ಯ ಎಂಬ ಆ ಕಾಲದಲ್ಲಿ ಎರಡನ್ನೂ ಯಶಸ್ವಿಯಾಗಿ ಇವರು ಆಚರಿಸಿ ತೋರಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರ ಪುಸ್ತಕಮಾಲೆಯಲ್ಲಿನ ಕನಸುಗಳು (1939) ಎಂಬ ಪುಸ್ತಿಕೆ ಇದಕ್ಕೊಂದು ನಿದರ್ಶನ. ಈ ಚಿಕ್ಕ ಪುಸ್ತಕದಲ್ಲಿಯೂ ಮನಶಾಸ್ತ್ರದ ತಳಪಾಯದ ಮೇಲೆ ಮನಸ್ಸಿನ ವಿಭಾಗ, ಕನಸು ಎಂದರೇನು, ಕನಸಿನ ರಚನೆ, ಕನಸಿನ ಪ್ರಭೇದಗಳು, ಸ್ವಪ್ನಾರ್ಥ ಅಥವಾ ಸ್ವಪ್ನಾ ಫಲ-ಎಂದು ಸಿಗ್ಮಂಡ್ ಪ್ರಾಯ್ಡ್‍ನ್ ತತ್ತ್ವಗಳನ್ನು ಬಹು ಸರಳವಾಗಿ ವಿವರಿಸಿದ್ದಾರೆ. ಈ ದಿಶೆಯಲ್ಲಿ ಪ್ರಾಯೋಗಿಕ ಮನಶ್ಯಾಸ್ತ್ರ ಪರಿಚಯ ಎಂಬ ಇವರ ಪುಸ್ತಕ ಇನ್ನಷ್ಟು ವ್ಯಾಪ್ತಿಯನ್ನುಳ್ಳ ಗ್ರಂಥ. ವಿಕ್ಟರ್ ಹ್ಯೂಗೋನ ಲೆ ಮಿಸರಬ್ಲೆ ಎಂಬ ಪ್ರಸಿದ್ದ ಫ್ರೆಂಚ್ ಕಾದಂಬರಿಯನ್ನು ಮಹಾಪುರುಷ ಎಂಬ ಹೆಸರಿನಲ್ಲಿ ಕನ್ನಡಿಸಿದ್ದಾರೆ. ಇಂಗ್ಲೀಷ್‍ನಲ್ಲಿಯೂ ಇವರು ಅನೇಕ ಗ್ರಂಥಗಳನ್ನೂ ಲೇಖನಗಳನ್ನೂ ಬರೆದಿದ್ದಾರೆ. (ಎಸ್.ಎಸ್.ಜೆಎ.)