ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾವೂರು

ವಿಕಿಸೋರ್ಸ್ದಿಂದ

ನಾವೂರು ನೈಋತ್ಯ ಪೆಸಿಫಿಕ್ ಸಾಗರದಲ್ಲಿರುವ ಪುಟ್ಟ ದ್ವೀಪಗಣರಾಜ್ಯ. ಅಂಡಾಕಾರದಲ್ಲಿರುವ ಹವಳದ್ವೀಪ ಇದು. ಸಮಭಾಜಕ ವೃತ್ತದ ದಕ್ಷಿಣಕ್ಕೆ 53 ಕಿಮೀ. ದೂರದಲ್ಲಿ, ಸಾಲೊಮನ್ ಹಾಗೂ ಗಿಲ್ಬರ್ಟ್ ದ್ವೀಪಸಮುದಾಯಗಳ ನಡುವೆ ಇದೆ. ವ್ಯಾಟಿಕನ್ ನಗರ ಹಾಗೂ ಮನಾಕೊಗಳನ್ನು ಬಿಟ್ಟರೆ ಇದೇ ಜಗತ್ತಿನ ಅತ್ಯಂತ ಚಿಕ್ಕ ದೇಶ. ಇದರ ವಿಸ್ತೀರ್ಣ 21.2 ಚ.ಕಿಮೀ. ಜನಸಂಖ್ಯೆ 8,000 (1975). ಸುಮಾರು 19 ಕಿಮೀ. ಸುತ್ತಳತೆಯ ಈ ದ್ವೀಪದ ಸುತ್ತಲೂ ಹವಳದ ದಿಬ್ಬಗಳಿರುವುದರಿಂದ ಇದಕ್ಕೆ ನೈಸರ್ಗಿಕ ಬಂದರು ಇಲ್ಲ. ಇದು ಬಹುತೇಕ ಪ್ರಸ್ಥಭೂಮಿ. ನೆಲದ ಗರಿಷ್ಠ ಎತ್ತರ ಸಮುದ್ರಮಟ್ಟದಿಂದ ಸುಮಾರು 65 ಮೀ. ಪ್ರಸ್ಥಭೂಮಿಯ ಕೇಂದ್ರದ ಬಳಿ ಉಪ್ಪುನೀರಿನ ಲಗೂನು ಇದ್ದು ಇದರ ಸುತ್ತಲೂ ಫಲವತ್ತಾದ ನೆಲವಿದೆ. ಕರಾವಳಿಯ ಅಂಚಿನಲ್ಲಿ 37 ಮೀ.-294 ಮೀ. ಅಗಲದ ನೆಲ ಫಲವತ್ತಾದ್ದು. ಇಲ್ಲಿಯದು ಉಷ್ಣವಲಯದ ವಾಯುಗುಣ. ವಾರ್ಷಿಕ ಮಳೆ 2,000 ಮಿಮೀ. ಆದರೆ ಆಗಾಗ ಅನಾವೃಷ್ಟಿ ಸಂಭವಿಸುವುದುಂಟು. ತೆಂಗು, ಪ್ಯಾಂಡೇನಸ್, ಗಟ್ಟಿಮರಗಳು ಬೆಳೆಯುತ್ತವೆ. ಕೋಳಿ, ಹಂದಿ, ಬೆಕ್ಕು, ನಾಯಿಗಳನ್ನು ಇಲ್ಲಿಗೆ ತರಲಾಗಿದೆ. ಹಕ್ಕಿಗಳು ವಿರಳ.

ನಾವೂರಿನ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ನಾವೂರಿಗಳು. ಇವರದು ಪಾಲಿನೇಷಿಯನ್, ಮೈಕ್ರೊನೇಷಿಯನ್ ಹಾಗೂ ಮಲನೇಷಿಯನ್ ವಂಶೀಯ ಮಿಶ್ರತಳಿ. ಇವರು ಕ್ರೈಸ್ತರು. ಇವರು ಸಾಮಾನ್ಯವಾಗಿ ನಾವೂರಿ ಭಾಷೆಯನ್ನೂ ಇಂಗ್ಲಿಷನ್ನೂ ಆಡುತ್ತಾರೆ. ಬಹುತೇಕ ನಾವೂರಿಗಳು ಫಾಸ್ಫೇಟ್ ಗಣಿಗಳಲ್ಲಿ ದುಡಿಯುವವರು. ಗಿಲ್ಬರ್ಟ್, ಎಲಿಸ್ ಮತ್ತು ಇತರ ಹತ್ತಿರದ ದ್ವೀಪಗಳಿಂದಲೂ ಹಾಂಗ್‍ಕಾಂಗ್ ಆಸ್ಟ್ರೇಲಿಯಗಳಿಂದಲೂ ಇಲ್ಲಿಗೆ ಬಂದು ಸ್ವಲ್ಪ ಕಾಲ ಗಣಿಗಳಲ್ಲಿ ದುಡಿದು ಮರಳುವ ಜನವೂ ಉಂಟು. ಇಲ್ಲಿ ಐರೋಪ್ಯರೂ (550) ಚೀನೀಯರೂ (900) ಇದ್ದಾರೆ. ಕರಾವಳಿಯಲ್ಲಿ ಜನಸಾಂದ್ರತೆ ಹೆಚ್ಚು.

ನಾವೂರೂ ಒಂದು ಗಣರಾಜ್ಯ. ಸಂಸತ್ತು, ಮಂತ್ರಿಸಂಪುಟ ಹಾಗೂ ಪರಮೋಚ್ಚ ನ್ಯಾಯಾಲಯ ಇದೆ. ಈ ನ್ಯಾಯಾಲಯದ ಕೆಳಗೆ ದಂಡಾಧೀಶ ನ್ಯಾಯಾಲಯಗಳಿವೆ. ಸಂಸತ್ತಿನಲ್ಲಿ 18 ಸದಸ್ಯರಿರುತ್ತಾರೆ. ಇವರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. 20 ವರ್ಷ ವಯಸ್ಸಾದವರೆಲ್ಲರಿಗೂ ಮತ ನೀಡುವ ಹಕ್ಕುಂಟು. ಸಂಸತ್ತಿನ ಸದಸ್ಯರು ತಮ್ಮ ಪೈಕಿಯಿಂದ 5 ಮಂದಿಯನ್ನು ಮಂತ್ರಿ ಸಂಪುಟಕ್ಕೆ ಆಯ್ಕೆ ಮಾಡುತ್ತಾರೆ. ಇವರಲ್ಲಿ ಒಬ್ಬ ಅಧ್ಯಕ್ಷನಾಗಿ ಚುನಾಯಿತನಾಗುತ್ತಾನೆ. 14 ಜಿಲ್ಲೆಗಳಿರುವ ಈ ದ್ವೀಪದಲ್ಲಿ 8 ಚುನಾವಣಾಕ್ಷೇತ್ರಗಳಿವೆ. ಇಲ್ಲಿ ರಾಜಕೀಯ ಪಕ್ಷಗಳೇ ಇಲ್ಲ. ಸೈನ್ಯವೂ ಇಲ್ಲ. ಪೋಲಿಸ್ ಪಡೆ ಇದೆ.

ಫಾಸ್ಫೇಟು ನಾವೂರಿನ ಏಕೈಕ ಸಂಪನ್ಮೂಲ ಹಾಗೂ ರಫ್ತು ಸರಕು. ಇಲ್ಲಿ ಸುಮಾರು 6 ಕೋಟಿ ಟನ್‍ಗಳಷ್ಟು ಫಾಸ್ಫೇಟ್ ನಿಕ್ಷೇಪವಿದೆಯೆಂದು ಅಂದಾಜು ಮಾಡಲಾಗಿದೆ. ವರ್ಷಕ್ಕೆ 10 ಕೋಟಿ ಟನ್ ಅದುರನ್ನು ಹೊರತೆಗೆಯಲಾಗುತ್ತಿದೆ. ಫಾಸ್ಫೇಟಿನ ರಫ್ತಿನಿಂದ ಸರ್ಕಾರಕ್ಕೆ ಬರುವ ಆದಾಯದ (1.1 ಕೋಟಿ ಡಾಲರ್) ಸ್ವಲ್ಪ ಭಾಗವನ್ನು ವಸತಿ, ಶಾಲೆ ಹಾಗೂ ಆಸ್ಪತ್ರೆಗಳನ್ನು ಕಟ್ಟಲು ಬಳಸಲಾಗಿದೆ. ಮುಂದೆ ಎಲ್ಲ ಫಾಸ್ಫೇಟ್ ಮೂಲಗಳೂ ಮುಗಿದ ಮೇಲೆ ನಾವೂರಿನ ಜನತೆಯ ನೆರವಿಗಿರಲಿ ಎಂದು ಮಿಕ್ಕ ಹಣವನ್ನು ಸರ್ಕಾರ ಉಳಿತಾಯ ಮಾಡುತ್ತಿದೆ. ನಾವೂರಿನ ತಲಾ ವಾರ್ಷಿಕ ವರಮಾನ ಜಗತ್ತಿನಲ್ಲಿ ಬೇರೆ ಯಾವ ರಾಷ್ಟ್ರವೂ ಹೊಂದಿರದಷ್ಟು ಅಧಿಕವಾಗಿದೆ.

ನಾವೂರಿಗೆ ಕಡಿಮೆ ವೆಚ್ಚದಲ್ಲಿ ಆಧುನಿಕ ಮನೆಗಳನ್ನು ಸರ್ಕಾರ ಒದಗಿಸುತ್ತದೆ. ಎರಡು ಸರ್ಕಾರಿ ಆಸ್ಪತ್ರೆಗಳು ಹಾಗೂ 11 ವೈದ್ಯಾಲಯಗಳು ಉಚಿತ ವೈದ್ಯಕೀಯ ನೆರವು ನೀಡುತ್ತದೆ. 6ರಿಂದ 17 ವರ್ಷಗಳವರೆಗಿನ ಮಕ್ಕಳು ಶಾಲೆಗೆ ಹೋಗುವುದು ಕಡ್ಡಾಯ. ಒಂಬತ್ತು ಪ್ರಾಥಮಿಕ ಶಾಲೆಗಳೂ ಎರಡು ಪ್ರೌಢಶಾಲೆಗಳೂ ಇವೆ. ವಿದೇಶಗಳಿಗೆ ಕಾಲೇಜು ವ್ಯಾಸಂಗಕ್ಕೆ ಹೋಗಬಯಸುವ ವಿದ್ಯಾರ್ಥಿಗಳ ವೆಚ್ಚವನ್ನು ಸರ್ಕಾರವೇ ವಹಿಸುತ್ತದೆ. ದೂರವಾಣಿ, ವಾರ್ತಾಪತ್ರಿಕೆ, ಕನ್ನಡಕ ಇವು ಜನಕ್ಕೆ ಉಚಿತ. ಆದಾಯ ತೆರಿಗೆಯೇ ಇಲ್ಲದ ರಾಷ್ಟ್ರ ಇದು. ಅಗತ್ಯ ವಸ್ತುಗಳನ್ನೆಲ್ಲ ಆ ದೇಶ ಆಮದು ಮಾಡಿಕೊಳ್ಳದೆ ನಿರ್ವಾಹವಿಲ್ಲ. ಆಹಾರ, ಯಂತ್ರಸಾಮಗ್ರಿ, ಕಾರು ಇತ್ಯಾದಿ ವಾಹನಗಳು, ವಿಲಾಸಿ ವಸ್ತುಗಳು, ಪೀಠೋಪಕರಣಗಳು, ಪಾದರಕ್ಷೆಗಳು ಹಾಗೂ ಔಷಧ ಸಾಮಗ್ರಿಗಳು ಆಮದಾಗುತ್ತವೆ. ಎಷ್ಟೋ ಬಾರಿ ನೀರನ್ನೂ ಆಮದು ಮಾಡಿಕೊಳ್ಳುತ್ತಾರೆ.

ಈಗ ಸರ್ಕಾರ ನೌಕಾ ಉದ್ಯಮವನ್ನು ರೂಢಿಸಲು ಯತ್ನಿಸುತ್ತಿದೆ. ಮೀನುಗಾರಿಕೆ, ದೋಣಿಕಟ್ಟುವಿಕೆ ಮೊದಲಾದ ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡುತ್ತಿದೆ.

ಇಲ್ಲಿರುವ ಏಕೈಕ ಹೆದ್ದಾರಿ ವರ್ತುಲವಾಗಿ 19 ಕಿಮೀ. ಉದ್ದವಾಗಿ ಇದೆ. ಫಾಸ್ಫೇಟ್ ಸಾಗಿಸಲು ಸ್ವಲ್ಪ ದೂರ ರೈಲುಮಾರ್ಗಗಳಿವೆ. ಆಸ್ಟ್ರೇಲಿಯ ಮತ್ತು ಫೀಜಿಗೆ ವಿಮಾನ ಸೌಲಭ್ಯ ಇದೆ.

ಇತಿಹಾಸ : ಹನ್ನೆರಡು ವಿವಿಧ ಬುಡಕಟ್ಟುಗಳಿಗೆ ಸೇರಿದ ಮೂಲನಿವಾಸಿಗಳು ಇಲ್ಲಿ ವಾಸಿಸುತ್ತಿದ್ದರು. ಬ್ರಿಟನ್ನಿನ ನಾವಿಕ ಜಾನ್ ಹಂಟರ್ ನಾವೂರು ನೆಲದ ಮೇಲೆ ಮೊಟ್ಟಮೊದಲು ಕಾಲಿಟ್ಟ (1798) ಐರೋಪ್ಯ. 1798ರಲ್ಲಿ ಇಲ್ಲಿಗೆ ಬಂದ ಈತ ಈ ದ್ವೀಪವನ್ನು ಪ್ಲೆಸೆಂಟ್ ಐಲೆಂಡ್ ಎಂದು ಕರೆದ. ಇಲ್ಲಿಯ ನಿವಾಸಿಗಳು ಸಂತೋಷದಿಂದ ಸ್ವಾಗತಿಸಿದ್ದರಿಂದ ಅವನು ಈ ಹೆಸರು ನೀಡಿದ. 19ನೆಯ ಶತಮಾದಲ್ಲಿ ಯೂರೋಪಿನ ಹಲವು ಕಡೆಗಳಿಂದ ಇಲ್ಲಿಗೆ ಜನರು ವಲಸೆ ಬಂದರು. 1886ರ ಆಂಗ್ಲೊ-ಜರ್ಮನ್ ಒಪ್ಪಂದದ ಪ್ರಕಾರ ಈ ದ್ವೀಪವನ್ನು ಜರ್ಮನ್ ಪ್ರಭಾವವಲಯಕ್ಕೆ ಸೇರಿದ್ದೆಂದು ತೀರ್ಮಾನಿಸಿ ನಾವೂರೂ ಎಂಬ ಮೂಲ ಹೆಸರನ್ನೇ ಕೊಡಲಾಯಿತು. 1888ರ ಅಕ್ಟೋಬರ್ 1ರಂದು ಇದು ಜರ್ಮನ್ ಆಡಳಿತಕ್ಕೊಳಪಟ್ಟಿತು. 1899ರಲ್ಲಿ ಇಲ್ಲಿಗೆ ಪಾದ್ರಿಗಳು ಆಗಮಿಸಿ ಶಿಕ್ಷಣ ಪ್ರಸಾರ ಮತ್ತು ಕ್ರೈಸ್ತಮತ ಪ್ರಚಾರದಲ್ಲಿ ತೊಡಗಿದರು. 1914ರಲ್ಲಿ ಆಸ್ಟ್ರೇಲಿಯ ಈ ದ್ವೀಪದ ಹತೋಟಿ ಪಡೆಯಿತು. ಒಂದನೆಯ ಮಹಾಯುದ್ಧವಾದ ಮೇಲೆ 1919ರಲ್ಲಿ ರಾಷ್ಟ್ರಗಳ ಕೂಟದ ಆದೇಶದ ಮೇರೆಗೆ ಬ್ರಿಟನ್ ಹಾಗೂ ನ್ಯೂಜಿಲೆಂಡ್‍ಗಳ ಸಹಪ್ರಭುತ್ವದೊಂದಿಗೆ ಆಸ್ಟ್ರೇಲಿಯ ಇದರ ಆಡಳಿತ ನಡೆಸತೊಡಗಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ 1942ರಲ್ಲಿ ನಾವೂರುವನ್ನು ಜಪಾನ್ ವಶಪಡಿಸಿಕೊಂಡಿತು. 1942-44ರಲ್ಲಿ ಅಮೆರಿಕನ್ನರು ಈ ದ್ವೀಪದ ಮೇಲೆ ಅನೇಕ ಸಲ ಬಾಂಬು ದಾಳಿ ನಡೆಸಿದರು. 1945ರಲ್ಲಿ ಆಸ್ಟ್ರೇಲಿಯನ್ ಸೈನ್ಯಗಳು ಇದನ್ನು ಪುನಃ ವಶಪಡಿಸಿಕೊಂಡವು. 1947ರಲ್ಲಿ ಈ ದ್ವೀಪ ವಿಶ್ವಸಂಸ್ಥೆಯ ನ್ಯಾಸಕ್ಕೆ ಒಳಪಟ್ಟು ಇಲ್ಲಿ ಬ್ರಿಟನ್ ನ್ಯೂಜಿಲೆಂಡ್ ಸಹಪ್ರಭುತ್ವದೊಂದಿಗೆ ಆಸ್ಟ್ರೇಲಿಯಾದ ಆಡಳಿತ ಮುಂದುವರಿಯಿತು. 1964ರಿಂದ ನಾವೂರು ಜನತೆಯ ಸ್ವಾತಂತ್ರ್ಯ ಆಂದೋಳನ ತೀವ್ರವಾಯಿತು. 1968ರ ಜನವರಿ 31ರಂದು ನಾವೂರು ಸ್ವತಂತ್ರ ರಾಷ್ಟ್ರವೆಂದು ವಿಶ್ವಸಂಸ್ಥೆ ಘೋಷಿಸಿತು. 80 ವರ್ಷಗಳ ವಿದೇಶಿ ಆಳ್ವಿಕೆ ಕೊನೆಗೊಂಡು, ಹ್ಯಾಮರ್ ಡರೋಬರ್ಟರ ಅಧ್ಯಕ್ಷತೆಯಲ್ಲಿ ದೇಶೀಯ ಸರ್ಕಾರ ಸ್ಥಾಪಿತವಾಯಿತು. 1970ರಲ್ಲಿ ನಾವೂರು ಸರ್ಕಾರ ಫಾಸ್ಫೇಟ್ ಉದ್ಯಮವನ್ನು ರಾಷ್ಟ್ರೀಕರಿಸಿತು. ಇಲ್ಲಿಯ 12 ಮೂಲ ಬುಡಕಟ್ಟುಗಳ ಸಂಕೇತವಾಗಿ 12 ನಕ್ಷತ್ರಗಳು ರಾಷ್ಟ್ರದ್ವಜದಲ್ಲಿವೆ.

ಅವಿರತ ಫಾಸ್ಫೇಟ್ ಗಣಿಗಾರಿಕೆಯಿಂದ ನಾಡಿನ ಮೈಯೆಲ್ಲ ಹಳ್ಳಕೊಳ್ಳ ಕೊರಕಲುಗಳಿಂದ ಕುರೂಪಗೊಂಡಿವೆ. ಆಸ್ಟ್ರೇಲಿಯದಿಂದ ಮಣ್ಣು ಅಮದು ಮಾಡಿಕೊಂಡು ಸಮತಟ್ಟುಗೊಳಿಸುವ ಯೋಜನೆಯನ್ನು ಅಪಾರ ವೆಚ್ಚದ ಕಾರಣದಿಂದ ಕೈಬಿಡಲಾಗಿದೆ. (ಎಸ್.ಎಸ್.ಎಂಯು.)