ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಸಸ್

ವಿಕಿಸೋರ್ಸ್ದಿಂದ

ನಾಸಸ್ ಪ್ರಾಚೀನ ಕ್ರೀಟಿನ ಒಂದು ನಗರ. ಆ ದ್ವೀಪದ ಉತ್ತರ ಕರಾವಳಿಯ ಬಳಿ ಇದೆ. ಇದು ದೊರೆ ಮೀನಾಸನ ರಾಜಧಾನಿಯಾಗಿತ್ತೆಂದು ಹೇಳಲಾಗಿದೆ. ಅರಮನೆಯ ಅವಶೇಷಗಳು ಕ್ಯಾಂಡಿಯದ ಆಗ್ನೇಯಕ್ಕೆ ಕೆಲವು ಕಿಮೀ. ದೂರದಲ್ಲಿವೆ. ಯೂರೋಪಿನ ಅತ್ಯಂತ ಪ್ರಾಚೀನ ನಾಗರಿಕತೆ ಇಲ್ಲಿ ಇದ್ದುದು ಇಲ್ಲಿಯ ಅವಶೇಷಗಳಿಂದ 1900ರಲ್ಲಿ ತಿಳಿಯಿತು. ಇದನ್ನು ಬೆಳಕಿಗೆ ತಂದ ಸರ್ ಆರ್ಥರ್ ಎವಾನ್ಸ್ ಇದನ್ನು ಮಿನೋವನ್ ನಾಗರಿಕತೆಯೆಂದು ಕರೆದಿದ್ದಾರೆ. ಪ್ರಸಿದ್ಧನಾದ ಮೀನಾಸ್ ದೊರೆಯ ಹೆಸರಿನಿಂದಲೇ ಇದನ್ನು ಹೀಗೆಂದು ಕರೆಯಲಾಗಿದೆ.

ಈ ನಾಗರಿಕತೆಯ ಮೊದಲಿನ ಹಂತ ನೂತನ ಶಿಲಾಯುಗ ಸಂಸ್ಕøತಿಯ ಲಕ್ಷಣಗಳುಳ್ಳದ್ದಾಗಿದ್ದು ಕ್ರಿ.ಪೂ. ಸುಮಾರು 2500ರಲ್ಲಿ ಪ್ರಾರಂಭವಾಯಿತೆನ್ನಬಹುದು. ಕ್ರಿ.ಪೂ. 2000ದ ಹೊತ್ತಿಗಾಗಲೆ ಈ ಸಂಸ್ಕøತಿಯ ಜನರು ಕಟ್ಟಡಗಳ ನಿರ್ಮಾಣ, ಚಿತ್ರಗಳನ್ನು ಕೊರೆಯುವುದು, ವರ್ಣಚಿತ್ರ ರಚನೆ ಮುಂತಾದ ಕುಶಲಕಲೆಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದರು. ಎರಡನೆಯ ಹಂತದಲ್ಲಿ ನಿರ್ಮಿತವಾದ ಮೀನಾಸ್ ರಾಜನ ಭವ್ಯ ಅರಮನೆ ಭೂಕಂಪವೇ ಮುಂತಾದ ಪ್ರಾಕೃತಿಕ ಪ್ರಕೋಪಗಳಿಂದಾಗಿ ಪದೇ ಪದೇ ಬಿದ್ದು ಹೋದರೂ ಅದನ್ನು ಮತ್ತೆ ಮತ್ತೆ ಕಟ್ಟಲಾಯಿತು. ಈ ಜನರ ಚಟುವಟಿಕೆಗಳನ್ನೂ ಹವ್ಯಾಸಗಳನ್ನೂ ಇವರಲ್ಲಿ ಪ್ರಚಾರದಲ್ಲಿದ್ದ ಎರಡು ಬಗೆಯ ಲಿಪಿಗಳನ್ನೂ ಇವರ ಧರ್ಮದ ಹಲವು ಮುಖಗಳನ್ನೂ ಇವರ ವರ್ಣಚಿತ್ರಗಳಿಂದ ಅರಿಯಬಹುದು. ಇವರು ಪ್ರಕೃತಿಯ ವಿವಿಧ ಶಕ್ತಿಗಳ ಆರಾಧಕರಾಗಿದ್ದರೆಂದು ತೋರುತ್ತದೆ. ಪ್ರಕೃತಿ ಸೌಂದರ್ಯವನ್ನು ಚಿತ್ರಿಸುವುದರಲ್ಲಿ ಇವರು ನಿಷ್ಣಾತರಾಗಿದ್ದರು. ಕ್ರಿ.ಪೂ. ಸುಮಾರು 1500-1400ರ ಹೊತ್ತಿಗೆ ಈ ನಾಗರಿಕತೆ ಅತ್ಯಂತ ಉಚ್ಛ್ರಾಯ ಘಟ್ಟದಲ್ಲಿ ಇತ್ತು. ಅನಂತರ ಅತ್ಯಲ್ಪ ಕಾಲದಲ್ಲಿ ಬೆಂಕಿಯಿಂದ ಈ ನಗರ ಸುಟ್ಟುಹೋಯಿತು. ಮತ್ತೆ ಈ ನಾಗರಿಕತೆ ಏಳಿಗೆ ಹೊಂದದಿದ್ದರೂ ಕ್ರಿ.ಪೂ. 1200ರವರೆಗೆ ಇದು ತಕ್ಕಮಟ್ಟಿಗೆ ಪ್ರಭಾವಶಾಲಿಯಾಗಿಯೇ ಉಳಿದಿತ್ತು. (ಎ.ಎಸ್‍ಯು.)