ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರಾಯಣಶೆಟ್ಟಿ, ಎಸ್

ವಿಕಿಸೋರ್ಸ್ದಿಂದ

ಎಸ್.ನಾರಾಯಣಶೆಟ್ಟಿ  : - 1930. ಕನ್ನಡದಲ್ಲಿ ಸುಜನಾ ಎಂಬ ಕಾವ್ಯನಾಮದಿಂದ ಹೆಸರಾದ ಕವಿ, ವಿಮರ್ಶಕ. ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಹೊಸಹೊಳಲಿನಲ್ಲಿ 1930 ಏಪ್ರಿಲ್ 13ರಂದು ಜನಿಸಿದರು. ತಂದೆ ಸುಬಪಿಶೆಟ್ಟಿ, ಹೊಸಹೊಳಲು, ಹೊಳೆನರಸೀಪುರಗಳಲ್ಲಿ ಶಾಲಾ ವ್ಯಾಸಂಗ ಮಾಡಿದರು. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಇಂಟರ್‍ಮಿಡಿಯಟ್ ಓದಿದರು. ಅನಂತರ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿ ಕನ್ನಡದಲ್ಲಿ ಎಂ.ಎ. ಪಡೆಯಬೇಕೆಂದು ಬಯಸಿದರಾದರೂ ಇವರು ವಿಜ್ಞಾನದ ವಿದ್ಯಾರ್ಥಿಯಾದ್ದರಿಂದ ಪ್ರವೇಶ ಸಿಗುವುದಕ್ಕೆ ನಿಯಮ ಅಡ್ಡಿಬಂತು. ಪ್ರವೇಶ ದೊರಕದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವದೆಂದು ಮನಸ್ಸು ಮಾಡಿದ್ದರು. ಕೊನೆಗೂ ಇವರು ಕನ್ನಡ ಬಿ.ಎ. (ಆನರ್ಸ್)ಗೆ ಪ್ರವೇಶ ಪಡೆದರು. ಅನಂತರ ಕನ್ನಡ ಎಂ.ಎ. ಪದವಿ ಪಡೆದು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಮುಂದೆ ಪ್ರವಾಚಕರೂ ಪ್ರಾಧ್ಯಾಪಕರೂ ಸ್ವಲ್ಪಕಾಲ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸಿದರು (1985-87) ಮತ್ತು ಯವರಾಜ ಕಾಲೇಜಿನ ಪ್ರಾಚಾರ್ಯರಾಗಿ (1988) ನಿವೃತ್ತಿಹೊಂದಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು (1959-65).

ಸುಜನಾ ಅವರ ಮೊದಲನೆಯ ಕವನ ಸಂಕಲನ ಮಂಗಳಾರತಿ (1956) ನಾಣ್ಯಯಾತ್ರೆ 1965ರಲ್ಲಿ ಪ್ರಕಟವಾಯಿತು. 1982ರವರೆಗಿನ ಇವರ ಕವನಗಳು ಒಂದೇ ಸೂರಡಿಯಲ್ಲಿ ಎಂಬ ಶೀರ್ಷಿಕೆಯಡಿ ಪ್ರಕಟವಾಗಿವೆ. ಸೊನ್ನೆ ಎರಡರ ನಡುವೆ (1982), ಉಡಿದಾರ (1982) ಇವು ಇವರ ಇತರ ಕವನ ಸಂಕಲನಗಳು. ಹೃದಯ ಸಂವಾದ (1965), ಪರಂಪರೆ (1982), ಕುವೆಂಪು ಮತ್ತು ಪರಂಪರೆ (1984) ಇವು ವಿಮರ್ಶಾ ಸಂಕಲನಗಳು. ಕಣಗಳು (1983) ಎಂಬುದು ಕಿರುಕವಿತೆಗಳ ಸಂಕಲನ.

ಸುಜನಾ ಅವರ ಮಹಾಕಾವ್ಯ ಯುಗಸಂಧ್ಯಾ (1999). ಹತ್ತು ವರ್ಷಗಳ ಕಾಲಾವಧಿಯಲ್ಲಿ ಇವರು ಇದನ್ನು ರಚಿಸಿದರು. ತಮ್ಮ ಕಾವ್ಯರಚನೆಯ ಪ್ರಾರಂಭದ ದಿನಗಳಿಂದಲೂ ಗುಪ್ತವಾಗಿ, ಬಿಡದೆ ನಡೆದುಬಂದಿರಬಹುದಾದ ಸರಳ ರಗಳೆಯ ಛಂದಸ್ಸನ್ನು ಕೊಂಚ ಸ್ವಾತಂತ್ರ್ಯ ವಹಿಸಿ ಬಳಸಿಕೊಂಡಿರುವುದಾಗಿ ಇವರು ಹೇಳಿಕೊಂಡಿದ್ದಾರೆ. ಇದು ಮಹಾಭಾರತದ ಪಾಂಡವ ವಿಜಯದ ಅನಂತರದ ಕಥೆ. “ವ್ಯಾಸರು ಮಹಾಭಾರತದಲ್ಲಿ ಆ ಭಾಗವನ್ನು ವಿಶೇಷವಾಗಿ ಬೆಳೆಸಿದ್ದಾರೆ. ಆದರೆ ಕನ್ನಡದಲ್ಲಿ ಭಾರತವನ್ನು ಬರೆದ ಪಂಪನಾಗಲಿ, ಕುಮಾರವ್ಯಾಸನಾಗಲಿ ಆ ಜಾಡಿನಲ್ಲಿ ಮುನ್ನಡೆಯಲಿಲ್ಲ. ಪಾಂಡವರು ಗೆದ್ದ ಮೇಲೆ, ಧರ್ಮಾಧರ್ಮ, ಯುದ್ಧದಲ್ಲಿ ಧರ್ಮಕ್ಕೆ ಜಯ ದೊರಕಿದ ಮೇಲೆ ಮಂದೆ ಏನು ಸ್ವಾರಸ್ಯವಿದ್ದೀತು ಎಂದೋ ಏನೋ” ಎಂಬುದು ಸುಜನಾ ಅವರ ಅನಿಸಿಕೆ. ಇವರು ವ್ಯಾಸಹೃದಯವನ್ನು ಅರಿತು ಮುನ್ನಡೆದರು. ಮಹಾಭಾರತ ಯುದ್ಧವಾದ ಮೇಲೆ ಕೊನೆಯಲ್ಲಿ ಕೃಷ್ಣ ಬೇಡನೊಬ್ಬನ ಬಾಣಕ್ಕೆ ದೇಹತ್ಯಾಗ ಮಾಡಿದ. ಇದರ ಅರ್ಥವೇನು¯ ಎಲ್ಲವೂ ಸಪ್ಪೆಯಾಗಿ ಪರಿಣಮಿಸಬೇಕೆ? ಮಹಾಭಾರತ ಯುದ್ಧಾನಂತರವೂ ಉಳಿದಿದ್ದ ಲೋಕಕಂಟಕರೆಲ್ಲರ ನಿರ್ನಾಮ ದೈವಸಂಕಲ್ಪವಾಗಿತ್ತು. ಬೇಡನ ಬಾಣಕ್ಕೆ ಕೃಷ್ಣ ದೇಹತ್ಯಾಗ ಮಾಡಿದ್ದು ಅರ್ಥವತ್ತಾದದ್ದು. ಮುಳ್ಳನ್ನು ಮುಳ್ಳಿನಿಂದ ತೆಗೆದು ಎರಡನ್ನೂ ಎಸೆದುಬಿಡುವಂತೆ, ಲೋಕಕಾರ್ಯವನ್ನು ನಿರ್ಮೂಲ ಮಾಡಿದ ಶ್ರೀಕೃಷ್ಣ ತನ್ನ ದೇಹವನ್ನು ಕಳಚಿ ಒಗೆದ ದರ್ಶನ ಸುಜನಾ ಅವರಿಗೆ ಆಯಿತು. ಇವರ ದೃಷ್ಟಿಯಲ್ಲಿ ಇದೊಂದು ಅದ್ಧುತ. ಮುಂದಿನ ಕಥೆಯನ್ನು ಇವರು ಇಲ್ಲಿ ವರ್ಣಿಸಿದ್ದಾರೆ.

ಕುಮಾರವ್ಯಾಸ ಭಾರತವನ್ನು ಜನಪ್ರಿಯ ಆವೃತ್ತಿಗಾಗಿ ಸಿದ್ಧಪಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಇವರು ಆಗಿನಿಂದಲೇ ಈ ಕಥಾಭಾಗದ ಅಭಿವ್ಯಕ್ತಿಗೆ ಮಾನಸಿಕವಾಗಿ ತೊಡಗಿದ್ದರು. ಯುಗಸಂಧ್ಯಾ ಮಹಾಕಾವ್ಯವನ್ನು ರಚಿಸತೊಡಗಿದಾಗ ಇವರ ದೇಹಸ್ಥಿತಿ ಕೆಟ್ಟಿತು. ಲೇಖನಿ ಹಿಡಿದು ಬರೆಯಲಾಗದವರಾದರು. ಮಕ್ಕಳ ಸಹಕಾರದಿಂದ ಇದು ಪೂರೈಸಿತು. ಭಾರತೋತ್ತರ ಕಥಾ ವಿಷಯ ಪ್ರಸಂಗದೊಳಗೇನುಂಟು ? ರಸಪೂರ್ಣ ಕಥೆಯೆ ? ಕ್ರಿಯೆಯೆ ? ದರ್ಶನವೆ ? ಮನುಜಮನದರ್ಥಗಳೆ ಎಂಬ ಪ್ರಶ್ನೆಗೆ ನಾನೂರಿಪ್ಪತ್ತೈದು ಪುಟಗಳ ಈ ಮಹಾಕಾವ್ಯ ಉತ್ತರವಾಗಿದೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ (2002).

ಇವರಿಗೆ ದೊರಕಿರುವ ಇತರ ಪ್ರಶಸ್ತಿಗಳು ಇವು ವರ್ಧಮಾನ ಪ್ರಶಸ್ತಿ (1982), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1989), ರಾಜ್ಯೋತ್ಸವ ಪ್ರಶಸ್ತಿ (1994), ದೇವರಾಜ ಬಹದ್ದೂರ್ ಪ್ರಶಸ್ತಿ (1997). (ಎಚ್.ಎಸ್.ಕೆ.)