ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಂಫ್ಯಾಲಿಡೀ
ನಿಂಫ್ಯಾಲಿಡೀ ಲೆಪಿಡಾಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಫ್ರಿಟಿಲರಿ (ಸ್ಪೀಯಿರಿಯ, ಬೋಲೋರಿಯ ಜಾತಿಗಳು), ಪೇಂಟೆಡ್ ಲೇಡಿ, ರೆಡ್ ಅಡ್ಮಿರಲ್, ಪೇಂಟೆಡ್ ಬ್ಯೂಟಿ, ಪೀಕಾಕ್ (ವೆನೆಸ ಜಾತಿಯ ಹಲವು ಬಗೆಗಳು), ಎಂಪರರ್ (ಏಪಟೂರ, ಆಸ್ಪರೊಕ್ಯಾಂಪ ಮುಂತಾದವು), ಮೋರ್ನಿಂಗ್ ಕ್ಲೋಕ್ (ನಿಂಫ್ಯಾಲಿಸ್ ಜಾತಿ), ಅಂಗಲ್‍ವಿಂಗ್ಸ್ (ಪಾಲಿಗೋನಿಯ), ಟಾರ್ಟಾಯಿಸ್ ಶೆಲ್ಸ್ (ನಿಂಫ್ಯಾಲಿಸ್ ಜಾತಿಯ ಕೆಲವು ಪ್ರಭೇದಗಳು), ಮುಂತಾದ ಚಿಟ್ಟೆಗಳು ಈ ಕುಟುಂಬಕ್ಕೆ ಸೇರಿವೆ. ಸಾಮಾನ್ಯವಾಗಿ ಇವುಗಳಲ್ಲಿ ಮುಂದಿನ ಒಂದು ಜೊತೆಯ ಕಾಲುಗಳು ತುಂಬ ಕ್ಷೀಣವಾಗಿದೆ. ಹಾಗಾಗಿ ಬರಿಯ ಮಧ್ಯ ಮತ್ತು ಹಿಂದಿನ ಎರಡು ಜೊತೆ ಕಾಲುಗಳ ಮೇಲೆ ನಡೆಯುವುವು. ಇದರಿಂದಾಗಿ ಇವಕ್ಕೆ ನಾಲ್ಕು ಕಾಲಿನ ಚಿಟ್ಟೆಗಳೆಂಬ ಹೆಸರುಂಟು. ಜೊತೆಗೆ ಮುಂಗಾಲಿನ ಟಿಬಿಯದ ಮೇಲೆ ಉದ್ದವಾದ ಕೂದಲುಗಳಿರುವುದರಿಂದ ಇವನ್ನು ಕೂರ್ಚಿಕೆ ಕಾಲಿನ ಚಿಟ್ಟೆಗಳೆಂದು ಕರೆಯುವುದೂ ಉಂಟು. ಈ ಚಿಟ್ಟೆಗಳ ಮುಂದಿನ ರೆಕ್ಕೆಗಳ ರೇಡಿಯಸ್ ನರ ಐದು ಕವಲುಗಳಿಂದ ಕೂಡಿವೆ. ಸಾಧಾರಣ ಗಾತ್ರದ ಚಿಟ್ಟೆಗಳಿವು; ರೆಕ್ಕೆ ಹರಡಿದಾಗ ಇವುಗಳ ಅಗಲ 2.5-5 ಸೆಂಮೀ. ಹೆಚ್ಚಿನ ಚಿಟ್ಟೆಗಳು ವರ್ಣರಂಜಿತವಾಗಿವೆ. ಹಲಕೆಲವು ಮಾತ್ರ ಮಂಕುಬಣ್ಣದವೋ ಇಲ್ಲವೆ ಹಿನ್ನೆಲೆಯೊಂದಿಗೆ ಹೊಂದಿಕೊಳ್ಳುವ ಬಣ್ಣದವೋ ಆಗಿವೆ. ಅಲ್ಲದೆ ಇವುಗಳಲ್ಲಿ ಲೈಂಗಿಕ ಮತ್ತು ಶ್ರಾಯಕ ವರ್ಣ ವ್ಯತ್ಯಾಸಗಳೂ ಉಂಟು. ಮೊಟ್ಟೆಗಳನ್ನು ಒಂಟೊಂಟಿಯಾಗಿ ಇಲ್ಲವೆ ಗುಂಪು ಗುಂಪಾಗಿ ಸಸ್ಯಗಳ ಮೇಲೆ ಇಡುವುವು. ಕಂಬಳಿಹುಳುಗಳ (ಮರಿಗಳು, ಡಿಂಬಗಳು) ಮೈಮೇಲೆ ಸಣ್ಣ ಮುಳ್ಳುಗಳಿರಬಹುದು ಅಥವಾ ಯಾವುದೇ ರೀತಿಯ ರಚನೆಗಳಿಲ್ಲದಿರಬಹುದು. ಗೂಡುಗಳು (ಕ್ರಿಸಲಿಸ್) ಬೆಳ್ಳಿ ಅಥವಾ ಬಂಗಾರದ ಬಣ್ಣದವಾಗಿರಬಹುದು. ಕೆಲವೊಮ್ಮೆ ಮಂಕುಬಣ್ಣದವಾಗಿರುವುವು. ಕ್ರೆಮಾಸ್ಟರ್ ಎಂಬ ರಚನೆಯ ಮೂಲಕ ಇದು ಆಸರೆಗೆ ಅಂಟಿಕೊಂಡಿರುವುದು. ಈ ಕುಟುಂಬದ ಚಿಟ್ಟೆಗಳ ಡಿಂಬಗಳು ಹಲವಾರು ಪ್ರಮುಖ ಸಸ್ಯಗಳ ಪರಾವಲಂಬಿಗಳಾಗಿದ್ದು ಅವನ್ನು ನಾಶ ಮಾಡುವುವು. (ಟಿ.ಎಸ್.ಟಿ.)