ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಜಗುಣದೇವ

ವಿಕಿಸೋರ್ಸ್ದಿಂದ

ನಿಜಗುಣದೇವ ಸು. 1150. ಒಬ್ಬ ವಚನಕಾರ. ಬಸವಣ್ಣನಿಗಿಂತ ಸ್ವಲ್ಪ ಹಿಂದೆ ಇದ್ದವನು ಎಂದು ವಿದ್ವಾಂಸರ ಅಭಿಪ್ರಾಯ. ಬಿಜಾಪುರ ಜಿಲ್ಲೆಯ ಚಿಮ್ಮಲಿಗೆ ಎಂಬ ಊರಿನವ. ಚಿಮ್ಮಲಿಗೆಯಲ್ಲೇ ಐಕ್ಯನಾದನೆಂಬ ಪ್ರತೀತಿ ಇದೆ. ಚಿಮ್ಮಲಿಗೆಯಲ್ಲಿ ನಿಜಗುಣೇಶ್ವರ ಲಿಂಗ ಎಂಬ ಹೆಸರಿನ ದೇವಸ್ಥಾನ ಇಂದಿಗೂ ಕಂಡುಬರುತ್ತದೆ. ಕೆಂಭಾವಿಯ ಚಂದಿಮರಸ ಇವನ ಶಿಷ್ಯನಾಗಿದ್ದಂತೆ ತಿಳಿದು ಬರುತ್ತದೆ.

ನಿಜಗುಣದೇವನಿಗೆ ನಿಜಗುಣಯೋಗಿ ಎಂಬ ಪರ್ಯಾಯ ನಾಮವೂ ಕಂಡುಬರುತ್ತದೆ. ಈತನ ಹೆಸರು ಗಣಸಹಸ್ರನಾಮದಲ್ಲಿ ಉಕ್ತವಾಗಿದೆ. ಸದ್ಯದಲ್ಲಿ ಈತನ ಎಂಟು ವಚನಗಳು ಮಾತ್ರ ಸಿಕ್ಕಿವೆ. ನಿಜಗುಣಯೋಗಿಯ ಯೋಗ ಎಂಬುದು ಈತನ ವಚನಗಳ ಅಂಕಿತ. ಈತ ಬೇರಾವ ವಚನಕಾರರ ಹೆಸರನ್ನೂ ಉಲ್ಲೇಖಿಸಿಲ್ಲ. ದರೆ ಆಮಹದೇವಿಯಕ್ಕ ತನ್ನ ಒಂದು ವಚನದಲ್ಲಿ ಬಸವಣ್ಣನ ಭಕ್ತಿ, ಚನ್ನಬಸವಣ್ಣನ ಜ್ಞಾನ, ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ, ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ. ಸಿದ್ಧರಾಮಯ್ಯನ ಸಮಾಧಿಸ್ಥಲ ಇಂತಿವರ ಕರುಣಪ್ರಸಾದವೆನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯ-ಎಂಬಲ್ಲಿ ಈತನನ್ನು ಸ್ಮರಿಸಿದ್ದಾಳೆ. ಇದರಿಂದ ಈತ ಶಿವಯೋಗದ ಸ್ವರೂಪವನ್ನು ಚೆನ್ನಾಗಿ ಬಲ್ಲವನಾಗಿದ್ದನೆಂದು ವಿದಿತವಾಗುತ್ತದೆ. ಅಲ್ಲದೆ ಈತನ ವಚನಗಳಲ್ಲಿ ಪರಮಾತ್ಮನ ಅರಿವು ಯೋಗ್ಯ ಅಂತಜ್ರ್ಞಾನ ಇದೇ ಮೊದಲಾದ ವಿಷಯಗಳು ಹೃದಯಂಗಮವಾಗಿ ವರ್ಣಿತವಾಗಿವೆ.

ಪಾತಂಜಲ ಯೋಗದಲ್ಲಿ ಹೇಳಿದಂತೆ ಯೋಗವೆಂದರೆ ಚಿತ್ತವೃತ್ತಿ ನಿರೋಧವೆಂದು ಈತ ಹೇಳಿಲ್ಲ. ಹಠಯೋಗಿಗಳಂತೆ ಅವನು ದೇಹವನ್ನು ಕ್ಲೇಶಗೊಳಿಸುವ ಸಾಧನಗಳನ್ನು ಸಮರ್ಥಿಸಿಲ್ಲ. ಅಂಗಲಿಂಗಗಳಲ್ಲಿಯ ಭಿನ್ನತ್ವವಳಿಯುವುದೇ ಯೋಗ ಎಂದು ಹೇಳಿದ್ದಾನೆ.

ಇವನ ಒಂದು ವಚನ ಹೀಗಿದೆ: ಸರ್ವಮಯವಾತ್ಮನೆಂದಲ್ಲಿ ರಕ್ಷಿಸಿ ಶಿಕ್ಷಿಸಿಹೆನೆಂಬುದೇನೋ. ಅಣೋರಣೀಯಾನ್ ಮಹತೋ ಮಹೀಯಾನ್ ಎಂದಲ್ಲಿ ಬೇರೊಂದರಿದು ಕುರಿತು ಕಾಬುದೇನೋ ಇದಿರಿಗೆ ತಾನಿಲ್ಲ ತನಗಿದಿರಿಲ್ಲವೆಂದಲ್ಲಿ ಗಜಬಜೆಯಲ್ಲಿ ಕುಜನವೇತಕ್ಕೆ ಬೇರಿಗೆ ನೀರನೆರೆದಲ್ಲಿ ಶಾಖೆಗೆ ಸಂದುಂಟೆ ಅಂಗಪ್ರಾಣ ಲಿಂಗವೊಂದೆಂದಲ್ಲಿ ಅರ್ಪಿತಕ್ಕೆ ಹಿಂದುಮುಂದಿಲ್ಲ ನಿಜಗುಣಯೋಗಿಯ ಯೋಗಕ್ಕೆ ಮುನ್ನವೇ ಇಲ್ಲ. (ಎನ್.ಬಿ.)