ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿದ್ರೆ

ವಿಕಿಸೋರ್ಸ್ದಿಂದ

ನಿದ್ರೆ - ಮೈಮರೆತ ಸ್ಥಿತಿಯಿಂದ ಸುಲಭವಾಗಿ ಎಚ್ಚರಗೊಳಿಸಬಹುದಾದಂಥ ದೈಹಿಕ ಹಾಗೂ ಮಾನಸಿಕ ಅವಸ್ಥೆ; ಕೆಲವು ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ಪಡೆಯುವ ಪರಿಸ್ಥಿತಿ (ಸ್ಲೀಪ್). ಇದು ಅಭ್ಯಾಸಬಲದಿಂದ ಉಂಟಾಗುವ ಪ್ರತಿಕ್ರಿಯೆ. ನಿದ್ರೆ ಎಲ್ಲ ಜೀವಿಗಳಿಗೂ ಅವಶ್ಯ. ದಿನದ ಹಲವಾರು ಚಟುವಟಿಕೆಗಳಿಂದ ಬಳಲಿದ ಅಂಗೋಪಾಂಗಗಳಿಗೆ ನಿದ್ರೆ ವಿಶ್ರಾಂತಿಯನ್ನು ಒದಗಿಸಿ ಕೊಡುತ್ತದೆ. ವಿವಿಧ ಪ್ರಾಣಿಪಕ್ಷಿಗಳ ನಿದ್ರಾವಧಿಗಳಲ್ಲಿ ವ್ಯತ್ಯಾಸ ಇರಬಹುದು. ಕೆಲವು ಪ್ರಾಣಿಗಳು ದಿವಸವೊಂದರಲ್ಲಿ ಹಲವು ಬಾರಿ ನಿದ್ರೆ ಮಾಡಿದರೆ ಇನ್ನು ಕೆಲವು ನಿರ್ದಿಷ್ಟವಾಗಿ ದಿವಸದ ಅದೇ ಹೊತ್ತಿನಲ್ಲಿ ಸುಮಾರು ಅಷ್ಟೇ ಕಾಲ ನಿದ್ರೆ ಹೋಗುತ್ತವೆ. ಮಾನವ ಹಾಗೂ ಇತರ ದಿನಚರಿಗಳು ರಾತ್ರಿ ವೇಳೆ ನಿದ್ರೆ ಮಾಡುವುದೇ ರೂಢಿ. ಕೆಲವು ಸಂದರ್ಭಗಳಲ್ಲಿ ಹಗಲು ಹೊತ್ತೂ ಅಲ್ಪಸ್ವಲ್ಪ ಕೊಸರು ನಿದ್ರೆ ಮಾಡುವುದುಂಟು. ನಿಶಾಚರ ಪ್ರಾಣಿಗಳು ಹಗಲಿನಲ್ಲಿ ನಿದ್ರಿಸುವುದೇ ಹೆಚ್ಚು. ರಾತ್ರಿ ವೇಳೆ ಕೆಲಸ ಮಾಡುವ ಕಾರ್ಮಿಕರು ಮತ್ತು ಇತರರು ಹಗಲು ಹೊತ್ತು ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.

ನಿದ್ರೆ ಮಾಡುವಾಗ ಹಲವು ಪ್ರಾಣಿಗಳಲ್ಲಿ ಹಲವು ಭಂಗಿಗಳಿರುತ್ತವೆ. ಪಕ್ಷಿ ಕೋತಿ ಮುಂತಾದ ಪ್ರಾಣಿಗಳು ಗಿಡಗಳ ಮೇಲೆ ಕುಳಿತುಕೊಂಡು, ಬಾವಲಿಗಳು ಮರದ ಕೊಂಬೆಗಳಿಗೆ ತಲೆಕೆಳಗಾಗಿ ಜೋತುಕೊಂಡು, ಆನೆ ಕುದುರೆ ಹೇಸರಕತ್ತೆ ಮುಂತಾದ ಪ್ರಾಣಿಗಳು ನಿಂತುಕೊಂಡು, ಹಸು ಎಮ್ಮೆ ಕುರಿ ಮೇಕೆ ಮುಂತಾದ ಪ್ರಾಣಿಗಳು ಹೊಟ್ಟೆಯ ಮೇಲೆ ಮಲಗಿಕೊಂಡು, ಇತ್ಯಾದಿ ನಿದ್ರಿಸುತ್ತವೆ. ಮನುಷ್ಯ ಬೆನ್ನಿನ ಮೇಲಾಗಲಿ ಹೊಟ್ಟೆಯ ಮೇಲಾಗಲಿ ಇಲ್ಲವೇ ಒಂದು ಪಕ್ಕಕ್ಕೆ (ಎಡ ಅಥವಾ ಬಲ) ಹೊರಳಿಕೊಂಡಾಗಲಿ ಮಲಗುತ್ತಾನೆ. ಹಲವು ವೇಳೆ ಕೂತುಕೊಂಡು ಇಲ್ಲವೇ ಕುರ್ಚಿಯಲ್ಲಿ ಒರಗಿಕೊಂಡು ನಿದ್ರೆ ಮಾಡುವುದೂ ಉಂಟು.

ನವಜಾತ ಶಿಶುಗಳಿಗೆ ಸಾಮಾನ್ಯವಾಗಿ 18-22 ಗಂಟೆ ಅವಧಿಯ ನಿದ್ರೆ ಅವಶ್ಯವಾದರೆ 70 ವರ್ಷ ವಯಸ್ಸಾದವರಲ್ಲಿ ಕೇವಲ 4-5 ಗಂಟೆ ಅವಧಿಯ ನಿದ್ರೆ ಸಾಕಾಗುತ್ತದೆ. ವಯಸ್ಸಾದಂತೆಲ್ಲ ನಿದ್ರೆಯ ಅವಧಿ ಕಡಿಮೆ ಆಗುತ್ತ ಹೋಗುತ್ತದೆ. ನಡುವಯಸ್ಕರಿಗೆ 6-8 ಗಂಟೆಗಳ ನಿದ್ರೆ ಆವಶ್ಯಕ. ನಿದ್ರೆ ಬರುವ ಮೊದಲು ಆಕಳಿಕೆ ಬರುತ್ತದೆ ಮತ್ತು ಪಂಚೇಂದ್ರಿಯಗಳ ಪ್ರತಿಕ್ರಿಯೆಗಳು ಕಡಿಮೆ ಆಗುತ್ತ ಹೋಗುತ್ತದೆ. ಸದ್ದು ಬೆಳಕು ವಾಸನೆ ಸ್ಪರ್ಶ ರುಚಿ ಮುಂತಾದವನ್ನು ಕುರಿತ ಸಂವೇದನೆ ಕುಗ್ಗುತ್ತ ಹೋಗುತ್ತದೆ. ಕಣ್ಣನ್ನು ಮುಚ್ಚಿಕೊಳ್ಳುವುದರಿಂದ ಬೆಳಕಿನ ಉದ್ರೇಕವನ್ನು ಐಚ್ಛಿಕವಾಗಿ ತಪ್ಪಿಸಿಕೊಳ್ಳಲಾಗುತ್ತದೆ. ಮೊತ್ತಮೊದಲ ಕುಗ್ಗುವಂಥವೆಂದರೆ ವಾಸನೆ ಮತ್ತು ರುಚಿ ಸಂವೇದನೆಗಳು. ಕಟ್ಟಕಡೆಯದಾಗಿ ಶಬ್ದಗ್ರಹಣ ಸಾಮಥ್ರ್ಯ ಕುಗ್ಗುತ್ತದೆ.

ಎಚ್ಚರವಾಗಿರುವಾಗ ಮಿದುಳಿನ ಮಧ್ಯದಲ್ಲಿ ತಿರುಳಿನಂತೆ ಅಡಗಿರುವ ಜಾಲಂದ್ರ ರಚನೆ( ರೆಟಿಕ್ಯುಲರ್ ಫಾರ್ಮೇಶನ್) ತನ್ನ ನಿರಂತರ ಚಟುವಟಿಕೆಯಿಂದ ಮಹಾ ಮಸ್ತಿಷ್ಕವನ್ನು (ಸೆರಿಬ್ರಲ್ ಕಾರ್ಟೆಕ್ಸ್) ಉದ್ರೇಕಿಸುತ್ತ ನಿದ್ರೆ ಹತ್ತುವುದನ್ನು ವಿರೋಧಿಸುತ್ತದೆ. ಆದರೆ ನಿದ್ರೆ ಹತ್ತುವಾಗ ಈ ಉದ್ರೇಕ ಸಾಮಥ್ರ್ಯ ಕಡಿಮೆಯಾಗಿ ಅದು ಮಿದುಳಿನ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುವುದರಿಂದ ಎಚ್ಚರದಿಂದಿರಲು ಸಾಧ್ಯವಾಗದೇ ಮನುಷ್ಯ ನಿದ್ರೆ ಹೋಗುತ್ತಾನೆ. ಆದ್ದರಿಂದಲೇ ಮನುಷ್ಯ ನಿದ್ರೆ ಹೋಗಬೇಕಾದರೆ ಬೆಳಕು ಕಡಿಮೆ ಇರುವ ಜಾಗ, ನಿಶ್ಶಬ್ದ ಪರಿಸರ, ಮೆತ್ತಗೆ ಮತ್ತು ಬೆಚ್ಚಗಿರುವ ಹಾಸಿಗೆ ಇವನ್ನು ಬಯಸುತ್ತಾನೆ. ಆದರೆ ಇಲ್ಲೆಲ್ಲ ಅಭ್ಯಾಸಬಲವೇ ಪ್ರಧಾನ. ಏನೂ ಇಲ್ಲದೆ ಸುಖನಿದ್ರೆ ಮಾಡುವವರೂ ಇದ್ದಾರೆ. ಎಲ್ಲವೂ ಇದ್ದು ನಿದ್ರೆ ಬಾರದವರೂ ಇದ್ದಾರೆ. ಇಲ್ಲೆಲ್ಲ ಜಾಲಂದ್ರ ರಚನೆಗೆ ಮಹಾಮಸ್ತಿಷ್ಕದ ಮೇಲಿರುವ ಹತೋಟಿಯೇ ಇದರ ಕಾರಣ. ಮನಸ್ಸಿನ ಚಿಂತೆ ಆತಂಕ ದುಗುಡ ಇವು ಜಾಲಂದ್ರರಚನೆಯನ್ನು ಕೆದಕಿದಂತಾಗಿ ಮಿದುಳು ಸದಾ ಉದ್ರಿಕ್ತವಾಗಿರುವುದರಿಂದ ವ್ಯಕ್ತಿ ಎಚ್ಚರವಾಗಿಯೇ ಇರುವನು. ಅತಿಬೆಳಕು, ತೀವ್ರ ಶಬ್ದ, ಮೈ ಕೈಕಾಲುಗಳ ನಿರಂತರ ಚಲನೆ ಇವುಗಳಿಂದಲೂ ಇದೇ ರೀತಿ ನಿದ್ರೆ ಬಾರದೆ ಹೋಗುತ್ತದೆ. ಆದರೆ ಇವೆಲ್ಲಕ್ಕೂ ಮಿತಿ ಉಂಟು. ಈ ಮಿತಿ ಮೀರಿದಾಗ ನಿದ್ರೆ ಅನಿವಾರ್ಯ. ನಿದ್ರೆ ಬಂದ ಮೇಲೆ ಪುನಃ ಎಚ್ಚರವಾಗುವ ತನಕವೂ ನಿದ್ರಾವಸ್ಥೆ ಒಂದೇ ರೀತಿ ಇರುವುದಿಲ್ಲ. ವ್ಯಕ್ತಿಯ ನಿದ್ರಾವಸ್ಥೆಯಲ್ಲಿ ಹಲವಾರು ಹಂತಗಳಿವೆ. ನಿದ್ರೆ ಆರಂಭವಾಗಿ ಸುಮಾರು ಎರಡು ಗಂಟೆಗಳ ತನಕ ಗಾಢವಾಗಿದ್ದು ಮುಂದೆ ಅದರ ತೀವ್ರತೆ ತಗ್ಗುತ್ತದೆ. ಮುಂದಿನ ಹಂತದಲ್ಲಿ ಪುನಃ ಎರಡನೆಯ ಆವರ್ತಿ ಗಾಢ ನಿದ್ರೆ ಪ್ರಾರಂಭವಾಗಿ ತಿಳಿಗೊಳ್ಳುವುದು. ಹೀಗೆ ತಿಳಿಗೊಂಡದ್ದು ವ್ಯಕ್ತಿಯ ಅರಿವಿಗೇ ಹತ್ತದೆ ನಿದ್ರಾವಸ್ಥೆ ಮುಂದುವರಿದಂತೆ ಅನುಭವಕ್ಕೆ ಬರುವುದೇ ರೂಢಿ. ಇಂಥ ತಿಳಿನಿದ್ರೆಗೆ ವಿರೋಧಾಭಾಸದ ನಿದ್ರೆ ಎಂದು ಹೆಸರು. ತಿಳಿ ನಿದ್ರೆಯ ವೇಳೆ ಮನುಷ್ಯ ಹಲವಾರು ಸಲ ಹೊರಳಾಡಿರುತ್ತಾನೆ. ಕೈಕಾಲುಗಳನ್ನೂ ಆಡಿಸಿರುತ್ತಾನೆ. ನಿದ್ರಾವಸ್ಥೆಯಲ್ಲಿ ಮಾಂಸಖಂಡಗಳು ಸಡಿಲಗೊಂಡು ಪ್ರಚೋದನೆಗಳಿಗೆ ಪ್ರತಿಕ್ರಿಯೆಗಳು ಕುಗ್ಗಿದರೂ ನೋವಿನ ಸಂವೇದನೆಗೆ ಮಾತ್ರ ಪ್ರತಿಕ್ರಿಯೆ ಕುಗ್ಗಿರುವುದಿಲ್ಲ. ನೋವಿನಿಂದ ಪ್ರಚೋದಿಸಿದಾಗಲೂ ಎಚ್ಚರಗೊಳ್ಳದಿದ್ದರೆ ಅದು ನಿದ್ರೆ ಅಲ್ಲ. ಎಚ್ಚರಗೆಟ್ಟ ಸ್ಥಿತಿ ಎಂದು ಭಾವಿಸಬೇಕು. ನಿದ್ರಿಸುತ್ತಿರುವಾಗ ಎಷ್ಟೊ ವೇಳೆ ಮನುಷ್ಯ ಮಾತಾಡುವುದು ಉಂಟು. ಇಂಥ ಸಂದರ್ಭಗಳಲ್ಲಿ ಆತ ಕನಸು ಕಾಣುತ್ತಿರುವುದು ಸಾಮಾನ್ಯ. ಇದು ವಿರೋಧಾಭಾಸದ ನಿದ್ರೆಯ ವೇಳೆಯಲ್ಲಿ ಸರ್ವೇಸಾಮಾನ್ಯವಾದುದು. ಆಗ ನಿದ್ರೆ ಹೋಗುತ್ತಿರುವವನ ಕಣ್ಣಾಲಿಗಳು ವೇಗವಾಗಿ ಪಕ್ಕದಿಂದ ಪಕ್ಕಕ್ಕೆ ವೃತ್ತೋಪಾದಿಯಲ್ಲಿ ಚಲಿಸುತ್ತಿರುವುವು. ಈ ತರಹ ನಿದ್ರೆಯನ್ನು ವೇಗವಾಗಿ ಕಣ್ಣಾಲಿಗಳು ಚಲಿಸುವ ನಿದ್ರೆ (ರ್ಯಾಪಿಡ್ ಐ ಮೂವ್‍ಮೆಂಟ್-ಆರ್‍ಇಎಮ್) ಸ್ಲೀಪ್ ಎನ್ನುತ್ತಾರೆ. ' ನಿದ್ರೆಯ ವೇಳೆ ದೇಹಚಟುವಟಿಕೆಗಳಲ್ಲಿ ಹಲವಾರು ವ್ಯತ್ಯಾಸಗಳು ತಲೆದೋರುವುವು. ಉಸಿರಾಟದ ಗತಿ ಮತ್ತು ಗುಂಡಿಗೆ ಬಡಿತದ ದರ ನಿಧಾನವಾಗುತ್ತವೆ. ರಕ್ತದ ಒತ್ತಡ ಕಡಿಮೆ ಆಗುವುದು. ಮೈ ಉಷ್ಣತೆ 0.5(ಛಿ ಯಷ್ಟು ಬೀಳುತ್ತದೆ. ಪಂಚೇಂದ್ರಿಯಗಳ ಕಾರ್ಯಚಟುವಟಿಕೆ ಮಂದವಾಗುತ್ತದೆ. ಕಣ್ಣಿನ ಪಾಪೆ ಸಂಕೋಚಿಸಿರುತ್ತದೆ. ಮಾಂಸಖಂಡಗಳ ಬಿಗಿತ ಕಡಿಮೆಯಾಗಿ ಪ್ರತಿಕ್ರಿಯೆಗಳೆಲ್ಲ ಮಂದವಾಗಿರುತ್ತವೆ. ಉಪಾಪಚಯದ ದರ ತಗ್ಗಿರುವುದು. ಜೀರ್ಣರಸ ಸ್ರಾವನ ಕಡಿಮೆ. ಆದರೂ ಹೊಟ್ಟೆ ಮತ್ತು ಕರುಳಿನ ಚಲನೆ ತೀವ್ರವಾಗಿರುವುದು. ಮೂತ್ರಪಿಂಡಗಳಲ್ಲಿ ರಕ್ತಸಂಚಾರ ಕಡಿಮೆಯಾಗಿದ್ದರೂ ತಗ್ಗಿದ ಮೊತ್ತದಲ್ಲಿ ಅಧಿಕ ಸಾಂದ್ರತೆಯ ಮೂತ್ರ ಉತ್ಪತ್ತಿಯಾಗುತ್ತದೆ. ನರಕ್ರಿಯೆಗಳಿಗೆ ಸಂಬಂಧಪಟ್ಟ ಅಂತಃಸ್ರಾವಗಳಲ್ಲಿ ವ್ಯತ್ಯಾಸ ಉಂಟಾಗಿ ಅಸಿಟೈಲ್ ಕೋಲಿನ್ ಎಂಬ ರಾಸಾಯನಿಕ ವಸ್ತುವಿನ ಉತ್ಪತ್ತಿ ಹೆಚ್ಚಾಗುತ್ತದೆಂದು ನಂಬಲಾಗಿದೆ.

ನಿದ್ರೆ ಬರುವುದು ಹೇಗೆ ಎನ್ನುವುದು ಇನ್ನೂ ನಿಖರವಾಗಿ ತಿಳಿದಿಲ್ಲ. ಹಲವು ಪ್ರಾಯೋಗಿಕ ನಿದರ್ಶನ ಮತ್ತು ಸಂಶೋಧನೆಗಳಿಂದ ಸ್ಪಲ್ಪಮಟ್ಟಿನ ತಿಳಿವಳಿಕೆ ಲಭಿಸಿದೆ. ಕೆಲಸ ಮಾಡಿ ದಣಿದು ಆಯಾಸಗೊಂಡಾಗ, ದೇಹದಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ವಸ್ತುಗಳು ಮಿದುಳಿನಲ್ಲಿ ರಕ್ತ ಚಲನೆ ಕಡಿಮೆಯಾಗಿ ಆಕ್ಸಿಜನ್ನಿನ ಕೊರತೆ ಉಂಟಾಗುವುದು (ಆಕಳಿಕೆ ಬರುವುದು ಇದರಿಂದಲೇ ಎಂದು ನಂಬಲಾಗಿದೆ) ಮುಂತಾದವನ್ನು ಪ್ರಾಯೋಗಿಕ ಸಮರ್ಥನೆ ಇಲ್ಲದೇ ಅಲ್ಲಗೆಳೆಯಲಾಗಿದೆ. ಆದರೆ ವಸ್ತುತಃ ಇವು ನಿದ್ರಾಕಾರಕ ಸನ್ನಿವೇಶಗಳೆಂಬುದು ಸಾಮಾನ್ಯ ಅನುಭವ.

ಬ್ರೆಮರ್ ಎಂಬವ, ಪ್ರಾಣಿಗಳ ಮೇಲೆ ಅನೇಕ ಪ್ರಯೋಗಗಳನ್ನು ಮಾಡಿ (1954) ಮಿದುಳು ಬಳ್ಳಿ ಮತ್ತು ಕಾಂಡದಲ್ಲಿರುವ (ಬ್ರೈಯ್ನ್ ಸ್ಟೆಮ್) ಜಾಲಂದ್ರ ರಚನೆಗೂ ಮಹಾಮಸ್ತಿಷ್ಟಕ್ಕೂ ನಿಕಟ ಸಂಬಂಧವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಪಂಚೇಂದ್ರಿಯಗಳಿಂದಲೂ, ದೇಹಭಾಗಗಳಿಂದಲೂ ಬರುವ ಸಂವೇದನೆಗಳಿಂದ ಜಾಲಂದ್ರ ರಚನೆಯೂ ಚೇತನಗೊಂಡು ಮಹಾಮಸ್ತಿಷ್ಟಕ್ಕೂ ಅತೀವ ಚಟುವಟಿಕೆಯಲ್ಲಿಟ್ಟು ಎಚ್ಚರದಿಂದಿರುವ ಹಾಗೆ ಮಾಡುತ್ತದೆ. ಜಾಲಂದ್ರ ರಚನೆಗೆ ಬರುವ ಸಂವೇದನೆಗಳು ಕಡಿಮೆಯಾದಾಗ ಇದರ ಚೇತನ ಮಂದವಾಗಿ ಮಿದುಳನ್ನು ಚಟುವಟಿಕೆಯಿಂದ ಇಡಲು ಸಾಧ್ಯವಾಗದೆ ನಿದ್ರಾವಸ್ಥೆ ಉಂಟಾಗುತ್ತದೆ. ಪಂಚೇಂದ್ರಿಯಗಳು ಅವ್ಯಾಹತವಾಗಿ ಜಾಲಂದ್ರ ರಚನೆಗೆ ಸಂದೇಶಗಳನ್ನು ಕಳಿಸುತ್ತಲೇ ಇರುವುವು. ಇವು ಬಲು ಕಡಿಮೆಯಾದಾಗ ಅಥವಾ ತಟಸ್ಥವಾದಾಗ ನಿದ್ರಾರಂಭಕ್ಕೆ ಎಡೆ ಆಗುವುದು. ಎಂದೇ ಇದಕ್ಕೆ ಪಟುಕಾರಿ ಜಾಲಂದ್ರ ವ್ಯವಸ್ಥೆ ಎಂಬ ಹೆಸರಿದೆ. ಈ ವ್ಯವಸ್ಥೆಗೂ ಮಿದುಳಿನ ಇನ್ನಿತರ ಭಾಗಗಳಾದ ತೆಲಮಸ್, ಹೈಪೊತೆಲಮಸ್ ಮತ್ತು ರ್ಹೈನೆನ್ ಕಿಫಲಾನ್ ಎಂಬ ಮಿದುಳು ಭಾಗಕ್ಕೂ ನಿಕಟ ಸಂಬಂಧವುಂಟು. ಈ ಸ್ಥಳಗಳು ಮನೋದ್ವೇಗಗಳಿಗೆ ಸಂಬಂಧಿಸಿದವು. ಆದ್ದರಿಂದಲೇ ಮನಸ್ಸಿನ ಚಿಂತೆ, ದುಗುಡ, ಆತಂಕ, ಹೆದರಿಕೆ, ನೋವು ಇತ್ಯಾದಿಗಳಿದ್ದಾಗ ನಿದ್ರೆ ಬರುವುದು ಕಷ್ಟ. ಈ ಮಾನಸಿಕ ಉದ್ವೇಕಗಳು ಜಾಲಂದ್ರ ವ್ಯವಸ್ಥೆಯನ್ನು ಸದಾ ಕೆದಕುತ್ತಲೇ ಇರುವವು. ಇಂಥ ಸಂದರ್ಭಗಳಲ್ಲಿ ಮನುಷ್ಯ ನಿದ್ರಾಕಾರಿಗಳ ಆಶ್ರಯ ಪಡೆಯುವುದು ಸಹಜವಾಗಿದೆ. ಈ ಮಾತ್ರೆಗಳು ಮಾನಸಿಕ ಉದ್ರೇಕಗಳು ಅತಿ ಆಗದಂತೆ ತಡೆದು ಜಾಲಂದ್ರ ರಚನೆ ಶಾಂತವಾಗಿರುವಂತೆ ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ ಅತಿ ಆಯಾಸದಿಂದ ನಿದ್ರಾ ಸೂಚನೆಗಳು ಕಂಡುಬಂದರೆ ಇನ್ನು ಕೆಲವು ಸಂದರ್ಭಗಳಲ್ಲಿ ಅದರಿಂದ ನಿದ್ರಾಭಂಗವೇ ಆದೀತು. ಇದಕ್ಕೆ ಕಾರಣ ಇಂಥದ್ದೇ ಎಂದು ನಿರ್ದಿಷ್ಟವಾಗಿ ಗೊತ್ತಾಗಿಲ್ಲ. ಬಹುಶಃ ಬಹಳವಾಗಿ ಬಳಲಿದ ಮಾಂಸಖಂಡಗಳಿಂದಲೂ ಕೀಲುಗಳಿಂದಲೂ ಬರುವ ಸಂವೇದನೆಗಳು ಜಾಲಂದ್ರ ವ್ಯವಸ್ಥೆಯನ್ನು ಕೆದಕುವುದರಿಂದ ನಿದ್ರಾಭಂಗವಾಗಬಹುದು. ಇಲ್ಲವೇ ಸ್ವಲ್ಪ ಬಳಲಿದ ಮಾಂಸಖಂಡಗಳು ಪೂರ್ಣವಾಗಿ ಸಡಿಲಗೊಂಡು ಅವುಗಳಿಂದ ಉದ್ಭವವಾಗಬಲ್ಲ ಸಂವೇದನೆಗಳು ತಗ್ಗಿ ಜಾಲಂದ್ರ ರಚನೆಯ ಪ್ರಚೋದನೆಯೂ ತಗ್ಗಿ, ನಿದ್ರೆ ಹತ್ತುವುದಕ್ಕೆ ಮಾರ್ಗ ಸುಗಮವಾಗಬಹುದು. ಹೆಸ್ ಎಂಬಾತ ಬ್ರೆಮರ್ ಪ್ರಯೋಗ ಮಾಡಿದ ಸುಮಾರಿಗೆ ವಿವಿಧ ಪ್ರಯೋಗಗಳನ್ನು ಮಾಡಿ (1954) ನಿದ್ರಾವಸ್ಥೆಗೆ ಕಾರಣಗಳನ್ನು ಶೋಧಿಸಲು ಯತ್ನಿಸಿದ. ಅವನ ಪ್ರಕಾರ ನಿದ್ರೆಯನ್ನು ನಿಶ್ಚೇತನ ಕ್ರಿಯೆ ಎಂದು ಕರೆಯುವುದು ವಿರೋಧಾಭಾಸ; ದೇಹದ ಎಲ್ಲ ಕಾರ್ಯಗಳೂ ಆಗ ಮಂದವಾಗಿರುವುದಿಲ್ಲ. ಮೂತ್ರಪಿಂಡಗಳು ಮತ್ತು ಕರುಳು ಚುರುಕಾಗಿಯೇ ಕೆಲಸ ಮಾಡುತ್ತವೆ. ಉಸಿರಾಟ ಮತ್ತು ರಕ್ತ ಪರಿಚಲನೆ ನಿಲ್ಲುವುದಿಲ್ಲ. ದೇಹದಲ್ಲಿ ಹಲವಾರು ಅನೈಚ್ಛಿಕ ಚಟುವಟಿಕೆಗಳು ನಡೆದೇ ಇರುತ್ತವೆ. ಯೋಚನೆ ಮಾಡುವ ಕಾರ್ಯವಾಗಲೀ ಐಚ್ಛಿಕ ಚಟುವಟಿಕೆಗಳಾಗಲೀ ಇರಬಹುದು. ಕನಸು ಕಾಣುವುದು, ಕನಸಿನಲ್ಲಿ ಮಾತನಾಡುವುದು, ನಿದ್ರೆಯಲ್ಲಿ ಹೊರಳುವುದು ಮುಂತಾದವು ನರಕೋಶಗಳ ಚಟುವಟಿಕೆ ಇಲ್ಲದೇ ಸಾಧ್ಯವೇ? ಹಾಗಾದರೆ, ಇತರ (ಬಹುಶಃ ಐಚ್ಛಿಕ) ಅಂಗಗಳಿಗೆ ಇಷ್ಟು ದೀರ್ಘ ಕಾಲದ ವಿಶ್ರಾಂತಿ ಏಕೆ ಬೇಕು? ಇದಕ್ಕೆ ಉತ್ತರ ಸಿಕ್ಕುವುದು ಕಷ್ಟ. ಹೆಸ್ ತನ್ನ ಪ್ರಯೋಗಗಳನ್ನು ಬೆಕ್ಕುಗಳ ಮೇಲೆ ಮಾಡಿದ. ಮಿದುಳಿನ ಡಯನ್ ಕಿಫಲಾನ್ ಎಂಬ ಭಾಗದಲ್ಲಿ (ತೆಲಮಸ್ಸಿನ ನೆರೆಯಲ್ಲಿ) ನಿರ್ದಿಷ್ಟವಾದ ಜಾಗವನ್ನು ವಿದ್ಯುತ್ ಚೋದಕದಿಂದ ಉದ್ರೇಕಗೊಳಿಸಿದಾಗ ಬೆಕ್ಕು ನಿದ್ರಾವಸ್ಥೆ ಹೊಂದುವುದನ್ನು ತೋರಿಸಿದ. ಆ ಸಂದರ್ಭದಲ್ಲಿ ಬೆಕ್ಕನ್ನು ಯಾವುದೇ ತರಹದ ಪಂಚೇಂದ್ರಿಯದ ಉದ್ರೇಕವೂ ಎಚ್ಚರಗೊಳಿಸಲಿಲ್ಲ. ಆದರೆ ವಿದ್ಯುತ್ ಚೋದಕವನ್ನು ನಿಲ್ಲಿಸಿದಾಗ ಶಬ್ದ ಅಥವಾ ವಾಸನೆ ಬೆಕ್ಕನ್ನು ಎಚ್ಚರಗೊಳಿಸುತ್ತಿತ್ತು. ಈ ಪ್ರಯೋಗಗಳಿಂದ ಇವನು ಮಿದುಳಿನ ಡಯನ್‍ಕಿಫಲಾನ್ ಜಾಗದಲ್ಲಿ ತೆಲಮಸ್ಸಿನ ಹತ್ತಿರ ನಿದ್ರಾಕೇಂದ್ರ ಇದೆ ಎಂದು ತೋರಿಸಿಕೊಟ್ಟ. ಇವರಿಬ್ಬರ ಜೊತೆ ಮೆಗೌನ್ ಮತ್ತು ಮೊರೌಜಿ ಎಂಬುವರೂ ಪ್ರಯೋಗಗಳನ್ನು ಮಾಡಿ ಜಾಲಂದ್ರರಚನೆ ಒಂದಲ್ಲ ಒಂದು ರೀತಿಯಲ್ಲಿ ಮಿದುಳನ್ನು ಚೇತನಗೊಳಿಸುತ್ತಿರುತ್ತದೆ; ಇದು ತಟಸ್ಥವಾದಾಗ ನಿದ್ರಾವಸ್ಥೆ ಉಂಟಾಗುವುದು ಎಂದು ಒಪ್ಪಿಕೊಂಡರು.

ನಿದ್ರಾವಸ್ಥೆಯಲ್ಲಿರುವಾಗ ನರಕೋಶಗಳ ಚಟುವಟಿಕೆಗಳಲ್ಲಿ ಅನೇಕ ವ್ಯತ್ಯಾಸಗಳಾಗುತ್ತವೆ. ಇವನ್ನು ಎಲೆಕ್ಟ್ರೊಎನ್ಸ್‍ಫಲೊಗ್ರಫಿಯ (ಇಇಜಿ) ಮೂಲಕ ಅರಿಯಬಹುದು. ಮನುಷ್ಯ ನಿದ್ರೆಯ ಯಾವ ಹಂತದಲ್ಲಿದ್ದಾನೆ ಎಂಬುದನ್ನೂ ಇಇಜಿಯಿಂದ ಗೊತ್ತುಮಾಡಬಹುದು. ಇದರಲ್ಲಿ ಕಂಡುಬರುವ ತರಂಗಗಳ ವಿನ್ಯಾಸ ನಿದ್ರೆಯ ಹಲವು ಹಂತಗಳಲ್ಲಿ ಬೇರೆ ಬೇರೆ ಆಗಿರುತ್ತದೆ. , ( ಮತ್ತು ( ತರಂಗಗಳೆಂದು ಇದನ್ನು ಕರೆಯುತ್ತಾರೆ. ವ್ಯಕ್ತಿ ಗಾಢನಿದ್ರೆಯಲ್ಲಿರುವಾಗ ( ತರಂಗಗಳು ಎದ್ದು ಕಾಣುವುವು. ಅದರ ಆವರ್ತಾಂಕ ಸೆಕೆಂಡಿಗೆ 4-6ವರೆಗೆ. ಕೆಲವು ವೇಳೆ ಇನ್ನೂ ಕಡಿಮೆಯಾಗಬಹುದು. ಎಚ್ಚರವಾಗಿರುವವರಲ್ಲಿ (,( ತರಂಗಗಳೇ ಪ್ರಧಾನ. ಮನುಷ್ಯ ಎಷ್ಟು ದಿವಸಗಳ ತನಕ ನಿದ್ರೆ ಮಾಡದೆ ಇರಬಲ್ಲ ಎಂಬುದರ ಬಗ್ಗೆ ಅನೇಕ ದಾಖಲೆಗಳಿವೆ. ಎಪ್ಪತ್ತೆರಡು ದಿವಸಗಳ ತನಕವೂ ನಿದ್ರೆ ಬಿಟ್ಟಿದ್ದ ನಿದರ್ಶನಗಳಿವೆ. ಆದರೆ ಸಾಮಾನ್ಯವಾಗಿ 48-72 ಗಂಟೆಗಳ ತನಕವೂ ನಿದ್ರೆ ಕೆಟ್ಟಾಗ ಆತನ ಪ್ರತಿಕ್ರಿಯೆಗಳಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗುತ್ತದೆ. ಸ್ಮರಣ ಸಾಮಥ್ರ್ಯ ಕುಂದುತ್ತದೆ, ಲೆಕ್ಕ ಮಾಡುವುದು ಮತ್ತು ಸೂಕ್ಷ್ಮತರಹ ಪ್ರತಿಕ್ರಿಯೆಯ ಕಾರ್ಯಗಳಲ್ಲಿ ತೊಡಗುವುದು ಕಷ್ಟವಾಗುತ್ತದೆ. ಮಾಂಸಖಂಡಗಳ ಚಲನವಲನಗಳ ಮೇಲೆ ಹತೋಟಿ ಇರುವುದಿಲ್ಲ. ಮಾನಸಿಕ ಹೊಂದಾಣಿಕೆಯಲ್ಲಿ ತಪ್ಪು ತಲೆ ಹಾಕುವುದು, ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡವು; ವ್ಯಕ್ತಿ ಹೆಚ್ಚು ಮುಂಗೋಪಿಯಾಗುತ್ತಾನೆ. ದೇಹದ ಮೇಲೆ ಮಿದುಳಿಗಿರುವ ಹತೋಟಿ ತಪ್ಪಿ ಎಲ್ಲ ಕ್ರಿಯೆಗಳೂ ವ್ಯಕ್ತಿಗೆ ಮತ್ತು ಸಂಬಂಧಪಟ್ಟವರಿಗೆ ತೊಂದರೆಯಾಗುತ್ತದೆ.

ಮನೋವೈಜ್ಞಾನಿಕ ದೃಷ್ಟಿ : ಪ್ರತಿಯೊಬ್ಬನಿಗೂ ನಿದ್ರೆ ಹಾಗೂ ಎಚ್ಚರಸ್ಥಿತಿಗಳ ಪರಿಚಯವೇನೋ ಇದೆ. ಆದರೆ ನಿದ್ರೆಯ ಬಗ್ಗೆ ಖಚಿತ ಜ್ಞಾನ ಬಲು ಮಂದಿಗೆ ಇರದು. ನಿದ್ರೆ ಏಕೆ ಬರುತ್ತದೆ, ನಿದ್ರೆ ಹರಿದು ಹೇಗೆ ಎಚ್ಚರವಾಗುತ್ತದೆ, ನಿದ್ರೆಯ ಉದ್ದೇಶವೇನು ಎಂಬವು ಪರಿಣತರಿಗೆ ಸಹ ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಕಳೆದ ಹಲವಾರು ದಶಕಗಳಿಂದ ಈ ಬಗ್ಗೆ ತೀವ್ರ ವ್ಯಾಸಂಗ ಮುನ್ನಡೆಯುತ್ತಲೇ ಇದೆ. ಮಿದುಳಿನಲ್ಲಿ ಉದ್ಭವವಾಗುವ ಅತಿ ದುರ್ಬಲ ವಿದ್ಯುತ್‍ಸ್ಪಂದಗಳನ್ನು ಅಗಾಧವಾಗಿ ವೃದ್ಧಿಸಿ ಲೇಖಿಸಬಲ್ಲ ಜಟಿಲ ಸಲಕರಣೆಗಳ (ಇಇಜಿ) ಆವಿಷ್ಕಾರ ಈಚೆಗೆ ಆಗಿರುವುದರಿಂದ ಮಿದುಳಿನ ಕಾರ್ಯವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ.

ಹುಟ್ಟಿದ ತರುಣದಲ್ಲಿ, ಶೈಶವದಲ್ಲಿ ಮತ್ತು ವಯಸ್ಕ ಸ್ಥಿತಿಯಲ್ಲಿ ನಿದ್ರೆಯ ನಮೂನೆಯನ್ನು ಪರಿಶೀಲಿಸಿ ರಾತ್ರಿ ಹೊತ್ತೇ ಏಕೆ ನಿದ್ರೆ ಮಾಡುತ್ತೇವೆ, ಇದು ಹುಟ್ಟು ಲಕ್ಷಣವೋ ಕಲಿತಗುಣವೋ ಎನ್ನುವ ವಿಚಾರಗಳನ್ನು ತಿಳಿಯಬಹುದು. ನವಜಾತ ಶಿಶು ದಿವಸದಲ್ಲಿ 24 ಗಂಟೆಗಳ ಪೈಕಿ 23 ಗಂಟೆಗಳ ಕಾಲ ನಿದ್ರಿಸುತ್ತದೆ. ಅದಕ್ಕೆ ಗಂಟೆಗಂಟೆಯೂ ಎಚ್ಚರವಾಗಿ ಹಲವು ನಿಮಿಷಗಳಲ್ಲಿ ಪುನಃ ನಿದ್ರೆ ಹತ್ತುವಂತೆ ಕಾಣುತ್ತದೆ. ಬೆಳೆಯುತ್ತ ನಿದ್ರೆ ಕಡಿಮೆ ಆಗುವುದಲ್ಲದೆ ಗಂಟೆಗಂಟೆಯೂ ಎಚ್ಚರವಾಗುವ ಬದಲು ಹೆಚ್ಚು ಕಾಲ ನಿದ್ರೆ ಮಾಡುವ ರೂಢಿ ಕಂಡುಬರುತ್ತದೆ. ಕ್ರಮೇಣ ಸಾಮಾಜಿಕ ಹಾಗೂ ಭೌತಿಕ ಪ್ರಭಾವಗಳ ಪರಿಣಾಮವಾಗಿ ದಿವಸದ 24 ಗಂಟೆಗಳ ಪೈಕಿ ಹಗಲು ಹೊತ್ತು ಎಚ್ಚರವಾಗಿರುವಂತೆಯೂ ರಾತ್ರಿ ನಿದ್ರಿಸುತ್ತಿರುವಂತೆಯೂ ಅಭ್ಯಾಸವಾಗಿ ಈ ತಾಳಗತಿಗೆ ತಕ್ಕಂತ ಶರೀರ ಕ್ರಿಯಾವೈಶಿಷ್ಟ್ಯಗಳು ರೂಢಿಸುತ್ತವೆ. ರಾತ್ರಿ ನಿದ್ರೆ ಮಾಡುತ್ತಿರುವಾಗ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಕ್ರಿಯೆಗಳ ದಕ್ಷತೆ ಕುಗ್ಗುತ್ತದೆ. ನಿಶ್ವಾಸೋಚ್ಛ್ವಾಸಗಳು ದೀರ್ಘವಾಗುತ್ತವೆ. ದೇಹೋಷ್ಣತೆ ತಗ್ಗುತ್ತದೆ. ಒಂದೆರಡು ದಿವಸ ಹಗಲು ನಿದ್ರಿಸುತ್ತಿದ್ದು ರಾತ್ರಿ ಚಟುವಟಿಕೆಗಳಲ್ಲಿ ನಿರತನಾಗಿದ್ದುದಾದರೆ ಮೇಲಿನ ಲಕ್ಷಣಗಳು ರಾತ್ರಿ ಹೊತ್ತೇ ಕಂಡುಬರುತ್ತವೆ. ಆದ್ದರಿಂದ ವಾರದಲ್ಲಿ ಒಂದೋ ಎರಡೋ ರಾತ್ರಿ ಸರದಿಯಂತೆ ಕೆಲಸ ಮಾಡಲು ಬರುವ ವ್ಯಕ್ತಿಗಳ ಕೆಲಸ ಅದಕ್ಷತೆಯಿಂದ ಕೂಡಿರುವುದು ಸಹಜ. ಆದರೆ ಬಹುಕಾಲಿಕವಾಗಿ ಹಗಲುನಿದ್ರೆ, ರಾತ್ರಿ ಚಟುವಟಿಕೆಗಳನ್ನೇ ರೂಢಿಸಿಕೊಂಡಿರುವವರಲ್ಲಿ ಮೇಲಿನ ಶರೀರ ಕ್ರಿಯಾವೈಶಿಷ್ಟ್ಯಗಳೂ ಹಗಲಿನಲ್ಲಿ (ಅಂದರೆ ಅವರ ನಿದ್ರಾಕಾಲದಲ್ಲಿ) ಕಂಡುಬರುವುದೇ ಹೊರತು ರಾತ್ರಿ ಅಲ್ಲ.

ವ್ಯಕ್ತಿ ನಿಜವಾಗಿ ನಿದ್ರಿಸುತ್ತಿದ್ದಾನೋ ಅಥವಾ ನಿದ್ರೆಯ ಸೋಗು ಹಾಕಿದ್ದಾನೋ ಎನ್ನುವುದನ್ನು ಇಇಜಿಯಿಂದ ಪತ್ತೆ ಮಾಡಬಹುದು. ಮಿದುಳಿನ ವಿದ್ಯುತ್ ಪರಿಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ಇದರಿಂದ ದಾಖಲಿಸಿ ವಿಶದವಾಗಿ ಪರಿಶೀಲಿಸಬಹುದು. ವ್ಯಕ್ತಿ ಬದುಕಿರುವಷ್ಟು ಕಾಲವೂ ಮಿದುಳಿನಲ್ಲಿ ನಿರಂತರವಾಗಿ ಜೈವಿಕ ಚಟುವಟಿಕೆಗಳು ನಡೆಯುತ್ತಿರುವುವು. ನಿದ್ರಾಕಾಲದಲ್ಲಿ ಇವು ಕಡಿಮೆ. ಎಚ್ಚತ್ತಿರುವ ಕಾಲದಲ್ಲಿ ಹೆಚ್ಚು ಅಷ್ಟೆ. ಇವುಗಳ ಫಲವಾಗಿ ಮಿದುಳಲ್ಲಿಯ ವಿದ್ಯುತ್ ಪರಿಸ್ಥಿತಿಯಲ್ಲಿ ಬದಲಾವಣೆಗಳು ನಿರಂತರವಾಗಿ, ಆದರೆ ಚಟುವಟಿಕೆಯ ಮಟ್ಟಕ್ಕೆ ಅನುಸಾರವಾಗಿ ಕಂಡುಬರುತ್ತವೆ. ದೈನಂದಿನ ಕಾರ್ಯಕಲಾಪಗಳಲ್ಲಿ ತೊಡಗಿರುವಾಗ ಸೆಕೆಂಡಿಗೆ ಸುಮಾರು 15 ಸ್ಪಂದಗಳನ್ನು ತೋರುವ, ಹಗಲು ವಿಶ್ರಮಿಸುತ್ತ ಎಚ್ಚರವಾಗೇ ಇರುವಾಗ ಸುಮಾರು 10-12 ಸ್ಪಂದಗಳನ್ನು ತೋರುವ ಮತ್ತು ನಿದ್ರಿಸುತ್ತಿರುವಾಗ 5-10 ಸ್ಪಂದಗಳನ್ನು ತೋರುವ ವಿದ್ಯುತ್ ವ್ಯತ್ಯಾಸಗಳು ಉಂಟಾಗುವುವೆಂಬುದು ಇಇಜಿಯಿಂದ ವಿಶದವಾಗುವುವು. ಇಇಜಿಯ ಬಳಕೆ ರೂಢಿಗೆ ಬಂದ ಬಳಿಕ ನಿದ್ರೆಯ ವಿಷಯವಾಗಿ ಅರಿವು ಹೆಚ್ಚಾಗಿದೆ. ಎಚ್ಚರಾದ ಸ್ಥಿತಿಯಲ್ಲಿರಲು ಮಿದುಳು ಕಾಂಡದ ತಿರುಳಿನಲ್ಲಿ (ಕೋರ್ ಆಫ್ ದಿ ಬ್ರೇಯ್ನ್ ಸ್ಟೆಮ್) ನಿರ್ದಿಷ್ಟ ಭಾಗವೊಂದು ಪ್ರಚೋದನೆಗೊಳ್ಳುತ್ತಲೇ ಇರಬೇಕಾದುದು ಅಗತ್ಯ ಎಂಬುದು ಈಗ ತಿಳಿದು ಬಂದಿದೆ. ಮಿದುಳಿನ ಈ ಭಾಗಕ್ಕೆ ನರಸಂಪರ್ಕ ತಪ್ಪಿಹೋದರೆ ವ್ಯಕ್ತಿಯ ಕಣ್ಣು ಕಿವಿಗಳೂ ಅವನ್ನು ಮಹಾಮಸ್ತಿಷ್ಕಕ್ಕೆ ಸಂಪರ್ಕಿಸುವ ನರಗಳೂ ಮಾಮೂಲಾಗಿ ಕೆಲಸ ಮಾಡುತ್ತ ಅಗಾಧ ಮೊತ್ತದಲ್ಲಿ ದ್ಯುತಿ ಮತ್ತು ಶಬ್ದಸಂವೇದಗಳನ್ನು ಮಿದುಳಿಗೆ ಒಯ್ಯುತ್ತಿದ್ದರೂ ನಿದ್ರಾವಸ್ಥೆಯಲ್ಲಿರುವ ವ್ಯಕ್ತಿಯನ್ನು ಎಚ್ಚರಿಸುವುದು ಅಸಾಧ್ಯ. ಇದಕ್ಕೆ ವಿರುದ್ಧವಾಗಿ ಮಿದುಳುಕಾಂಡಕ್ಕೆ ನರಸಂಪರ್ಕವಿದ್ದು ಮಹಾಮಸ್ತಿಷ್ಕಕ್ಕೆ ನರಸಂಪರ್ಕ ತಪ್ಪಿಹೋಗಿದ್ದರೆ ಶಬ್ದ ಮಾಡಿದಾಗ ವ್ಯಕ್ತಿ (ಅಂದರೆ ಪ್ರಯೋಗಕ್ಕಾಗಿ ಬಳಸಿದ ಬೆಕ್ಕು, ನಾಯಿ ಇತ್ಯಾದಿ) ಎಚ್ಚೆತ್ತು ಓಡುತ್ತದೆ. ಆದರೆ ಅದಕ್ಕೆ ಎಲ್ಲಿ, ಹೇಗೆ ಓಡಿ ಹೋಗಬೇಕೆಂಬ ಅರ್ಥವತ್ತಾದ ತಪಶೀಲುಗಳು ತಿಳಿಯವು. ಮಿದುಳು ಕಾಂಡದ ತಿರುಳು ಬಲು ಒತ್ತಾದ ಜಾಲಂದ್ರದಂತಿರುವುದರಿಂದ ಅದಕ್ಕೆ ಜಾಲಂದ್ರ ರಚನೆಯ ತಿರುಳು (ರೆಟಿಕ್ಯುಲರ್ ಕೋರ್, ರೆಟಿಕ್ಯುಲರ್ ಫಾರ್ಮೇಶನ್) ಎಂದೇ ಹೆಸರು. ಮಾನವರಲ್ಲಿ ಹಾಗೂ ಪ್ರಾಣಿಗಳಲ್ಲಿ ಎಚ್ಚರ ಸ್ಥಿತಿಯ ಸ್ವಾಭಾವಿಕತೆಗೆ ಈ ಭಾಗದ ಚಟುವಟಿಕೆಯೇ ಕಾರಣ. ಪರಿಸರದ ಪರಿಸ್ಥಿತಿಯಲ್ಲಿ ಪ್ರತಿಕ್ರಿಯೆ ತೋರಬೇಕಾದಂಥ ಬದಲಾವಣೆ ಆದಲ್ಲಿ ಅದರಿಂದ ಉದ್ಭವಿಸಿದ ವಿವಿಧ ಸಂವೇದನೆಗಳು ಮಿದುಳಿನ ಕಾಂಡದ ಈ ಭಾಗವನ್ನು ಅಧಿಕವಾಗಿ ಪ್ರಚೋದಿಸುತ್ತವೆ. ಅದರ ಫಲವಾಗಿ ಇಇಜಿಯಲ್ಲಿ ಎಚ್ಚರಿಕೆ ಹಾಗೂ ಚಟುವಟಿಕೆ ಸ್ಥಿತಿಯನ್ನು ಸೂಚಿಸುವ ವೇಗ ದರದ ಸಣ್ಣ ಸ್ಪಂದಗಳು ಕಂಡುಬರುತ್ತವೆ. ಬದಲಾವಣೆ ಒಂದು ಅಗಣನೀಯ ಪರಿಸ್ಥಿತಿ ಆಗಿದ್ದರೆ ಮಿದುಳಿನ ಕಾಂಡ ಹೆಚ್ಚಾಗಿ ಪ್ರಚೋದಿತವಾಗದು. ಆದ್ದರಿಂದ ಇಇಜಿಯಲ್ಲಿ ಎಚ್ಚರಿಕೆ ಸೂಚಿಸುವ ಸ್ಪಂದಗಳು ಮಾತ್ರ ಕಂಡುಬರುತ್ತದೆ. ನಿದ್ರೆ ಲಘುವಾಗಿದೆಯೋ ಗಾಢವಾಗಿದೆಯೋ ಸ್ವಪ್ನಯುಕ್ತವೋ ಎನ್ನುವ ಮಾಹಿತಿಗಳೂ ಈ ಸ್ಪಂದಗಳಿಂದ ದೊರೆಯುತ್ತವೆ. ಸ್ವಪ್ನರಹಿತ ನಿದ್ರೆಯಲ್ಲಿ ಸ್ಪಂದಗಳು ಮಂದದರದವೂ ದೊಡ್ಡವೂ ಆಗಿದ್ದರೆ ಸ್ವಪ್ನರಹಿತ ನಿದ್ರೆಯಲ್ಲಿ ರಭಸದರವೂ ಚಿಕ್ಕವೂ (ಹೆಚ್ಚುಕಡಿಮೆ ಎಚ್ಚರದ ಚಟುವಟಿಕೆಯಲ್ಲಿರುವಂತೆ) ಆಗಿರುವುವು. ಇದೇ ಕಾಲದಲ್ಲಿ ಮುಚ್ಚಿದ ರೆಪ್ಪೆಯೊಳಗೇ ಇರುವ ಕಣ್ಣುಗುಡ್ಡೆ ಅತ್ತಿಂದಿತ್ತ ಬಲು ಬೇಗ ಬೇಗ ಚಲಿಸುವುದೂ ಕಂಡುಬರುತ್ತದೆ. ಯುಕ್ತ ಸಲಕರಣೆಗಳಿಂದ ಕಣ್ಣುಗುಡ್ಡೆಯ ಇಂಥ ಚಲನೆಗಳನ್ನು ಲೇಖಿಸಲೂಬಹುದು. ನಿದ್ರಿಸುತ್ತಿದ್ದರೂ ಕಣ್ಣುಗುಡ್ಡೆಗಳನ್ನು ಬೇಗಬೇಗನೆ ಚಲಿಸುತ್ತಿರುವ ಹಾಗೂ ಎಚ್ಚೆತ್ತ ಸ್ಥಿತಿಯಲ್ಲಿರುವಂಥ ಸ್ಪಂದಗಳನ್ನು ಇಇಜಿಯಲ್ಲಿ ಉಂಟುಮಾಡುತ್ತಿರುವ ಇಂಥ ನಿದ್ರಾಸ್ಥಿತಿಗೆ ವಿರೋಧಾಭಾಸ ನಿದ್ರೆ (ಪ್ಯಾರಡಾಕ್ಸಿಕಲ್ ಸ್ಲೀಪ್, ರ್ಯಾಪಿಡ್ ಐ ಮೂವ್‍ಮೆಂಟ್-ಆರ್ ಇಎಮ್ ಸ್ಲೀಪ್) ಎಂದು ಹೆಸರು. ಇಂಥ ನಿದ್ರೆಯಿಂದ ಬಲವಂತವಾಗಿ ಎಚ್ಚರಿಸಲ್ಪಟ್ಟವ ತಾನು ಕನಸು ಕಾಣುತ್ತಿದ್ದೆನೆಂದು ಸಾಮಾನ್ಯವಾಗಿ ಹೇಳುತ್ತಾನೆ. ನಾಯಿ ಬೆಕ್ಕು ಮುಂತಾದ ಪ್ರಾಣಿಗಳಲ್ಲೂ ಇಂಥ ವಿರೋಧಾಭಾಸನಿದ್ರೆ ಇರುತ್ತದೆ. ನಿದ್ರೆ ಮಾಡುತ್ತಿರುವಂತೆಯೇ ಅವುಗಳ ಬಾಲಮೀಸೆಗಳ ಚಲನೆ, ಮುಖಸ್ನಾಯುಗಳ ತುಡಿತ ಕಂಡುಬರುವುದರಿಂದ ಬಹುಶಃ ಅವೂ ಕನಸು ಕಾಣುತ್ತವೆಂದು ತೋರುತ್ತದೆ.

ಬಲಾತ್ಕಾರವಾಗಿ ಒಂದು ಪ್ರಾಣಿಗೆ ನಿದ್ರೆ ಬರುವಂತೆ ಮಾಡಬಹುದು. ರಷ್ಯದ ಪ್ರಸಿದ್ಧ ಶರೀರಕ್ರಿಯಾವಿಜ್ಞಾನಿ ಪಾವ್ಲಾವ್ ಎಂಬಾತ ಬೇಜಾರುಬರಿಸುವಂಥ ಪ್ರಚೋದನೆಗಳನ್ನು ಇನ್ನೂ ಬೇಜಾರಾಗುವಂತೆ ಪದೇ ಪದೇ ಪ್ರಯೋಗಿಸಿ ನಾಯಿಗಳಲ್ಲಿ ನಿದ್ರೆಬರಿಸಬಹುದೆಂದು ತೋರಿಸಿದ. ಪದೇ ಪದೇ ಉದ್ಭವಿಸುವ ಒಂದೇ ರೀತಿಯ ಪ್ರಚೋದನೆ ಮಿದುಳುಕಾಂಡದಲ್ಲಿ ಮಿಕ್ಕ ಪ್ರಚೋದನೆಗಳಂತೆ ಪ್ರತಿಕ್ರಿಯೆಯನ್ನು ಪ್ರೇರಿಸುವುದಿಲ್ಲ. ಅದಕ್ಕೆ ಬದಲಾಗಿ ಮಿದುಳಿನಲ್ಲ್ಲಿ ಈ ಪ್ರಚೋದನೆಗಳು ಬೇಜಾರು ಪ್ರತಿಕ್ರಿಯೆಯನ್ನು ಉಂಟುಮಾಡಿ ಅದರ ಕ್ರಿಯಾಮಟ್ಟವನ್ನು ತಗ್ಗಿಸುತ್ತವೆ. ಇವೆರಡು ಕಾರಣಗಳಿಂದ ಇಂಥ ಪ್ರಚೋದನೆಗಳು ನಿದ್ರೆ ಬರಿಸುವುವು. ಮಸ್ತಿಷ್ಕದಲ್ಲಿ ವ್ಯಾಪಕವಾಗಿ ಕ್ರಿಯಾಮಟ್ಟ ತಗ್ಗಿದ್ದರೆ ಈ ಮೇಲೆ ಹೇಳಿದಂತೆ ನಿದ್ರೆ ಬರುವುದು. ಅದಿಲ್ಲದೆ ಮಿದುಳಿನ ನಿರ್ದಿಷ್ಟ ಸ್ಥಳಗಳಲ್ಲಿ ಅಲ್ಲಲ್ಲಿ ಮಾತ್ರ ಕ್ರಿಯಾ ಮಟ್ಟ ತಗ್ಗಿದ್ದರೆ ಉನ್ಮಾದಸುಪ್ತಸ್ಥಿತಿ (ಹಿಪ್ನಾಟಿಕ್ ಸ್ಟೇಟ್)ಉಂಟಾಗುತ್ತದೆ. ಎಂಬುದಾಗಿ ಪಾವ್ಲಾವ್ ವಿಶದೀಕರಿಸಿದ್ದಾನೆ. ಅಂದರೆ ಪಾವ್ಲಾವನ ಪ್ರಕಾರ ವಶ್ಯಸುಪ್ತಸ್ಥಿತಿ ಎಚ್ಚರ ಸ್ಥಿತಿಗೂ ನಿದ್ರಾಸ್ಥಿತಿಗೂ ಮದ್ಯಸ್ಥ. ಆದ್ದರಿಂದ ಇಂಥ ಸ್ಥಿತಿ ಇಇಜಿಯಲ್ಲಿ ಕೆಲವು ವೇಳೆ ಎಚ್ಚತ್ತಿರುವ ಸ್ಥಿತಿಯಲ್ಲಿ ಇರುವಂಥ, ಕೆಲವು ವೇಳೆ ನಿದ್ರಾಸ್ಥಿತಿಯಲ್ಲಿ ಇರುವಂಥ ಸ್ಪಂದಗಳಾಗಿ ಕಂಡುಬರುತ್ತದೆ.

ಬೇಜಾರು ಬರಿಸುವ ಪ್ರಚೋದನೆಗಳು ಮಸ್ತಿಷ್ಕದಲ್ಲಿ ಕ್ರಿಯಾಮಟ್ಟವನ್ನು ತಗ್ಗಿಸುವುದರಿಂದ ಮತ್ತು ಅದರ ಫಲವಾಗಿ ನಿದ್ರೆ ಹತ್ತುವಂತೆ ಮಾಡುವುದರಿಂದ ಅವು ವ್ಯಕ್ತಿಗೆ ಅನುಕೂಲವಾದವೇ ಸರಿ. ಎಚ್ಚರವಾಗಿದ್ದ ಕಾಲದಲ್ಲಿ ಜೀವನನಿರ್ವಹಣೆಗಾಗಿ ಕೈಗೊಂಡ ಚಟುವಟಿಕೆಗಳ ಫಲವಾಗಿ ಶಿಥಿಲಗೊಂಡು ದುರ್ಬಲವಾದ ದೇಹಭಾಗಗಳು ನಿದ್ರಾಕಾಲದಲ್ಲಿ ದುರಸ್ತಿಗೊಂಡು ಬಲಯುತವಾಗುವ ಸಾಧ್ಯತೆಯನ್ನು ಗಮನಿಸತಕ್ಕದ್ದು. ಅರ್ಥಾತ್ ಎಚ್ಚೆತ್ತಿರುವ ಕಾಲದಲ್ಲಿ ಅವಶ್ಯ ಹಾಗೂ ಸಹಜ ಚಟುವಟಿಕೆಗಳು ತಪ್ಪದಿರಬೇಕಾದರೆ ನಿದ್ರೆ (ಚಟುವಟಿಕೆ ಸ್ಥಗಿತವಾದ ಸ್ಥಿತಿ) ನಿಯಮಿತವಾಗಿ ಒದಗಿ ಬರುವಂತೆ ಇರಲೇಬೇಕು.

ನಿದ್ರಾಕಾರಿಗಳು : ಇವು ನರಮಂಡಲದ ಮೇಲೆ ಪ್ರಭಾವ ಬೀರಿ ವ್ಯಕ್ತಿಗೆ ನಿದ್ರೆಹತ್ತುವಂತೆ ಮಾಡುವ ವಸ್ತುಗಳು (ಹಿಪ್ನಾಟಿಕ್ಸ್). ಅಫೀಮಿನಲ್ಲಿರುವ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳು ನಿದ್ರೆ ಬರಿಸುವುದಲ್ಲದೆ ನೋವನ್ನೂ ಮರೆಸುವುವು. ಮಿಕ್ಕ ನಿದ್ರಾಕಾರಿಗಳು ನೋವನ್ನು ಮರೆಸಲಾರವು ಮತ್ತು ನೋವಿರುವಾಗ ಅವನ್ನು ಉಪಯೋಗಿಸಿದರೆ ನಿದ್ರೆಯನ್ನು ಬರಿಸಲೂ ಆರವು. ನೋವು ಮರೆಸುವ ವಸ್ತುವಿನೊಂದಿಗೆ ಅವನ್ನು ಉಪಯೋಗಿಸಿದರೆ ಮಾತ್ರ ನಿದ್ರೆ ಬಂದೀತಷ್ಟೆ. ಉಪಯೋಗದಲ್ಲಿರುವ ನಿದ್ರಾಕಾರಿಗಳು ಬೆಂಜೋಡೈಯಾಜೆಪೀನ್ಸ್ ಇದನ್ನು ವೈದ್ಯರ ಮಾರ್ಗದರ್ಶನದಲ್ಲಿ ಸ್ವಲ್ಪಕಾಲ ಸುರಕ್ಷಿತವಾಗಿ ಸೇವಿಸಬಹುದು. ಗುಂಪಿಗೆ ಸೇರಿದವು. ಅಸಾಧ್ಯವಾದ ನೋವಿನಿಂದ ನರಳುವವನಿಗೆ ಮತ್ತು ಇನ್ನು ಹೆಚ್ಚು ಕಾಲ ಬದುಕಲಾರದಂಥ ರೋಗಿಗೆ (ಏಡಿಗಂತಿ ರೋಗಿ) ಮಾರ್ಫಿನ್ ಅಥವಾ ಪೆಥಿಡಿನ್ ಕೊಡುವುದು ರೂಢಿ. ಮಾರ್ಫಿನ್ ಮತ್ತು ಅಫೀಮಿಗೆ ಸಂಬಂಧಿಸಿದ ಇತರ ವಸ್ತುಗಳನ್ನು ಪದೇ ಪದೇ ಉಪಯೋಗಿಸುತ್ತ ಬಂದರೆ ಅವು ಚಟವಾಗುವುದರ ಜೊತೆಗೆ ಅವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಬೇಕು ಎಂದೂ ಅನ್ನಿಸುವುದು. ಇದರಿಂದ ಅವನ್ನು ಸೇವಿಸುವವನಿಗೂ ಸಮಾಜಕ್ಕೂ ಕೇಡು ಉಂಟಾಗುತ್ತದೆ. ಆದರೆ ನೋವಿನಿಂದ ನಿದ್ರೆಗೇಡಾಗುತ್ತಿದ್ದರೆ ಇದರ ಹೊರತು ಅನ್ಯ ಮಾರ್ಗ ಇಲ್ಲ. ಮಲಗುವ ಮೊದಲು ಯೋಗ, ಧ್ಯಾನ, ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಮಾಡಿ, ಸಹಜ ನಿದ್ರೆ ಬರುತ್ತದೆ.

ನಿದ್ರಾವೈಪರೀತ್ಯಗಳು. 1. ಅತೀವ ನಿದ್ರೆ: ಸಾಮಾನ್ಯವಾಗಿ ಎಚ್ಚರವಾಗಿರುವ ವೇಳೆಗಳಲ್ಲಿ ಇದ್ದಕ್ಕಿದ್ದಂತೆ ತಡೆಯಲಾರದ ನಿದ್ರೆಹತ್ತಿಬರುವ ಅವಸ್ಥೆ (ನಾರ್ಕೊಲೆಪ್ಸಿ). ಇದರಲ್ಲಿ ಎರಡು ಮೂಲವಿಧಗಳನ್ನು ಗುರುತಿಸಬಹುದು. ಮೊದಲನೆಯದು ಸಹಜವಾದ ನಿದ್ರೆಯನ್ನು ಹೋಲುವ ವಿಧ. ಇದು ಯಾವಾಗಲಾದರೂ ಎಲ್ಲಿಯಾದರೂ ಬರಬಹುದು. ಉದಾಹರಣೆಗೆ ಊಟವಾದ ಬಳಿಕ, ಅಧಿಕ ದೈಹಿಕಾಯಾಸಾನಂತರ, ವಾಹನಗಳಲ್ಲಿ ಪ್ರಯಾಣ ಮಾಡುತ್ತಿರುವಾಗ ಅಥವಾ ಬೇಸರ ತರುವ ಉಪನ್ಯಾಸ, ಪಾಠ ಅಥವಾ ಭಾಷಣವನ್ನು ಕೇಳುವಾಗ ಇತ್ಯಾದಿ. ನಿದ್ರೆ ಹೋಗುವ ಮುನ್ನ ವ್ಯಕ್ತಿಗೆ ಅತಿಯಾದ ತೂಕಡಿಕೆ ಹತ್ತಿ ನಿದ್ರಿಸಲೇಬೇಕೆಂಬ ಹತ್ತಿಕ್ಕಲಾರದ ಬಯಕೆ ಆಗುತ್ತದೆ. ಕೆಲವೇ ಸೆಕೆಂಡುಗಳ ಕಾಲದಿಂದ ಹಿಡಿದು ಒಂದು ಗಂಟೆಗೂ ಮೀರಿದ ತರುವಾಯ ವ್ಯಕ್ತಿ ಸ್ವಾಭಾವಿಕ ನಿದ್ರೆಯಲ್ಲಿದ್ದಂತೆಯೇ ಎಚ್ಚರಾಗುವುದು ಸಾಮಾನ್ಯ. ಬೇರೆಯವರು ಎಚ್ಚರಿಸಿದರೆ, ಇಲ್ಲವೇ ಹಠಾತ್ ನಿಶ್ಶಬ್ದ ಉಂಟಾದರೆ ಇಲ್ಲವೇ ಜೋರಾದ ಶಬ್ದವಾದರೆ ಎಚ್ಚರಿಕೆ ಆಗುವುದೂ ಈ ಸ್ಥಿತಿಗಳಲ್ಲಿ ನೈಸರ್ಗಿಕವಾಗಿ ಎಚ್ಚರಿಕೆಗೊಳ್ಳುವಂತೆಯೇ ಇರುವುದು. ದಿವಸದಲ್ಲಿ ಅನೇಕಬಾರಿ ಈ ಅವಸ್ಥೆ ಉಂಟಾಗುವುದು. ರಾತ್ರಿ ನಿದ್ರೆಯ ಮೇಲೆ ಇದರ ಪ್ರಭಾವ ಇರುವುದಿಲ್ಲವಾದರೂ ರಾತ್ರಿ ನಿದ್ರೆಗೆಟ್ಟರೆ ಇಂಥ ನಿದ್ರೆ ಹೆಚ್ಚಿಗೆ ಬರುವುದು ಸಾಮಾನ್ಯ. ಅತೀವ ನಿದ್ರೆಯಿಂದ ಎಚ್ಚೆತ್ತ ಬಳಿಕ ವ್ಯಕ್ತಿ ಯಾವ ಬದಲಾವಣೆಯನ್ನೂ ತೋರುವುದಿಲ್ಲ. ಸಾಮಾನ್ಯವಾಗಿ ಆತ ತನಗೆ ನಿದ್ರೆ ಬಂದಿತ್ತೆಂದು ಹೇಳಬಹುದು ಅಷ್ಟೆ.

2. ಕೆಟಪ್ಲೆಕ್ಸಿ : ಹಠಾತ್ತಾಗಿ ಅತೀವ ದುರ್ಬಲತೆ ಉಂಟಾಗಿ ಐಚ್ಛಿಕ ಸ್ನಾಯುಗಳ ಸತ್ತ್ವಕುಂದಿ ವ್ಯಕ್ತಿ ಕುಸಿಯುವುದು ಈ ಅವ್ಯವಸ್ಥೆಯ ವೈಶಿಷ್ಟ್ಯ. ಕೋಪ, ಸಂತೋಷ, ಆಶ್ಚರ್ಯ, ನಗು ಮುಂತಾದ ಮಾನಸಿಕ ಉದ್ವೇಗಗಳು ಹಠಾತ್ತಾಗಿ ಉಂಟಾದಾಗ ಕೆಟಪ್ಲೆಕ್ಸಿ ಸಂಭವಿಸಬಹುದು. ಈ ಪ್ರತಿಕ್ರಿಯೆ ಉಗ್ರವಾಗಿರುವ ಸಂದರ್ಭಗಳಲ್ಲಿ ಸ್ನಾಯುಗಳ ಸತ್ತ್ವ ಕುಂದುತ್ತದೆ. ತಲೆ ಮುಂದಕ್ಕೆ ಬಿದ್ದು, ದವಡೆ ಜೋತು ಕಣ್ಣೆವೆಗಳು ಮುಚ್ಚಿ ಮುಖ ಭಾವರಹಿತವಾಗುವುದಲ್ಲದೆ ಕೈಗಳು ಪಕ್ಕದಲ್ಲಿ ಜೋತುಬಿದ್ದು ಕಾಲುಗಳು ಕುಸಿದು ವ್ಯಕ್ತಿ ಜಡವಸ್ತುವಿನಂತೆ ಕೆಳಕ್ಕೆ ಬೀಳುವನು. ಮಾತಿಲ್ಲದವನಾಗಿ ಗಾಢನಿದ್ರಿತನಂತಿರುತ್ತಾನೆ. ಇವನಿಗೆ ಜ್ಞಾನ ತಪ್ಪಿರುವುದಿಲ್ಲ. ಆದರೂ ಅಲ್ಪಸ್ವಲ್ಪ ಹಂದಾಡುವುದೂ ಇಲ್ಲ. ಕಾರಣ ಅಷ್ಟು ನಿಶ್ಶಕ್ತನಾಗಿರುವನು. ಸ್ವಲ್ಪ ಗಳಿಗೆಗಳ ಬಳಿಕ ಫಕ್ಕನೆ ತನ್ನ ಮೊದಲಿನ ಸ್ಥಿತಿಗೆ ಬರುತ್ತಾನೆ. ರೋಗಯುಕ್ತ ವ್ಯಕ್ತಿಯ ದೈಹಿಕ ರಚನೆಯಲ್ಲಿ ಯಾವ ವೈಲಕ್ಷಣ್ಯಗಳು ಕಂಡುಬರುವುದಿಲ್ಲ. ಈ ರೋಗ ಹೆಂಗಸರಿಗಿಂತ ಗಂಡಸರಲ್ಲಿ ಹೆಚ್ಚು ಸಾಮಾನ್ಯ. 10-30 ವಯಸ್ಸಿನೊಳಗಿರುವ ವ್ಯಕ್ತಿ ಇದಕ್ಕೆ ತುತ್ತಾಗುವುದು ವಾಡಿಕೆ. ಹೈಪೋತೆಲಮಸ್ಸಿನ ಕಾಯಿಲೆ ಮಿದುಳಿನ ಉರಿಊತ (ಎನ್‍ಕಿಫಲೈಟಿಸ್) ಮತ್ತು ಸಿಫಿಲಿಸ್ ರೋಗ ಮುಂತಾದ ವ್ಯಾಧಿ ಸನ್ನಿವೇಶಗಳಲ್ಲಿಯೂ ಮಿದುಳಿಗೆ ಪೆಟ್ಟು ಇಲ್ಲವೇ ಸನ್ನಿ ಹೊಡೆತದ ಸಂದರ್ಭದಲ್ಲಿಯೂ ಅತೀವ ನಿದ್ರೆ ಉಂಟಾಗಬಹುದು. ಅತೀವ ನಿದ್ರಾಸ್ಥಿತಿಗೂ ಮೂರ್ಛಾರೋಗಕ್ಕೂ ಬಹುಶಃ ಏನೂ ಸಂಬಂಧ ಇಲ್ಲ.

3. ನಿದ್ರಾಸಂಚಾರ : ಮಿದುಳಿನ ವಿಕಾರಕ್ರಿಯೆಯಿಂದ ವ್ಯಕ್ತಿ ನಿದ್ರೆಯಲ್ಲಿ ನಡೆದಾಡುವ ಅಥವಾ ಇತರ ಕೆಲಸ ಮಾಡುವ ಸ್ಥಿತಿ (ಸೊಮ್ನ್ಯಾಂಬ್ಯುಲಿಸಮ್). ರಾತ್ರಿ ಕಾಲದಲ್ಲಿ ಮಲಗಿ ನಿದ್ರೆ ಹೋದ ಮೇಲೆ ಗೋಚರಿಸುವ ಈ ತೊಂದರೆ ತೀರ ಅಪರೂಪವೇನಲ್ಲ. 1%-6% ರಷ್ಟು ಜನರಲ್ಲಿ ಹೆಚ್ಚಾಗಿ ಗಂಡಸರಲ್ಲಿ ಅದರಲ್ಲೂ ಮಕ್ಕಳಲ್ಲಿ ಇದು ಕಂಡುಬರುವುದೆಂದು ತಿಳಿದಿದೆ. ಅನೇಕ ಬಾರಿ ಅವರ ಮನೆತನದ ಇತಿಹಾಸವನ್ನು ಪರಿಶೀಲಿಸಿದಾಗ ಇತರರಲ್ಲಿ ಆ ದೋಷವಿರುವುದು ಗೋಚರಿಸಬಹುದು. ನಿದ್ರಾಸಂಚಾರ ಕನಸಿನ ಪ್ರಭಾವದಿಂದ ಆಗುವುದೆಂಬ ಸಾಮಾನ್ಯ ತಿಳಿವಳಿಕೆಗೆ ಯಾವ ಆಧಾರವೂ ಇಲ್ಲ. ವ್ಯಕ್ತಿ ನಿದ್ರೆ ಹೋದ ಪ್ರಾರಂಭದ ಕೆಲವು ಗಂಟೆಗಳ ತರುವಾಯ ಹಾಸಿಗೆಯಿಂದ ಎದ್ದು ಅಭ್ಯಾಸಗತ ಚಲನೆಯನ್ನು ತೋರ್ಪಡಿಸುತ್ತಾನೆ. ಕಣ್ಣು ತೆರೆದು ಯಾವ ಭಾವ ಪ್ರದರ್ಶನವೂ ಇಲ್ಲದೆ ತನ್ನ ಪರಿಸರದ ಬಗ್ಗೆ ಯಾವ ಲಕ್ಷ್ಯವನ್ನೂ ಹರಿಸದೆ ಓಡಾಡುತ್ತಾನೆ. ಬಾಗಿಲು ತೆರೆದು ಹೊರಹೋಗಬಲ್ಲ, ಮೆಟ್ಟಿಲು ಇಳಿಯಬಲ್ಲ, ಅನೇಕ ಕ್ಲಿಷ್ಟತರ ಕಾರ್ಯಗಳನ್ನು ಕೈಗೊಳ್ಳಬಲ್ಲ, ಬೆರಯಬಲ್ಲ ಕೂಡ. ಕೆಲಬಾರಿ ಕೊಲೆಮಾಡಿದ ಉದಾಹರಣೆಗಳು ಇವೆ. ಇವೆಲ್ಲವೂ ಕೆಲವೊಂದು ಕ್ಷಣಗಳ ಕಾಲಾವಧಿಯಲ್ಲಿ ಜರಗಿಹೋಗಿರುತ್ತವೆ. ಬೆಳಿಗ್ಗೆ ಎದ್ದಮೇಲೆ ಆ ವ್ಯಕ್ತಿಗೆ ಹಿಂದಿನ ರಾತ್ರಿ ನಡೆದ ಘಟನೆಗಳ ಬಗ್ಗೆ ಯಾವುದೇ ನೆನಪು ಉಳಿದಿರುವುದಿಲ್ಲ. ಮಕ್ಕಳಲ್ಲಿ ಮತ್ತು ಹರೆಯದವರಲ್ಲಿ ಗೋಚರಿಸುವ ನಿದ್ರಾಸಂಚಾರ ಕೆಲವು ವರ್ಷಗಳ ತರುವಾಯ ದೂರವಾಗುತ್ತದೆ. ವಯಸ್ಕರಲ್ಲಿ ಅದು ಮಾನಸಿಕ ಸ್ಥಿತ್ಯಂತರದ ಫಲವಾಗಿ ತೋರಿಬರುತ್ತದೆ. ಕೆಲವೊಂದು ದೈಹಿಕ ಕ್ರಿಯೆಗಳ ನಿರ್ದೇಶಕ ಸ್ಥಾನಗಳು ಇಂಥ ಕಾಲದಲ್ಲಿ ವ್ಯಕ್ತಿಯ ಸಾಮಾನ್ಯ ಪ್ರಜ್ಞೆಯ ನಿಯಂತ್ರಣದಿಂದ ಬೇರ್ಪಟ್ಟು ಸ್ವತಂತ್ರ ನಿರ್ದೇಶಕ ಸ್ಥಾನದಂತೆ ಪ್ರಚೋದನೆ ನೀಡುವುದರಿಂದ ಈ ಕಾರ್ಯ ಚಟುವಟಿಕೆ ತೋರಿಬರುತ್ತದೆಂದು ಮನೋರೋಗತಜ್ಞರ ಅಭಿಪ್ರಾಯ. ನಿದ್ರಾಸಂಚಾರದಿಂದ ವ್ಯಕ್ತಿಗೆ ತಾಗಬಹುದಾದ ಪೆಟ್ಟು, ಗಾಯಗಳಿಂದ ಆತನಿಗೆ ರಕ್ಷಣೆ ಒದಗಿಸುವುದು ಮುಖ್ಯ. ಮುಂಜಾಗರೂಕತೆಯ ಕ್ರಮವಾಗಿ ಕೊಠಡಿಯ ಬಾಗಿಲು ಕಿಟಕಿಗಳನ್ನು ಭದ್ರಪಡಿಸುವುದು ಮತ್ತು ಅಪಾಯಕಾರಿ ವಸ್ತುಗಳನ್ನು ತೆಗೆದಿರಿಸುವುದು ಅಗತ್ಯ. ಎಳೆಯರು ವಯಸ್ಸಾದಂತೆ ಈ ರೋಗದಿಂದ ಮುಕ್ತರಾಗಬಲ್ಲರಾದ್ದರಿಂದ ಅವರಿಗೆ ಯಾವುದೇ ಮಾನಸಿಕ ಚಿಕಿತ್ಸೆ ಅಗತ್ಯವಿಲ್ಲ. ವಯಸ್ಕರಲ್ಲಿ ಮಾನಸಿಕ ವ್ಯತ್ಯಯ ಸಾಮಾನ್ಯವಾದ್ದರಿಂದ ಅದನ್ನು ಅಭ್ಯಸಿಸಿ ಚಿಕಿತ್ಸೆ ನೀಡಬೇಕು.

ನಿದ್ರಾನಡಿಗೆಯು ಅಪಸ್ಮಾರದ ಒಂದು ವಿಭಾಗವಾಗಬಹುದು. ಮಿದುಳಿನ ಮುಂದಿನ ಹಾಲೆಯ ಹಾನಿಯಿಂದಲೂ ಉಂಟಾಗಬಹುದು. ಇದನ್ನು ಆಗ್ರ್ಯಾನಿಕ್ ಸೊಮ್ನಾಂಬುಲೀಸಂ ಎನ್ನುತ್ತಾರೆ. ಈ ಬಗೆಯ ನಿದ್ರಾ ನಡಿಗೆಯಲ್ಲಿ ವ್ಯಕ್ತಿ ಸಂಕೀರ್ಣ ಕೆಲಸಗಳನ್ನು ಮಾಡಲಾರ. ಉದಾಹರಣೆಗೆ ಬಾಗಿಲಿನ ಬೀಗ ತೆಗೆಯುವುದು, ಅಡ್ಡ ಬಂದ ವಸ್ತುವನ್ನು ನಿವಾರಿಸುವುದು, ಈ ಬಗೆಯ ನಿದ್ರಾನಡಿಗೆಗೆ ಚಿಕಿತ್ಸೆಯೇ ಬೇರೆ.

4. ನಿದ್ರಾರಾಹಿತ್ಯ : ನಿದ್ರೆ ಬಾರದ ಪರಿಸ್ಥಿತಿ ಇಲ್ಲವೇ ಸ್ವಾಭಾವಿಕ ನಿದ್ರೆಯ ಮಧ್ಯೆ ಎಚ್ಚರಗೊಂಡು ಮತ್ತೆ ನಿದ್ರೆಬಾರದ ಸನ್ನಿವೇಶ (ಇನ್‍ಸೋಮ್ನಿಯ). ನಿದ್ರಾಹೀನತೆ, ನಿರ್ನಿದ್ರೆ ಎನ್ನವುದೂ ಇದೆ. ಪ್ರತಿಯೊಬ್ಬ ವ್ಯಕ್ತಿಯ ನಿದ್ರೆಯ ಕಾಲಾವಧಿ ಮತ್ತು ಅದರ ಗಾಢತೆ ಇವುಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ದಿನದ ಚಟುವಟಿಕೆಯಿಂದಾದ ದಣಿವಿನಿಂದ ಚೇತರಿಕೊಳ್ಳಲು ನಿದ್ರೆ ಅತ್ಯಗತ್ಯ. ಆದ್ದರಿಂದ ನಿದ್ರೆಗೇಡಿನಿಂದ ಬಲಹೀನತೆ ತೋರಿಬರುತ್ತದಲ್ಲದೆ ವಸ್ತು ಮತ್ತು ವಿಷಯದ ಮೇಲೆ ಕೇಂದ್ರೀಕರಣವನ್ನು ಮಾಡಲಾಗುವುದಿಲ್ಲ. ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ಕಡಿಮೆ ಆಗುವುದು. ತೀರ ಸಾಮಾನ್ಯ ರೋಗಗಳಿಂದ ಹಿಡಿದು ತೀವ್ರ ರೋಗಗಳ ಒಂದು ಗುಣಲಕ್ಷಣವಾಗಿ ನಿರ್ನಿದ್ರೆ ಸಾಮಾನ್ಯವಾಗಿ ತೋರಿಬರುತ್ತದೆಯೇ ವಿನಾ ಸ್ವತಃ ಅದೇ ಒಂದು ರೋಗ ಬಹುಶಃ ಅಲ್ಲ. ನಿದ್ರೆ ಹೋಗಲು ತೊಂದರೆ, ನಿದ್ರೆಯ ಮಧ್ಯದಲ್ಲಿ ಎಚ್ಚರಗೊಳ್ಳುವುದು, ನಿದ್ರೆಯಿಂದ ಬಲು ಬೇಗ ಎಚ್ಚರ ಹೊಂದುವುದು ಅವು ಮೂರು ರೂಪಗಳು ಒಟ್ಟಾಗಿ ಇಲ್ಲವೆ ಬೇರೆ ಬೇರೆಯಾಗಿ ವ್ಯಕ್ತಿಗಳಲ್ಲಿ ಗೋಚರಿಸಬಹುದು. ನೋವು, ದೈಹಿಕತೊಂದರೆಗಳು, ನರಮಂಡಲದ ವ್ಯತ್ಯಯ, ಮಾದಕವಸ್ತು ಸೇವನೆ ಚಟ, ಮಾನಸಿಕ ಕ್ಲೇಶಗಳು ಭಾವೋದ್ವೇಗಗಳು ಇಲ್ಲವೆ ಒತ್ತಡ ಪರಿಸ್ಥಿತಿಯ ಫಲವಾಗಿ ನಿದ್ರೆಗೇಡಾಗಬಹುದು. ನಾಗರಿಕತೆಯ, ಮುನ್ನಡೆಯೊಡನೆ ಲಭಿಸುವ ಬದುಕಿನ ಒತ್ತಡಗಳೂ ನಿದ್ರೆಗೇಡಿಗೆ ಕಾರಣವಾಗಿವೆ. ಪ್ರಚೋದಕಗಳಾದ ಕಾಫಿ, ಟೀ, ಕೋಲಾಗಳ ಹೆಚ್ಚು ಸೇವನೆಯಲ್ಲಿ ಕಾರಣವಾಗಬಹುದು. ಬಹುತೇಕ ಮಾನಸಿಕ ಕಾಯಿಲೆಗಳಲ್ಲಿ ನಿದ್ರಾ ಹೀನತೆ ಅತಿ ಸಾಮಾನ್ಯ ರೋಗ ಲಕ್ಷಣ

ಸರಿಯಾಗಿ ನಿದ್ರೆಬಾರದ ವ್ಯಕ್ತಿಗಳನ್ನು ಬಲು ಸುಲಭವಾಗಿ ನಿದ್ರೆಯಿಂದ ಎಚ್ಚರಗೊಳಿಸಬಹುದು. ನಿದ್ರಾಹೀನತೆಯಿರುವ ವ್ಯಕ್ತಿಗಳು ನಿದ್ರೆ ಹೋಗಲು ಅನೇಕ ಬಾರಿ ನಿದ್ರಾಕಾರಿ ಔಷಧಗಳ ಸೇವನೆಗೆ ಮರೆಹೋಗುವರು. ಅವು ಮಿದುಳ ನಿರ್ದಿಷ್ಟ ಕಣಗಳ ಪ್ರತಿವರ್ತನೆಯ ಮಟ್ಟವನ್ನು ಹೆಚ್ಚಿಸಿ ಇಲ್ಲವೆ ತಗ್ಗಿಸಿ ಅಂದರೆ ಕೆಲವು ಮಿದುಳ ಕೇಂದ್ರಗಳ ಕಾರ್ಯಚಟುವಟಿಕೆಯನ್ನು ಹೆಚ್ಚಿಸಿ ಇಲ್ಲವೇ ಕುಗ್ಗಿಸಿ ನಿದ್ರೆಯನ್ನು ಉಂಟುಮಾಡಬಲ್ಲವು. ಬಾಯಿ ಮೂಲಕ ಸೇವಿಸಿದ ನಿದ್ರಾಕಾರಿಗಳು ಸುಲಭವಾಗಿ ಒಳಹೀರಲ್ಪಟ್ಟು, ಆರೆಂಟು ಗಂಟೆಗಳ ಕಾಲ ತಮ್ಮ ಪ್ರಭಾವವನ್ನು ಬೀರಿ ಎಚ್ಚೆತ್ತ ಮೇಲೆ ನವಚೈತನ್ಯವನ್ನು ಉಂಟುಮಾಡುವಂತಿರಬೇಕು. ಡೈಜೆಪಾಮ್, ನೈಟ್ರಾಜೆಪಾಮ್, ಆಲ್ಟ್ರೋಜೊಲಾಮ್ ಬಲು ಕಾಲದಿಂದ ಬಳಸಲ್ಪಟ್ಟಿವೆ. ಈ ನಿದ್ರಾಕಾರಿಗಳ ಸೇವನೆ ಕೆಲವರಲ್ಲಿ ಚಟವಾಗಿ ಪರಿಣಮಿಸಬಲ್ಲದು. ಹೆಚ್ಚು ಮೊತ್ತದ ಸೇವನೆ ಪೂರ್ಣ ನರಮಂಡಲದ ಕಾರ್ಯಚಟುವಟಿಕೆಯನ್ನು ಕುಗ್ಗಿಸುತ್ತದೆ. ಪ್ರಾರಂಭದಲ್ಲಿ ನಿದ್ರಾಕಾರಿ ಉಪಯುಕ್ತವಾಗಿ ಕಾಣಿಸಿದರೂ ಅನಂತರ ಅದು ತನ್ನ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತದೆ. ಅದರಿಂದಾಗಿ ದೀರ್ಘಾವಧಿ ಕಾಲ ನಿದ್ರಾಕಾರಿಗಳನ್ನು ತೆಗೆದುಕೊಳ್ಳುವವರ ಮೇಲೆ ಔಷಧ ಪರಿಣಾಮ ಸಾಕಷ್ಟು ಹೆಚ್ಚಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಪಕಾಲಿಕ ಬೆಂಜೋಡೈಜಪೀನ್‍ಗಳು ಬಳಕೆಯಲ್ಲಿದ್ದು ಇವು ಸಾಕಷ್ಟು ಸುರಕ್ಷಿತ. ವೈದ್ಯರ ಮಾರ್ಗದರ್ಶನದಲ್ಲಿ ಇವನ್ನು ಸೇವಿಸಲು ಅಡ್ಡಿ ಇಲ್ಲ. ದೈಹಿಕ ಅಥವಾ ಮಾನಸಿಕ ರೋಗಗಳಿಂದ ನಿದ್ರೆಗೇಡಾಗುತ್ತಿದ್ದರೆ ಅದರ ಮೂಲ ಕಾರಣದ ಚಿಕಿತ್ಸೆ ಮತ್ತು ನಿದ್ರಾಕಾರಿಗಳ ಸೇವನೆ ಉಪಯುಕ್ತ. ಅಕಾರಣವಾಗಿ ನಿದ್ರೆಗೇಡಾಗುತ್ತಿದ್ದರೆ ಆ ವ್ಯಕ್ತಿಯನ್ನು ಮಾನಸಿಕ ಚಿಕಿತ್ಸೆಗೆ ಒಳಪಡಿಸುವುದು ಅತ್ಯಗತ್ಯ. ಮೈಮನಗಳು ವಿರಮಿಸಲು ಯೋಗ, ಧ್ಯಾನ, ಸಂಗೀತ ಸಹಾಯಕಾರಿ. (ಎಚ್.ಆರ್.ಡಿ.ಎಚ್;ಜೆ.ಪಿ.ಡಿ.;ಬಿ.ಕೆ.ಎಸ್‍ಎ.;ಪಿ.ಎಸ್.ಎಸ್.)