ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಸಿರ್ ಜಂಗ್

ವಿಕಿಸೋರ್ಸ್ದಿಂದ

ನಾಸಿರ್ ಜಂಗ್ ದಖನ್ನಿನ ಸುಬೇದಾರನಾಗಿದ್ದವ (1748-1750). ನಿಜಾಮ್-ಉಲ್-ಮುಲ್ಕ್ ಆಸಫ್ ಝಾನ ಎರಡನೆಯ ಮಗ. ಆಸಫ್ ಝಾ 1748ರಲ್ಲಿ ನಿಧನ ಹೊಂದಿದಾಗ ಇವನು ಸಿಂಹಾಸನವನ್ನೇರಿದ. ಇದಕ್ಕೆ ಮೊದಲು ಈತ ಆಡಳಿತ ಮತ್ತು ಯುದ್ಧ ಕಾರ್ಯಾಚರಣೆಯಲ್ಲಿ ಅನುಭವ ಪಡೆದಿದ್ದ. ಮರಾಠರ ವಿರುದ್ಧ ಮೊಗಲ್ ಚಕ್ರವರ್ತಿಗೆ ನೆರವಾಗಲು 1737ರಲ್ಲಿ ಅಸಫ್ ಝಾ ದೆಹಲಿಗೆ ಧಾವಿಸಿದಾಗ ನಾಸಿರ್ ಜಂಗನಿಗೆ ಆಡಳಿತ ನಿರ್ವಹಣೆಯ ಭಾರ ವಹಿಸಿ ಹೋಗಿದ್ದ. ಅಸಫ್ ಝಾ ಆ ವೇಳೆಗಾಗಲೇ ತನ್ನ ಸ್ವಾತಂತ್ರ್ಯವನ್ನು ಸ್ಥಿರಪಡಿಸಿಕೊಳ್ಳುತ್ತಿದ್ದ. 1741ರಲ್ಲಿ ನಾಸಿರ್ ಜಂಗ್ ತನ್ನ ತಂದೆಯಿಂದ ಅದೋನಿಯ ಜಹಗೀರಿ ಪಡೆದಿದ್ದ. ಮರಾಠರ ವಿರುದ್ಧದ ಯುದ್ಧಗಳಲ್ಲಿ ಇವನು ಭಾಗವಹಿಸಿದ್ದ. 1747ರಲ್ಲಿ ಮೈಸೂರಿನವರೆಗೂ ಕಪ್ಪ ವಸೂಲಿಗಾಗಿ ದಂಡೆತ್ತಿ ಹೋಗಿದ್ದ. 1747ರಲ್ಲಿ ನಿಜಾóಮ್ ಆಸಫ್ ಝಾ ಇವನನ್ನು ತನ್ನ ಉತ್ತರಾಧಿಕಾರಿಯೆಂದು ಘೋಷಿಸಿದ. ದಖನ್ ಪ್ರಾಂತ್ಯ ಹೆಸರಿಗೆ ಮೊಗಲ್ ಚಕ್ರಾಧಿಪತ್ಯಕ್ಕೆ ಸೇರಿದ್ದು, ಈ ಪ್ರಾಂತ್ಯದ ಸುಬೇದಾರನನ್ನು ನೇಮಕ ಮಾಡುವ ಅಧಿಕಾರ ಮೊಗಲರದೇ ಆಗಿತ್ತು. ಮೊಗಲ್ ಚಕ್ರವರ್ತಿಗಳು ದುರ್ಬಲರಾಗಿದ್ದುದರಿಂದ ನಿಜಾಮ್ ಉಲ್-ಮುಲ್ಕ್ ಆಸಫ್ ಝಾ ಅವರಿಂದ ಸ್ವತಂತ್ರವಾಗಿ ವರ್ತಿಸುತ್ತಿದ್ದನಲ್ಲದೆ ದಖನ್ ಸುಬೇದಾರಿಕೆಯಲ್ಲಿ ತನ್ನ ವಂಶವನ್ನು ಮುಂದುವರಿಸುವ ಉದ್ದೇಶದಿಂದ ಹೀಗೆ ಮಾಡಿದ್ದ.

  ಆಸಫ್ ಝಾನ ಅನಂತರ ನಾಸಿರ್ ಜಂಗ್ ಅಧಿಕಾರಕ್ಕೆ ಬಂದಾಗ ಈ ವಿಚಾರವಾಗಿ ವಿವಾದ ಎದ್ದಿತು. ಮೊಗಲ್ ಚಕ್ರವರ್ತಿ ತನ್ನನ್ನು ಸುಬೇದಾರನನ್ನಾಗಿ ನೇಮಿಸಿದ್ದನೆಂದೂ ಆ ಸ್ಥಾನ ತನಗೆ ಸೇರಬೇಕೆಂದೂ ಆಸಫ್ ಝಾನ ಮೊಮ್ಮಗ ಮುಜಾóಫರ್ ಜಂಗ್ ವಾದ ಹೂಡಿದ. ಆ ಕಾಲದ ಅಸ್ಥಿರ ರಾಜಕೀಯ ಸನ್ನಿವೇಶದ ದುರ್ಲಾಭ ಪಡೆಯಲು ಹವಣಿಸುತ್ತಿದ್ದ ಫ್ರೆಂಚರೂ ಇಂಗ್ಲಿಷರೂ ಈ ವಿವಾದದಲ್ಲಿ ಕೈಹಾಕಿದರು. ಮುಜಾಫರ್ ಜಂಗನನ್ನು ಸಿಂಹಾಸನದ ಮೇಲೆ ಕೂರಿಸುವುದಾಗಿ ಫ್ರೆಂಚರು ಅವನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡರು. ಕರ್ಣಾಟಕದ ಸಿಂಹಾಸನಕ್ಕಾಗಿ ಇದೇ ಬಗೆಯ ಒಪ್ಪಂದ ಮಾಡಿಕೊಂಡಿದ್ದ ಚಂದಾ ಸಾಹೇಬನನ್ನೂ ಫ್ರೆಂಚರನ್ನೂ ಕುಡಿಕೊಂಡು ಮುಜಾóಫರ್ ಜಂಗ್ ಕರ್ಣಾಟಕದ ನವಾಬ ಅನ್ವರುದ್ದೀನನ ವಿರುದ್ಧ ಯುದ್ಧ ಮಾಡಿದ. ಅನ್ವರುದೀನ್ ಸತ್ತ. ಚಂದಾ ಸಾಹೇಬ ಕರ್ಣಾಟಕದ ನವಾಬನಾದ. ಫ್ರೆಂಚರು ಈ ಒಕ್ಕೂಟ ಸೈನ್ಯದ ಸಹಾಯದಿಂದ ತಿರುಚಿನಾಪಳ್ಳಿ ಮತ್ತು ತಂಜಾವೂರುಗಳ ಸುತ್ತಲ ಪ್ರದೇಶಗಳಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳತೊಡಗಿದರು. ಮುಜಾóಫರ್ ಜಂಗ್ ಪ್ರಬಲನಾಗುತ್ತಿದ್ದಾನೆಂದೂ ನಾಸಿರ್ ಜಂಗ್ ತನ್ನ ಶತ್ರುಗಳೊಂದಿಗೆ ಯುದ್ಧ ಮಾಡಿ ಅವರನ್ನು ಸೋಲಿಸಬೇಕೆಂದೂ ಇಂಗ್ಲಿಷರು ನಾಸಿರ್ ಜಂಗನಿಗೆ ಕರೆ ಇತ್ತರು. ನಾಸಿರ್ ಜಂಗ್ ದಂಡಯಾತ್ರೆ ಕೈಗೊಂಡು ಮುಜಾóಫರ್ ಜಂಗನನ್ನು ಸೆರೆಹಿಡಿದ. ಈ ಯುದ್ಧದಲ್ಲಿ ಆತನಿಗೆ ಸ್ವಲ್ಪಮಟ್ಟಿಗೆ ಇಂಗ್ಲಿಷರ ನೆರವು ದೊರಕಿತ್ತು. ಆದರೆ ಫ್ರೆಂಚರ ಮತ್ತು ಚಂದಾ ಸಾಹೇಬನ ಕುತಂತ್ರದಿಂದಾಗಿ, ಅದುವರೆಗೂ ನಿಷ್ಠರಾಗಿದ್ದ ಕಡಪ, ಕರ್ನೂಲ್ ಮತ್ತು ಸವಣೂರು ನವಾಬರು ನಾಸಿರ್ ಜಂಗನ ವಿರೋಧಿ ಪಾಳೆಯ ಸೇರಿದರು. 1750ರ ಡಿಸೆಂಬರಿನಲ್ಲಿ ಶತ್ರುಗಳ ಥಟ್ಟನೆ ಮೇಲೆರಗಿ ಅವನನ್ನು ಕೊಂದರು. ಸೆರೆಯಲ್ಲಿದ್ದ ಮುಜಾóಫರ್ ಜಂಗನನ್ನು ಬಿಡುಗಡೆ ಮಾಡಿ ಅವನನ್ನು ದಖನ್ನಿನ ಸುಬೆದಾರನೆಂದು ಘೋಷಿಸಲಾಯಿತು.

(ಡಿ.ಎಸ್.ಜೆ.)